AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಪರ್ಮ್ ನಿರ್ಬಂಧಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ; ಈ ಕ್ರಮದಿಂದ ಎರಡೂ ದೇಶಕ್ಕೆ ಒಳಿತಲ್ಲ- ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆ

ಕೆಲ ಕಂಪನಿಗಳ ಗ್ರೀನ್ ಕಾರ್ಡ್ (PERM) ಪ್ರಕ್ರಿಯೆಯನ್ನು ಅಮಾನತುಗೊಳಿಸಿದ ಅಮೆರಿಕ ಕಾರ್ಮಿಕ ಇಲಾಖೆಯ ನಿರ್ಧಾರಕ್ಕೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಖಾರವಾಗಿ ಪ್ರತಿಕ್ರಿಯಿಸಿದೆ. ಎಚ್-1ಬಿ ವೀಸಾದಾರರ ಬಗ್ಗೆ ತುಚ್ಚವಾಗಿ ಮಾತನಾಡಿರುವ ಅಮೆರಿಕ ಉಪಾಧ್ಯಕ್ಷರ ಹೇಳಿಕೆಯನ್ನು ಖಂಡಿಸಿದೆ. ಎಚ್-1ಬಿ ವೀಸಾಗಳ ಸಿಂಧುತ್ವಕ್ಕೆ ಧಕ್ಕೆಯಿಲ್ಲ ಎಂದೂ ಭಾರತ ಸರ್ಕಾರ ಹೇಳಿದೆ.

ಅಮೆರಿಕದ ಪರ್ಮ್ ನಿರ್ಬಂಧಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ; ಈ ಕ್ರಮದಿಂದ ಎರಡೂ ದೇಶಕ್ಕೆ ಒಳಿತಲ್ಲ- ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆ
ವಿದೇಶಾಂಗ ಸಚಿವ ಎಸ್ ಜೈಶಂಕರ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 09, 2026 | 2:37 PM

Share

ನವದೆಹಲಿ, ಅಕ್ಟೋಬರ್ 9: ಅಮೆರಿಕದ ಕಾರ್ಮಿಕ ಇಲಾಖೆಯು ಎಂಟು ಐಟಿ ಸಂಸ್ಥೆಗಳ ‘ಶಾಶ್ವತ ಕಾರ್ಮಿಕ ಪ್ರಮಾಣೀಕರಣ’ (PERM / Green Card) ಪ್ರಕ್ರಿಯೆಯನ್ನು ಅಮಾನತುಗೊಳಿಸಿರುವ ಕುರಿತು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅಮೆರಿಕದ ಈ ಕ್ರಮದಿಂದ ಹಾಲಿ ಎಚ್-1ಬಿ ವೀಸಾ ಹೊಂದಿರುವ ಭಾರತೀಯರಿಗೆ ತತ್​ಕ್ಷಣಕ್ಕೆ ಸಮಸ್ಯೆ ಇಲ್ಲ ಎಂದಿರುವ ಸಚಿವಾಲಯವು, ಅಮೆರಿಕದ ಉಪಾಧ್ಯಕ್ಷರ ಅಗ್ಗದ ಹೇಳಿಕೆಗಳಿಗೆ ಅತೀವ ಅಸಮಾಧಾನ ವ್ಯಕ್ತಪಡಿಸಿದೆ.

ಅಮೆರಿಕ ಉಪಾಧ್ಯಕ್ಷರಾದ ಜೆ.ಡಿ. ವ್ಯಾನ್ಸ್ (J.D. Vance) ಅವರು ಎಚ್-1ಬಿ ವೀಸಾದಾರರನ್ನು ವಿದೇಶೀ ಜೀತದಾಳುಗಳೆಂಬ ಅರ್ಥದಲ್ಲಿ ಲೇವಡಿ ಮಾಡಿದ್ದರು. ವ್ಯಾನ್ಸ್ ಅವರ ಈ ಹೇಳಿಕೆಗೆ ಭಾರತ ಬಲವಾಗಿ ಆಕ್ಷೇಪಿಸಿದೆ. ಅವರ ಈ ಹೇಳಿಕೆ ಅನವಶ್ಯಕವಾಗಿತ್ತು. ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರು ಉನ್ನತ ಮಟ್ಟದ ವಿದ್ಯಾವಂತರಾಗಿದ್ದು, ಆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಐತಿಹಾಸಿಕವಾಗಿ ಅಮೆರಿಕವನ್ನು ರೂಪಿಸಿರುವುದು ವಲಸಿಗರೇ ಆಗಿದ್ದಾರೆ. ವಸಾಹತುಷಾಹಿ ವ್ಯವಸ್ಥೆ ಮತ್ತು ನೋವಿನ ಇತಿಹಾಸವನ್ನು ನೆನಪಿಸುವ ಪದಬಳಕೆ ಮಾಡಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವಾಲಯವು ತನ್ನ ಹೇಳಿಕೆಯಲ್ಲಿ ಖಂಡನೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಅಮೆರಿಕದ ಗ್ರೀನ್ ಕಾರ್ಡ್ ವ್ಯವಸ್ಥೆ ರದ್ದತಿಗೆ ನಾಸ್ಕಾಮ್ ಆಕ್ಷೇಪ; ವಲಸೆ ಬೇರೆ, ಕುಶಲ ತಂತ್ರಜ್ಞರ ಹರಿವು ಬೇರೆ ಎಂದ ನಾಸ್ಕಾಮ್

ಪ್ರತಿಭೆಗಳ ಸಂಚಾರದಿಂದ ಉಭಯ ದೇಶಗಳಿಗೂ ಲಾಭ

ಭಾರತೀಯ ತಂತ್ರಜ್ಞರ ನೈಪುಣ್ಯತೆಯು ಅಮೆರಿಕನ್ ಕಂಪನಿಗಳಿಗೆ ನಾವೀನ್ಯತೆ (Innovation), ಸಂಶೋಧನೆ, ಉತ್ಪಾದಕತೆ ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಿದೆ. ಈ ಪ್ರತಿಭಾವಂತರ ಹರಿವು ಎರಡೂ ದೇಶಗಳ ಆರ್ಥಿಕತೆಗೆ ಭಾರಿ ಮೌಲ್ಯವರ್ಧನೆ ಮಾಡುತ್ತದೆ. ಅಮೆರಿಕ ಕೈಗೊಂಡಿರುವ ಈ ಏಕಪಕ್ಷೀಯ ಕ್ರಮವು ಉಭಯ ದೇಶಗಳ ಹಂಚಿಕೆಯ ಆಕಾಂಕ್ಷೆಗಳಿಗೆ ಪೂರಕವಾಗಿಲ್ಲ ಎಂದು ಭಾರತ ಪ್ರತಿಪಾದಿಸಿದೆ.

ಭಾರತದ ಹೇಳಿಕೆಯ ಪೋಸ್ಟ್

ಎಚ್-1ಬಿ ವೀಸಾಗಳ ಮೇಲೆ ಪರಿಣಾಮವಿಲ್ಲ

PERM ಪ್ರಕ್ರಿಯೆ ಮತ್ತು ಎಚ್-1ಬಿ ವೀಸಾ ಕಾರ್ಯಕ್ರಮಗಳು ಸಂಪೂರ್ಣವಾಗಿ ವಿಭಿನ್ನವಾದವು. PERM ಅರ್ಜಿಗಳ ಅಮಾನತಿನಿಂದಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಎಚ್-1ಬಿ ವೀಸಾಗಳ ಸಿಂಧುತ್ವಕ್ಕಾಗಲಿ ಅಥವಾ ಎಚ್-1ಬಿ ವೀಸಾದಾರರು ಮತ್ತು ಅವರ ಅವಲಂಬಿತರ (Dependents) ಕಾನೂನುಬದ್ಧ ಸ್ಥಿತಿಗತಿಯ ಮೇಲಾಗಲಿ ಯಾವುದೇ ತಕ್ಷಣದ ಪರಿಣಾಮ ಬೀರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಐಟಿ ಕಂಪನಿಗಳ ಕೈತಪ್ಪಿದ ಗ್ರೀನ್ ಕಾರ್ಡ್ ಪ್ರೋಗ್ರಾಮ್; ಎಚ್-1ಬಿ ವಿಸಾದಾರರನ್ನು ವಿದೇಶೀ ಜೀತದಾಳುಗಳೆಂದು ಜರಿದ ಜೆ.ಡಿ. ವಾನ್ಸ್

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂಬರುವ ಎಲ್ಲಾ ಬೆಳವಣಿಗೆಗಳನ್ನು ಭಾರತ ಸರ್ಕಾರವು ತೀವ್ರವಾಗಿ ಗಮನಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ದೆಹಲಿಯಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಸಚಿವಾಲಯ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Fri, 9 October 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More