ಇಂಡಿಗೋ ಬಾಧಿತ ಪ್ರಯಾಣಿಕರಿಗೆ ಸರ್ಕಾರಿ ನಿರ್ದೇಶಿತ ಪರಿಹಾರದ ಜೊತೆಗೆ 10,000 ರೂ ಟ್ರಾವಲ್ ವೋಚರ್

Indigo's affected passengers get additional relief: ಡಿಸೆಂಬರ್ 3ರಿಂದ 5ರವರೆಗೂ ಇಂಡಿಗೋ ಏರ್​ಲೈನ್ಸ್​ನ ಹಲವಾರು ಫ್ಲೈಟ್​ಗಳು ರದ್ದುಗೊಂಡಿದ್ದವು. ಇದರಿಂದ ಬಾಧಿತರಾದ ಪ್ರಯಾಣಿಕರಿಗೆ ಸರ್ಕಾರೀ ನಿಯಮದ ಪ್ರಕಾರ 5,000 ರೂನಿಂದ 10,000 ರೂವರೆಗೆ ಪರಿಹಾರ ಕೊಡಬೇಕು. ಇದಕ್ಕೆ ಹೆಚ್ಚುವರಿಯಾಗಿ ಇಂಡಿಗೋ ಸಂಸ್ಥೆ 10,000 ರೂಗಳ ಟ್ರಾವಲ್ ವೋಚರ್ ಕೂಡ ನೀಡುತ್ತಿದೆ.

ಇಂಡಿಗೋ ಬಾಧಿತ ಪ್ರಯಾಣಿಕರಿಗೆ ಸರ್ಕಾರಿ ನಿರ್ದೇಶಿತ ಪರಿಹಾರದ ಜೊತೆಗೆ 10,000 ರೂ ಟ್ರಾವಲ್ ವೋಚರ್
ಇಂಡಿಗೋ ಏರ್ಲೈನ್ಸ್

Updated on: Dec 11, 2025 | 5:37 PM

ನವದೆಹಲಿ, ಡಿಸೆಂಬರ್ 11: ಪೈಲಟ್​ಗಳ ಕೊರತೆ ಮತ್ತಿತರ ಕಾರಣದಿಂದ ಇಂಡಿಗೋ ಏರ್ಲೈನ್ಸ್ (Indigo Airlines) ಸಂಸ್ಥೆ ಡಿಸೆಂಬರ್ 3ರಿಂದ 5ರವರೆಗೂ ಸಾವಿರಕ್ಕೂ ಅಧಿಕ ಫ್ಲೈಟ್​ಗಳನ್ನು ರದ್ದುಗೊಳಿಸಬೇಕಾಗಿ ಬಂತು. ಹಲವು ಫ್ಲೈಟ್​ಗಳನ್ನು ವಿಳಂಬಗೊಳಿಸಲಾಯಿತು. ಟಿಕೆಟ್ ರದ್ದುಗೊಂಡ ಪ್ರಯಾಣಿಕರಿಗೆ ಸಂಸ್ಥೆ ಟಿಕೆಟ್ ಹಣವನ್ನು ಮರಳಿಸಿದೆ. ಇದರ ಜೊತೆಗೆ, 10,000 ರೂ ಟ್ರಾವಲ್ ವೋಚರ್​ಗಳನ್ನೂ ನೀಡುವುದಾಗಿ ಇಂಡಿಗೋ ಹೇಳಿದೆ.

ಟಿಕೆಟ್ ರದ್ದುಗೊಂಡು ಬಾಧಿತರಾದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆ 5,000 ರೂನಿಂದ 10,000 ರೂವರೆಗೆ ಪರಿಹಾರ ಕೊಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಈಗ ಇಂಡಿಗೋ ಪ್ರಕಟಿಸಿರುವ ಟ್ರಾವಲ್ ವೋಚರ್ ಪ್ರತ್ಯೇಕವಾದುದು. ಈ ಟ್ರಾವಲ್ ವೋಚರ್ ಅನ್ನು ಮುಂದಿನ 12 ತಿಂಗಳಲ್ಲಿ ಯಾವುದೇ ಇಂಡಿಗೋ ಪ್ರಯಾಣಕ್ಕೆ ಬಳಸಬಹುದು ಎನ್ನಲಾಗಿದೆ.

ಇದನ್ನೂ ಓದಿ: ಬರಲಿದೆ ಧ್ರುವ; ಇದು ನಿಮ್ಮ ವಿಳಾಸ ಕರಾರುವಾಕ್ ಹೇಳುವ ಡಿಜಿಟಲ್ ಸಿಸ್ಟಂ

ಹೊರಡಬೇಕಿರುವ ಸಮಯಕ್ಕೆ ಮುಂಚಿನ 24 ಗಂಟೆಯೊಳಗೆ ಫ್ಲೈಟ್ ರದ್ದುಗೊಂಡಾಗ ಸರ್ಕಾರದ ಮಾರ್ಗಸೂಚಿ ಅಥವಾ ನಿಯಮಗಳ ಪ್ರಕಾರ ವಿಮಾನ ಸಂಸ್ಥೆಗಳು ಬಾಧಿತ ಪ್ರಯಾಣಿಕರಿಗೆ 5,000 ರೂನಿಂದ 10,000 ರೂ ಪರಿಹಾರ ಕೊಡಬೇಕು. ಈಗ ಇಂಡಿಗೋ ಸಂಸ್ಥೆಯು ಟ್ರಾವಲ್ ವೋಚರ್ ನೀಡಿರುವುದು ಹೆಚ್ಚುವರಿ ಪರಿಹಾರ ಕ್ರಮವಾಗಿ.

ವಿಮಾನ ರದ್ದತಿ ಅಥವಾ ವಿಳಂಬದಿಂದ ಬಾಧಿತರಾಗಿರುವ ಪ್ರಯಾಣಿಕರಿಗೆ ಈ ಟ್ರಾವಲ್ ವೋಚರ್ ನೀಡಿದೆ. ಮುಂದಿನ 12 ತಿಂಗಳಲ್ಲಿ ಈ ವೋಚರ್​ಗಳು ಸಿಂಧು ಇರುತ್ತವೆ. ಅಷ್ಟರೊಳಗೆ ಅವನ್ನು ಇಂಡಿಗೋದ ಯಾವುದೇ ಫ್ಲೈಟ್ ಬುಕಿಂಗ್​ಗೆ ಬಳಸಬಹುದು.

ಇದನ್ನೂ ಓದಿ: ಅಮೆರಿಕದ ಪಕ್ಕದ ದೇಶದಿಂದಲೂ ಭಾರತದ ಮೇಲೆ ಶೇ. 50 ಟ್ಯಾರಿಫ್; ಏನಿದರ ಪರಿಣಾಮ?

ಇಂಡಿಗೋ ಫ್ಲೈಟ್​ಗಳು ರದ್ದಾಗಿದ್ದು ಯಾಕೆ?

ವಿಮಾನ ಸಂಸ್ಥೆಗಳಲ್ಲಿ ಪೈಲಟ್​ಗಳಿಗೆ ವಿಶ್ರಾಂತಿ ಸಮಯ ಹೆಚ್ಚಿಸಿ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಈ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡಬೇಕೆಂದೂ ಸರ್ಕಾರದ ನಿರ್ದೇಶನ ಇದೆ. ಆದರೆ, ಇದನ್ನು ಜಾರಿಗೆ ತರಬೇಕಾದರೆ ವಿಮಾನ ಸಂಸ್ಥೆಗಳು ಹೆಚ್ಚಿನ ಪೈಲಟ್​ಗಳನ್ನು ನೇಮಕ ಮಾಡಿಕೊಂಡು ಸಜ್ಜಾಗಿರಬೇಕು. ಇಂಡಿಗೋ ಏರ್​ಲೈನ್ಸ್ ಸಂಸ್ಥೆಯು ವಿಮಾನಗಳ ಸಂಖ್ಯೆ ಹೆಚ್ಚಿಸಿಕೊಂಡು ಹೋಯಿತೇ ವಿನಃ ಪೈಲಟ್ ಸಂಖ್ಯೆ ಏರಿಸಲಿಲ್ಲ. ಈಗ ಸರ್ಕಾರದ ನಿಯಮದ ವ್ಯವಸ್ಥೆ ಜಾರಿಗೆ ತರಲು ಹೋದಾಗ ಪೈಲಟ್​ಗಳ ಕೊರತೆ ಎದುರುಗೊಂಡಿದೆ. ಹೀಗಾಗಿ, ಮೂರ್ನಾಲ್ಕು ದಿನ ತನ್ನ ಶೇ. 10ಕ್ಕಿಂತಲೂ ಹೆಚ್ಚು ಫ್ಲೈಟ್​ಗಳನ್ನು ಇಂಡಿಗೋ ನಿಲ್ಲಿಸಬೇಕಾಗಿ ಬಂತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ