ನವದೆಹಲಿ, ಜನವರಿ 31: ಲೋಕಸಭೆ ಚುನಾವಣೆಗೆ ಎರಡು ತಿಂಗಳು ಮುಂಚೆ ಮಧ್ಯಂತರ ಬಜೆಟ್ (Interim Budget) ಮಂಡನೆ ಆಗಲಿದ್ದು, ಅಧಿವೇಶನಕ್ಕೆ ಚಾಲನೆ ಸಿಕ್ಕಿದೆ. ಜನವರಿ 31, ಬುಧವಾರದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ (Draupadi Murmu speech) ಮೂಲಕ ಅಧಿವೇಶನ ಆರಂಭಗೊಂಡಿದೆ. ಮುರ್ಮು ಅವರು ಸಂಸತ್ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ದೇಶದ ಆರ್ಥಿಕ ಅಭ್ಯುದಯದ ಸಕಾರಾತ್ಮಕ ಅಂಶಗಳನ್ನು ಅವರು ಹಂಚಿಕೊಂಡರು. ಅಧಿವೇಶನದ ಆರಂಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಈ ಬಜೆಟ್ ಸೆಷನ್ನ ಮುಖ್ಯ ಅಜೆಂಡಾವನ್ನು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಪಾಲಿಸುವುದಾಗಿ ಸ್ಪಷ್ಟಪಡಿಸಿದರು.
ಇಂದು ಬಜೆಟ್ ಅಧಿವೇಶನ ಆರಂಭಗೊಳ್ಳುವ ಮುನ್ನ ರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ರಾಜದಂಡವನ್ನೂ ಸಂಸತ್ತಿಗೆ ತಂದು ಪ್ರತಿಷ್ಠಾಪಿಸಲಾಯಿತು.
ಬಜೆಟ್ ಅಧಿವೇಶನ ಇಂದು (ಜ. 31) ಆರಂಭವಾಗಿದ್ದು ಫೆಬ್ರುವರಿ 9ರವರೆಗೆ ಇರುತ್ತದೆ. ಮಧ್ಯದಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ಎಂಟು ದಿನಗಳ ಕಾಲ ಅಧಿವೇಶನ ಕಲಾಪ ಇರುತ್ತದೆ.
ಫೆಬ್ರುವರಿ 1ರಂದು, ಅಂದರೆ ನಾಳೆ ಗುರುವಾರ ಬೆಳಗ್ಗೆ 11ಗಂಟೆಗೆ ನಿರ್ಮಲಾ ಸೀತಾರಾಮನ್ ಈ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಭಾಷಣದ ಅವಧಿ ಒಂದೂವರೆಯಿಂದ ಎರಡೂವರೆ ಗಂಟೆ ಕಾಲ ಇರುವ ಸಾಧ್ಯತೆ ಇದೆ.
ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್ ಮಾತ್ರವೇ ಇರುತ್ತದೆ. ಇದರಲ್ಲಿ ದೊಡ್ಡ ಘೋಷಣೆಗಳು ಇರುವುದಿಲ್ಲ. ಹೊಸ ಸರ್ಕಾರದ ರಚನೆ ಆಗುವವರೆಗೂ ಖರ್ಚುವೆಚ್ಚಗಳ ಲೇಖಾನುದಾನವನ್ನು ಬಜೆಟ್ ಒಳಗೊಂಡಿರಬಹುದು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಸಮಾಧಾನಕರ ಮಾತುಗಳನ್ನು ಆಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 1ರ ಬಜೆಟ್ ಮಂಡನೆಯನ್ನು ನಾರಿಶಕ್ತಿ ಆಚರಣೆ ಎಂದು ಪ್ರಶಂಸಿಸಿದರು.
ಇದನ್ನೂ ಓದಿ: Budget session 2024: ಇಂದು ಮುರ್ಮು ಭಾಷಣ, ನಾಳೆ ಸೀತಾರಾಮನ್ ಬಜೆಟ್ ಮಂಡನೆ, ಇದು ನಾರಿ ಶಕ್ತಿಯ ಹಬ್ಬ: ಪಿಎಂ ಮೋದಿ
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾರ್ವತಿಕ ಚುನಾವಣೆ ನಡೆಯುತ್ತಿದ್ದು, ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ಇದು ಜುಲೈನಲ್ಲಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರ್ಕಾರ 2014ರಿಂದಲೂ ಅಧಿಕಾರದಲ್ಲಿದೆ. ಸತತ ಮೂರನೇ ಬಾರಿಯೂ ಆಯ್ಕೆಯಾಗುವ ವಿಶ್ವಾಸದಲ್ಲಿದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ