ನವದೆಹಲಿ, ಸೆಪ್ಟೆಂಬರ್ 8: ಇತ್ತೀಚಿನ ಕೇಂದ್ರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಐದು ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಟಾಪ್-500 ಕಂಪನಿಗಳಲ್ಲಿ ಇಂಟರ್ನ್ಶಿಪ್ ಅವಕಾಶ ತೆರೆಯುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಬ್ಯಾಂಕುಗಳು ಮೊದಲ ಹೆಜ್ಜೆ ಇಟ್ಟಿವೆ. 25 ವರ್ಷದೊಳಗಿನ ಪದವೀಧರರನ್ನು ವಿವಿಧ ಬ್ಯಾಂಕುಗಳು ತರಬೇತಿಗೆ ನೇಮಕ ಮಾಡಲಿರುವ ವಿಚಾರವನ್ನು ಇಂಡಿಯನ್ ಬ್ಯಾಂಕ್ ಅಸೋಷಿಯೇಶನ್ನ ಮುಖ್ಯಸ್ಥ ಸುನೀಲ್ ಮೆಹ್ತಾ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂದಿನ ಒಂದು ತಿಂಗಳಲ್ಲಿ ಕೇಂದ್ರ ಸರ್ಕಾರದ ಅಪ್ರೆಂಟಿಸ್ಶಿಪ್ ಸ್ಕೀಮ್ ಜಾರಿಗೆ ಬರಬಹುದು. ಅಷ್ಟರಲ್ಲಿ ಬ್ಯಾಂಕುಗಳು ಯುವ ಪದವೀಧರರನ್ನು ಅಪ್ರೆಂಟಿಸ್ಗಳಾಗಿ ನೇಮಕ ಮಾಡಿಕೊಳ್ಳಬಹುದು. ತಿಂಗಳಿಗೆ 5,000 ರೂ ಸ್ಟೈಪೆಂಡ್ ಕೊಡಲಾಗುತ್ತದೆ. ನಿರ್ದಿಷ್ಟ ಕೌಶಲ್ಯದ ತರಬೇತಿಯನ್ನೂ ಕೊಡಲಾಗುತ್ತದೆ.
ಇದನ್ನೂ ಓದಿ: ಭಾರತದ ಜವಳಿ ಉದ್ಯಮಕ್ಕೆ ನೆರವಾದ ಬಾಂಗ್ಲಾದೇಶ ಬಿಕ್ಕಟ್ಟು; ಹೊಸ ಆರ್ಡರ್ಸ್ ಪ್ರಮಾಣ ಹೆಚ್ಚಳ
ಬ್ಯಾಂಕುಗಳಲ್ಲಿ ಅಪ್ರೆಂಟಿಸ್ ಆಗಬಯಸುವ ಅಭ್ಯರ್ಥಿಗಳು ಯಾವುದೇ ಪದವಿ ಪ್ರಾಪ್ತ ಮಾಡಿರಬೇಕು. 21ರಿಂದ 25 ವರ್ಷದ ವಯಸ್ಸಿನವರಾಗಿರಬೇಕು. ಐಐಟಿ, ಅಥವಾ ಐಐಎಂ ಇತ್ಯಾದಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಾಗಿಬಾರದು. ತೆರಿಗೆ ಪಾವತಿದಾರ ಕೂಡ ಆಗಿರಬಾರದು. ಇಂಥ ಅಭ್ಯರ್ಥಿಗಳು ಅಪ್ರೆಂಟಿಸ್ಶಿಪ್ಗೆ ಅರ್ಜಿ ಹಾಕಬಹುದು.
ಬ್ಯಾಂಕುಗಳಲ್ಲಿ ಕೌಶಲ್ಯ ಬೇಡುವ ಕೆಲಸದ ಅವಶ್ಯಕತೆ ಇಲ್ಲದ ಹಲವು ಕ್ಷೇತ್ರಗಳಿವೆ. ಮಾರ್ಕೆಟಿಂಗ್, ರಿಕವರಿ ಇತ್ಯಾದಿ ಕೆಲಸಗಳಿವೆ. ಈ ಕ್ಷೇತ್ರಗಳಲ್ಲಿ ಅಪ್ರೆಂಟಿಸ್ಗಳನ್ನು ಆಯ್ದು ಅವರಿಗೆ ತರಬೇತಿ ಕೊಡಲಾಗುತ್ತದೆ. 12 ತಿಂಗಳ ಕಾಲ ಈ ತರಬೇತಿ ಅವಧಿ ಇರುತ್ತದೆ ಎನ್ನುವ ಮಾಹಿತಿಯನ್ನು ಸುನೀಲ್ ಮೆಹ್ತಾ ನೀಡಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಪ್ರೆಂಟಿಸ್ ಆಗಿ ಕೆಲಸ ಮಾಡಿದವರಲ್ಲಿ ಕೆಲವರನ್ನು ಬ್ಯಾಂಕುಗಳಲ್ಲಿ ರೆಗ್ಯುಲರ್ ನೇಮಕಾತಿ ಮಾಡಿಕೊಂಡು ಮುಂದುವರಿಸಬಹುದು. ಇತರರು ಇಲ್ಲಿ ಪಡೆದ ತರಬೇತಿ ಸಹಾಯದಿಂದ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಬಹುದು. ಸದ್ಯಕ್ಕೆ ಒಂದು ವರ್ಷದಲ್ಲಿ ಬ್ಯಾಂಕುಗಳಲ್ಲಿ ಎಷ್ಟು ಅಪ್ರೆಂಟಿಸ್ಗಳನ್ನು ನೇಮಕ ಮಾಡಲಾಗುತ್ತದೆ ಎನ್ನುವ ಮಾಹಿತಿ ಗೊತ್ತಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ