ನವದೆಹಲಿ, ಅಕ್ಟೋಬರ್ 3: ಐಟಿ ದಿಗ್ಗಜ ಟಿಸಿಎಸ್ ತನ್ನ ಉದ್ಯೋಗಿಗಳಿಗೆ ನೀಡಿದ್ದ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನು (work from home) ಅಂತ್ಯಗೊಳಿಸಿರುವ ಸುದ್ದಿ ಬಂದ ಬೆನ್ನಲ್ಲಿ ವರ್ಕ್ ಫ್ರಂ ಹೋಮ್ ವಿಚಾರ ಮುನ್ನೆಲೆಗೆ ಬಂದಿದೆ. ಟಿಸಿಎಸ್ ಮಾತ್ರವಲ್ಲ ವಿಪ್ರೋ, ಕೇಪ್ಜೆಮಿನಿ, ಎಲ್ಟಿಐ ಮೈಂಡ್ಟ್ರೀ ಮೊದಲಾದ ಭಾರತೀಯ ಐಟಿ ಕಂಪನಿಗಳು ತಮ್ಮ ವರ್ಕ್ ಫ್ರಂ ಉದ್ಯೋಗಿಗಳನ್ನು ಕಚೇರಿಗೆ ತರಲು ಕಸರತ್ತು ನಡೆಸುತ್ತಿವೆ. ಬೆಂಗಳೂರು, ಪುಣೆ ಮೊದಲಾದ ಐಟಿ ವಲಯದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅನ್ನು ಪೂರ್ಣವಾಗಿ ರದ್ದು ಮಾಡಲು ಅಥವಾ ಭಾಗಶಃ ರದ್ದು ಮಾಡಲು ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಸೂಚನೆ ರವಾನಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ಕೋವಿಡ್ ನಂತರ ಅನಿವಾರ್ಯವಾಗಿ ಆರಂಭವಾದ ವರ್ಕ್ ಫ್ರಂ ಹೋಮ್ ಸವಲತ್ತಿಗೆ ಹೊಂದಿಕೊಂಡಿರುವ ಉದ್ಯೋಗಿಗಳಿಗೆ ಈಗ ಕಚೇರಿಗೆ ಹೋಗಿ ಕೆಲಸ ಮಾಡುವುದು ಕಷ್ಟವಾಗಿದೆ. ಬಹಳಷ್ಟು ಉದ್ಯೋಗಿಗಳು ಈಗಲೂ ಕೂಡ ಮನೆಯಿಂದಲೇ ಕೆಲಸ ಮಾಡುತ್ತಿರುವುದುಂಟು. ಕಚೇರಿಗೆ ಹೋಗಿ ಕೆಲಸ ಮಾಡುತ್ತಿರುವವರಲ್ಲಿ ಅನೇಕರದ್ದು ಒಲ್ಲದ ಮನಸು ಎಂಬಂತಾಗಿದೆ.
ಆದರೆ, ಭಾರತದ ಐಟಿ ಕಂಪನಿಗಳು ವಿದೇಶಗಳ ದೊಡ್ಡದೊಡ್ಡ ಕಂಪನಿಗಳಿಗೆ ಐಟಿ ಸರ್ವಿಸ್ ಒದಗಿಸುತ್ತವೆ. ಗ್ರಾಹಕರ ಮನವಿ ಮೇರೆಗೆ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕಚೇರಿ ಬಂದು ಕೆಲಸ ಮಾಡುವಂತೆ ತಾಕೀತು ಮಾಡುತ್ತಿವೆ. ಸದ್ಯ ಬಹುತೇಕ ಐಟಿ ಕಂಪನಿಗಳಲ್ಲಿ ಹೈಬ್ರಿಡ್ ವರ್ಕ್ ಮಾಡೆಲ್ ಇದೆ. ಅಂದರೆ ವಾರದಲ್ಲಿ ಕನಿಷ್ಠ 2-3 ದಿನ ಕಚೇರಿಗೆ ಬಂದು ಕೆಲಸ ಮಾಡುವುದನ್ನು ಕಡ್ಡಾಯಪಡಿಸಲಾಗಿದೆ.
ಪೂರ್ಣವಾಗಿ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಿರುವ ಕೆಲ ಐಟಿ ಕಂಪನಿಗಳು ಹೈಬ್ರಿಡ್ ಮಾಡಲ್ಗೆ ಬದಲಾಗುತ್ತಿವೆ. ವಾರದಲ್ಲಿ ಒಂದೆರಡು ದಿನ ಮಾತ್ರವೇ ಮನೆಯಿಂದ ಕೆಲಸ ಮಾಡುವುದು. ಉಳಿದ ದಿನ ಕಚೇರಿಗೆ ಬಂದು ಕೆಲಸ ಮಾಡುವುದು ಈ ಮಾಡಲ್ನ ಸೂತ್ರ.
‘ಭವಿಷ್ಯದಲ್ಲಿ ಕೆಲಸವು ಹೈಬ್ರಿಡ್ ಮಾದರಿಯಲ್ಲಿರುತ್ತದೆ. ನಮ್ಮ ನೀತಿಗಳಲ್ಲಿ ನಾವು ಉದಾರತನ ತಂದಿದ್ದೇವೆ. ನಮಗೆ ಕ್ಲೈಂಟ್ ಮತ್ತು ಉದ್ಯೋಗಿಗಳ ಅವಶ್ಯಕತೆ ಬಹಳ ಮುಖ್ಯ. ಮೇ ತಿಂಗಳಿಂದಲೇ ನಮ್ಮ ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಆಫೀಸ್ಗೆ ಉತ್ತೇಜನ ನೀಡಲಾಗಿದೆ. ಅವರ ಇಚ್ಛೆಯ ಯಾವುದೇ ಮೂರು ದಿನದಲ್ಲಿ ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ತಿಳಿಸಿದ್ದೇವೆ,’ ಎಂದು ವಿಪ್ರೋ ಸಂಸ್ಥೆಯ ವಕ್ತಾರರೊಬ್ಬರು ಹೇಳಿದರೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ