ಗಂಡ ಹೆಂಡತಿಗೆ ಕ್ಯಾನ್ಸರ್; ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್​ಗೆ ಮಧ್ಯಂತರ ಜಾಮೀನು

|

Updated on: May 06, 2024 | 5:03 PM

Naresh Goyal gets interim bail: ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಕ್ಯಾನ್ಸರ್ ರೋಗಿಯಾಗಿರುವ ಗೋಯಲ್ ಅವರು ಮುಂಬೈನಲ್ಲಿ ರಿಲಾಯನ್ಸ್ ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಅನಾರೋಗ್ಯದ ಕಾರಣಕ್ಕೆ ಜಾಮೀನು ಕೊಡಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಜಾರಿ ನಿರ್ದೇಶನಾಲಯ ಈ ಅರ್ಜಿಯನ್ನು ವಿರೋಧಿಸಿತ್ತು. ಆದರೆ, ಅಂತಿಮವಾಗಿ ಎರಡು ತಿಂಗಳಿಗೆ ತಾತ್ಕಾಲಿಕವಾಗಿ ಮಧ್ಯಂತರ ಜಾಮೀನು ಗೋಯಲ್​ಗೆ ಸಿಕ್ಕಿದೆ.

ಗಂಡ ಹೆಂಡತಿಗೆ ಕ್ಯಾನ್ಸರ್; ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್​ಗೆ ಮಧ್ಯಂತರ ಜಾಮೀನು
ನರೇಶ್ ಗೋಯಲ್
Follow us on

ಮುಂಬೈ, ಮೇ 6: ಅಕ್ರಮ ಹಣ ವರ್ಗಾವಣೆ ಆರೋಪವಿರುವ ಪ್ರಕರಣ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ (Naresh Goyal) ಅವರಿಗೆ ಕೊನೆಗೂ ಜಾಮೀನು ಲಭಿಸಿದೆ. ಬಾಂಬೆ ಉಚ್ಚ ನ್ಯಾಯಾಲಯವು (Bombay high court) ನರೇಶ್ ಗೋಯಲ್ ಅವರಿಗೆ ಎರಡು ತಿಂಗಳ ಕಾಲ ಮಧ್ಯಂತರ ಜಾಮೀನು ಒದಗಿಸಿದೆ. ರಿಲಾಯನ್ಸ್ ಆಸ್ಪತ್ರೆಯಲ್ಲಿರುವ ನರೇಶ್ ಗೋಯಲ್ ಕ್ಯಾನ್ಸರ್ ರೋಗಿಯಾಗಿದ್ದು, ವೈದ್ಯಕೀಯ ಮತ್ತು ಮಾನವೀಯತೆಯ ಆಧಾರದ ಮೇಲೆ ಬೇಲ್ ಕೊಡಲಾಗಿದೆ. ಬದಲಾಗಿ ಒಂದು ಲಕ್ಷ ರೂ ಶೂರಿಟಿ ಪಡೆಯಲಾಗಿದೆ. ಜೆಟ್ ಏರ್ವೇಸ್​ನ ಸಂಸ್ಥಾಪಕರಾಗಿರುವ ಅವರು ಹಾಗೂ ಪತ್ನಿ ಅನಿತಾ ಇಬ್ಬರೂ ಕೂಡ ಕ್ಯಾನ್ಸರ್ ರೋಗಿಗಳಾಗಿದ್ದಾರೆ.

ಜೆಟ್ ಏರ್ವೇಸ್​ಗೆ ಕೆನರಾ ಬ್ಯಾಂಕ್​ನಿಂದ ನೀಡಲಾಗಿದ್ದ 538.62 ಕೋಟಿ ರೂ ಮೊತ್ತದ ಸಾಲವನ್ನು ಉದ್ದೇಶಿತ ಕಾರ್ಯಗಳಿಗೆ ಬಳಸದೆ ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿಲಾಗಿದೆ ಎನ್ನುವ ಆರೋಪ ನರೇಶ್ ಗೋಯಲ್, ಅವರ ಪತ್ನಿ ಅನಿತಾ ಮತ್ತಿತರರ ಮೇಲೆ ಇದೆ. 2023ರ ಸೆಪ್ಟಂಬರ್​ನಲ್ಲಿ ಜಾರಿ ನಿರ್ದೇಶನಾಲಯವು ನರೇಶ್ ಗೋಯಲ್​ರನ್ನು ಬಂಧಿಸಿತ್ತು. ನವೆಂಬರ್ ತಿಂಗಳಲ್ಲಿ ಅನಿತಾ ಗೋಯಲ್ ಅವರನ್ನೂ ಬಂಧಿಸಲಾಗಿತ್ತು. ಆದರೆ, ಅನಿತಾ ಅವರ ಆರೋಗ್ಯ ಸ್ಥಿತಿ ಗಮನಿಸಿ ಅವರಿಗೆ ವಿಶೇಷ ಕೋರ್ಟ್​ನಿಂದ ಆಗಲೇ ಜಾಮೀನು ಸಿಕ್ಕಿತ್ತು.

ಆದರೆ, ನರೇಶ್ ಗೋಯಲ್ ಅವರಿಗೆ ಜಾಮೀನು ಕೊಡಲು ಸ್ಪೆಷಲ್ ಕೋರ್ಟ್ ನಿರಾಕರಿಸಿತ್ತು. ಅದಕ್ಕೆ ಬದಲಾಗಿ ಅವರಿಚ್ಛೆಯ ಯಾವುದಾದರೂ ಆಸ್ಪತ್ರೆಯಲ್ಲಿ ದಾಖಲಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಅವಕಾಶವನ್ನು ನೀಡಿತು. ಆದರೆ, ತನಗೆ ಜಾಮೀನು ಕೊಡಬೇಕೆಂದು ಗೋಯಲ್ ಅವರು ಬಾಂಬೆ ಹೈಕೋರ್ಟ್​ಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನಗದು, ಹಣ ಎಣಿಸಿ ಎಣಿಸಿ ಸುಸ್ತಾದ ಇಡಿ ಅಧಿಕಾರಿಗಳು

ಗೋಯಲ್ ಅವರ ಜಾಮೀನು ಅರ್ಜಿಯನ್ನು ಇಡಿ ವಿರೋಧಿಸಿತ್ತು. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ಬೇಕಾದಲ್ಲಿ ಇನ್ನೂ ಒಂದು ತಿಂಗಳು ಹೆಚ್ಚುವರಿ ಕಾಲ ಚಿಕಿತ್ಸೆಗೆ ಅವಕಾಶ ಕೊಡಬಹುದು ಸಾಕು ಎಂದು ಜಾರಿ ನಿರ್ದೇಶನಾಲಯ ವಾದಿಸಿತ್ತು. ಅಂತಿಮವಾಗಿ ಉಚ್ಚ ನ್ಯಾಯಾಲಯ ಎರಡು ತಿಂಗಳ ಕಾಲ ಇಂಟೆರಿಮ್ ಬೇಲ್ ಅನ್ನು ಜೆಟ್ ಏರ್ವೇಸ್ ಸಂಸ್ಥಾಪಕರಿಗೆ ಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ