ನವದೆಹಲಿ, ನವೆಂಬರ್ 22: ಕೆಲ ತಿಂಗಳ ಹಿಂದೆ ಶೇ. 20ಕ್ಕೂ ಹೆಚ್ಚು ಪ್ರಮಾಣದಲ್ಲಿ ಮೊಬೈಲ್ ರೀಚಾರ್ಜ್ ದರಗಳ ಏರಿಕೆ ಮಾಡಿದ್ದ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ನಿರಂತರವಾಗಿ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಗ್ರಾಹಕರ ವಲಸೆ ಸೆಪ್ಟೆಂಬರ್ನಲ್ಲೂ ಮುಂದುವರಿದಿದೆ. ಟ್ರಾಯ್ ಬಿಡುಗಡೆ ಮಾಡಿದ ಸೆಪ್ಟೆಂಬರ್ ತಿಂಗಳ ದತ್ತಾಂಶದ ಪ್ರಕಾರ ಈ ಮೂರು ಕಂಪನಿಗಳಿಂದ ಆ ಒಂದು ತಿಂಗಳಲ್ಲಿ ಹೊರಹೋದ ಸಬ್ಸ್ಕ್ರೈಬರ್ಗಳ ಸಂಖ್ಯೆ ಒಂದು ಕೋಟಿಗೂ ಹೆಚ್ಚು.
ಇದೇ ವೇಳೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆಯ ಮೊಬೈಲ್ ಬಳಕೆದಾರರ ಸಂಖ್ಯೆ ಸೆಪ್ಟೆಂಬರ್ನಲ್ಲಿ 8.49 ಲಕ್ಷದಷ್ಟು ಹೆಚ್ಚಾಗಿದೆ. ರಿಲಾಯನ್ಸ್ ಜಿಯೋ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ. ಟ್ರಾಯ್ ವರದಿ ಪ್ರಕಾರ ಜಿಯೋದಿಂದ 79.69 ಲಕ್ಷ ಕನೆಕ್ಷನ್ಗಳು ಅನ್ಸಬ್ಸ್ಕ್ರೈಬ್ ಆಗಿವೆ. ಭಾರ್ತಿ ಏರ್ಟೆಲ್ ಕಳೆದುಕೊಂಡ ಗ್ರಾಹಕರ ಸಂಖ್ಯೆ 14.34 ಲಕ್ಷ. ವೊಡಾಫೋನ್ ಐಡಿಯಾದಿಂದ ಹೊರಹೋದವರು 15.53 ಲಕ್ಷ. ಈ ಮೂರು ಸಂಸ್ಥೆಗಳಲ್ಲಿ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.
ಇದನ್ನೂ ಓದಿ: ಅದಾನಿ ಗ್ರೂಪ್ಗೆ ನೀಡಿದ್ದ ಏರ್ಪೋರ್ಟ್, ಪವರ್ ಟ್ರಾನ್ಸ್ಮಿಷನ್ ಗುತ್ತಿಗೆಗಳನ್ನು ರದ್ದುಗೊಳಿಸಿದ ಕೀನ್ಯಾ ಸರ್ಕಾರ
ಆದರೆ, ಈ ಮೂರು ಕಂಪನಿಗಳಿಂದ ಅನ್ಸ್ಕ್ರೈಬ್ ಆಗಿರುವುದು ಒಂದು ಕೋಟಿಗೂ ಅಧಿಕ. ಅದೇ ವೇಳೆ ಬಿಎಸ್ಸೆನ್ನೆಲ್ಗೆ ಹೊಸದಾಗಿ ಸೇರ್ಪಡೆಯಾಗಿದ್ದು 8.49 ಲಕ್ಷ ಮಾತ್ರ. ಇನ್ನುಳಿದ ಚಂದಾದಾರರು ಎತ್ತ ಹೋದರು ಎನ್ನುವ ಮಾಹಿತಿ ಇಲ್ಲ. ಪ್ರಾಯಶಃ, ಹೆಚ್ಚುವರಿ ಸಿಮ್ಗಳನ್ನು ಇಟ್ಟುಕೊಂಡಿರುವವರು, ಖಾಯಂ ಆಗಿ ಅನ್ಸ್ಕ್ರೈಬ್ ಮಾಡಿರುವ ಸಾಧ್ಯತೆ ಇದೆ.
ಬಹಳ ಅಗ್ಗದ ದರದಲ್ಲಿ ರೀಚಾರ್ಜ್ ಆಫರ್ ಮಾಡಿರುವ ಬಿಎಸ್ಸೆನ್ನೆಲ್ ಸಂಸ್ಥೆ ಸದ್ಯಕ್ಕೆ ಹಾಗೂ ಸದ್ಯೋಭವಿಷ್ಯದಲ್ಲಿ ಬೆಲೆ ಏರಿಕೆ ಮಾಡುವುದಿಲ್ಲ ಎಂದು ನಿರ್ಧರಿಸಿದೆ. ಸಂಸ್ಥೆಯ ಛೇರ್ಮನ್ ರಾಬರ್ಟ್ ರವಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ ಭಾರತದ ಬೆಳವಣಿಗೆಯ ಹಾದಿ ತೆರೆದಿಟ್ಟ ಸಚಿವ ಎ ವೈಷ್ಣವ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ