ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಟ; ಯಾರದ್ದು ಯಾವ ಹೊಣೆ? ಗ್ಲೋಬಲ್ ಸಮಿಟ್ನಲ್ಲಿ ತಜ್ಞರಿಂದ ಗಂಭೀರ ಚರ್ಚೆ
Climate change issue discussion in News9 Global Summit: ಜರ್ಮನಿಯ ಸ್ಟುಟ್ಗಾಟ್ನಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್ನ ಎರಡನೇ ದಿನದ ಅಧಿವೇಶನವೊಂದರಲ್ಲಿ ಹವಾಮಾನ ಬದಲಾವಣೆ ಸಮಸ್ಯೆ ಬಗ್ಗೆ ಚರ್ಚೆಯಾಯಿತು. ವಿಭಾ ಧವನ್, ರಾಹುಲ್ ಮುಂಜಲ್, ಆಂಡ್ರಿಯಾಸ್ ಬೆಟ್, ಪೀಟರ್ ಹಾರ್ಟ್ಮನ್, ಡಾ. ಜುಲಿಯನ್ ಹಾಶ್ಚರ್ಫ್ ಅವರು ಪಾಲ್ಗೊಂಡಿದ್ದರು. ಪರ್ಯಾಯ ಇಂಧನದ ಅಳವಡಿಕೆಯಿಂದ ಜರ್ಮನಿಯ ಕೈಗಾರಿಕೆಗಳಿಗೆ ಹೇಗೆ ನಷ್ಟ ತರುತ್ತಿದೆ ಎನ್ನುವ ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಲಾಯಿತು.
ನವದೆಹಲಿ, ನವೆಂಬರ್ 22: ನ್ಯೂಸ್9 ಜಾಗತಿಕ ಶೃಂಗಸಭೆಯ ಎರಡನೇ ದಿನವಾದ ಇಂದು ಹವಾಮಾನ ಬದಲಾವಣೆಯ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆದವು. ಭಾರತದಿಂದ ವಿಭಾ ಧವನ್, ರಾಹುಲ್ ಮುಂಜಲ್ ಪಾಲ್ಗೊಂಡರೆ ಜರ್ಮನಿಯಿಂದ ಆಂಡ್ರಿಯಾಸ್ ಬೆಟ್, ಪೀಟರ್ ಹಾರ್ಟ್ಮ್ಯಾನ್ ಮತ್ತು ಡಾ. ಜುಲಿಯನ್ ಹಾಶ್ಚರ್ಫ್ ಅವರು ಭಾಗವಹಿಸಿದ್ದರು. ಈ ವೇಳೆ, ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಈಗಿಂದೀಗಲೇ ಪೂರ್ಣವಾಗಿ ಮರುಬಳಕೆ ಇಂಧನ ಅಪ್ಪುವುದು ಎಷ್ಟು ಕಷ್ಟವಾಗುತ್ತದೆ ಎಂಬ ಅಂಶವನ್ನು ಗಮನಿಸಲಾಯಿತು. ಹಾಗೆಯೇ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಈ ಹೋರಾಟದಲ್ಲಿ ಎದುರಾಗಿರುವ ತಡೆಯ ಕುರಿತೂ ಚರ್ಚೆಯಾಗಿದೆ.
ಜರ್ಮನಿಯಲ್ಲಿ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ರಿನಿವಬಲ್ ಎನರ್ಜಿಯ ಪಾಲು ಶೇ. 60ರಷ್ಟಿದೆ. ಈ ಮಟ್ಟವನ್ನು ಮುಟ್ಟಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಪ್ರೀಝೀರೋ ಸಂಸ್ಥೆಯ ಪೀಟರ್ ಹಾರ್ಟ್ಮ್ಯಾನ್ ಅವರು ಜರ್ಮನಿಯ ಸಂದಿಗ್ಧತೆಯನ್ನು ಬಿಚ್ಚಿಟ್ಟರು. ಮರುಬಳಕೆ ಇಂಧನ ಉತ್ಪಾದನೆಗೆ ಆಗುವ ವೆಚ್ಚ ಪಳೆಯುಳಿಕೆ ಇಂಧನದ ದರಕ್ಕೆ ಹೋಲಿಸಿದರೆ ಬಹಳ ದುಬಾರಿ ಆಗಿದೆ. ಇದರಿಂದ ಜರ್ಮನಿಯ ಕೈಗಾರಿಕೆಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ ಅದೆಷ್ಟು ದುಬಾರಿಯಾಗುತ್ತದೆ ಎನ್ನುವ ಸಂಗತಿಯತ್ತ ಅವರು ಬೆಳಕು ಚೆಲ್ಲಿದರು.
ಇದಕ್ಕೂ ಮುನ್ನ ಮಾತನಾಡಿದ ಟೆರಿ ನಿರ್ದೇಶಕಿ ವಿಭಾ ಧವನ್, ಶ್ರೀಮಂತ ದೇಶಗಳು ತಾವು ಆವಿಷ್ಕರಿಸಿದ ತಂತ್ರಜ್ಞಾನವನ್ನು ಇತರ ದೇಶಗಳಿಗೂ ಹಂಚುವ ಉದಾರತೆ ತೋರಬೇಕು ಎಂದು ಕರೆ ನೀಡಿದರು. ಮನುಷ್ಯರಿಗೆ ಬದುಕಲು ಇರುವುದು ಈ ಭೂಮಿ ಮಾತ್ರವೇ. ಒಂದು ದೇಶ ಚೆನ್ನಾಗಿ ಬೆಳೆದು, ಮತ್ತೊಂದು ಬೆಳೆಯದಿದ್ದರೆ ಅದರ ಪರಿಣಾಮ ಎಲ್ಲರಿಗೂ ಆಗುತ್ತದೆ. ಇದನ್ನು ಮುಂದುವರಿದ ದೇಶಗಳು ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಬೆಳೆಯಲು ಆಸ್ಪದ ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹವಾಮಾನ ಬದಲಾವಣೆ, ಎಐ ಈ ಜಗತ್ತನ್ನು ವೇಗವಾಗಿ ಆವರಿಸುತ್ತಿರುವ ವಿಷಯ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್
ಇನ್ನು, ಹೀರೋ ಫ್ಯೂಚರ್ ಎನರ್ಜೀಸ್ ಸಂಸ್ಥೆಯ ಛೇರ್ಮನ್ ಮತ್ತು ಎಂಡಿಯಾದ ರಾಹುಲ್ ಮುಂಜಲ್ ಮಾತನಾಡಿ, ಭಾರತದಂತಹ ದೇಶಗಳು ಒಮ್ಮೆಲೇ ಪಳೆಯುಳಿಕೆ ಇಂಧನ ಬಳಕೆ ಬಿಟ್ಟುಬಿಡಲು ಆಗುವುದಿಲ್ಲ. ಭಾರತಕ್ಕೆ ಬಡತನದ ಸಮಸ್ಯೆ ನಿವಾರಿಸುವುದು ಮೊದಲ ಆದ್ಯತೆ. ಹೀಗಾಗಿ, ಕೆಲ ವರ್ಷಗಳವರೆಗೆ ಫಾಸಿಲ್ ಫುಯಲ್ ಬಳಕೆ ಮುಂದುವರಿಸುವುದು ಅನಿವಾರ್ಯ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ