ಸಿಂಧೂ ನದಿಗೆ ಭಾರತ ಡ್ಯಾಂ ನಿರ್ಮಿಸಿದರೆ ಬಾಂಬ್ ಹಾಕುತ್ತೇವೆ; ಅಮೆರಿಕದಲ್ಲಿ ಅಸೀಮ್ ಮುನೀರ್ ಬೆದರಿಕೆ
ಪಾಕಿಸ್ತಾನ ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ಕಿಡಿಕಾರಿದ್ದಾರೆ. ಈ ಬಾರಿ ಅಮೆರಿಕದಲ್ಲಿ ಭಾರತದ ವಿರುದ್ಧ ಮಾತನಾಡಿರುವ ಅಸಿಮ್ ಮುನೀರ್, ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ, ಅದೊಂದು ಬಗೆಹರಿಯದ ಅಂತಾರಾಷ್ಟ್ರೀಯ ಸಮಸ್ಯೆ ಎಂದು ಅವರು ಹೇಳಿದ್ದಾರೆ. ಹಾಗೇ, ಅಮೆರಿಕದ ನೆಲದಲ್ಲಿ ನಿಂತು ಭಾರತದ ಮೇಲೆ ಪರಮಾಣು ಬಾಂಬ್ ಹಾಕುವ ಬೆದರಿಕೆಯನ್ನೂ ಹಾಕಿದ್ದಾರೆ.

ವಾಷಿಂಗ್ಟನ್, ಆಗಸ್ಟ್ 11: ಭಾರತದ ಮೇಲೆ ಅಮೆರಿಕ ದುಪ್ಪಟ್ಟು ಆಮದು ಸುಂಕ (Trump Tariff) ವಿಧಿಸಿರುವ ಬೆನ್ನಲ್ಲೇ ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ( Asim Munir) ಭಾರತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದ ನೆಲದಿಂದ “ಪರಮಾಣು ಯುದ್ಧ”ದ ಬಗ್ಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದೊಂದಿಗಿನ ಮುಂದಿನ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಸ್ತಿತ್ವದ ಬೆದರಿಕೆ ಎದುರಾದರೆ ನಾವು ಅರ್ಧ ಜಗತ್ತನ್ನೇ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
“ಪಾಕಿಸ್ತಾನ ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸಿಯೇ ನಾವು ಪತನವಾಗುತ್ತೇವೆ ಎಂಬುದನ್ನು ನೆನಪಿಡಿ” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಮೂರನೇ ದೇಶದ ವಿರುದ್ಧ ಅಮೆರಿಕ ನೆಲದಿಂದ ಬಂದಿರುವ ಮೊದಲ ಪರಮಾಣು ಬೆದರಿಕೆಯಾಗಿದೆ.
ಇದನ್ನೂ ಓದಿ: ಊಟ ಚೆನ್ನಾಗಿತ್ತು ಅನ್ಸುತ್ತೆ; ಅಸಿಮ್ ಮುನೀರ್ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಸಿಂಧೂ ಜಲ ಒಪ್ಪಂದದ ಕುರಿತು ಅಸಿಮ್ ಮುನೀರ್ ಟೀಕೆ:
ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾರತವು ಸಿಂಧೂ ಜಲ ಮಾರ್ಗಗಳಲ್ಲಿ ನಿರ್ಮಿಸುವ ಯಾವುದೇ ಮೂಲಸೌಕರ್ಯವನ್ನು ನಾಶಪಡಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ನಮ್ಮ ದೇಶದಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ. ಸಿಂಧೂ ಜಲ ಮಾರ್ಗದಲ್ಲಿ ಭಾರತ ಅಣೆಕಟ್ಟು ನಿರ್ಮಿಸಿದರೆ ಅದು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ತಡೆಯಬಹುದು. ಹಾಗೇನಾದರೂ ಡ್ಯಾಂ ನಿರ್ಮಿಸಿದರೆ ನಾವು ಬಾಂಬ್ ಸಿಡಿಸುತ್ತೇವೆ ಎಂದು ಅವರು ಬೆದರಿಕೆ ಹಾಕಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರದಿಂದ 250 ಮಿಲಿಯನ್ ಜನರು ಹಸಿವಿನಿಂದ ಬಳಲುವ ಅಪಾಯ ತಂದೊಡ್ಡಿದೆ ಎಂದು ಮುನೀರ್ ಹೇಳಿದ್ದಾರೆ.
“ಭಾರತವು ಸಿಂಧೂ ನದಿಗೆ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ. ಡ್ಯಾಂ ಪೂರ್ಣವಾದ ನಂತರ ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅದು ನಮಗೂ ಸೇರಿದ್ದು. ಅಲ್ಲಾಹ್ ನಮ್ಮೊಂದಿಗಿದ್ದಾನೆ” ಎಂದು ಅಸೀಮ್ ಮುನೀರ್ ಹೇಳಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ 5 ಪಾಕಿಸ್ತಾನಿ ಜೆಟ್, ಒಂದು ದೊಡ್ಡ ವಿಮಾನ ನಾಶ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಕೊನೆಯ ಭೇಟಿಯಲ್ಲಿ ಜೂನ್ 18ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅಸೀಮ್ ಮುನೀರ್ ಅವರನ್ನು ಶ್ವೇತಭವನದ ಭೋಜನಕೂಟಕ್ಕೆ ಆಹ್ವಾನಿಸಿದ್ದರು. ಇದಕ್ಕೆ ಭಾರತ ಸೇರಿದಂತೆ ಕೆಲವು ದೇಶಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಭೇಟಿಯ ಸಮಯದಲ್ಲಿ ಅಸೀಮ್ ಮುನೀರ್ ಅವರು ಟ್ರಂಪ್ ಮಾಡಿದ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗಾಗಿ ಅಮೆರಿಕ ಅಧ್ಯಕ್ಷರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




