
ನವದೆಹಲಿ, ಆಗಸ್ಟ್ 19: ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಮತ್ತು ಬ್ಲ್ಯಾಕ್‌ರಾಕ್ ಜಂಟಿ ಸಹಭಾಗಿತ್ವದ ‘ಜಿಯೋಬ್ಲ್ಯಾಕ್‌ರಾಕ್ (JioBlackRock)’ ಆಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯು ತನ್ನ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ರೆಗ್ಯುಲರ್ ಪ್ಲಾನ್‌ಗಳನ್ನು (Regular Plans) ಪರಿಚಯಿಸಿದೆ. ಆಗಸ್ಟ್ 17ರಿಂದಲೇ ಈ ರೆಗ್ಯುಲರ್ ಪ್ಲಾನ್ಗಳು ಲಭ್ಯವಿವೆ. ಇದರೊಂದಿಗೆ ಹೂಡಿಕೆದಾರರಿಗೆ ಹೆಚ್ಚಿನ ಆಯ್ಕೆಗಳು ಸಿಕ್ಕಂತಾಗಿದೆ.
ಜಿಯೋಬ್ಲ್ಯಾಕ್‌ರಾಕ್ ಇಲ್ಲಿಯವರೆಗೆ ಕೇವಲ ಡೈರೆಕ್ಟ್ ಪ್ಲಾನ್‌ಗಳನ್ನು (Direct Plans) ಮಾತ್ರ ನೀಡುತ್ತಿತ್ತು. ಈಗ ನೋಂದಾಯಿತ ಮ್ಯೂಚುಯಲ್ ಫಂಡ್ ವಿತರಕರ (Distributors / Agents) ಮೂಲಕ ಹೂಡಿಕೆ ಮಾಡಲು ರೆಗ್ಯುಲರ್ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. ಡೈರೆಕ್ಟ್ ಪ್ಲಾನ್ ಮತ್ತು ರೆಗ್ಯುಲರ್ ಪ್ಲಾನ್‌ಗಳ ಮಧ್ಯೆ ಒಂದಷ್ಟು ಪ್ರಮುಖ ವ್ಯತ್ಯಾಸಗಳನ್ನು ತಿಳಿದಿರುವುದು ಉತ್ತಮ.
ಇದನ್ನೂ ಓದಿ: ಲಲಿತಾ ಜ್ಯುವೆಲ್ಲರಿ ಐಪಿಒಗೆ ಭರ್ಜರಿ ಸ್ಪಂದನೆ; 1,700 ಕೋಟಿ ರೂ ಮೊತ್ತಕ್ಕೆ 80,000 ಕೋಟಿ ರೂ ಮೌಲ್ಯದ ಬಿಡ್ಡಿಂಗ್
ರೆಗ್ಯುಲರ್ ಪ್ಲಾನ್‌ಗಳಲ್ಲಿ ವಿತರಕರಿಗೆ ಕಮಿಷನ್ ನೀಡಬೇಕಾಗಿರುವುದರಿಂದ, ಇವುಗಳ ಖರ್ಚಿನ ಪ್ರಮಾಣ (Expense Ratio) ಡೈರೆಕ್ಟ್ ಪ್ಲಾನ್‌ಗಳಿಗಿಂತ ಹೆಚ್ಚಿರುತ್ತದೆ. ಈ ಕಮಿಷನ್ ವೆಚ್ಚವನ್ನು ಫಂಡ್‌ನ ನಿವ್ವಳ ಆಸ್ತಿ ಮೌಲ್ಯದಿಂದ (NAV) ಕಡಿತಗೊಳಿಸಲಾಗುತ್ತದೆ, ಇದರಿಂದ ದೀರ್ಘಾವಧಿಯಲ್ಲಿ ಡೈರೆಕ್ಟ್ ಪ್ಲಾನ್‌ಗಳಿಗೆ ಹೋಲಿಸಿದರೆ ರಿಟರ್ನ್ಸ್‌ನಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ ಉಂಟಾಗುತ್ತದೆ.
ರೆಗ್ಯುಲರ್ ಪ್ಲಾನ್ ಯಾರಿಗೆ ಸೂಕ್ತ?: ಶೇರು ಮಾರುಕಟ್ಟೆ ಹಾಗೂ ಮ್ಯೂಚುಯಲ್ ಫಂಡ್‌ಗಳ ಬಗ್ಗೆ ಸ್ವತಃ ಸಂಶೋಧನೆ ನಡೆಸಿ ಹೂಡಿಕೆ ಮಾಡಲು ತಿಳಿಯದ ಹೊಸ ಹೂಡಿಕೆದಾರರಿಗೆ ಅಥವಾ ವೃತ್ತಿಪರ ಆರ್ಥಿಕ ಸಲಹೆಗಾರರ ಸಹಾಯ ಬಯಸುವವರಿಗೆ ರೆಗ್ಯುಲರ್ ಪ್ಲಾನ್ ಸಹಕಾರಿಯಾಗಲಿದೆ.
ಡೈರೆಕ್ಟ್ ಪ್ಲಾನ್ ಯಾರಿಗೆ ಸೂಕ್ತ?: ಸ್ವತಃ ಫಂಡ್‌ಗಳನ್ನು ಆಯ್ಕೆ ಮಾಡಿ ಪೋರ್ಟ್‌ಫೋಲಿಯೋ ನಿರ್ವಹಿಸುವ ಸಾಮರ್ಥ್ಯವಿರುವ ಅನುಭವಿ ಹೂಡಿಕೆದಾರರು ಡೈರೆಕ್ಟ್ ಪ್ಲಾನ್‌ಗಳ ಮೂಲಕ ಕಡಿಮೆ ವೆಚ್ಚದಲ್ಲಿ ಹೂಡಿಕೆ ಮುಂದುವರಿಸಬಹುದು.
ಇದನ್ನೂ ಓದಿ: ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ
ಜಿಯೋಬ್ಲ್ಯಾಕ್‌ರಾಕ್ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ಇಟಿಎಫ್‌ಗಳು (ETFs), ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳು (SIFs) ಮತ್ತು ಗಿಫ್ಟ್ ಸಿಟಿ (GIFT City) ಮೂಲಕ ವಿದೇಶಿ ಹೂಡಿಕೆ ಉತ್ಪನ್ನಗಳನ್ನು ಒಳಗೊಂಡಂತೆ ಪೂರ್ಣ ಪ್ರಮಾಣದ ಮ್ಯೂಚುಯಲ್ ಫಂಡ್ ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ