
ನವದೆಹಲಿ, ಮೇ 29: ಉತ್ತರಪ್ರದೇಶದ ಪೂರ್ವಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಕಲಾನಮಕ್ ಅಕ್ಕಿಯನ್ನು (Kala Namak rice) ಬೌದ್ಧ ದೇಶಗಳಿಗೆ ರಫ್ತು ಮಾಡಲು ಯೋಜಿಸಲಾಗುತ್ತಿದೆ. ಬೌದ್ಧ ಧರ್ಮೀಯರಿಗೆ ವಿಶೇಷ ನಂಟಿರುವ ಕಾರಣಕ್ಕೆ ಈ ಅಕ್ಕಿಯನ್ನು ಥಾಯ್ಲೆಂಡ್, ವಿಯೆಟ್ನಾ, ನೇಪಾಳ, ಮಯನ್ಮಾರ್, ಸಿಂಗಾಪುರ, ಜಪಾನ್ ಇತ್ಯಾದಿ ಬೌದ್ಧರ ಬಾಹುಳ್ಯ ಇರುವ ದೇಶಗಳಿಗೆ ಸರಬರಾಜು ಮಾಡುವ ಚಿಂತನೆ ನಡೆದಿದೆ. ಉತ್ತರಪ್ರದೇಶ ಸರ್ಕಾರವು ಕೇಂದ್ರ ವಾಣಿಜ್ಯ ಸಚಿವಾಲಯದ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತಿದೆ.
ಬುದ್ಧ ರೈಸ್ ಎಂದೇ ಖ್ಯಾತವಾಗಿರುವ ಕಾಲಾನಮಕ್ ಅಕ್ಕಿಗೆ ಜಾಗತಿಕವಾಗಿ ಹಲವೆಡೆ ಬೇಡಿಕೆ ಇದೆ. ಅದರಲ್ಲೂ ಬೌದ್ಧರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಇದಕ್ಕೆ ಬಹಳ ಡಿಮ್ಯಾಂಡ್ ಇದೆ.
ಕಾಲಾ ನಮಕ್ ಅಕ್ಕಿಯು ಅದರ ಹೆಸರೇ ಸೂಚಿಸುವಂತೆ ಕಪ್ಪು ಬಣ್ಣದಿರುತ್ತದೆ. ಇದರ ರುಚಿಯು ಸಿಹಿ ಮತ್ತು ಉಪ್ಪು ಮಿಶ್ರಿತವಾಗಿರುತ್ತದೆ. ನೋಡಲು ಇದು ಬಾಸ್ಮತಿ ಅಕ್ಕಿಯ ರೀತಿ ಕಾಣುತ್ತದಾದರೂ ಇದು ಬಾಸ್ಮತಿ ತಳಿ ಗುಂಪಿಗೆ ಸೇರಿದ್ದಲ್ಲ. ಪ್ರೋಟೀನ್, ಐರನ್, ಜಿಂಕ್ ಇತ್ಯಾದಿ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದೆ. ಇತರ ಅಕ್ಕಿ ತಳಿಗಿಂತ ಇದು ಹೆಚ್ಚು ಗುಣಮಟ್ಟದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಇದರ ಗ್ಲೈಕೆಮಿಕ್ ಇಂಡೆಕ್ಸ್ ಬಹಳ ಕಡಿಮೆ ಇದೆ. ಡಯಾಬಿಟಿಸ್ ಇರುವವರಿಗೂ ಇದು ಹೇಳಿ ಮಾಡಿಸಿದ ಅಕ್ಕಿ ಎನಿಸಿದೆ. ಇದರ ಸುವಾಸನೆಯೂ ಅಮೋಘವೆಂದು ಹೇಳಲಾಗುತ್ತದೆ.
ಇದನ್ನೂ ಓದಿ: ಹಿಂಡನ್ಬರ್ಗ್ ವರದಿ: ಮಾಜಿ ಸೆಬಿ ಮುಖ್ಯಸ್ಥೆ ಮಾಧವಿಗೆ ಲೋಕಪಾಲ್ ಕ್ಲೀನ್ ಚಿಟ್; ತನಿಖೆಯ ಅಗತ್ಯವಿಲ್ಲವೆಂದು ತೀರ್ಮಾನ
ಕೇಂದ್ರ ಸರ್ಕಾರ ಇತ್ತೀಚೆಗೆ ಪೋಷಕಾಂಶ ಸಮೃದ್ಧ ಬೆಳೆಗಳಿಗೆ ಉತ್ತೇಜನ ನೀಡುವ ಸ್ಕೀಮ್ ಆರಂಭಿಸಿತ್ತು. ಅದರಲ್ಲಿ ಆಯ್ಕೆಯಾದ ಬೆಳೆಗಳಲ್ಲಿ ಕಾಲಾನಮಕ್ ಅಕ್ಕಿಯೂ ಒಂದು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ವಿಶೇಷ ಅಕ್ಕಿಗಳು ಎನ್ನುವ ಪುಸ್ತಕದಲ್ಲೂ ಈ ಕಾಲಾನಮಕ್ ಅಕ್ಕಿಯನ್ನು ಒಳಗೊಳ್ಳಲಾಗಿದೆ.
ಕಾಲಾನಮಕ್ ಅಕ್ಕಿಯ ಹಿಂದೆ ಬಹಳ ಸ್ವಾರಸ್ಯಕರ ಕಥೆ ಇದೆ. ಗೌತಮ ಬುದ್ಧನಿಗೆ ಜ್ಞಾನೋದಯವಾದ ಬಳಿಕ ಅವರು ಪ್ರಯಾಣಿಸುತ್ತಾ, ಸಿದ್ಧಾರ್ಥನಗರವನ್ನು ದಾಟುತ್ತಾರೆ. ಆಗ ಸ್ಥಳೀಯರು ಬಂದು ಅವರನ್ನು ಕಂಡು ಆಶೀರ್ವಾದ ಯಾಚಿಸುತ್ತಾರೆ. ಆಗ ಗೌತಮರು ತಮ್ಮ ಜೋಳಿಗೆಯಿಂದ ಒಂದು ಹಿಡಿ ಭತ್ತವನ್ನು ಆ ಜನರಿಗೆ ನೀಡುತ್ತಾರೆ.
‘ಈ ಭತ್ತಕ್ಕೆ ವಿಶೇಷ ಪರಿಮಳ ಇದೆ. ಇದನ್ನು ನಿಮ್ಮ ಜಮೀನಿನಲ್ಲಿ ಬೆಳೆಯಿರಿ. ಇದು ನಿಮ್ಮಲ್ಲಿ ನನ್ನ ನೆನಪು ಉಳಿಸುತ್ತದೆ’ ಎಂದು ಹೇಳುತ್ತಾರೆ.
ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?
ಬುದ್ಧನ ಅಕ್ಕಿ ಎಂದೇ ಖ್ಯಾತವಾಗಿರುವ ಕಾಲಾನಮಕ್ ಅನ್ನು ಉತ್ತರಪ್ರದೇಶದ ಪೂರ್ವಭಾಗದಲ್ಲಿರುವ ಸಿದ್ಧಾರ್ಥನಗರ, ಗೋಂಡಾ, ಸಂತ ಕಬೀರ್ ನಗರ್, ಮಹಾರಾಜಗಂಜ್, ಬಸ್ತಿ, ಬಹರೇಜ್, ಬಲರಾಮ್ಪುರ್, ಶ್ರಾವಸ್ತಿ ಮತ್ತು ಗೋರಖಪುರ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ಈ ಜಾಗದ ಮಣ್ಣಿನ ಗುಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಈ ತಳಿಯ ಅಕ್ಕಿಯನ್ನು ಬೇರೆ ಪ್ರದೇಶಗಳಲ್ಲಿ ಬೆಳೆದಲ್ಲಿ ಮೂಲ ಅಕ್ಕಿ ನೀಡುವ ಪರಿಮಳ ಸಿಗೋದಿಲ್ಲ. ಇದು ಈ ಸ್ಥಳಕ್ಕೆ ವಿಶೇಷವಾದ ತಳಿ. ಇದೇ ಕಾರಣಕ್ಕೆ ಈ ಅಕ್ಕಿಗೆ ಜಿಐ ಟ್ಯಾಗ್ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ