India vs China: ಪ್ಲಾಸ್ಟಿಕ್, ರಬ್ಬರ್ ವಸ್ತು ಖರೀದಿಸುವಾಗ ಮೇಡ್ ಇನ್ ಚೀನಾ ಗಮನಿಸಿ… ಡ್ರ್ಯಾಗನ್ ಮಣಿಸಲು ನಿಮ್ಮ ಕೈಲಿದೆ ಅಸ್ತ್ರ
How to prevent Chinese goods capturing Indian market: ಚೀನಾದೊಂದಿಗೆ ಭಾರತದ ಟ್ರೇಡ್ ಡೆಫಿಸಿಟ್ ಎಂಟು ಲಕ್ಷ ಕೋಟಿ ರೂ ಇದೆ. ಅಂದರೆ ರಫ್ತಿಗಿಂತ ಆಮದು ಇಷ್ಟು ಪ್ರಮಾಣದಲ್ಲಿ ಹೆಚ್ಚಿದೆ. 2023ರಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳ ಆಮದು ಮೌಲ್ಯವೇ 54,278 ರೂ ಇದೆ. ಇದಕ್ಕೆ ಪರ್ಯಾಯವಾಗಿ ಭಾರತೀಯ ಉತ್ಪನ್ನಗಳಿವೆ. ಜನರು ಈ ಚೀನೀ ಉತ್ಪನ್ನಗಳ ಖರೀದಿ ನಿಲ್ಲಿಸಿದರೆ ಚೀನಾಗೆ ಆರ್ಥಿಕ ಆಘಾತ ತರಲು ಸಾಧ್ಯ.

ಸ್ವದೇಶಿ ವಸ್ತುಗಳನ್ನು ಖರೀದಿಸಿ ಎನ್ನುವುದು ನಿನ್ನೆ ಮೊನ್ನೆಯ ಘೋಷಣೆಯಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಈ ಮಾತನ್ನು ಪಾಲಿಸಿದರೆ ಪ್ರಗತಿಯ ವೇಗ ಮತ್ತಷ್ಟು ಹೆಚ್ಚುತ್ತದೆ. ಭಾರತದಲ್ಲಿ ತಯಾರಾಗುತ್ತಿರುವ ಮತ್ತು ತಯಾರಾಗಬಹುದಾದ ವಸ್ತುಗಳ ಬದಲು ವಿದೇಶೀ ವಸ್ತುಗಳನ್ನು ಮೀನಮೇಷ ಎಣಿಸದೇ ಖರೀದಿಸುತ್ತೇವೆ. ಈ ರೀತಿಯ ಅನೇಕ ವಸ್ತುಗಳು ಚೀನಾದಿಂದ ಆಮದಾಗಿ ಬಂದು ಭಾರತದ ಮಾರುಕಟ್ಟೆಯನ್ನು ಆವರಿಸಿರುವುದುಂಟು. ಭಾರತಕ್ಕೆ ನಾನಾ ಸ್ತರಗಳಲ್ಲಿ ಕೇಡು ಬಯಸುವ ಚೀನಾ ದೇಶದೊಂದಿಗೆ ಭಾರತದ ಟ್ರೇಡ್ ಡೆಫಿಸಿಟ್ (India China Trade Relation) ಬರೋಬ್ಬರಿ ಎಂಟು ಲಕ್ಷ ಕೋಟಿ ರೂ ಆಗಿ ಹೋಗಿದೆ. ಅಂದರೆ, ಚೀನಾಗೆ ನಾವು ರಫ್ತು ಮಾಡುವ ಸರಕುಗಳ ಮೌಲ್ಯಕ್ಕಿಂತ ಆಮದು ಮಾಡಿಕೊಳ್ಳುವುದು 8 ಲಕ್ಷ ಕೋಟಿ ರೂ ಹೆಚ್ಚಿದೆ.
ಚೀನೀ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸಿದರೆ ಭಾರತದ ವಿದೇಶೀ ವಿನಿಮಯ ಸುಧಾರಿಸುತ್ತದೆ. ಟ್ರೇಡ್ ಡೆಫಿಸಿಟ್ ಅಥವಾ ವ್ಯಾಪಾರ ಕೊರತೆ ಕಡಿಮೆ ಆಗುತ್ತದೆ. ಚೀನಾದ ಆರ್ಥಿಕತೆಗೂ ಒಂದು ಸಣ್ಣ ಆಘಾತ ಕೊಟ್ಟಂತಾಗುತ್ತದೆ. ಹಾಗಾದರೆ, ಚೀನಾದಿಂದ ಯಾವೆಲ್ಲಾ ಪ್ರಮುಖ ವಸ್ತುಗಳನ್ನು ನಾವು ಆಮದು ಮಾಡಿಕೊಳ್ಳುತ್ತೇವೆ, ಅವುಗಳ ಮೌಲ್ಯ ಎಷ್ಟು ಎಂಬ ವಿವರವನ್ನು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ಸಂಸ್ಥೆಯ ಸಂಸ್ಥಾಪಕ ಶ್ರೀವಾಸ್ತವ್ ಅವರು ನೀಡಿದ್ದಾರೆ.
ಶ್ರೀವಾಸ್ತವ್ ಅವರ ಪ್ರಕಾರ, 2023-24ನೇ ವರ್ಷದಲ್ಲಿ ಚೀನಾದಿಂದ ಭಾರತ ಸುಮಾರು 7,521 ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಇವುಗಳಲ್ಲಿ 54,278 ಕೋಟಿ ರೂ. ಮೌಲ್ಯದ ಸರಕುಗಳು ಪ್ಲಾಸ್ಟಿಕ್ ಮತ್ತು ರಬ್ಬರ್‌ನಿಂದ ಮಾಡಲ್ಪಟ್ಟಿದ್ಧಾಗಿವೆ. ಜವಳಿ ಸರಕು 42,305 ಕೋಟಿ ರೂ, ಕಾಗದದ ಸರಕು 7,411 ಕೋಟಿ ರೂ, ಮರದ ಉತ್ಪನ್ನಗಳು 2205 ಕೋಟಿ ರೂ ಮತ್ತು ಕಲ್ಲು ಮತ್ತು ಗಾಜಿನ ಸರಕುಗಳು 18,769 ಕೋಟಿ ರೂ. ಮೌಲ್ಯದ್ದಾಗಿದ್ದವು. ಆಮದು ಮಾಡಿಕೊಂಡ ವಸ್ತುಗಳಲ್ಲಿ ಬಟನ್, ಪೆನ್, ಲೈಟರ್, ಬಾಚಣಿಗೆ ಹಾಗು ಇತರ ಅನೇಕ ಸಣ್ಣ ವಸ್ತುಗಳು ಸೇರಿವೆ.
ಸಾವಿರಾರು ಕೋಟಿ ಮೌಲ್ಯದ ಆಮದು ಸರಕುಗಳು
ದೈನಿಕ್ ಭಾಸ್ಕರ್ನಲ್ಲಿ ಬಂದಿರುವ ವರದಿಯ ಪ್ರಕಾರ, ನಮ್ಮ ದೇಶದಲ್ಲಿಯೂ ತಯಾರಿಸಬಹುದಾದ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳಲು ನಾವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತೇವೆ. ಅಂಥ ಕೆಲ ವಸ್ತುಗಳು ಹಾಗೂ ಅದರ ಆಮದಿತ ಮೌಲ್ಯದ ಪಟ್ಟಿ ಈ ಕೆಳಕಂಡಂತಿದೆ:
ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?
2023ರಲ್ಲಿ ಚೀನಾದಿಂದ ಭಾರತ ಆಮದು ಮಾಡಿಕೊಂಡ ಕೆಲ ವಸ್ತುಗಳು ಮತ್ತು ಅವುಗಳ ಮೌಲ್ಯ
- ಬಟನ್: 352.45 ಕೋಟಿ ರೂ
- ಪೆನ್ನು: 575.16 ಕೋಟಿ ರೂ
- ಪೆನ್ಸಿಲ್ ಕ್ರಯೋನ್: 152.35 ಕೋಟಿ ರೂ
- ಚಾಕ್‌ಬೋರ್ಡ್: 141.18 ಕೋಟಿ ರೂ
- ಲೈಟರ್: 355.54 ಕೋಟಿ ರೂ
- ಬಾಚಣಿಗೆ: 769.69 ಕೋಟಿ ರೂ
- ಸೆಂಟ್ ಸ್ಪ್ರೇ: 277.90 ಕೋಟಿ ರೂ
- ಆಟಿಕೆಗಳು: 667.06 ಕೋಟಿ ರೂ
- ಟಿಷ್ಯೂ ಪೇಪರ್: 11.60 ಕೋಟಿ ರೂ
- ಕ್ರಾಫ್ಟ್ ಪೇಪರ್: 40.56 ಕೋಟಿ ರೂ
- ತರಕಾರಿ ಹೆಚ್ಚಲು ಪಾರ್ಚ್ಮೆಂಟ್ ಪೇಪರ್: 205.52 ಕೋಟಿ ರೂ
- ವಾಲ್‌ಪೇಪರ್: 158.20 ಕೋಟಿ ರೂ
- ಟಾಯ್ಲೆಟ್ ಪೇಪರ್: 415.74 ಕೋಟಿ ರೂ
- ಕಾರ್ಟನ್ ಬಾಕ್ಸ್: 303.22 ಕೋಟಿ ರೂ
- ನೋಟ್‌ಬುಕ್: 211.87 ಕೋಟಿ ರೂ
- ಬ್ರೋಷರ್ಸ್: 73.22 ಕೋಟಿ ರೂ
- ಪಿಕ್ಚರ್ ಬುಕ್ಸ್: 21.30 ಕೋಟಿ ರೂ
ಚೀನಾ ವಸ್ತುಗಳು ಭಾರತದ ಮಾರುಕಟ್ಟೆ ಆಕ್ರಮಿಸಲು ಹೇಗೆ ಸಾಧ್ಯ?
ಚೀನಾ ಒಂದು ರೀತಿಯಲ್ಲಿ ವಿಶ್ವದ ಫ್ಯಾಕ್ಟರಿ ಎನಿಸಿದೆ. ಜಾಗತಿಕವಾಗಿ ಅತಿಹೆಚ್ಚು ರಫ್ತು ಮಾಡುವ ದೇಶ ಅದು. ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಅಲ್ಲಿನ ತಯಾರಿಕಾ ವಲಯ ಬಲಿಷ್ಠವಾಗಿದೆ. ಕಡಿಮೆ ವೆಚ್ಚದಲ್ಲಿ ದೊಡ್ಡ ಪ್ರಯಾಣದಲ್ಲಿ ಸರಕುಗಳನ್ನು ತಯಾರಿಸಬಲ್ಲುದು. ಭಾರತದಲ್ಲೂ ಈ ವಸ್ತುಗಳನ್ನು ತಯಾರಿಸಲಾಗುತ್ತಿದೆಯಾದರೂ ಕಡಿಮೆ ಪ್ರಮಾಣದಲ್ಲಿ ಮಾತ್ರವೇ. ಚೀನಾದಷ್ಟು ಅಗ್ಗದ ದರದಲ್ಲಿ ಭಾರತೀಯ ಸರಕುಗಳನ್ನು ತಯಾರಿಸಿ ಮಾರಲು ಆಗುವುದಿಲ್ಲ.
ಗ್ರಾಹಕರು ಕೂಡ ಬೆಲೆ ಸೂಕ್ಷ್ಮಿಗಳಾಗಿರುತ್ತಾರೆ. ಅಂದರೆ, ಕಡಿಮೆ ಬೆಲೆಗೆ ಸಿಗುವ ಸರಕುಗಳ ಖರೀದಿಗೆ ಆದ್ಯತೆ ಕೊಡುತ್ತಾರೆ. ಚೀನಾ ವಸ್ತುಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆ ಇರುತ್ತದೆ. ಮಾರಾಟಗಾರರ ಮಧ್ಯೆ ಪೈಪೋಟಿ ಇರುವುದರಿಂದ ಕಡಿಮೆ ಬೆಲೆಗೆ ಸರಕು ಪಡೆದು ಮಾರುವುದು ಅನಿವಾರ್ಯವಾಗಿರುತ್ತದೆ.
ಇದನ್ನೂ ಓದಿ: ಬೆಂಗಳೂರಿನಿಂದ ಎಚ್ಎಎಲ್ ಯೋಜನೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರಾ ಚಂದ್ರಬಾಬು ನಾಯ್ಡು?
ಚೀನೀ ಸ್ಮಾರ್ಟ್ಫೋನ್ಗಳನ್ನು ಯಾಕೆ ಪರಿಗಣಿಸಿಲ್ಲ…?
ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಆರು ಸ್ಮಾರ್ಟ್ಫೋನ್ ಬ್ರ್ಯಾಂಡುಗಳಲ್ಲಿ ನಾಲ್ಕು ಚೀನೀ ಮೂಲದ್ದೇ ಆಗಿವೆ. ವಿವೋ, ಓಪ್ಪೋ, ಶಿಯೋಮಿ, ರಿಯಲ್ಮಿ ಫೋನ್ಗಳು ಚೀನೀ ಮೂಲದ್ದಾದರೂ ಅವುಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಹೀಗಾಗಿ, ಇವುಗಳನ್ನು ಆಮದು ಗುಂಪಿಗೆ ಸೇರಿಸಲು ಆಗುವುದಿಲ್ಲ.
ಚೀನೀ ಆಮದನ್ನು ತಪ್ಪಿಸುವ ಮಾರ್ಗೋಪಾಯ
ಚೀನೀ ಸರಕುಗಳ ಆಮದನ್ನು ಕಡಿಮೆ ಮಾಡಲು ಎರಡು ಮಾರ್ಗಗಳಿವೆ. ಮೊದಲನೆಯದು, ಸರ್ಕಾರವು ಚೀನೀ ಸರಕುಗಳ ಮೇಲೆ ಬಹಳ ಹೆಚ್ಚು ಆಮದು ಸುಂಕ ವಿಧಿಸುವುದು. ಎರಡನೆಯದು, ಗ್ರಾಹಕರು ಚೀನೀ ಸರಕುಗಳ ಖರೀದಿಯನ್ನು ನಿಲ್ಲಿಸುವುದು.
ಕೆಲವಾರು ಕಾರಣಕ್ಕೆ ಚೀನೀ ಸರಕುಗಳನ್ನು ನಿಷೇಧಿಸಲಾಗಲೀ ಅಥವಾ ಆಮದು ಸುಂಕಗಳಿಂದ ನಿರ್ಬಂಧಿಸುವುದಾಗಲೀ ಕಷ್ಟಸಾಧ್ಯ. ಬಹಳ ಅಗತ್ಯವಾಗಿರುವ ಸರಕುಗಳು ಚೀನಾದಿಂದ ಬರುವುದು ನಿಂತುಹೋದರೆ ಭಾರತದ ಅನೇಕ ಉದ್ಯಮಗಳಿಗೆ ಸಂಕಷ್ಟವಾಗುತ್ತದೆ. ಹೀಗಾಗಿ, ಗ್ರಾಹಕರೇ ಜಾಗೃತರಾಗಿ ಚೀನೀ ಸರಕುಗಳಿಂದ ದೂರ ಉಳಿಯುವುದು ಉತ್ತಮ ಮಾರ್ಗ ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








