ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

Karnataka Anthropic vs US Anthropic: ಐಟಿ ಸೆಕ್ಟರ್ ಉದ್ಯೋಗಿಗಳನ್ನು ಇನ್ನಿಲ್ಲವಾಗಿಸಲು ಹೊರಟಿರುವ ಅಮೆರಿಕದ ಎಐ ಕಂಪನಿಯಾದ ಆಂಥ್ರೋಪಿಕ್ ವಿರುದ್ಧ ಟ್ರೇಡ್​ಮಾರ್ಕ್ ನಿಯಮ ಉಲ್ಲಂಘನೆಯ ಆರೋಪ ಬಂದಿದೆ. ಕರ್ನಾಟಕದ ಆಂಥ್ರೋಪಿಕ್ ಸಾಫ್ಟ್ವೇರ್ ಪ್ರೈ ಲಿ ಎನ್ನುವ ಕಂಪನಿಯು ಅಮೆರಿಕನ್ ಎಐ ಕಂಪನಿ ವಿರುದ್ಧ ದೂರು ದಾಖಲಿಸಿದೆ. ಈ ಸಂಬಂಧ ಬೆಳಗಾವಿ ಕೋರ್ಟ್​ವೊಂದು ಆಂಥ್ರೋಪಿಕ್​ಗೆ ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದೆ.

ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್
ಕರ್ನಾಟಕದ ಅಂಥ್ರೋಪಿಕ್ ಸಾಫ್ಟ್​ವೇರ್ ಕಂಪನಿ ಸಿಇಒ ಮೊಹಮ್ಮದ್ ಆಯಾಜ್

Updated on: Feb 18, 2026 | 1:26 PM

ಬೆಳಗಾವಿ, ಫೆಬ್ರುವರಿ 18: ಜಾಗತಿಕವಾಗಿ ಸಂಚಲನ ಮೂಡಿಸುತ್ತಿರುವ ಮತ್ತು ಬೆಂಗಳೂರಿನಲ್ಲಿ ಮೊನ್ನೆ ಕಚೇರಿ ತೆರೆದಿರುವ ಅಮೆರಿಕನ್ ಎಐ ಕಂಪನಿಯಾದ ಆಂಥ್ರೋಪಿಕ್ (Anthropic) ವಿರುದ್ಧ ಅದೇ ಹೆಸರಿನ ಕರ್ನಾಟಕದ ಮತ್ತೊಂದು ಕಂಪನಿ ಕೇಸ್ ದಾಖಲಿಸಿದೆ. ಆಂಥ್ರೋಪಿಕ್ ಸಾಫ್ಟ್​ವೇರ್ ಪ್ರೈ ಲಿ (Anthropic Software Pvt Ltd) ಸಂಸ್ಥೆ ಬೆಳಗಾವಿ ಜಿಲ್ಲಾ ನ್ಯಾಯಾಲಯದ ಕಮರ್ಷಿಯಲ್ ವಿಭಾಗದಲ್ಲಿ ಅಮೆರಿಕದ ಆಂಥ್ರೋಪಿಕ್ ವಿರುದ್ಧ ದೂರು ದಾಖಲಿಸಿದೆ. ತನ್ನ ಹೆಸರನ್ನು ಬಳಸುತ್ತಿರುವುದರಿಂದ ತನಗೆ ಬ್ಯುಸಿನೆಸ್ ಕಡಿಮೆ ಆಗಿದೆ. ಟ್ರೇಡ್​ಮಾರ್ಕ್ ಹಕ್ಕು ಉಲ್ಲಂಘನೆಯಾಗಿದೆ ಎಂದು ಅದು ತನ್ನ ದೂರಿನಲ್ಲಿ ಹೇಳಿದೆ. ಈ ಸಂಬಂಧ, ನ್ಯಾಯಾಲಯವು ಅಮೆರಿಕನ್ ಕಂಪನಿಗೆ ಸಮನ್ಸ್ ಜಾರಿ ಮಾಡಿದೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಖ್ಯಕಚೇರಿ ಹೊಂದಿರುವ ಆಂಥ್ರೋಪಿಕ್ ಕಂಪನಿಗೆ ಈ ಹಿಂದೆ ಫೆಬ್ರುವರಿ 16ಕ್ಕೆ ಬರುವಂತೆ ಸಮನ್ಸ್ ಕೊಡಲಾಗಿತ್ತು. ಆದರೆ, ಪ್ರತಿನಿಧಿಗಳು ಬಾರದೇ ಇದ್ದರಿಂದ ಈಗ ಹೊಸದಾಗಿ ಸಮನ್ಸ್ ಕೊಡಲಾಗಿದ್ದು, ಮಾರ್ಚ್ 9ಕ್ಕೆ ಕೋರ್ಟ್​ಗೆ ಹಾಜರಾಗಬೇಕೆಂದು ಸೂಚಿಸಿದೆ.

ಇದನ್ನೂ ಓದಿ: ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ

ಕರ್ನಾಟಕದ ಅಂಥ್ರೋಪಿಕ್ ಸಾಫ್ಟ್​ವೇರ್ ಪ್ರೈ ಲಿ ಸಂಸ್ಥೆ ಸ್ಥಾಪನೆಯಾಗಿದ್ದು 2017ರಲ್ಲಿ. ಆದರೆ, ಅಮೆರಿಕದ ಆಂಥ್ರೋಪಿಕ್ ಆರಂಭವಾಗಿದ್ದು 2021ರಲ್ಲಿ. ಹೀಗಾಗಿ, ಹೆಸರು ಬಳಕೆಯ ಹಕ್ಕು ಕರ್ನಾಟಕದ ಕಂಪನಿಗೆ ಇರುತ್ತದೆ. ಆಂಥ್ರೋಪಿಕ್ ಡಾಟ್ ಇನ್ ಎನ್ನುವ ಡೊಮೈನ್ ಹೊಂದಿದೆ. ಆದರೆ, ಅಮೆರಿಕದ ಆಂಥ್ರೋಪಿಕ್ ಕಂಪನಿ ಅದೇ ಹೆಸರಿನಲ್ಲಿ ಡಾಟ್ ಕಾಮ್​ನಲ್ಲಿ ಡೊಮೈನ್ ಹೊಂದಿದೆ. ಅಂಥ್ರೋಪಿಕ್ ಅನ್ನು ಇಂಟರ್ನೆಟ್​ನಲ್ಲಿ ಸರ್ಚ್ ಮಾಡಿದಾಗ ಬಹುತೇಕ ರಿಸಲ್ಟ್​ಗಳು ಆಂಥ್ರೋಪಿಕ್ ಡಾಟ್ ಕಾಮ್ ಅನ್ನು ಪ್ರದರ್ಶಿಸುತ್ತವೆ. ಇದು ಕರ್ನಾಟಕದ ಆಂಥ್ರೋಪಿಕ್ ಕಂಪನಿಯ ಅಳಲು.

‘ನಮ್ಮ ಗ್ರಾಹಕರಿಗೆ ಆಂಥ್ರೋಪಿಕ್ ಎಂದೇ ಪರಿಚಿತರಿದ್ದೇವೆ. ಜನರು ಆಂಥ್ರೋಪಿಕ್ ಎಂದು ಶೋಧಿಸಿದಾಗ ಅಮೆರಿಕನ್ ಕಂಪನಿಯ ವೆಬ್​ಸೈಟ್ ಸಿತುತ್ತದೆ. ನಾವು ಸಂಪೂರ್ಣ ಮರೆಯಾದಂತಾಗಿದ್ದೇವೆ. ನಮ್ಮ ಬ್ಯುಸಿನೆಸ್​ಗೆ ಸಂಚಕಾರ ಆಗುತ್ತಿದೆ’ ಎಂದು ಆಂಥ್ರೋಪಿಕ್ ಸಾಫ್ಟ್​ವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಆಯಾಜ್ ಮುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ಶಿಕ್ಷಣ, ಕನೆಕ್ಟಿವಿಟಿ, ಸೇಫ್ಟಿ ಕ್ಷೇತ್ರಗಳಲ್ಲಿ ಆಂಥ್ರೋಪಿಕ್ ಸಾಫ್ಟ್​ವೇರ್ ಕಂಪನಿಯು ಡಿಜಿಟಲ್ ಪ್ಲಾಟ್​ಫಾರ್ಮ್​ಗಳನ್ನು ಅಭಿವೃದ್ಧಿಪಡಿಸುವ ಸೇವೆ ಒದಗಿಸುತ್ತದೆ. ಅಚಾತುರ್ಯ ಡ್ರೈವಿಂಗ್​ನಿಂದ (Distracted driving) ಸಾವು ಸಂಭವಿಸುವುದನ್ನು ತಪ್ಪಿಸಲು ಈ ಕಂಪನಿ ಕ್ವಿಕ್ ಟ್ಯೂನ್ಸ್ (QuickTunes) ಎನ್ನುವ ಸಾಫ್ಟ್​ವೇರ್ ಪರಿಹಾರ ಅಭಿವೃದ್ಧಿಪಡಿಸಿತ್ತು. ಕರ್ನಾಟಕ ಸರ್ಕಾರ ಇದನ್ನು ಗುರುತಿಸಿ ಈ ಕಂಪನಿಗೆ ನಗದು ಬಹುಮಾನ ಕೊಟ್ಟು ಗೌರವಿಸಿತ್ತು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ