ಮಹಾತ್ಮ ಗಾಂಧಿ ಅವರ ಕನಸಿನಂತೆ ಖಾದಿ ಉತ್ಪನ್ನಗಳ ಮೂಲಕ ಸ್ಥಳೀಯ ಸಮುದಾಯಗಳ ಆರ್ಥಿಕ ವಿಮೋಚನೆ ಮಾಡುವ ಕಾರ್ಯಕ್ರಮದ ಭಾಗವಾಗಿ ಹಳ್ಳಿಗಳಲ್ಲಿ ಉತ್ಪನ್ನವಾಗುವ ವಸ್ತುಗಳ ಮೌಲ್ಯವರ್ಧನೆಗೆ ಒತ್ತು ನೀಡಲಾಯಿತು. ಆದರೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಪ್ರಮಾಣೀಕರಿಸಿದ ಖಾದಿ ಸಂಸ್ಥೆಗಳು (ಕೆಐಗಳು) ಪ್ರಧಾನವಾಗಿ ನಡೆಸುತ್ತಿರುವ ಹಾಲಿ ವ್ಯಾಪಾರದ ನೀತಿ, ಕುಶಲಕರ್ಮಿಗಳಿಗೆ ಅನುಕೂಲಕರ ಆದಂತೆ ಕಾಣುತ್ತಿಲ್ಲ. ಈ ಹೊಸ ನೀತಿಯು ಈ ಹಿಂದಿನ ಅಂದರೆ ತಮ್ಮ ಸ್ವಂತ ಕಲೆಯನ್ನು ಆಧರಿಸುವ ಸ್ಥಳೀಯ ಉತ್ಪಾದನಾ ಮಾದರಿಗೆ ಭಾರೀ ಹಿನ್ನಡೆ ಆಗಿದೆ. ಈಗ ತಂದಿರುವ ಉತ್ಪಾದನೆ ಪ್ರಕ್ರಿಯೆಯಲ್ಲಿ ನಿರ್ಣಾಯಕ ಭಾಗವನ್ನು ಹೊರಗುತ್ತಿಗೆ ಪಡೆದ ಕುಶಲಕರ್ಮಿಗಳು ಮಾಡುತ್ತಿದ್ದು, ಮೌಲ್ಯ ಸರಪಳಿಗೆ ಸಂಬಂಧಿಸಿದ ವ್ಯವಹಾರದ ಅಂಶವನ್ನು ಖಾದಿ ಆಯೋಗ ಕೈಗೊಳ್ಳುತ್ತದೆ.
ಖಾದಿ ಉದ್ಯಮದಲ್ಲಿ ನುರಿತ ಕುಶಲಕರ್ಮಿಗಳು ಉತ್ತಮ ವೇತನದ ಕೊರತೆಯಿಂದ ತಮ್ಮ ಈ ಕಸುಬನ್ನು ಬಿಡುತ್ತಿದ್ದಾರೆ. ಕುಶಲಕರ್ಮಿಗಳನ್ನು ನಿಜವಾಗಿಯೂ ಸಬಲೀಕರಣಗೊಳಿಸಲು ಈ ಕುಶಲಕರ್ಮಿಗಳು ತಮ್ಮ ಸ್ವಂತ ಉತ್ಪನ್ನಗಳ ಮಾರಾಟಗಾರರಾಗುವ ಮಾರ್ಗವನ್ನು ಸುಲಭಗೊಳಿಸಬೇಕು. ಪ್ರಸ್ತುತ ಇರುವ ನಿಯಂತ್ರಣ ಮಾಡುವ ಪರಿಸರವು ಕುಶಲಕರ್ಮಿಗಳಿಗೆ ಉದ್ಯಮಶೀಲ ಚಟುವಟಿಕೆಯನ್ನು ಪ್ರೋತ್ಸಾಹಿಸುವುದಿಲ್ಲ. ಈ ವಲಯದಲ್ಲಿರುವ ಅಡೆತಡೆಗಳನ್ನು ತೆಗೆಯಲು, ಕುಶಲಕರ್ಮಿಗಳು ತಮ್ಮ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು, ಮಾರುಕಟ್ಟೆಯಲ್ಲಿ ತಮ್ಮ ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಉತ್ತಮ ವೇತನ ಖಚಿತಪಡಿಸಿಕೊಳ್ಳಲು ಪ್ರೋತ್ಸಾಹಿಸಬೇಕಾಗಿದೆ.
ಆರ್ಥಿಕ ವಿಮೋಚನೆಗಾಗಿ ಕುಶಲಕರ್ಮಿಗಳ ಹೋರಾಟ
ಗಾಂಧಿ ಕಲ್ಪಿಸಿಕೊಂಡಂತೆ ಖಾದಿಯು ಸ್ವಾವಲಂಬನೆ ಮತ್ತು ಸ್ಥಳೀಯ ಅಸ್ಮಿತೆಯ ತತ್ವವನ್ನು ಉತ್ತೇಜಿಸಿತು. ಖಾದಿ ಉತ್ಪಾದನೆಯ ಮೂಲಭೂತ ಲಕ್ಷಣವೆಂದರೆ ಅದೊಂದು ಸಮಷ್ಟಿ ಕ್ರಿಯೆ. ಅದರ ಮೂಲಕ ಗ್ರಾಮೀಣ ಭಾಗದ ರಚನಾತ್ಮಕ ಅಭಿವೃದ್ಧಿಯನ್ನು ಒಳಗೊಳ್ಳುತ್ತದೆ. ಇದರ ಒಳ ತಿರುಳು ಎಂದರೆ- ಸ್ಥಳೀಯವಾಗಿ ಕಚ್ಛಾ ಸಾಮಗ್ರಿ ಪಡೆಯುವುದು, ಸ್ಥಳೀಯ ಉತ್ಪಾದನೆ ಮತ್ತು ಸ್ಥಳೀಯ ಭಾಗದಲ್ಲೂ ಮಾರಾಟ ಮಾಡುವುದು. ಇಂದು ಅನೇಕ ಕಾರಣಗಳಿಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಈ ತತ್ವದಿಂದ ಗಮನಾರ್ಹವಾಗಿಯೇ ವಿಚಲಿತಗೊಂಡಿದೆ. ಕುಶಲಕರ್ಮಿಗಳ ಹಿತಾಸಕ್ತಿ ಕಾಪಾಡಲು ರಚಿಸಲಾದ ಪ್ರಸ್ತುತ ನಿಯಂತ್ರಣ ಚೌಕಟ್ಟಿನಿಂದ, ಕುಶಲಕರ್ಮಿಗಳು ತಮ್ಮ ಶ್ರಮಕ್ಕೆ ಪ್ರತಿಫಲದ ಬೆಲೆಯನ್ನು ಪಡೆಯಲು ವಿಫಲವಾದ ಕಾರಣದಿಂದಾಗಿಯೇ ಈ ಕ್ಷೇತ್ರ ನಿರ್ಬಂಧಿತ ಎಂದು ಗ್ರಹಿಸಲಾಗಿದೆ.
ಖಾದಿಯ ಅಧಿಕೃತ ರೂಪವು ಸಂಪೂರ್ಣವಾಗಿ ಹಸ್ತಚಾಲಿತ ಪ್ರಕ್ರಿಯೆಯಿಂದ ಹುಟ್ಟಿಕೊಂಡಿದೆ. ನೈಸರ್ಗಿಕ ನಾರುಗಳನ್ನು ಕೊಯ್ಲು ಮಾಡುವುದು, ನಾರುಗಳನ್ನು ಸಂಸ್ಕರಿಸುವುದು, ನೂಲುವ ಮತ್ತು ನೇಯ್ಗೆ ಮಾಡುವವರೆಗೆ, ಖಾದಿ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯು ಶ್ರಮದಾಯಕ ಮತ್ತು ಪ್ರತಿ ಹಂತದಲ್ಲೂ ಕುಶಲಕರ್ಮಿಗಳ ಸಂಕೀರ್ಣ ಕೌಶಲಗಳ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಆದರೂ ಈ ವಿಸ್ತಾರವಾದ ಕಲೆ, ಇಂದಿನ ಯುಗದಲ್ಲಿ ಕುಶಲಕರ್ಮಿಗಳನ್ನು ಅದೇ ಕ್ಷೇತ್ರದಲ್ಲಿ ಇರಿಸಿಕೊಳ್ಳಲು ಸಾಕಷ್ಟು ಪ್ರತಿಫಲ ನೀಡುತ್ತಿಲ್ಲ. ಅನೇಕ ನುರಿತ ಕರ್ಮಿಗಳು ಕರಕುಶಲ ಕ್ಷೇತ್ರವನ್ನೇ ತ್ಯಜಿಸಿದ್ದಾರೆ ಮತ್ತು ಉತ್ತಮ ವೇತನವನ್ನು ಪಡೆಯಲು ತುಂಡು ಕೆಲಸಗಾರರಾಗಿ ಹತ್ತಿರದ ಜವಳಿ ಅಂಗಡಿಗಳಿಗೆ ಸೇರಿಕೊಂಡಿದ್ದಾರೆ. ಇದರಿಂದಾಗಿ ಹಳ್ಳಿಯಲ್ಲಿ ಸಹಕಾರ ಚಳವಳಿಯ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗ ಕಾರ್ಯಚಟುವಟಿಕೆ ಕುಸಿದಿದೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಉದ್ಯಮ ಸಂಸ್ಥೆ (KVIC)ಯ ಸಾಮಾಜಿಕ ಉದ್ದೇಶವಾದ, “ಬಲವಾದ ಗ್ರಾಮೀಣ ಸಮುದಾಯದ ನಿರ್ಮಿಸುವ” ಉದ್ದೇಶವನ್ನೇ ವಿಫಲಗೊಳಿಸಿದೆ.
ಅತ್ಯಲ್ಪ ವೇತನ
ಖಾದಿ ವಲಯದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳಲ್ಲಿ ನೂಲುವವರು ಸರಿಸುಮಾರು ಶೇ 78ರಷ್ಟಿದ್ದಾರೆ. ಆದರೂ ಈ ವಲಯದಲ್ಲಿನ ನೂಲುವವರು ಮತ್ತು ನೇಕಾರರು ತಮ್ಮ ಕೌಶಲಪೂರ್ಣ ಕೆಲಸಕ್ಕಾಗಿ ಕಡಿಮೆ ಗಳಿಕೆ ಗಳಿಸುತ್ತಾರೆ. ಸರಾಸರಿಯಾಗಿ ನೂಲುವವರು ದಿನಕ್ಕೆ ರೂ. 150-200 ಗಳಿಸಿದರೆ ನೇಕಾರರು ದಿನಕ್ಕೆ ರೂ. 250-500 ವಲಯದಲ್ಲಿ ಸ್ಪಿನ್ನರ್ ವೇತನವು ಕೃಷಿ ಕೂಲಿ ಮಾಡುವ ಕಾರ್ಮಿಕರ ವೇತನ, ಇದು ದಿನಕ್ಕೆ ರೂ. 362-400ಕ್ಕಿಂತ ಕಡಿಮೆಯಾಗಿದೆ. ಕುಶಲಕರ್ಮಿಗಳ ಕಡಿಮೆ ಗಳಿಕೆಯು ಔಟ್ಪುಟ್ ಲಿಂಕ್ಡ್ ವೇತನ ವ್ಯವಸ್ಥೆಯಿಂದ ಶಾಶ್ವತವಾಗಿದೆ. ಕುಶಲಕರ್ಮಿಗಳು ಗಂಟೆ/ದಿನ/ಮಾಸಿಕ ಆಧಾರದ ಮೇಲೆ ಗಳಿಸುವ ಬದಲು ದಿನದ ಉತ್ಪಾದನೆಯ ಆಧಾರದ ಮೇಲೆ ವೇತನವನ್ನು ಗಳಿಸುತ್ತಾರೆ. ಇದರಿಂದಾಗಿ ಕಾರ್ಮಿಕರು ತಮ್ಮ ದೈನಂದಿನ ಜೀವನಾಂಶವನ್ನು ಪಡೆಯಲು ಜೀವನಪೂರ್ತಿ ಕೆಲಸ ಮಾಡುತ್ತಾರೆ.
2012ರ ತನಕ ನೂಲುವವರು ಕೇವಲ ಪ್ರತಿ ಹ್ಯಾಂಕ್‌ಗೆ 2 ರೂಪಾಯಿ ದೈನಂದಿನ ಗಳಿಕೆ ಇತ್ತು. ಮತ್ತು ಒಂದು ದಿನಕ್ಕೆ 20 ಹ್ಯಾಂಕ್‌ಗಳನ್ನು ಉತ್ಪಾದಿಸಿದರೆ 40 ರೂ. ಆದಾಯ ಪಡೆಯುತ್ತಾರೆ. 8 ಸ್ಪಿಂಡಲ್ನ ನ್ಯೂ ಮಾಡೆಲ್ ಚರಕ (NMC) ಹೆಚ್ಚಿನ ಉತ್ಪಾದನೆ ಮಾಡಬಹುದು ಮತ್ತು ಒಂದು ದಿನಕ್ಕೆ 8 ಗಂಟೆಗಳ ಕೆಲಸ ಮಾಡಿದಲ್ಲಿ ಸರಾಸರಿ 20 ಹ್ಯಾಂಕ್‌ಗಳನ್ನು ಉತ್ಪಾದಿಸುತ್ತದೆ. ಸಾಂಪ್ರದಾಯಿಕ ಚರಕಗಳು, ಈ ಚರಕಗಳಿಗೆ ಹೋಲಿಸಿದರೆ ಕೇವಲ 2 ಹ್ಯಾಂಕ್‌ಗಳನ್ನು ಮಾತ್ರ ಉತ್ಪಾದಿಸಬಹುದು. KVIC ಯ ನಿಗದಿ ಪಡಿಸಿರುವ ಕನಿಷ್ಠ ವೇತನ ದರ ರೂ. 7.5 ಪ್ರತಿ ಹ್ಯಾಂಕ್‌ಗೆ ಅಂತ ಲೆಕ್ಕ ತಗೊಂಡರೆ, NMC ಮೂಲಕ ನೂಲುವವರು ದಿನಕ್ಕೆ ಸುಮಾರು ರೂ. 150 ಗಳಿಸಬಹುದು. ಆದರೂ ಸಾಂಪ್ರದಾಯಿಕ ನೂಲುವವರಿಗೆ ಇದು ಕಡಿಮೆಯೇ. ಅವರಿಗೆ ದೈನಂದಿನ ವೇತನ ರೂ. 15! ಒಳ್ಳೆ ವೇತನವನ್ನು ಗಳಿಸಲು, ಕುಶಲಕರ್ಮಿಗಳು ತಮ್ಮ ಕೆಲಸವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಮತ್ತು ದಿನಕ್ಕೆ ಸರಾಸರಿ 8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ.
ಹೆಚ್ಚಿನ ವೇತನ ಗಳಿಸಲು ಹೆಚ್ಚಿನ ಉತ್ಪಾದನೆ ಮಾಡಬೇಕೆಂಬ ತತ್ವ ಬಂದಾಗಿನಿಂದ ಉತ್ಪಾದಕತೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಈ ವಲಯ. ಪರಿಣಾಮವಾಗಿ, ಅರೆ-ಯಾಂತ್ರೀಕೃತ ಚರಕಗಳು ಇಂದು ರೂಢಿಯಲ್ಲಿವೆ. ಏಕೆಂದರೆ ಅದನ್ನು ಉಪಯೋಗಿಸಿ ಕುಶಲಕರ್ಮಿಗಳು ತಮ್ಮ ದೈನಂದಿನ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅದರ ಪರಿಣಾಮವಾಗಿ ಅವರ ದೈನಂದಿನ ವೇತನವನ್ನು ಹೆಚ್ಚಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ. ಅಂತಿಮವಾಗಿ, ದೇಶದಲ್ಲಿ ಕೆಲವು ಖಾದಿ ಸಂಸ್ಥೆಗಳು (ಕೆಐಗಳು) ಉತ್ಪಾದಿಸುವ ಸಾಂಪ್ರದಾಯಿಕ ಖಾದಿಯನ್ನು ಎನ್‌ಎಂಸಿ ಉತ್ಪಾದಿಸಿದ ಖಾದಿಯೊಂದಿಗೆ ಖಾದಿ ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ವಿವೇಚನೆಯಿಲ್ಲದೆ ಮಾರಾಟ ಮಾಡಲಾಗುತ್ತಿದೆ.
ಸಾಂಪ್ರದಾಯಿಕವಾಗಿ ನೂಲುವ ಖಾದಿಯಿಂದ ಉತ್ಪಾದನೆಗೆ ತೀವ್ರ ಶ್ರಮದ ಅಗತ್ಯವಿದ್ದರೂ ಸಾಂಪ್ರದಾಯಿಕ ಚರಕಗಳ ಮೇಲೆ ಕೆಲಸ ಮಾಡುವ ಕುಶಲಕರ್ಮಿಗಳು ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಲು ಸಮರ್ಥರಾಗಿಲ್ಲ. ಹಸ್ತಚಾಲಿತ ಕೆಲಸ, ಪರಿಣತಿ ಮತ್ತು ಸಾಂಪ್ರದಾಯಿಕ ತಂತ್ರಗಳಾದ ಜಿನ್ನಿಂಗ್, ಡ್ರಾಯಿಂಗ್ ಮತ್ತು ಸ್ಟ್ರೈಟನಿಂಗ್, ಕಾರ್ಡಿಂಗ್ ಮತ್ತು ಸ್ಲಿವರ್ ರೋಲಿಂಗ್‌ಗಳ ಬಳಕೆ ಮೂಲಕ ನಿಜವಾದ ಖಾದಿಯನ್ನು ಉತ್ಪಾದಿಸಲು ಹೋಗಿ ಮಾರುಕಟ್ಟೆಯಲ್ಲಿ ಅನನ್ಯ ಉತ್ಪನ್ನ ನೀಡಲು ಆಗುತ್ತಿಲ್ಲ ಮತ್ತು ಅಪೇಕ್ಷಿತ ವಿತ್ತೀಯ ಮೌಲ್ಯ ಕೂಡ ಪಡೆಯಲು ಆಗುತ್ತಿಲ್ಲ.
ಅತ್ಯಲ್ಪ ವೇತನದ ಕಾರಣದಿಂದಾಗಿ ಹೊಸ ತಲೆಮಾರಿನ ಕುಶಲಕರ್ಮಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕಲು ಕ್ಷೇತ್ರದಿಂದ ಕ್ರಮೇಣ ನಿರ್ಗಮಿಸುತ್ತಿದ್ದಾರೆ. ಹಳ್ಳಿಯ ಸಾಮೂಹಿಕ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ಬದ್ಧವಾಗಿರುವ ಘಟಕಗಳಲ್ಲಿ ಖಾಸಗಿ ಭಾಗವಹಿಸುವಿಕೆ ಇಲ್ಲದಿದ್ದರೆ ಖಾದಿ ಉತ್ಪಾದಿಸುವ ಸಾಂಪ್ರದಾಯಿಕ ಕಲೆ ನಶಿಸಿ ಹೋಗುತ್ತದೆ. ಕಲಿಯಲು ಸುಲಭ ಮತ್ತು ಕಡಿಮೆ ಬಂಡವಾಳದ ಅಗತ್ಯ ಇರುವುದರಿಂದ ನೂಲುವ ಗ್ರಾಮೀಣ ಸಮುದಾಯಕ್ಕೆ ಜೀವನೋಪಾಯವನ್ನು ಒದಗಿಸಲು ಉತ್ತಮ ಅವಕಾಶವಾಗಿದೆ. ಗ್ರಾಮೀಣ ಭಾರತದ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ಹಸಿರು ಆರ್ಥಿಕತೆ ಮತ್ತು ಸ್ವಾವಲಂಬನೆಯತ್ತ ಮುನ್ನಡೆಯಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಜವಳಿ ಉದ್ಯಮದಲ್ಲಿನ ಬಹುಪಾಲು ಉದ್ಯೋಗಿಗಳು ಮಹಿಳೆಯರಾಗಿದ್ದಾರೆ ಮತ್ತು ಆದ್ದರಿಂದ ಸ್ಥಳೀಯ ಖಾದಿ ಉದ್ಯಮವನ್ನು ಸಬಲೀಕರಣಗೊಳಿಸುವುದರಿಂದ ಮಹಿಳೆಯರಿಗೆ ಸ್ಥಿರವಾದ ಜೀವನೋಪಾಯ ಒದಗಿಸಬಹುದು.
ಸಹಕಾರಿ ಮಾದರಿ
ಖಾದಿಯ ಮೂಲಕ ಸ್ಥಳೀಯ ಸಮುದಾಯದ ಆರ್ಥಿಕ ವಿಮೋಚನೆಯು ಗ್ರಾಮ ಆವರಣದೊಳಗೆ ಮೌಲ್ಯ ಸರಪಳಿಗಳ ಮೇಲೆ ಒತ್ತು ನೀಡಿತು- ಅಲ್ಲಿ ಹತ್ತಿ ಬೆಳೆಯುವ ರೈತರಿಂದ ಹಿಡಿದು ನೇಕಾರರು, ನೂಲುವವರು, ಬಣ್ಣ ಮಾಡುವವರು ಹೀಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಇವು ಖಾದಿ ಉತ್ಪಾದನೆಯನ್ನು ಉಳಿಸಿಕೊಳ್ಳುವ ಯಶಸ್ಸಿನ ಅಂಶಗಳಾಗಿವೆ. ಹಿಂದಿನ ಹಲವು ಉತ್ಪಾದನಾ ಕೇಂದ್ರಗಳು ಈಗ ಕಾರ್ಮಿಕರ ಕೊರತೆಯಿಂದ ಕವಲುದಾರಿಯಲ್ಲಿವೆ. ಏಕೆಂದರೆ ವಲಯವು ಬೇರೆಡೆ ನೀಡುವ ವೇತನವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ವ್ಯಾಪಾರದ ನಮೂನೆಯು ಹಿಂದಿನ ಸ್ಥಳೀಯ ಉತ್ಪಾದನಾ ಮಾದರಿಯನ್ನು ನಶಿಸುವಂತೆ ಮಾಡಿದೆ. ಗ್ರಾಮೀಣ ಪ್ರದೇಶಗಳ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ KIಗಳು ಪ್ರಮುಖ ಪಾತ್ರವನ್ನು ವಹಿಸುವ ಬದಲು ಅವರು “ಮಧ್ಯಮ” (mediator) ಪಾತ್ರವನ್ನು ವಹಿಸಿಕೊಂಡಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿನ ನಿರ್ಣಾಯಕ ಹಂತಗಳನ್ನು ನೂಲುವವರು, ನೇಕಾರರು ಮತ್ತು ಇತರ ಕುಶಲಕರ್ಮಿಗಳಿಗೆ ಹೊರಗುತ್ತಿಗೆ ನೀಡಲಾಗುತ್ತದೆ, ಆದರೆ ಮಾರ್ಕೆಟಿಂಗ್ ಮತ್ತು ಮಾರಾಟ ಸೇರಿದಂತೆ ಮೌಲ್ಯ ಸರಪಳಿಯ ವ್ಯವಹಾರದ ಅಂಶವನ್ನು KIಗಳು ಕೈಗೊಳ್ಳುತ್ತಾರೆ.
ಖಾದಿ ಉತ್ಪನ್ನಗಳ ಮಾರುಕಟ್ಟೆಯಲ್ಲಿನ ಬೆಲೆಯೊಂದಿಗೆ KIಗಳು ಹೆಚ್ಚಿನ ಆದಾಯವನ್ನು ಗಳಿಸಲು ಅವಕಾಶವನ್ನು ಹೊಂದಿವೆ. ಅದು ಕುಶಲಕರ್ಮಿಗಳಿಗೆ ವರ್ಗಾವಣೆ ಆಗಬಹುದು. ಆ ಅರ್ಥದಲ್ಲಿ KVICಯ ಸಾಮಾಜಿಕ ಉದ್ದೇಶವು “ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು” ಬದಲಿಗೆ ‘ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ’ ವಿಶಾಲ ವ್ಯಾಪ್ತಿಯನ್ನು ಹೊಂದಿರಬೇಕು. ಖಾದಿ ವಲಯದಲ್ಲಿ ಕುಶಲಕರ್ಮಿಗಳನ್ನು ನಿಜವಾಗಿಯೂ ಸಬಲೀಕರಣಗೊಳಿಸಲು, ಅವರು ತಮ್ಮ ಸ್ವಂತ ಉತ್ಪನ್ನಗಳ ಮಾರಾಟಗಾರರಾಗುವ ಮಾರ್ಗವನ್ನು ಸುಲಭಗೊಳಿಸಬೇಕು. ಇಂದು ವೈಯಕ್ತಿಕ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಸರ್ಕಾರಿ ಪ್ರಮಾಣೀಕೃತ KIಗಳ ಮೂಲಕ ಮಾರಾಟ ಮಾಡುವುದರಿಂದ ಖಾದಿ ಗುರುತು ಪ್ರಮಾಣಪತ್ರವನ್ನು ಹೊಂದಿರಬೇಕಾಗಿಲ್ಲ. ಆದರೂ ಕುಶಲಕರ್ಮಿಗಳು ತಮ್ಮದೇ ಆದ ಗ್ರಾಮ ಸಮೂಹವನ್ನು ರಚಿಸಿದರೆ ಮತ್ತು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿದರೆ ಅವರು ಖಾದಿ ಮಾರ್ಕ್ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ನಿಯಂತ್ರಣದಿಂದಾಗಿ ಕುಶಲಕರ್ಮಿಗಳು ಉದ್ಯಮಶೀಲ ಚಟುವಟಿಕೆಗಳನ್ನು ನಿರುತ್ಸಾಹಗೊಳಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿನ ಕುಶಲಕರ್ಮಿಗಳನ್ನು ಪರಿಣಾಮಕಾರಿಯಾಗಿ ಸಬಲೀಕರಣಗೊಳಿಸಲು ಮತ್ತು ವಲಯದಲ್ಲಿ ಅವರ ನಿರಂತರ ಉದ್ಯೋಗವನ್ನು ಖಚಿತಪಡಿಸಿಕೊಳ್ಳಲು KVIC ನಿಯಂತ್ರಕ ಅಡೆತಡೆಗಳನ್ನು ಸರಾಗಗೊಳಿಸುವ ಅಗತ್ಯವಿದೆ – ವಿಶೇಷವಾಗಿ ಖಾದಿಯನ್ನು ಮಾರಾಟ ಮಾಡಲು ಖಾದಿ ಟ್ಯಾಗ್ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು. ಆದರ್ಶಪ್ರಾಯವಾಗಿ ಖಾದಿ ಮಾರ್ಕ್ ಅನ್ನು ಇಟ್ಟುಕೊಳ್ಳುವುದು ಸ್ವಯಂಪ್ರೇರಿತವಾಗಿರಬೇಕು. ಆದ್ದರಿಂದ ಕುಶಲಕರ್ಮಿಗಳು ಖಾದಿಯನ್ನು ಉತ್ಪಾದಿಸಲು ತಮ್ಮ ಸಮೂಹವನ್ನು ಮುಕ್ತವಾಗಿ ರಚಿಸಬಹುದು. ಕಾನೂನು ಜಗಳ ಅಥವಾ ತೊಡಕಿನ ಕಾರ್ಯವಿಧಾನ ಇಲ್ಲದೆಯೇ ಇದನ್ನು ಮಾಡುವಂತಿರಬೇಕು. ಕೆವಿಐಸಿ ತಮ್ಮ ಲೇಬಲ್ ನೈಜತೆಯ ವಿಶಿಷ್ಟ ಲಕ್ಷಣವಾಗಿದೆ ಎಂದು ವ್ಯಾಪಕವಾಗಿ ಜಾಹೀರಾತು ನೀಡಬಹುದಾದರೂ ಲೇಬಲ್‌ನೊಂದಿಗೆ ಅಥವಾ ಇಲ್ಲದೆಯೇ ಖಾದಿಯನ್ನು ಖರೀದಿಸಲು ಅಂತಿಮ ಗ್ರಾಹಕರ ವಿವೇಚನೆಗೆ ಬಿಡಬೇಕು.
ವೈಯಕ್ತಿಕ ಕುಶಲಕರ್ಮಿಗಳು ತಮ್ಮ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಮತ್ತು ಸಹಕಾರಿ ಸಂಸ್ಥೆಗಳು ಅಥವಾ ಉತ್ಪಾದಕ ಕಂಪೆನಿಗಳನ್ನು ರೂಪಿಸಲು ಪ್ರೋತ್ಸಾಹಿಸಬೇಕು. ಅದು ಮಾರುಕಟ್ಟೆಯಲ್ಲಿ ಅವರ ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನ್ಯಾಯಯುತ ವೇತನವನ್ನು ಖಚಿತಪಡಿಸುತ್ತದೆ ಮತ್ತು ಅದರ ಸದಸ್ಯರಿಗೆ ಲಾಭವನ್ನು ಹೆಚ್ಚಿಸುತ್ತದೆ. ಇದು ಕುಶಲಕರ್ಮಿಗಳಿಗೆ ವ್ಯಾಪಕವಾದ ಮಾರುಕಟ್ಟೆಗಳನ್ನು ಪ್ರವೇಶಿಸಲು ಮತ್ತು ತಮ್ಮ ಉತ್ಪನ್ನಗಳನ್ನು KIಗಳನ್ನು ಹೊರತುಪಡಿಸಿ ಇತರ ಘಟಕಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಸಮರ್ಥನೀಯ ಫ್ಯಾಷನ್ ವಿಭಾಗವನ್ನು ಗುರಿಯಾಗಿಸುವ ಜನಪ್ರಿಯ ಜವಳಿ ಬ್ರಾಂಡ್‌ಗಳು ಮತ್ತು ಅಮೆಜಾನ್, Myntra, ಫ್ಲಿಪ್ಕಾರ್ಟ್ ಮುಂತಾದ ದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು. ಸ್ವತಂತ್ರ ಕುಶಲಕರ್ಮಿಗಳು ಇದರಿಂದ ಅಪಾರ ಲಾಭವನ್ನು ಪಡೆಯುತ್ತಾರೆ. ಇವನ್ನು ಬಳಸಿ ಮಾರಾಟ ಮಾಡಲು ಅನುವು ಮಾಡಿಕೊಡಬೇಕು. ಆಗ ಈ ಕ್ಷೇತ್ರಕ್ಕೆ ದೇಶೀಯ ಮತ್ತು ವಿದೇಶಿ ಹೂಡಿಕೆಯ ನಿರೀಕ್ಷೆ ಮಾಡಬಹುದು.
ಸಂಘಗಳನ್ನು ರಚಿಸುವ ಸ್ವಾತಂತ್ರ್ಯ, ಜೀವನೋಪಾಯವನ್ನು ಗಳಿಸುವ ಸ್ವಾತಂತ್ರ್ಯ ಮತ್ತು ಯಾವುದೇ ರೀತಿಯ ಅಧಿಕಾರಿಶಾಹಿ ಬಲವಂತವಿಲ್ಲದೆ ಈಗಾಲೇ ಸ್ಥಾಪಿತ ಖರೀದಿದಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವು ಗಾಂಧಿಯವರ ತತ್ವಕ್ಕೆ ಅನುಗುಣವಾದ ಕಲ್ಪನೆಯಾಗಿದೆ. ಈ ವಲಯದಲ್ಲಿ ಹೆಚ್ಚು ಅಗತ್ಯವಿರುವ ಸುಧಾರಣೆಗಳ ಮೂಲಕ ನೇಕಾರರು ಮತ್ತು ಕುಶಲಕರ್ಮಿಗಳ ಸಮುದಾಯಕ್ಕೆ ಉಂಟಾದ ಅನಪೇಕ್ಷಿತ ಹಾನಿಯನ್ನು ಕಡಿಮೆ ಮಾಡಲು ಸಮಯವು ಪಕ್ವವಾಗಿದೆ.
(ಲೇಖಕರು: ಆಕಾಂಕ್ಷಾ ಬೊರಾವಕೆ, ಸಿಪಿಪಿಆರ್‌ನಲ್ಲಿ ಸಹಾಯಕರು-ಸಂಶೋಧನೆ
ನಿಸ್ಸಿ ಸೊಲೊಮನ್, ಸಿಪಿಪಿಆರ್‌ನಲ್ಲಿ ಹಿರಿಯ ಸಹಾಯಕರು-ಸಂಶೋಧನೆ)
Published On - 5:31 pm, Sat, 25 December 21