ಯಾರ ಕೆಳಗೂ ಕೆಲಸ ಮಾಡದೇ ಸ್ವಯಂ ಉದ್ಯೋಗ ಮಾಡುವ ಆಸೆ ಬಹಳ ಮಂದಿಗೆ ಇರುತ್ತದೆ. ಕೆಲ ಉದ್ಯಮಿಗಳು ಕೆಲವೇ ವರ್ಷದಲ್ಲಿ ಕೋಟಿ ಕೋಟಿ ರೂ ಮೊತ್ತದ ಬ್ಯುಸಿನೆಸ್ ಬೆಳೆಸಿ ಯಶಸ್ವಿಯಾದ ಕತೆಗಳನ್ನು ನಾವು ಕೇಳಿರುತ್ತೇವೆ. ಕೆಲವೇ ವರ್ಷದಲ್ಲಿ ಕೋಟಿ ಕೋಟಿ ಹಣ ಸಂಪಾದಿಸಿ ಆ ಮೇಲೆ ಆರಾಮವಾಗಿ ಇರಬಹುದಲ್ಲ ಎಂದು ಹಲವು ಕನಸು ಕಾಣುತ್ತಿರುತ್ತಾರೆ. ಆದರೆ, ಸ್ವಂತ ಕಂಪನಿ ಅಥವಾ ಸ್ವಂತ ವ್ಯವಹಾರ ಆರಂಭಿಸುವುದು ಅಷ್ಟು ಸುಲಭವಲ್ಲ. ಮೊದಲಿಗೆ ಯಾವ ವ್ಯವಹಾರ ನಡೆಸುವುದು ಎಂಬುದರಿಂದ ಹಿಡಿದು, ಅದಕ್ಕೆ ಪರ್ಮಿಟ್, ಹಣಕಾಸು ವ್ಯವಸ್ಥೆ, ಮಾರ್ಕೆಟಿಂಗ್ ಇತ್ಯಾದಿ ನಾನಾ ಅಂಶಗಳು ಎಡತಾಕುತ್ತವೆ. ನೀವು ಸ್ವಂತವಾಗಿ ವ್ಯವಹಾರ ನಡೆಸಲು ನಿರ್ಧರಿಸಿದ್ದೀರಿ ಎಂದರೆ ನಿಮ್ಮೆಲ್ಲಾ ಗಮನವೂ ಅದರತ್ತಲೇ ನೆಟ್ಟಿರಬೇಕು. ಅದರಲ್ಲೂ ಆರಂಭಿಕ ಹಂತದಲ್ಲಿ ನಿಮ್ಮ ಇಡೀ ಸಮಯ, ಆಲೋಚನೆ ನಿಮ್ಮ ವ್ಯವಹಾರದತ್ತಲೇ ಇರಬೇಕಾಗುತ್ತದೆ. ಸ್ವಂತ ಬ್ಯುಸಿನೆಸ್ ಮಾಡಲು ನೀವು ಏನೇನು ಮಾಡಬೇಕು ಎಂಬ ವಿವರ ಇಲ್ಲಿದೆ…
ನೀವು ವ್ಯವಹಾರ ಆರಂಭಿಸಬೇಕೆಂಬ ಆಲೋಚನೆ ಮಾಡಿದ್ದರೆ ಮೊದಲಿಗೆ ಆ ಬ್ಯುಸಿನೆಸ್ನಿಂದ ನಿಮಗೆ ಎಷ್ಟು ಲಾಭ ಬರಬಹುದು ಎಂಬ ಅಂದಾಜು ನಿಮಗಿರಬೇಕು. ಅಂದರೆ ಅದು ಲಾಭದಾಯಕವೋ ಅಲ್ಲವೋ ಎಂಬುದನ್ನು ನೀವು ಮನಗಾಣಬೇಕು. ಯಾವುದಕ್ಕೆ ಬೇಡಿಕೆ ಹೆಚ್ಚಿದೆಯೋ ಅಂಥ ವ್ಯವಹಾರದತ್ತ ನಿಮ್ಮ ಹೆಜ್ಜೆ ಇರಲಿ.
ನೀವು ಮೆಡಿಕಲ್ ಸ್ಟೋರ್ ಇಡಬೇಕೆಂದು ನಿರ್ಧರಿಸಿದ್ದೀರಿ ಎಂದಿಟ್ಟುಕೊಳ್ಳಿ. ಯಾವ ಏರಿಯಾದಲ್ಲಿ ಸ್ಥಾಪಿಸಬಹುದು, ಅಲ್ಲಿ ಬೇರೆ ಸ್ಟೋರ್ಗಳು ಎಷ್ಟಿವೆ, ಜನಸಂಚಾರ ಎಷ್ಟಿದೆ, ವಸತಿ ಪ್ರದೇಶವಾ, ವಾಣಿಜ್ಯ ಪ್ರದೇಶವಾ ಇತ್ಯಾದಿ ಎಲ್ಲವನ್ನೂ ಅವಲೋಕಿಸಬೇಕು. ಬೇರೆ ಮೆಡಿಕಲ್ ಸ್ಟೋರ್ಗಳು ಚೆನ್ನಾಗಿ ವ್ಯಾಪಾರ ಕಾಣುತ್ತಿದ್ದರೆ ಅದಕ್ಕೆ ಕಾರಣವೇನೆಂದು ತಿಳಿದುಕೊಳ್ಳಿ. ಅಥವಾ ಒಂದು ಬ್ಯುಸಿನೆಸ್ ಚೆನ್ನಾಗಿ ಆಗುತ್ತಿಲ್ಲವೆಂದರೆ ಅದಕ್ಕೂ ಕಾರಣ ತಿಳಿಯಿರಿ. ಇದರಿಂದ ನೀವು ಉತ್ತಮವಾಗಿ ವ್ಯವಹಾರ ನಿಭಾಯಿಸಬಹುದು.
ಇದು ಬಹಳ ಮುಖ್ಯ. ಸಣ್ಣಪುಟ್ಟ ವ್ಯವಹಾರಗಳಿಗೆ ನಾವು ಹಾಗೂ ಹೀಗೂ ಹಣದ ವ್ಯವಸ್ಥೆ ಮಾಡಬಹುದು. ಆದರೆ, ದೊಡ್ಡ ಮೊತ್ತದ ಬಂಡವಾಳ ಬೇಕಿದ್ದರೆ ಬ್ಯಾಂಕ್ ಲೋನ್ ಎಷ್ಟು ಸಿಗುತ್ತದೆ, ಸರ್ಕಾರದ ಸಾಲದ ಸ್ಕೀಮ್ ಪಡೆಯಬಹುದಾ ಎಂಬುದನ್ನು ಮೊದಲೇ ತಿಳಿದಿರಬೇಕು. ಸರ್ಕಾರದಿಂದ ಸ್ವಂತ ಉದ್ದಿಮೆಗೆ ಲಕ್ಷಗಟ್ಟಲೆ ಸಾಲ ಸಿಗುತ್ತದೆ. ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಿ ನೀವು ಸಾಲ ಪಡೆಯಬಹುದು.
ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಧಮಾಕ; ಡಿಎ ಜೊತೆಗೆ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಹೆಚ್ಚಳ ಸಾಧ್ಯತೆ
ಸ್ವಂತ ಬ್ಯುಸಿನೆಸ್ ಮಾಡಲು ನೀವು ಕಂಪನಿ ಸ್ಥಾಪಿಸಬೇಕು. ಅದಕ್ಕೆ ಹೆಸರು ಇಟ್ಟು ನೊಂದಾಯಿಸಬೇಕು. ಪ್ರತ್ಯೇಕ ಲೋಗೋ, ಟ್ರೇಡ್ಮಾರ್ಕ್ ಇತ್ಯಾದಿ ಸಿದ್ಧಪಡಿಸಬೇಕು. ಇದರಿಂದ ನಿಮ್ಮ ಕಂಪನಿಯ ಬ್ರ್ಯಾಂಡಿಂಗ್ ಬೆಳೆಸಲು ಅನುಕೂಲವಾಗುತ್ತದೆ. ಹಾಗೆಯೇ, ನೊಂದಣಿ ಮಾಡಲು ಇದು ಅಗತ್ಯವೂ ಹೌದು.