ವಿಶ್ವದ ಅತಿದೊಡ್ಡ ವ್ಯಾಪಾರ ಬಳಗವಾದ ಆರ್​ಸಿಇಪಿಯಿಂದ ಭಾರತ ಹೊರಬೀಳಲು ಏನು ಕಾರಣ?

|

Updated on: Sep 04, 2024 | 5:03 PM

Why India left RCEP: ರೀಜನಲ್ ಕಾಂಪ್ರಹೆನ್ಸಿವ್ ಎಕನಾಮಿಕ್ ಕೋ ಆಪರೇಶನ್ (ಆರ್​ಸಿಇಪಿ) ಯೋಜನೆಯಿಂದ ಭಾರತ 2019ರಲ್ಲಿ ಹೊರಬಂದಿತ್ತು. 15 ದೇಶಗಳು ಸದ್ಯ ಆರ್​ಸಿಇಪಿಗೆ ಸಹಿ ಹಾಕಿವೆ. 12 ದೇಶಗಳಲ್ಲಿ ಒಪ್ಪಂದ ಜಾರಿಯಲ್ಲಿದೆ. ಆರ್​ಸಿಇಪಿ ರೂಪಿಸುವ ಆರಂಭದಲ್ಲಿ ಭಾರತವೂ ಇತ್ತು. ಬೇರೆ ಬೇರೆ ಕಾರಣಗಳಿಗೆ ಭಾರತ ಹೊರ ಬಂದಿತು.

ವಿಶ್ವದ ಅತಿದೊಡ್ಡ ವ್ಯಾಪಾರ ಬಳಗವಾದ ಆರ್​ಸಿಇಪಿಯಿಂದ ಭಾರತ ಹೊರಬೀಳಲು ಏನು ಕಾರಣ?
ವ್ಯಾಪಾರ
Follow us on

ನವದೆಹಲಿ, ಸೆಪ್ಟೆಂಬರ್ 4: ಜಾಗತಿಕವಾಗಿ ವಿವಿಧ ದೇಶಗಳು ವಿವಿಧ ರೀತಿಯ ಗುಂಪುಗಳನ್ನು ರಚಿಸುತ್ತವೆ. ಜಿ8, ಜಿ20, ಬ್ರಿಕ್ಸ್ ಹೀಗೆ ನಾನಾ ಗುಂಪುಗಳಿವೆ. ಕೆಲವು ರಾಜಕೀಯ ಒಪ್ಪಂದಗಳನ್ನು ಮಾಡಿಕೊಂಡಿರುತ್ತವೆ. ಕೆಲ ಗುಂಪುಗಳು ವ್ಯಾಪಾರ ಉದ್ದೇಶದಿಂದ ಸೃಷ್ಟಿಯಾಗಿರುತ್ತವೆ. ಇದರಲ್ಲಿ ಆರ್​ಸಿಇಪಿಯೂ ಒಂದು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್​ಸಿಇಪಿ) ಒಪ್ಪಂದಲ್ಲಿ ವಿವಿಧ ದೇಶಗಳ ಮಧ್ಯೆ ಎಫ್​ಟಿಎ ಮಾಡಲಾಗಿದೆ. ಇದು ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಈ ಗುಂಪಿನಲ್ಲಿರುವ 15 ದೇಶಗಳ ಒಟ್ಟಾರೆ ಜಿಡಿಪಿ 38 ಟ್ರಿಲಿಯನ್ ಡಾಲರ್ ಇದೆ. ಜಾಗತಿಕ ಜಿಡಿಪಿಯ ಶೇ. 30ರಷ್ಟು ಪಾಲನ್ನು ಈ ದೇಶಗಳು ಹೊಂದಿವೆ.

ಈ ಮಹತ್ವದ ಆರ್​ಸಿಇಪಿಯಲ್ಲಿ ಭಾರತವೂ ಒಂದು ಭಾಗವಾಗಿತ್ತು. ಆದರೆ, 2019ರಲ್ಲಿ ಈ ಗುಂಪಿನಿಂದ ಭಾರತ ಹೊರಬಂದಿತ್ತು. ಚೀನಾ, ಜಪಾನ್, ಸೌತ್ ಕೊರಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಆಸಿಯಾನ್ ಕೂಟದ 10 ಸದಸ್ಯ ದೇಶಗಳು ಆರ್​ಸಿಇಪಿಗೆ ಸಹಿ ಹಾಕಿವೆ. ಆಸಿಯಾನ್ ದೇಶಗಳಾದ ಇಂಡೋನೇಷ್ಯಾ, ಮಯನ್ಮಾರ್ ಮತ್ತು ಫಿಲಿಪ್ಪೈನ್ಸ್ ದೇಶಗಳು ಒಪ್ಪಂದವನ್ನು ಇನ್ನೂ ರೆಟಿಫೈ ಮಾಡಿಲ್ಲ. ಒಟ್ಟಾರೆ ಆರ್​ಸಿಇಪಿಗೆ ಸಹಿ ಹಾಕಿದ 15 ದೇಶಗಳ ಪೈಕಿ 12 ದೇಶಗಳಲ್ಲಿ ಒಪ್ಪಂದ ಸದ್ಯ ಜಾರಿಯಲ್ಲಿದೆ.

ಇದನ್ನೂ ಓದಿ: ರಫ್ತು ಕ್ಷೇತ್ರದಲ್ಲಿ ಭಾರತವನ್ನು ಹಿಂದಿಕ್ಕುತ್ತಿವೆ ವಿಯೆಟ್ನಾಂ, ಬಾಂಗ್ಲಾದಂಥ ಸಣ್ಣ ಪುಟ್ಟ ದೇಶಗಳು: ವಿಶ್ವಬ್ಯಾಂಕ್ ವರದಿ

ಭಾರತ ಆರ್​ಸಿಇಪಿ ಒಪ್ಪಂದದ ಎಲ್ಲಾ 27 ಸುತ್ತಿನ ಸಂಧಾನಗಳಲ್ಲಿ ಪಾಲ್ಗೊಂಡಿತ್ತು. ಬಹಳಷ್ಟು ವಿಷಯಗಳಲ್ಲಿ ಭಾರತ ಭಿನ್ನಾಭಿಪ್ರಾಯ ಮತ್ತು ಅಸಂತುಷ್ಟಿ ಹೊಂದಿತ್ತು. ಇದು ಒಪ್ಪಂದ ಅಂತಿಮಗೊಳ್ಳಲು ತೊಡಕಾಗಿತ್ತು. 2019ರಲ್ಲಿ ಭಾರತ ಆರ್​ಸಿಇಪಿ ಸಂಧಾನದಿಂದ ಹೊರ ನಡೆದಿತ್ತು.

ಭಾರತ ಹೊರಬೀಳಲು ಏನು ಕಾರಣ?

ಆರ್​ಸಿಇಪಿಯಿಂದ ಭಾರತ ಹೊರ ಬರಲು ಹಲವು ಕಾರಣಗಳು ಮೇಲ್ನೋಟಕ್ಕೆ ಕಾಣುತ್ತವೆ. ಟ್ರೇಡ್ ಬ್ಯಾಲನ್ಸ್ ಒಮ್ಮುಖವಾಗಿರುವುದು, ಹೈನುಗಾರಿಕೆ ವಲಯಕ್ಕೆ ಹಿನ್ನಡೆ, ಹಿಂದಿನ ಎಫ್​ಟಿಎಗಳ ಕಹಿ ಅನುಭವ, ಮೂಲ ಯಾವುದೆನ್ನುವ ನಿಯಮ ಹೀಗೆ ಹಲವು ವಿಷಯಗಳ ಬಗ್ಗೆ ಭಾರತ ಸತತವಾಗಿ ಅಸಮಾಧಾನ ವ್ಯಕ್ತಪಡಿಸಿತ್ತು. ತಜ್ಞರ ಪ್ರಕಾರ ಆರ್​ಸಿಇಪಿಯಲ್ಲಿ ಚೀನಾ ಉಪಸ್ಥಿತಿ ಇರುವುದೇ ಭಾರತ ಹಿಂದಕ್ಕೆ ಸರಿಯಲು ಕಾರಣ ಇರಬಹುದು.

2011ರಲ್ಲಿ ಆಗ್ನೇಯ ಏಷ್ಯನ್ ದೇಶಗಳ ಕೂಟವಾದ ಆಸಿಯಾನ್​ನ ಸದಸ್ಯ ದೇಶಗಳು ಆರ್​​ಸಿಇಪಿ ಯೋಜನೆ ರೂಪಿಸಿದ್ದವು. ಭಾರತವೂ ಇದರ ಭಾಗವಾಯಿತು. ಚೀನಾ ಸೇರಿದಂತೆ ಏಷ್ಯಾದ ಪ್ರಬಲ ಆರ್ಥಿಕತೆಗಳನ್ನು ಒಳಗೊಳ್ಳಲಾಯಿತು. ಚೀನಾ ಈ ಯೋಜನೆಯ ನಿಯಂತ್ರಣ ತೆಗೆದುಕೊಂಡಿತೋ, ಭಾರತ ಹಿಂದಕ್ಕೆ ಸರಿಯಲು ನಿರ್ಧರಿಸಿತು.

ಇದನ್ನೂ ಓದಿ: ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದೆ, ಭಾರತದ ಆರ್ಥಿಕತೆಗೇನೂ ಉಪಯೋಗ ಆಗುತ್ತಿಲ್ಲ: ವಿರಲ್ ಆಚಾರ್ಯ

ಆರ್​ಸಿಇಪಿ 2022ರಿಂದ ಚಾಲನೆಯಲ್ಲಿದೆ. ವಿವಿಧ ದೇಶಗಳಿಗೆ ಈಗಾಗಲೇ ಚೀನಾದ ಬಿಸಿ ತಾಕಿದೆ. ಮುಕ್ತ ವ್ಯಾಪಾರ ಒಪ್ಪಂದವಾದ್ದರಿಂದ ಯಾವ ದೇಶವೂ ರಫ್ತು ನಿರಾಕರಿಸುವಂತಿಲ್ಲ. ಈ ದೇಶಗಳ ನಡುವಿನ ವ್ಯಾಪಾರದಲ್ಲಿ ಚೀನಾದ ಪಾಲು ದಿನೇ ದಿನೇ ಏರುತ್ತಿದೆ. ಚೀನಾದೊಂದಿಗೆ ಬೇರೆ ದೇಶಗಳ ವ್ಯಾಪಾರ ಅಂತರವೂ ಹೆಚ್ಚುತ್ತಿದೆ. ಭಾರತ ಇದೇ ಕಾರಣಕ್ಕೆ ಆರ್​ಸಿಇಪಿಯಿಂದ ಹೊರಬಂದಿತ್ತು.

ಭಾರತಕ್ಕೆ ಆರ್​ಸಿಇಪಿ ತೀರಾ ಅಗತ್ಯವೂ ಇಲ್ಲ. ಯಾಕೆಂದರೆ ಈ ಗುಂಪಿನ ಹೆಚ್ಚಿನ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ