ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (Pradhan Mantri Vaya Vandana Yojana-PMVVY) ಭಾರತ ಸರ್ಕಾರವು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಘೋಷಿಸಿದ ಪಿಂಚಣಿ ಯೋಜನೆಯಾಗಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಎಲ್ಐಸಿಯಿಂದ ನಿಯಂತ್ರಿಸಲ್ಪಡುವ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು 15 ಲಕ್ಷ ರೂ.ವರೆಗಿನ ಮೊತ್ತವನ್ನು ಪಾವತಿಸುವ ಮೂಲಕ ಯೋಜನೆಯನ್ನು ಖರೀದಿಸಿದ ನಂತರ ಹಿರಿಯ ನಾಗರಿಕರಿಗೆ ತಕ್ಷಣವೇ ಮಾಸಿಕ ಅಥವಾ ತ್ರೈಮಾಸಿ ಅಥವಾ ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ಒದಗಿಸುತ್ತದೆ. 2023ರ ಮಾರ್ಚ್ 31ರ ಒಳಗಾಗಿ ಗ್ರಾಹಕರು ಈ ಪಾಲಿಸಿಯನ್ನು ಖರೀದಿಸಬಹುದು. ಈ ಯೋಜನೆಯಿಂದ ಹಿರಿಯ ನಾಗರಿಕರಿಗೆ ಆಗುವ ಪ್ರಯೋಜನಗಳು ಏನು? ಇದಕ್ಕೆ ಬೇಕಾದ ಅರ್ಹತೆ ಎಷ್ಟು? ಎಷ್ಟು ಪಿಂಚಣಿ ಪಡೆಯಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ:
PMVVYಗೆ ಬೇಕಾದ ಅರ್ಹತೆ, ಅವಧಿ ಮತ್ತು ಪಿಂಚಣಿ ಪಾವತಿ ವಿಧಾನ
ಎಲ್ಐಸಿ ವೆಬ್‌ಸೈಟ್‌ನ ಪ್ರಕಾರ, 60 ವರ್ಷ ಪೂರ್ಣಗೊಂಡ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತದ ಹಿರಿಯ ನಾಗರಿಕರು ಪಾಲಿಸಿಯನ್ನು ಖರೀದಿಸಬಹುದು. ಹಿರಿಯ ನಾಗರಿಕರಿಗೆ ಈ ಯೋಜನೆಯ ಅವಧಿ 10 ವರ್ಷಗಳಾಗಿದ್ದು, ಪಿಎಂವಿವಿವೈ ಅಡಿಯಲ್ಲಿ ಪಿಂಚಣಿಯನ್ನು ಮಾಸಿಕ ಅಥವಾ ತ್ರೈಮಾಸಿ ಅಥವಾ ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು, ಇದು ಖರೀದಿದಾರರು ಆಯ್ಕೆ ಮಾಡಿದ ಅವಧಿಯನ್ನು ಅವಲಂಬಿಸಿರುತ್ತದೆ.
ಪಂಚಣಿ ಪಾವತಿ ಮಾಡುವ ವಿಧಾನವೆಂದರೆ, ಯೋಜನೆಯಡಿ ಪಿಂಚಣಿಯ ಮೊದಲ ಕಂತು 1 ವರ್ಷ, 6 ತಿಂಗಳು, 3 ತಿಂಗಳು ಅಥವಾ 1 ತಿಂಗಳ ನಂತರ ಯೋಜನೆಯನ್ನು ಖರೀದಿಸಿದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಉದಾಹರಣೆಗೆ, ನೀವು ಮಾಸಿಕ ಪಿಂಚಣಿ ಪಾವತಿಯ ವಿಧಾನವನ್ನು ಆರಿಸಿಕೊಂಡು ಈಗ ಯೋಜನೆಯನ್ನು ಖರೀದಿಸಿದರೆ ನಿಮ್ಮ ಪಿಂಚಣಿ 1 ತಿಂಗಳ ನಂತರ ಪ್ರಾರಂಭವಾಗುತ್ತದೆ. ಈ ಯೋಜನೆಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಎಲ್ಐಸಿಯಿಂದ www.licindia.inನಲ್ಲಿ ಖರೀದಿಸಬಹುದು.
ಯೋಜನೆಯ ಪ್ರಯೋಜನಗಳು
PMVVY ಪಿಂಚಣಿ, ಮರಣ ಪ್ರಯೋಜನಗಳು ಮತ್ತು ಮೆಚುರಿಟಿ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಯೋಜನೆಯು ಜಿಎಸ್ಟಿಯಿಂದ ವಿನಾಯಿತಿ ಹೊಂದಿದೆ. ಚಂದಾದಾರರು ಆಯ್ಕೆ ಮಾಡಿದ ಪಿಂಚಣಿ ರೀತಿಯನ್ನು ಅವಲಂಬಿಸಿ, ಯೋಜನೆಯು 10 ವರ್ಷಗಳ ಪಾಲಿಸಿ ಅವಧಿಗೆ ಪಿಂಚಣಿಯನ್ನು ಒದಗಿಸುತ್ತದೆ. 10 ವರ್ಷಗಳ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರನ ಮರಣದ ನಂತರ ಪಾಲಿಸಿಯ ಖರೀದಿ ಬೆಲೆಯನ್ನು ಫಲಾನುಭವಿಗೆ ಹಿಂತಿರುಗಿಸಲಾಗುತ್ತದೆ. ಚಂದಾದಾರರು ಹತ್ತು ವರ್ಷಗಳ ಪಾಲಿಸಿ ಅವಧಿಯನ್ನು ಉಳಿದುಕೊಂಡರೆ ನಂತರ ಖರೀದಿ ಬೆಲೆಯನ್ನು ಕೊನೆಯ ಕಂತಿನ ಜೊತೆಗೆ ಹಿಂತಿರುಗಿಸಲಾಗುತ್ತದೆ.
ಹತ್ತು ವರ್ಷಗಳ ಪಾಲಿಸಿ ಅವಧಿಯ ಅಂತ್ಯದವರೆಗೆ ಪಿಂಚಣಿದಾರರು ಬದುಕುಳಿದ ಮೇಲೆ ಖರೀದಿ ಬೆಲೆ ಮತ್ತು ಅಂತಿಮ ಪಿಂಚಣಿ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಸ್ವಯಂ ಅಥವಾ ಸಂಗಾತಿಯ ಯಾವುದೇ ಗಂಭೀರ ಅಥವಾ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡಲು ಅಕಾಲಿಕವಾಗಿ ಹಣ ಹಿಂಪಡೆಯುವುದಕ್ಕೆ ಈ ಯೋಜನೆಯು ಅನುಮತಿಸುತ್ತದೆ. ಅಂತಹ ಅಕಾಲಿಕ ನಿರ್ಗಮನದಲ್ಲಿ ಶೇ.98ರಷ್ಟು ಖರೀದಿ ಬೆಲೆಯನ್ನು ಮರುಪಾವತಿಸಲಾಗುತ್ತದೆ.
ಒಟ್ಟಾರೆ ಕುಟುಂಬಕ್ಕೆ ಗರಿಷ್ಠ ಪಿಂಚಣಿ ಮಿತಿ; ಕುಟುಂಬವು ಪಿಂಚಣಿದಾರ, ಅವರ ಸಂಗಾತಿ ಮತ್ತು ಅವಲಂಬಿತರನ್ನು ಒಳಗೊಂಡಿರುತ್ತದೆ. ಖಾತ್ರಿಪಡಿಸಿದ ಬಡ್ಡಿ ಮತ್ತು ಗಳಿಸಿದ ನಿಜವಾದ ಬಡ್ಡಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ವೆಚ್ಚಗಳ ನಡುವಿನ ವ್ಯತ್ಯಾಸದಿಂದಾಗಿ ಕೊರತೆಯನ್ನು ಭಾರತ ಸರ್ಕಾರವು ಸಬ್ಸಿಡಿ ಮಾಡುತ್ತದೆ ಮತ್ತು ನಿಗಮಕ್ಕೆ ಮರುಪಾವತಿ ಮಾಡುತ್ತದೆ.
ಯೋಜನೆಗೆ ಅನ್ವಯವಾಗುವ ಬಡ್ಡಿ ದರ
ಖರೀದಿಸಿದ ಎಲ್ಲಾ ಪಾಲಿಸಿಗಳಿಗೆ 10 ವರ್ಷಗಳ ಪೂರ್ಣ ಪಾಲಿಸಿ ಅವಧಿಗೆ ಖಚಿತವಾದ ಬಡ್ಡಿ ದರವನ್ನು ಪಾವತಿಸಲಾಗುತ್ತದೆ. 2023ರ ಮಾರ್ಚ್ 31 ರವರೆಗೆ ಖರೀದಿಸಿದ ಪಾಲಿಸಿಗಳಿಗೆ ಯೋಜನೆಗೆ ಅನ್ವಯವಾಗುವ ಬಡ್ಡಿ ದರವು ವಾರ್ಷಿಕವಾಗಿ 7.40% ಆಗಿರುತ್ತದೆ.
ಕನಿಷ್ಠ ಮತ್ತು ಗರಿಷ್ಠ ಪಿಂಚಣಿ, ಖರೀದಿ ಬೆಲೆ
ಯೋಜನೆಯ ಅಡಿಯಲ್ಲಿ ಅನುಮತಿಸಲಾದ ಕನಿಷ್ಠ ಪಿಂಚಣಿ ತಿಂಗಳಿಗೆ 1000 ರೂ. ಆಗಿದ್ದು, ಗರಿಷ್ಠ ಪಿಂಚಣಿ 9250 ರೂ. ಆಗಿದೆ. ಯೋಜನೆಯಡಿ ಲಭ್ಯವಿರುವ ಕನಿಷ್ಠ ಖರೀದಿ ಬೆಲೆ ಮಾಸಿಕ ಪಿಂಚಣಿಗೆ 1,62,162 ರೂ., ತ್ರೈಮಾಸಿಕ ಪಿಂಚಣಿಗೆ 1,61,074 ರೂ., ಅರ್ಧವಾರ್ಷಿಕ ಪಿಂಚಣಿಗೆ 1,59,574 ರೂ. ಮತ್ತು ವಾರ್ಷಿಕ ಪಿಂಚಣಿಗೆ 1,56,658 ರೂ. ಆಗಿದೆ. ಯೋಜನೆಯಡಿ ಲಭ್ಯವಿರುವ ಗರಿಷ್ಠ ಖರೀದಿ ಬೆಲೆ ಮಾಸಿಕ ಪಿಂಚಣಿಗೆ 15 ಲಕ್ಷ ರೂ., ತ್ರೈಮಾಸಿಕ ಪಿಂಚಣಿಗೆ 14,89,933 ರೂ., ಅರ್ಧವಾರ್ಷಿಕ ಪಿಂಚಣಿಗೆ 14,76,064 ರೂ. ಮತ್ತು ವಾರ್ಷಿಕ ಪಿಂಚಣಿಗೆ 14,49,086 ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ಗಮನಿಸಬೇಕಾದ ಅಂಶವೆಂದರೆ, ಹಿರಿಯ ನಾಗರಿಕರು 15 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡುವಂತಿಲ್ಲ.
ಲೆಕ್ಕಾಚಾರ
15 ಲಕ್ಷ ರೂ.ಗೆ ಪಾಲಿಸಿಯನ್ನು ಖರೀದಿಸುವುದರಿಂದ ಹಿರಿಯ ನಾಗರಿಕರಿಗೆ 10 ವರ್ಷಗಳವರೆಗೆ ಮಾಸಿಕ 9250 ರೂ. ಪಿಂಚಣಿ ಪಡೆಯುತ್ತಾರೆ. ಈ ಯೋಜನೆಯು 14,49,086 ರೂಪಾಯಿ ಖರೀದಿ ಬೆಲೆಗೆ 1,11,000 ರೂ. ವಾರ್ಷಿಕ ಪಿಂಚಣಿ ನೀಡುತ್ತದೆ. ಉದಾಹರಣೆಗೆ, ನೀವು 9250 ರೂಪಾಯಿ ಮಾಸಿಕ ಪಿಂಚಣಿಗಾಗಿ 15 ಲಕ್ಷ ರೂ.ವನ್ನು ಪಾವತಿಸುವ ಮೂಲಕ ಯೋಜನೆಗೆ ಚಂದಾದಾರರಾಗಿದ್ದರೆ, ನಂತರ 10 ವರ್ಷಗಳಲ್ಲಿ ಯೋಜನೆಯು 9250 x 12 x 10 = 1,110,000 ರೂ.ವನ್ನು ಮಾಸಿಕ ಪಿಂಚಣಿಯಾಗಿ ಹಿಂದಿರುಗಿಸುತ್ತದೆ. ನೀವು 10 ವರ್ಷಗಳ ಪಾಲಿಸಿ ಅವಧಿಯನ್ನು ಉಳಿಸಿಕೊಂಡರೆ ನಂತರ ಮೂಲ ಖರೀದಿ ಬೆಲೆ 15 ಲಕ್ಷ ರೂ.ವನ್ನು ಸಹ ಹಿಂತಿರುಗಿಸಲಾಗುತ್ತದೆ. 1,62,162 ರೂ.ಗೆ ಯೋಜನೆಯನ್ನು ಖರೀದಿಸುವ ಮೂಲಕ 10 ವರ್ಷಗಳವರೆಗೆ ತಿಂಗಳಿಗೆ ಕನಿಷ್ಠ 1000 ರೂ. ಪಿಂಚಣಿಯನ್ನು ಖಚಿತಪಡಿಸಿಕೊಳ್ಳಬಹುದು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Mon, 22 August 22