ನವದೆಹಲಿ, ಆಗಸ್ಟ್ 11: ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಐಸಿ ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಹೊಸದಾಗಿ 1.30 ಲಕ್ಷ ಕೋಟಿ ರೂ ಹೂಡಿಕೆ ಮಾಡಲಿದೆ. 2024ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಷೇರುಗಳ ಮೇಲೆ ಎಲ್ಐಸಿ 38,000 ಕೋಟಿ ರೂ ಹೂಡಿಕೆ ಮಾಡಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ ಅದು ಮಾಡಿದ ಹೂಡಿಕೆ ಮೊತ್ತ 23,300 ಕೋಟಿ ರೂ ಇತ್ತು. 2023-24ರ ಹಣಕಾಸು ವರ್ಷದಲ್ಲಿ ಎಲ್ಐಸಿಯಿಂದ ಈಕ್ವಿಟಿ ಮಾರುಕಟ್ಟೆಯಲ್ಲಿ ಆದ ಒಟ್ಟು ಹೂಡಿಕೆ 1.32 ಲಕ್ಷ ಕೋಟಿ ರೂ. ಈ ಹಣಕಾಸು ವರ್ಷದಲ್ಲಿ ಹೆಚ್ಚೂಕಡಿಮೆ ಅಷ್ಟೇ ಪ್ರಮಾಣದಲ್ಲಿ ಹೂಡಿಕೆ ಆಗಬಹುದು. ಈ ವಿಚಾರವನ್ನು ಎಲ್ಐಸಿ ಮುಖ್ಯಸ್ಥ ಸಿದ್ಧಾರ್ಥ ಮೊಹಾಂತಿ ತಿಳಿಸಿದ್ದಾರೆ.
ಎಲ್ಐಸಿ ತನ್ನ ಪಾಲಿಸಿಗಳಿಂದ ಪಡೆಯುವ ಪ್ರೀಮಿಯಮ್ ಹಣವನ್ನು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತದೆ. ಷೇರು ಅಥವಾ ಈಕ್ವಿಟಿಗಿಂತ ಸರ್ಕಾರಿ ಬಾಂಡ್ ಇತ್ಯಾದಿ ಡೆಟ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಇರುತ್ತದೆ. ಎಲ್ಐಸಿ ಹೂಡಿಕೆ ಮಾಡಿರುವ ಹಣದ ಮೊತ್ತ ಜೂನ್ ಅಂತ್ಯದಲ್ಲಿ 53 ಲಕ್ಷ ಕೋಟಿ ರೂ ಇತ್ತು. ಇದರಲ್ಲಿ ಈಕ್ವಿಟಿಗಳ ಮೇಲೆ ಮಾಡಿರುವ ಹೂಡಿಕೆ 12.40 ಲಕ್ಷ ಕೋಟಿ ರೂ.
ಇದನ್ನೂ ಓದಿ: ಬಿಎಸ್ಸೆನ್ನೆಲ್ನಿಂದ 5ಜಿ ಬೆಂಬಲಿತ ಒಟಿಎ ಮತ್ತು ಯುಸಿಮ್ ಪ್ಲಾಟ್ಫಾರ್ಮ್ ಅನಾವರಣ; ಎಲ್ಲಿ ಬೇಕಾದರೂ ಸಿಮ್ ಸ್ವಾಪಿಂಗ್
2024ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಎಲ್ಐಸಿ ತನ್ನ ಹೂಡಿಕೆಗಳಿಂದ 15,500 ಕೋಟಿ ರೂನಷ್ಟು ಲಾಭ ಕಂಡಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ಗೆ ಹೋಲಿಸಿದರೆ ಲಾಭದಲ್ಲಿ ಶೇ. 13.5ರಷ್ಟು ಹೆಚ್ಚಳವಾಗಿದೆ. ನಿವ್ವಳ ಲಾಭ ಶೇ. 10ರಷ್ಟು ಹೆಚ್ಚಾಗಿ 10,461 ಕೋಟಿ ರೂ ಆಗಿದೆ.
ಇದೇ ಕ್ವಾರ್ಟರ್ನಲ್ಲಿ ಎಲ್ಐಸಿಗೆ ಪ್ರೀಮಿಯಮ್ಗಳಿಂದ ಬಂದ ಆದಾಯ 98,363 ಕೋಟಿ ರೂ ಇದ್ದದ್ದು 1,13,770 ಕೋಟಿ ರೂಗೆ ಹೆಚ್ಚಾಗಿದೆ. ಇದು ಎಲ್ಐಸಿ ಪಾಲಿಸಿಗಳ ಜನಪ್ರಿಯತೆ ಕುಂದಿಲ್ಲದಿರುವುದನ್ನು ತೋರಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ