LIC: ಅದಾನಿ ಪ್ರಕರಣದಿಂದ ಎಚ್ಚೆತ್ತ ಎಲ್​ಐಸಿ; ಹೂಡಿಕೆ ನೀತಿಯಲ್ಲಿ ಬದಲಾವಣೆ? ಏನಿದೆ ಹೊಸ ಪಾಲಿಸಿ?

ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್​ನ ಕಂಪನಿಗಳ ಷೇರುಗಳು (Adani Group companies shares) ಪ್ರಪಾತಕ್ಕೆ ಬಿದ್ದಿರುವುದು ಗೊತ್ತೇ ಇದೆ. ಈ ಕಂಪನಿಗಳ ಷೇರುಗಳ ಮೇಲೆ ಎಲ್​ಐಸಿ ಸಂಸ್ಥೆ ಅಪಾರ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದೆ. ಇದರಿಂದ ಎಲ್​ಐಸಿ (LIC) ಬಗ್ಗೆ ಜನರಿಗಿರುವ ವಿಶ್ವಾಸ ಕಡಿಮೆ ಆಗಬಹುದು ಎಂದು ಅನೇಕರು ಶಂಕಿಸಿದ್ದಾರೆ.

LIC: ಅದಾನಿ ಪ್ರಕರಣದಿಂದ ಎಚ್ಚೆತ್ತ ಎಲ್​ಐಸಿ; ಹೂಡಿಕೆ ನೀತಿಯಲ್ಲಿ ಬದಲಾವಣೆ? ಏನಿದೆ ಹೊಸ ಪಾಲಿಸಿ?
ಎಲ್​​ಐಸಿ
Edited By:

Updated on: Oct 07, 2026 | 7:22 PM

ಮುಖ್ಯಾಂಶಗಳು

  • ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಮೇಲೆ ಎಲ್​ಐಸಿ 30,000 ಕೋಟಿಗಿಂತ ಹೆಚ್ಚು ಹಣ ಹೂಡಿಕೆ ಮಾಡಿದೆ. ಈಗ ಅದರ 6,200 ಕೋಟಿಗೂ ಹೆಚ್ಚು ಹೂಡಿಕೆ ನಷ್ಟಕ್ಕೆ ಸಿಲುಕಿದಂತಅಗಿದೆ.
  • ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ಎಲ್​ಐಸಿ ತನ್ನ ಹೂಡಿಕೆ ನೀತಿಯಲ್ಲಿ ಇನ್ನಷ್ಟು ನಿರ್ಬಂದ ಕ್ರಮ ಜಾರಿಗೆ ತರಬಹುದು. ಒಂದೇ ಕಂಪನಿ ಅಥವಾ ಗ್ರೂಪ್ ಮೇಲೆ ಮಾಡುವ ಹೂಡಿಕೆಗೆ ಇನ್ನಷ್ಟು ಮಿತಿ ಹಾಕುವ ಸಾಧ್ಯತೆ ಇದೆ.
  • ಸದ್ಯ, ಎಲ್​ಐಸಿ ಯಾವುದೇ ಕಂಪನಿಯ ಷೇರುಗಳಲ್ಲಿ ಶೇ. 10ಕ್ಕಿಂತ ಹೆಚ್ಚು ಹಣ ಹೂಡಿಕೆ ಮಾಡುವಂತಿಲ್ಲ ಎಂಬ ನಿಯಮ ಇದೆ. ಈಗ ಇದು ಇನ್ನೂ ಕಡಿಮೆಗೊಳ್ಳಲಿದೆ.

ನವದೆಹಲಿ: ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್​ನ ಕಂಪನಿಗಳ ಷೇರುಗಳು (Adani Group companies shares) ಪ್ರಪಾತಕ್ಕೆ ಬಿದ್ದಿರುವುದು ಗೊತ್ತೇ ಇದೆ. ಈ ಕಂಪನಿಗಳ ಷೇರುಗಳ ಮೇಲೆ ಎಲ್​ಐಸಿ ಸಂಸ್ಥೆ ಅಪಾರ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದೆ. ಇದರಿಂದ ಎಲ್​ಐಸಿ (LIC) ಬಗ್ಗೆ ಜನರಿಗಿರುವ ವಿಶ್ವಾಸ ಕಡಿಮೆ ಆಗಬಹುದು ಎಂದು ಅನೇಕರು ಶಂಕಿಸಿದ್ದಾರೆ. ಹಿಂಡನ್ಬರ್ಗ್ ರಿಸರ್ಚ್ ತನಿಖಾ ವರದಿ ಪ್ರಕಟವಾದ ಬಳಿಕ ಅದಾನಿ ಗ್ರೂಪ್​ನ ಸಂಪತ್ತು 100 ಬಿಲಿಯನ್ ಡಾಲರ್ (ಸುಮಾರು 8.2 ಲಕ್ಷ ಕೋಟಿ ರುಪಾಯಿ) ಮೌಲ್ಯದಷ್ಟು ಕರಗಿದೆ. ಅದಾನಿ ಕಂಪನಿಗಳ ಷೇರುಗಳಲ್ಲಿ ಎಲ್​ಐಸಿ ಸುಮಾರು 30,000 ಕೋಟಿ ರುಪಾಯಿ ಹಣ ಹೂಡಿಕೆ ಮಾಡಿದೆ. ಇದೀಗ ಅದಾನಿ ಷೇರು ಕುಸಿತದೊಂದಿಗೆ ಎಲ್​ಐಸಿಯ 6,200 ಕೋಟಿ ರುಪಾಯಿಯಷ್ಟು ಹಣ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಅಂದಾಜಿದೆ.

ದೇಶದ ಮೂಲೆ ಮೂಲೆಯಲ್ಲೂ ಜನರು ಎಲ್​ಐಸಿ ಪಾಲಿಸಿಗಳನ್ನು ಖರೀದಿಸುತ್ತಾರೆ. ಇದರಿಂದ ಎಲ್​ಐಸಿ ಬಳಿ ಹೇರಳ ಹೂಡಿಕೆ ಹಣವಿದೆ. ಅಂತೆಯೇ ಎಲ್​ಐಸಿಯು ಭಾರತದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರನೂ ಹೌದು. ಅದರ ಬಳಿ 539 ಬಿಲಿಯನ್ ಡಾಲರ್ (ಸುಮಾರು 44 ಲಕ್ಷ ಕೋಟಿ ರುಪಾಯಿ) ಮೊತ್ತದಷ್ಟು ಹೂಡಿಕೆದಾರರ ಹಣವಿದೆ. ಇದನ್ನು ವಿವಿಧ ಕಂಪನಿಗಳ ಷೇರುಗಳು ಮತ್ತಿತರ ಕಡೆ ಹೂಡಿಕೆ ಮಾಡಿ ಅದರಿಂದ ಲಾಭ ಮಾಡಿಕೊಳ್ಳುತ್ತದೆ ಎಲ್​ಐಸಿ. ಇದೀಗ ಅದಾನಿ ಗ್ರೂಪ್ ಕಂಪನಿಗೆ ಹಾಕಿದ ದುಡ್ಡು ನಷ್ಟ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ತನ್ನ ಹೂಡಿಕೆ ನೀತಿಯಲ್ಲಿ ಎಲ್​ಐಸಿ ಬದಲಾವಣೆ ತರಲು ಹೊರಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೆ ಇನ್ನೊಂದು ವಾರಕ್ಕೆ ಖುಷಿ ಸುದ್ದಿ; ಕನಿಷ್ಠ ವೇತನದಲ್ಲಿ ಭರ್ಜರಿ ಏರಿಕೆ ಸಾಧ್ಯತೆ

ಒಬ್ಬರೇ ಪ್ರೊಮೋಟರ್​ಗಳಿರುವ ವೈಯಕ್ತಿಕ ಸಂಸ್ಥೆಗಳು, ಗ್ರಪ್ ಕಂಪನಿಗಳ ಮೇಲೆ ಮಾಡಲಾಗುವ ಹೂಡಿಕೆಗೆ ಇನ್ನಷ್ಟು ಮಿತಿ ಹಾಕಲು ಎಲ್​ಐಸಿ ಯೋಜಿಸಿದೆ. ಈಗ ಇರುವ ಎಲ್​ಐಸಿ ಹೂಡಿಕೆ ನೀತಿ ಪ್ರಕಾರ, ಒಂದೇ ಕಂಪನಿಯಲ್ಲಿ ಶೇ. 10ಕ್ಕಿಂತ ಹೆಚ್ಚು ಔಟ್​ಸ್ಟ್ಯಾಡಿಂಗ್ ಈಕ್ವಿಟಿ ಹೂಡುವಂತಿಲ್ಲ. ಶೇ. 10 ಔಟ್​ಸ್ಟ್ಯಾಂಡಿಂಗ್ ಡೆಬ್ಟ್ ಹೂಡುವಂತಿಲ್ಲ. ಇಲ್ಲಿ ಔಟ್​ಸ್ಟ್ಯಾಂಡಿಂಗ್ ಈಕ್ವಿಟಿ ಎಂದರೆ ಇದು ಎಲ್​ಐಸಿಯ ಪಾಲಿಸಿಯ ಹಣವಲ್ಲ. ಇನ್ನು ಔಟ್​ಸ್ಟ್ಯಾಂಡಿಂಗ್ ಡೆಬ್ಟ್ ಎಂಬುದು ಎಲ್​ಐಸಿ ಪಾಲಿಸಿದಾರರ ಹಣವಾಗಿದ್ದು, ಇದನ್ನು ನಿಗದಿತ ಅವಧಿಯಲ್ಲಿ ಮರಳಿಸಬೇಕಾಗುತ್ತದೆ. ಈಗ ಶೇ. 10ಕ್ಕಿಂತಲೂ ಕಡಿಮೆಗೆ ಎಲ್​ಐಸಿ ಒಂದು ಕಂಪನಿಯಲ್ಲಿ ತನ್ನ ಹೂಡಿಕೆಗೆ ಮಿತಿ ಹಾಕಬಹುದು.

ವಿಮಾ ಪ್ರಾಧಿಕಾರ ಸಂಸ್ಥೆ ಐಆರ್​ಡಿಎಐ ಕೂಡ ಈ ವಿಚಾರದಲ್ಲಿ ಸ್ಪಷ್ಟ ಗೆರೆ ಹಾಕಿದೆ. ಇನ್ಷೂರೆನ್ಸ್ ಕಂಪನಿಗಳು ತಮ್ಮ ಶೇ. 15ಕ್ಕಿಂತ ಹೆಚ್ಚು ನಿಧಿಯನ್ನು ಒಂದು ಕಂಪನಿಯ ಷೇರುಗಳಲ್ಲಿ ಹಾಕುವಂತಿಲ್ಲ ಎಂದು ಅದು ನಿರ್ಬಂಧ ಹಾಕಿದೆ. ಒಂದೇ ಕಂಪನಿಯಲ್ಲಿ ಹೆಚ್ಚು ಮೊತ್ತದ ಹೂಡಿಕೆ ಮಾಡಿದರೆ ನಷ್ಟದ ಅಪಾಯ ಹೆಚ್ಚಿರುತ್ತದೆ. ಕಡಿಮೆ ಮೊತ್ತದ ಹೂಡಿಕೆಯನ್ನು ಹಲವಾರು ಕಂಪನಿಗಳಲ್ಲಿ ಹೂಡಿದರೆ ಲಾಭ ನಷ್ಟಗಳ ಸಮತೋಲನ ಮಾಡಬಹುದು ಎಂಬುದು ಲೆಕ್ಕಾಚಾರ. ಇಲ್ಲದಿದ್ದರೆ ವಿಮಾ ಪಾಲಿಸಿದಾರರ ಹಣ ಅಪಾಯಕ್ಕೆ ಸಿಲುಕುತ್ತದೆ.

ಈಗ ಎಲ್​​ಐಸಿ ಇನ್ನೂ ಕಠಿಣ ನಿರ್ಬಂಧಗಳನ್ನು ಹಾಕುವ ಹಾದಿಯಲ್ಲಿದೆ. ಎಲ್​ಐಸಿಯ ಹೂಡಿಕೆ ಸಮಿತಿ ಮೊದಲು ಈ ಬಗ್ಗೆ ಒಂದು ನಿರ್ಧಾರಕ್ಕೆ ಬಂದು ಆ ಬಳಿಕ ಜೀವ ವಿಮಾ ನಿಗಮದ ಮಂಡಳಿಯ ಅನುಮೋದನೆ ಪಡೆಯಬೇಕಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Fri, 24 March 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us