7th Pay Commission: ಸರ್ಕಾರಿ ನೌಕರರಿಗೆ ಇನ್ನೊಂದು ವಾರಕ್ಕೆ ಖುಷಿ ಸುದ್ದಿ; ಕನಿಷ್ಠ ವೇತನದಲ್ಲಿ ಭರ್ಜರಿ ಏರಿಕೆ ಸಾಧ್ಯತೆ

|

Updated on: Mar 24, 2023 | 4:40 PM

DA and DR Hike By 2023 March 31st: ಶೇ. 38ರಷ್ಟಿರುವ ತುಟ್ಟಿ ಭತ್ಯೆ ಶೇ. 42ಕ್ಕೆ ಏರಿಕೆ ಆಗಲಿದೆ. ಪಿಂಚಣಿದಾರರಿಗೆ ಕೊಡಲಾಗುವ ಡಿಯರ್ನೆಸ್ ರಿಲೀಫ್ (ಡಿಆರ್) ಕೂಡ ಏರಿಕೆ ಆಗಲಿದೆ. ಇದೆಲ್ಲವೂ ಮಾರ್ಚ್ 31ರಂದು ಪ್ರಕಟಿಸಬಹುದು ಎಂದು ವರದಿಗಳು ಹೇಳುತ್ತಿವೆ.

7th Pay Commission: ಸರ್ಕಾರಿ ನೌಕರರಿಗೆ ಇನ್ನೊಂದು ವಾರಕ್ಕೆ ಖುಷಿ ಸುದ್ದಿ; ಕನಿಷ್ಠ ವೇತನದಲ್ಲಿ ಭರ್ಜರಿ ಏರಿಕೆ ಸಾಧ್ಯತೆ
ಡಿಎ ಏರಿಕೆ
Follow us on

ನವದೆಹಲಿ: ಕೇಂದ್ರ ಸರ್ಕಾರೀ ನೌಕರರು ನಿರೀಕ್ಷಿಸಿದ ರೀತಿಯಲ್ಲಿ ಈ ಬಾರಿಯೂ ಡಿಎ ಮತ್ತು ಡಿಆರ್ (DA and DR) ಏರಿಕೆ ಆಗಲಿವೆ. ಜೊತೆಗೆ ಬಹಳ ಮಹತ್ವದ್ದಾದ ಫಿಟ್ಮೆಂಟ್ ಫ್ಯಾಕ್ಟರ್ (Fitment Factor) ಕೂಡ ಪರಿಷ್ಕರಣೆ ಆಗಬಹುದು. ನಿರೀಕ್ಷಿಸಿದ ರೀತಿಯಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ ಅಳವಡಿಕೆಯಾದರೆ ಕೇಂದ್ರ ನೌಕರರ ಕನಿಷ್ಠ ವೇತನ 18,000 ರೂನಿಂದ 26,000 ರೂಗೆ ಏರಿಕೆ ಆಗುವ ಸಾಧ್ಯತೆ ಇದೆ. ಇನ್ನು, ಶೇ. 38ರಷ್ಟಿರುವ ತುಟ್ಟಿ ಭತ್ಯೆ (DA- Dearness Allowance) ಶೇ. 42ಕ್ಕೆ ಏರಿಕೆ ಆಗಲಿದೆ. ಪಿಂಚಣಿದಾರರಿಗೆ ಕೊಡಲಾಗುವ ಡಿಯರ್ನೆಸ್ ರಿಲೀಫ್ (ಡಿಆರ್) ಕೂಡ ಏರಿಕೆ ಆಗಲಿದೆ. ಇದೆಲ್ಲವೂ ಮಾರ್ಚ್ 31ರಂದು ಪ್ರಕಟಿಸಬಹುದು ಎಂದು ವರದಿಗಳು ಹೇಳುತ್ತಿವೆ. ಆದರೆ, ಸರ್ಕಾರಿ ನೌಕರರಿಗೆ ಒಂದೇ ನಿರಾಸೆ ಎಂದರೆ ಕೋವಿಡ್ ಸಂದರ್ಭದಲ್ಲಿ ಬಾಕಿ ಉಳಿದಿದ್ದ 3 ಕಂತುಗಳ ತುಟ್ಟಿ ಭತ್ಯೆ ಹಣವನ್ನು ಸರ್ಕಾರ ಈ ಬಾರಿಯೂ ಬಿಡುಗಡೆ ಮಾಡುತ್ತಿಲ್ಲ. ಇದು ಬಿಟ್ಟರೆ ಸರ್ಕಾರಿ ನೌಕರರು ನಗುಮೊಗದೊಂದಿಗೆ ಏಪ್ರಿಲ್ ತಿಂಗಳಿಗೆ ಅಡಿ ಇಡಬಹುದು.

ಡಿಎ (ಡಿಯರ್ನೆಸ್ ಅಲೋಯನ್ಸ್) ಎಂಬುದು ಹಾಲಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಕೊಡುಗೆ. ಮತ್ತು ಡಿಆರ್ (ಡಿಯರ್ನೆಸ್ ರಿಲೀಫ್) ಎಂಬುದು ನಿವೃತ್ತರಾಗಿರುವ ನೌಕರರ ಪಿಂಚಣಿಗೆ ಕೊಡುವ ನೆರವಿನ ಹಣ. ಸಾಮಾನ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಸರ್ಕಾರಿ ನೌಕರರಿಗೆ ಬಾಧಿಸಬಾರದು, ಅವರ ಸಂಬಳದ ಅಂತಿಮ ಮೌಲ್ಯ ಕಡಿಮೆ ಆಗಬಾರದೆಂದು ಡಿಎ ಮತ್ತು ಡಿಆರ್ ಅನ್ನು ಕೊಡಲಾಗುತ್ತದೆ. ಪ್ರತೀ 6 ತಿಂಗಳಿಗೊಮ್ಮೆ ಇದರ ದರ ಪರಿಷ್ಕರಣೆ ಆಗುತ್ತಿರುತ್ತದೆ.

ಇದನ್ನೂ ಓದಿHallmark Gold: ಏಪ್ರಿಲ್ 1ರಿಂದ HUID ಸಂಖ್ಯೆ ಇಲ್ಲದ ಒಡವೆಗಳ ಮಾರಾಟ ಇಲ್ಲ; ಏನಿದು ಹೊಸ ಹಾಲ್​ಮಾರ್ಕ್?

ಸದ್ಯ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಖ್ಯೆ 1 ಕೋಟಿಯಷ್ಟಿದೆ. ಇವರೆಲ್ಲರಿಗೂ ಶೇ. 38ರಷ್ಟು ಡಿಎ ಮತ್ತು ಡಿಆರ್ ಸಿಗುತ್ತಿದೆ. ಈಗ ಅದು ಶೇ. 42ಕ್ಕೆ ಏರಿಕೆ ಆಗಿದ್ದೇ ಆದಲ್ಲಿ ಅದು 2023, ಜನವರಿ 1ರಿಂದ ಜಾರಿಗೆ ಬರುತ್ತದೆ. ಕಳೆದ ಬಾರಿ ಡಿಎ ಹೆಚ್ಚಳ ಆಗಿದ್ದು 2022 ಸೆಪ್ಟಂಬರ್ 28ರಂದು. ಆಗಲೂ ಕೂಡ ಶೇ. 4ರಷ್ಟು ಡಿಎ ಹೆಚ್ಚಳವಾಗಿತ್ತು. ಅಂದರೆ ಶೇ. 34ರಷ್ಟಿದ್ದ ಡಿಎ ಶೇ. 38ಕ್ಕೆ ಹೆಚ್ಚಾಗಿತ್ತು.

7ನೇ ವೇತನ ಆಯೋಗ: ತುಟ್ಟಿಭತ್ಯೆ ಲೆಕ್ಕಾಚಾರ ಹೇಗೆ?

ಬೆಲೆ ಏರಿಕೆ ಸಂಗತಿಯ ಆಧಾರದ ಮೇಲೆ ನೌಕರರಿಗೆ ಡಿಯರ್ನೆಸ್ ಅಲೋಯನ್ಸ್ ಕೊಡಲಾಗುತ್ತದೆ. ಎಷ್ಟು ಡಿಎ ಹೆಚ್ಚಿಸಬೇಕು ಎಂದು ನಿರ್ಧಾರಕ್ಕೆ ಬರಲು ಒಂದು ಸೂತ್ರ ರೂಪಿಸಲಾಗಿದೆ. ಅದು ಹೀಗಿದೆ:

((ಕಳೆದ 12 ತಿಂಗಳ CPI-IW ಸರಾಸರಿ – 115.76) / 126.33) X 100.

ಇದರಿಂದ ಬರುವ ಮೊತ್ತವೇ ಡಿಎ ಎಷ್ಟು ಶೇಕಡಾವಾರು ಹೆಚ್ಚಬೇಕು ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಸಿಪಿಐಐಡಬ್ಲ್ಯೂ ಎಂದರೆ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ (Consumer Price Index- Industrial Workers). ಕಳೆದ 12 ತಿಂಗಳ ಸರಾಸರಿ ಬೆಲೆ ಏರಿಕೆಯನ್ನು ಇದು ಸೂಚಿಸುತ್ತದೆ. ಸದ್ಯ ಕಳೆದ 12 ತಿಂಗಳ ಸರಾಸರಿ ಸಿಪಿಐಐಡಬ್ಲ್ಯೂ 372.2 ಇದೆ. ಮೇಲಿನ ಸೂತ್ರಕ್ಕೆ ಇದನ್ನು ಸೇರಿಸಿದರೆ ಡಿಎ ಶೇ. 42.37 ಆಗುತ್ತದೆ. ಸರ್ಕಾರ ಡಿಎ ಹೆಚ್ಚಳವನ್ನು ಶೇ. 42ಕ್ಕೆ ನಿಗದಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿJack Dorsey: ಅದಾನಿ ಆಯ್ತು, ಜ್ಯಾಕ್ ಡಾಸೀ ಮೇಲೆ ಹಿಂಡನ್ಬರ್ಗ್ ದಾಳಿ; 4,300 ಕೋಟಿ ಸಂಪತ್ತು ಕಳೆದುಕೊಂಡ ಟ್ವಿಟ್ಟರ್ ಸ್ಥಾಪಕ

ಕೇಂದ್ರ ಸರ್ಕಾರದಿಂದ ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಸಾಧ್ಯತೆ

ಡಿಎ ಹೆಚ್ಚಳದಂತೆ ಸರ್ಕಾರಿ ನೌಕರರಿಗೆ ಪ್ರಮುಖವಾಗಿರುವ ಇನ್ನೊಂದು ಅಂಶ ಫಿಟ್ಮೆಂಟ್ ಫ್ಯಾಕ್ಟರ್. ಇದು ವೇತನ ಸರಿಹೊಂದಿಕೆಯ ಸೂತ್ರ. ಆರನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ರೇಷಿಯೋ 1.86 ಇತ್ತು. ಈಗ ಅದು 2.57 ಪ್ರತಿಶತ ಇದೆ. ಈಗ ಅದನ್ನು 3.68ಕ್ಕೆ ಹೆಚ್ಚಿಸಬೇಕೆಂಬ ಒತ್ತಾಯ ಇದೆ. ಸರ್ಕಾರ ಕೂಡ ಇದಕ್ಕೆ ಒಪ್ಪಿ ಅಳವಡಿಸುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ ಕನಿಷ್ಠ ವೇತನ 18,000 ರೂನಿಂದ 26,000 ರುಪಾಯಿಗೆ ಹೆಚ್ಚಾಗಲಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Fri, 24 March 23