Hallmark Gold: ಏಪ್ರಿಲ್ 1ರಿಂದ HUID ಸಂಖ್ಯೆ ಇಲ್ಲದ ಒಡವೆಗಳ ಮಾರಾಟ ಇಲ್ಲ; ಏನಿದು ಹೊಸ ಹಾಲ್​ಮಾರ್ಕ್?

No Sale of Gold Without HUID: ಏಪ್ರಿಲ್ 1ರಿಂದ ಹೊಸ ಹಾಲ್​ಮಾರ್ಕ್ ಗುರುತು ಇಲ್ಲದ ಒಡವೆಯ ಮಾರಾಟವನ್ನು ನಿಷೇಧಿಸಲಾಗಿದೆ. ಇದು ಒಡವೆ ಅಂಗಡಿಯವರಿಗೆ ಹೊರಡಿಸಿರುವ ಆದೇಶ. ಹಾಗಾದರೆ, ಕೆಡಿಎಂ ಇತ್ಯಾದಿ ಗುರುತಿನ ಚಿನ್ನ ಇಟ್ಟುಕೊಂಡಿರುವ ಸಾಮಾನ್ಯರು ಏನು ಮಾಡಬೇಕು? ಇದರ ವಿವರ ಇಲ್ಲಿದೆ....

Hallmark Gold: ಏಪ್ರಿಲ್ 1ರಿಂದ HUID ಸಂಖ್ಯೆ ಇಲ್ಲದ ಒಡವೆಗಳ ಮಾರಾಟ ಇಲ್ಲ; ಏನಿದು ಹೊಸ ಹಾಲ್​ಮಾರ್ಕ್?
ಒಡವೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 24, 2023 | 10:44 AM

ಬೆಂಗಳೂರು: ಭಾರತದಲ್ಲಿ ಏಪ್ರಿಲ್ 1ರಿಂದ ಹೊಸ ಹಾಲ್​ಮಾರ್ಕ್ ಗುರುತಾಗಿರುವ ಹೆಚ್​ಯುಐಡಿ ಸಂಖ್ಯೆ ಇಲ್ಲದ ಚಿನ್ನವನ್ನು ಎಲ್ಲಿಯೂ ಮಾರುವಂತಿಲ್ಲ. ಅದೂ ಚಿನ್ನಕ್ಕೆ 4 ಅಂಕಿಯ ಹೆಚ್​ಯುಐಡಿ ಅಲ್ಲ, 6 ಅಂಕಿಯ ಹೆಚ್​ಯುಐಡಿ ಇರುವುದು ಕಡ್ಡಾಯ. ಜಾಗತಿಕ ಗುಣಮಟ್ಟಕ್ಕೆ ತಾಳೆಯಾಗಲು ಮತ್ತು ಗ್ರಾಹಕರಿಗೆ ವಂಚನೆಯಾಗುವುದನ್ನು ತಡೆಯಲು ಹಾಗೂ ಪ್ರತೀ ಒಡವೆಯನ್ನೂ ಟ್ರೇಸ್ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. 2023, ಮಾರ್ಚ್ 31ರ ನಂತರ ಯಾವುದೇ ಒಡವೆ ಅಂಗಡಿಗಳು, ಚಿನ್ನದ ವ್ಯಾಪಾರಿಗಳು ಅರಂಕಿಯ ಹೆಚ್​ಯುಐಡಿ ಇಲ್ಲದ ಚಿನ್ನವನ್ನು (Gold without HUID) ಮಾರುವಂತಿಲ್ಲ. ಹೊಸ ಹಾಲ್​ಮಾರ್ಕ್ ಇರುವ ಒಡವೆಯ ಶುದ್ಧತೆಯ ಮಟ್ಟ ಇತ್ಯಾದಿಯನ್ನು ಯಾರು ಬೇಕಾದರೂ ಪರಿಶೀಲಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಒಡವೆಗೂ ನೀಡಲಾಗುವ ಹೆಚ್​ಯುಐಡಿ (HUID) ಇರುವ ಹಾಲ್​ಮಾರ್ಕ್ ವಿಶೇಷವಾಗಿರುತ್ತದೆ. ಒಂದೊಂದು ಒಡವೆಯ ಐಡಿ ಗುರುತು ಭಿನ್ನವಾಗಿರುತ್ತದೆ.

ಒಡವೆಯ ಗುಣಮಟ್ಟಕ್ಕೆ ಗುರುತು ಕೊಡುವ ಕಾರ್ಯ ಹಳೆಯದ್ದೇ. ಹಿಂದೆ ಕೆಡಿಎಂ (KDM Gold) ಮಾರ್ಕ್ ಹಾಕಲಾಗುತ್ತಿತ್ತು. ಆ ಬಳಿಕ ಹಾಲ್​ಮಾರ್ಕ್ ವ್ಯವಸ್ಥೆ ಬಂದಿತು. ಸರ್ಕಾರ 2021ರ ಜೂನ್ ತಿಂಗಳಲ್ಲೇ ಚಿನ್ನಕ್ಕೆ ಹಾಲ್​ಮಾರ್ಕ್ ಹಾಕುವುದನ್ನು ಕಡ್ಡಾಯಪಡಿಸಿತು. ಹಾಲ್​ಮಾರ್ಕ್ ಇಲ್ಲದ ಒಡವೆಗಳು ಈಗಾಗಲೇ ಇದ್ದಲ್ಲಿ ಅದನ್ನು ಪೂರ್ಣವಾಗಿ ಮಾರಲು ಒಂದು ವರ್ಷ 9 ತಿಂಗಳ ಕಾಲಾವಕಾಶ ಕೊಟ್ಟಿತು. ಆ ಗಡುವು ಮುಗಿಯುತ್ತಿದ್ದು, ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಚಿನ್ನದ ಮಾರಾಟವನ್ನು ನಿಷೇಧಿಸಲಾಗುತ್ತಿದೆ. ಈಗಾಗಲೇ ನಾಲ್ಕು ಅಂಕಿಗಳ ಹೆಚ್​ಯುಐಡಿ ಹೊಂದಿರುವ ಚಿನ್ನಗಳು ಮಾರುಕಟ್ಟೆಯಲ್ಲಿವೆ. ಆದರೆ, 6 ಅಂಕಿಯ ಹೆಚ್​ಯುಐಡಿಯೇ ಆಗಬೇಕೆಂದು ಸರ್ಕಾರ ಅಪ್ಪಣೆ ಮಾಡಿದೆ. ಅದ್ದರಿಂದ ಚಿನ್ನದ ವ್ಯಾಪಾರಿಗಳು ನಾಲ್ಕು ಅಂಕಿಯ ಎಚ್​ಯುಐಡಿ ಗುರುತಿನ ಚಿನ್ನಕ್ಕೆ ಆರಂಕಿಯ ಹೆಚ್​ಯುಐಡಿ ಗುರುತು ಹಾಕಿಸಿದ ಬಳಿಕವಷ್ಟೇ ಆ ಒಡವೆಯನ್ನು ಮಾರಾಟ ಮಾಡಲು ಸಾಧ್ಯ.

ಇದನ್ನೂ ಓದಿM3M Hurun’s Rich List 2023: ವಿಶ್ವ ಶ್ರೀಮಂತರಲ್ಲಿ ಅಂಬಾನಿ 9ನೇ ಸ್ಥಾನ; ಅದಾನಿ ಶ್ರೀಮಂತಿಕೆ ಎಷ್ಟು?

ಆರು ಡಿಜಿಟ್ ಸಂಖ್ಯೆಯ ಹಾಲ್​ಮಾರ್ಕ್

ಚಿನ್ನ ಬಹಳ ಮೃದುವಾಗಿರುವ ಲೋಹ. ಅದನ್ನು ಯಥಾವತ್ತಾಗಿ ಒಡವೆಗೆ ಬಳಸಲು ಆಗುವುದಿಲ್ಲ. ಅದಕ್ಕೆ ಇತರ ಕೆಲ ನಿರ್ದಿಷ್ಟ ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ. 24 ಕ್ಯಾರಟ್​ನದ್ದು ಅಪರಂಜಿ ಚಿನ್ನ, ಅಂದರೆ ಶುದ್ಧಚಿನ್ನ. 22 ಕ್ಯಾರಟ್ ಚಿನ್ನ ಎಂದರೆ ಸ್ವಲ್ಪವಾಗಿ ಇತರ ಲೋಹ ಮಿಶ್ರವಾಗಿರುವ ಚಿನ್ನ. ಸಾಮಾನ್ಯವಾಗಿ ಒಡವೆಗಳಿಗೆ 22 ಕ್ಯಾರಟ್ ಚಿನ್ನವನ್ನೇ ಬಳಲಾಗುತ್ತದೆ. ಕೆಲ ಒಡವೆಗಳಿಗೆ 18ಕ್ಯಾರಟ್ ಮತ್ತು 14 ಕ್ಯಾರಟ್ ಚಿನ್ನವನ್ನೂ ಬಳಸುವುದುಂಟು. ಚಿನ್ನದ ಪ್ರಮಾಣ ಕಡಿಮೆ ಆದಷ್ಟೂ ಆ ಒಡವೆಯ ಮೌಲ್ಯವೂ ಕಡಿಮೆ ಆಗುತ್ತದೆ. ಹೀಗಾಗಿ, 24 ಕ್ಯಾರಟ್ ಚಿನ್ನಕ್ಕೆ ಗರಿಷ್ಠ ಬೆಲೆ ಇದ್ದರೆ, 22 ಕ್ಯಾರಟ್ ಚಿನ್ನಕ್ಕೆ ತುಸು ಕಡಿಮೆ ಬೆಲೆ ಇರುತ್ತದೆ. 22 ಕ್ಯಾರಟ್ ಮಟ್ಟದಲ್ಲಿ ಶೇ. 91.6ರಷ್ಟು ಚಿನ್ನ ಇರುತ್ತದೆ. 14 ಕ್ಯಾರಟ್ ಚಿನ್ನದಲ್ಲಿ ಶೇ. 58.5ರಷ್ಟು ಮಾತ್ರವೇ ಚಿನ್ನ ಇರುತ್ತದೆ.

ಈಗ ಹಾಲ್​ಮಾರ್ಕ್ ವಿಚಾರಕ್ಕೆ ಬರುವುದಾದರೆ ಇದು ಚಿನ್ನದ ಶುದ್ಧತೆ ಇತ್ಯಾದಿಯನ್ನು ತಿಳಿಸುವ ಐಡಿಯಾಗಿದೆ. ಪ್ರತಿಯೊಂದು ಒಡವೆಯಲ್ಲೂ ಈ ಗುರುತನ್ನು ಹಾಕಲಾಗುತ್ತದೆ. ಅದರಲ್ಲಿ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ಹಾಲ್​ಮಾರ್ಕ್ ಲೋಗೊ ಇರುತ್ತದೆ. ಶುದ್ಧತೆಯ ಮಟ್ಟ ತಿಳಿಸುವ ನಂಬರ್, ಹಾಗೂ ಎಚ್​ಯುಐಡಿ ನಂಬರ್ ಇವುಗಳನ್ನು ಒಡವೆಯ ಒಳಭಾಗದಲ್ಲಿ ಹಾಕಲಾಗುತ್ತದೆ.

ಇದನ್ನೂ ಓದಿAccenture Layoffs: ಅಕ್ಸೆಂಚರ್​ನಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ 19,000 ಮಂದಿ; ಪರಿಹಾರಕ್ಕಾಗಿ 10,000 ಕೋಟಿ ಎತ್ತಿಟ್ಟ ಕಂಪನಿ

ಹೆಚ್​ಯುಐಡಿ ಪ್ರತಿಯೊಂದು ಒಡವೆಗೂ ಭಿನ್ನವಾಗಿರುತ್ತದೆ. ಈ ಐಡಿ ಮೂಲಕ ಒಡವೆಯ ಲೈಸೆನ್ಸ್ ವಿವರ ಸೇರಿದಂತೆ ಅದರ ಅಧಿಕೃತತೆಯನ್ನು ಪತ್ತೆ ಮಾಡಬಹುದು. ಅದಕ್ಕಾಗಿ ಗೂಗಲ್ ಪ್ಲೇಸ್ಟೋರ್​ನಲ್ಲಿ ಬಿಐಎಸ್ ಕೇರ್ ಹೆಸರಿನಲ್ಲಿ ಒಂದು ಆ್ಯಪ್ ಕೂಡ ಇದೆ.

ಬಿಐಎಸ್ ಮಾನ್ಯತೆ ನೀಡಿದ ಅಸ್ಸೇಯಿಂಗ್ ಅಂಡ್ ಹಾಲ್ಮಾರ್ಕಿಂಗ್ ಸೆಂಟರ್​ಗಳು ಬಹುತೇಕ ಎಲ್ಲಾ ನಗರಗಳಲ್ಲೂ ಇರುತ್ತವೆ. ಅಲ್ಲಿಗೆ ಹೋಗಿ ಸಣ್ಣ ಮೊತ್ತದ ಶುಲ್ಕ ಪಾವತಿಸಿ ಒಡವೆಯನ್ನು ಪರೀಕ್ಷಿಸಬಹುದು.

ಇದನ್ನೂ ಓದಿBusinesswomen: ಕಡಿಮೆ ಹಣಕ್ಕೆ ಹೊಸ ಬಿಸಿನೆಸ್; ಉದ್ಯಮಶೀಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ

ಹಳೆಯ ಒಡವೆ ಹೊಂದಿರುವವರು ಏನು ಮಾಡಬೇಕು?

ಹಳೆಯ ಒಡವೆ ಮಾರಬೇಕೆನ್ನುವ ಜನಸಾಮಾನ್ಯರಿಗೆ ಯಾವ ತೊಡಕೂ ಇರುವುದಿಲ್ಲ. ಹಳೆಯ ಒಡವೆಗಳಿಗೆ ಹಾಲ್​ಮಾರ್ಕ್ ಇರುವುದು ಕಡಿಮೆ. ಆದರೆ, ಹಾಲ್ಮಾರ್ಕ್ ಸೆಂಟರ್​ಗಳಿಗೆ ಹೋಗಿ ಒಡವೆಯ ಶುದ್ಧತೆಯ ಪರೀಕ್ಷೆ ಮಾಡಿಸಿಕೊಂಡು ಆ ನಂತರ ಅದನ್ನು ಮಾರಬಹುದು. ಈ ಹಳೆಯ ಒಡವೆಯನ್ನು ಕೊಳ್ಳುವ ಒಡವೆ ಅಂಗಡಿಯವರು ಈ ಚಿನ್ನವನ್ನು ಕರಗಿಸಿ ಹೊಸ ಒಡವೆ ಮಾಡಿ ಅದಕ್ಕೆ ಹಾಲ್​ಮಾರ್ಕ್ ಸರ್ಟಿಫಿಕೇಶನ್ ಮಾಡಿಸಬೇಕಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ