Finance Bill: ವಿಪಕ್ಷಗಳ ಗದ್ದಲದ ಮಧ್ಯೆ ಹಣಕಾಸು ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ; ಏನಿದು ಬಿಲ್ ವಿಶೇಷತೆ?
Lok Sabha Approves Finance Bill: ಲೋಕಸಭೆಯಲ್ಲಿ ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ಮಧ್ಯೆ 2023ರ ಹಣಕಾಸು ಮಸೂದೆಗೆ ಮಾರ್ಚ್ 24, ಶುಕ್ರವಾರ ಅನುಮೋದನೆ ಸಿಕ್ಕಿದೆ. ಬಹಳ ನಿರೀಕ್ಷೆಯ ಈ ಮಸೂದೆ 45 ತಿದ್ದುಪಡಿಗಳನ್ನು ಹೊಂದಿದೆ.
ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ಮಧ್ಯೆ 2023ರ ಹಣಕಾಸು ಮಸೂದೆಗೆ (Finance Bill 2023) ಮಾರ್ಚ್ 24, ಶುಕ್ರವಾರ ಅನುಮೋದನೆ ಸಿಕ್ಕಿದೆ. ಬಹಳ ನಿರೀಕ್ಷೆಯ ಈ ಮಸೂದೆಗೆ 45 ತಿದ್ದುಪಡಿಗಳನ್ನು ಮಾಡಲಾಗಿದೆ. ಮ್ಯೂಚುವಲ್ ಫಂಡ್ಗಳ ಮೇಲಿನ ಹೂಡಿಕೆಗಳನ್ನು ಕಿರು ಅವಧಿ ಲಾಭ ಗಳಿಕೆಯಾಗಿ (Shot Term Capital Gain) ಪರಿಗಣಿಸಿ, ಅವುಗಳ ಮೇಲೆ ತೆರಿಗೆ ವಿಧಿಸುವುದು ಈ 45 ತಿದ್ದುಪಡಿಯಲ್ಲಿ ಒಂದು. ಅಂದರೆ ಮ್ಯೂಚುವಲ್ ಫಂಡ್ನಿಂದ ಬರುವ ಲಾಭದ ಮೇಲೆ ನಿರ್ದಿಷ್ಟ ತೆರಿಗೆ (Tax on capital gain) ಹಾಕಲಾಗುತ್ತದೆ. ಹಣಕಾಸು ಮಸೂದೆಗೆ 45 ತಿದ್ದುಪಡಿ ಜೊತೆಗೆ ಇನ್ನಷ್ಟು 20 ಸೆಕ್ಷನ್ಗಳನ್ನು ಸೇರಿಸಲಾಗಿದೆ. ಬಜೆಟ್ನ ಪ್ರಕ್ರಿಯೆಯ ಭಾಗವಾಗಿ ಹಣಕಾಸು ಮಸೂದೆಯನ್ನು ಸಂಸತ್ನಲ್ಲಿ ಮಂಡನೆ ಮಾಡಲಾಗಿದೆ. ಬಜೆಟ್ನಲ್ಲಿ ಘೋಷಣೆಯಾದ ಕೆಲ ತೆರಿಗೆ ಕ್ರಮಗಳು ಹಣಕಾಸು ಮಸೂದೆಯಲ್ಲಿ ಅಡಕವಾಗಿದ್ದು, ಸಂಸತ್ನ ಪೂರ್ಣ ಅನುಮೋದನೆ ದೊರೆತ ಬಳಿಕ ಜಾರಿಗೆ ಬರುತ್ತವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ ಹಣಕಾಸು ಮಸೂದೆ ಮಂಡನೆ ಮಾಡುತ್ತಿರುವಂತೆಯೇ ವಿಪಕ್ಷಗಳ ಸದಸ್ಯರು ಪ್ರತಿಭಟನೆಗೆ ಇಳಿಸಿದರು. ಮಸೂದೆ ವಿರೋಧಿಸಿ ಗದ್ದಲ ನಡೆಸಿದ್ದಲ್ಲ, ಹಿಂಡನ್ಬರ್ಗ್ ರಿಸರ್ಚ್ ಕಂಪನಿ ಅದಾನಿ ಗ್ರೂಪ್ ಮೇಲೆ ಮಾಡಿದ ಆರೋಪದ ಮೇಲೆ ಜಂಟಿ ಸಂದೀಯ ಸಮಿತಿಯಿಂದ ತನಿಖೆ ಆಗಬೇಕೆಂದು ವಿಪಕ್ಷಗಳು ಒತ್ತಾಯಿಸಿದವು. ಗದ್ದಲ ಹೆಚ್ಚಾದಂತೆ ಲೋಕಸಭಾಧ್ಯಕ್ಷರು ಕಲಾಪವನ್ನು ಸ್ಥಗಿತಗೊಳಿಸಿ ಸೋಮವಾರಕ್ಕೆ ಮುಂದೂಡಿದರು. ಯಾವುದೇ ಚರ್ಚೆಯಾಗದೆಯೇ ಹಣಕಾಸು ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದಂತಾಯಿತು.
ಹಣಕಾಸು ಮಸೂದೆ ಮತ್ತು ತಿದ್ದುಪಡಿಯ ಪ್ರಮುಖ ಅಂಶಗಳು:
ಸಾಲಪತ್ರ, ಸರ್ಕಾರಿ ಬಾಂಡ್ ಇತ್ಯಾದಿ ಮ್ಯೂಚುವಲ್ ಫಂಡ್ಗಳು ಇನ್ಮುಂದೆ ತೆರಿಗೆ ವಿನಾಯಿತಿ ಭಾಗ್ಯ ತಂದುಕೊಡುವುದಿಲ್ಲ. ಒಂದು ಮ್ಯೂಚುವಲ್ ಫಂಡ್ ತನ್ನಲ್ಲಿನ ಹೂಡಿಕೆದಾರರ ಹಣದಲ್ಲಿ ಶೇ. 35ಕ್ಕಿಂತ ಹೆಚ್ಚು ಮೊತ್ತವನ್ನು ದೇಶೀಯ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದಲ್ಲಿ ಮಾತ್ರ ತೆರಿಗೆ ವಿನಾಯಿತಿ ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಅಂಥ ಮ್ಯೂಚುವಲ್ ಫಂಡ್ ಮೇಲೆ ಮಾಡಿದ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುವುದು ಇರಲಿ, ಲಾಭದ ತೆರಿಗೆಯನ್ನು ಸರ್ಕಾರ ವಿಧಿಸಿದೆ.
ಇದನ್ನೂ ಓದಿ: Jack Dorsey: ಅದಾನಿ ಆಯ್ತು, ಜ್ಯಾಕ್ ಡಾಸೀ ಮೇಲೆ ಹಿಂಡನ್ಬರ್ಗ್ ದಾಳಿ; 4,300 ಕೋಟಿ ಸಂಪತ್ತು ಕಳೆದುಕೊಂಡ ಟ್ವಿಟ್ಟರ್ ಸ್ಥಾಪಕ
ಸರ್ಕಾರಿ ಉದ್ಯೋಗಿಗಳ ಪಿಂಚಣಿ ಸಮಸ್ಯೆಗಳನ್ನು ಪರಾಮರ್ಶಿಸಲು ಕೇಂದ್ರ ಹಣಕಾಸು ಕಾರ್ಯದರ್ಶಿ ಅಡಿಯಲ್ಲಿ ಒಂದು ಸಮಿತಿ ರಚನೆಯಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ವಿದೇಶೀ ಪ್ರವಾಸಗಳಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿ ಮೂಲದಲ್ಲೇ ತೆರಿಗೆಯಿಂದ ತಪ್ಪಿಸಿಕೊಳ್ಳಲಾಗುತ್ತಿರುವ ಪ್ರಕರಣಗಳತ್ತ ಆರ್ಬಿಐ ಗಮನ ಹರಿಸುತ್ತಿದೆ ಎಂದೂ ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್ಟಿಟಿ) ಏರಿಕೆ
ಹಣಕಾಸು ಮಸೂದೆಯಲ್ಲಿ ಮಾಡಲಾಗಿರುವ ಮಹತ್ವದ ತಿದ್ದುಪಡಿಯಲ್ಲಿ ಎಸ್ಟಿಟಿ ತೆರಿಗೆ ಹೆಚ್ಚಳವೂ ಒಂದು. ಷೇರು ವಹಿವಾಟುಗಳ ಮೇಲಿನ ಎಸ್ಟಿಟಿ ತೆರಿಗೆಯನ್ನು ಶೇ. 25ರವರೆಗೂ ಏರಿಕೆ ಮಾಡಲಾಗಿದೆ. ಭಾರತದ ಷೇರು ವಿನಿಮಯ ಮಾರುಕಟ್ಟೆಯಲ್ಲಿ ಪಟ್ಟಿಯಾಗಿರುವ ಕಂಪನಿಗಳ ಷೇರುಗಳ ಮಾರಾಟ ಮತ್ತು ಖರೀದಿಗೆ ನೇರ ತೆರಿಗೆ ವಿಧಿಸಲಾಗುತ್ತದೆ. ಅದುವೇ ಎಸ್ಟಿಟಿ. ಒಬ್ಬ ಹೂಡಿಕೆದಾರ ಷೇರು ಖರೀದಿಸಿದಾಗ ಅಥವಾ ಮಾರಾಟ ಮಾಡಿದಾಗ ಎಸ್ಟಿಟಿ ಪಾವತಿಸಬೇಕು.
ಎಫ್ ಅಂಡ್ ಒ ವಹಿವಾಟಿನಲ್ಲಿ ಆಪ್ಷನ್ಸ್ ಕಾಂಟ್ರಾಕ್ಟ್ ಸೇಲ್ನಲ್ಲಿ ಒಂದು ಕೋಟಿ ರೂ ವಹಿವಾಟು ನಡೆದರೆ ವಿಧಿಸಲಾಗುವ ಎಸ್ಟಿಟಿಯು 1,700 ರೂನಿಂದ 2,100 ರೂಗೆ ಏರಿಕೆಯಾಗಿದೆ. ಇನ್ನು, ಫ್ಯೂಚರ್ಸ್ ಕಾಂಟ್ರಾಕ್ಟ್ ಸೇಲ್ನಲ್ಲಿ 1 ಕೋಟಿ ರೂ ವಹಿವಾಟಿಗೆ 10,000 ರೂ ಇದ್ದ ಎಸ್ಟಿಟಿ ತೆರಿಗೆ ಇದೀಗ 12,500 ರೂಪಾಯಿಗೆ ಹೆಚ್ಚಳವಾಗಿದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Fri, 24 March 23