IPL 2025: ಒಂದೇ ಪಂದ್ಯಕ್ಕೆ ರುಚಿ ಕಳೆದುಕೊಂಡ ಸಾಲ್ಟ್; ಆರ್ಸಿಬಿಗೆ ಹೊಸ ತಲೆನೋವು
Phil Salt Struggles: RCB's ಆರ್ಸಿಬಿ ತಂಡವು ಐಪಿಎಲ್ 2025ರಲ್ಲಿ ಅದ್ಭುತ ಆರಂಭ ಪಡೆದರೂ, ಫಿಲ್ ಸಾಲ್ಟ್ ಅವರ ಅಸ್ಥಿರ ಆಟ ತಂಡಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ. ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಾಲ್ಟ್, ನಂತರದ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಸಾಲ್ಟ್ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದರು.

2025 ರ ಐಪಿಎಲ್‌ನಲ್ಲಿ (IPL 2025) ಅದ್ಭುತ ಆರಂಭ ಪಡೆದುಕೊಂಡಿದ್ದ ಆರ್ಸಿಬಿ (RCB), ತಾನು ಆಡಿದ ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಮಣಿಸಿದ್ದ ರಜತ್ ಪಡೆ, ಎರಡನೇ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಮಣಿಸಿತ್ತು. ಇದೇ ಹುರುಪಿನೊಂದಿಗೆ ತವರಿನಲ್ಲಿ ಮೊದಲ ಪಂದ್ಯವನ್ನಾಡಿದ ಆರ್ಸಿಬಿ ತನ್ನ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಿಸಬೇಕಾಯಿತು. ತಂಡದ ಈ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣವಾಗಿತ್ತು. ಗುಜರಾತ್ ವಿರುದ್ಧದ 3ನೇ ಪಂದ್ಯದಲ್ಲಿ ತಂಡದ ಟಾಪ್ ಆರ್ಡರ್ ಮಕಾಡೆ ಮಲಗಿತ್ತು ಅದರಲ್ಲೂ ತಂಡಕ್ಕೆ ಪ್ರತಿ ಪಂದ್ಯದಲ್ಲೂ ಸ್ಫೋಟಕ ಆರಂಭ ಒದಗಿಸುವ ಯತ್ನದಲ್ಲಿ ಮೊದಲ ಓವರ್ನಲ್ಲೇ ವಿಕೆಟ್ ಕೈಚೆಲ್ಲುವ ಫಿಲ್ ಸಾಲ್ಟ್ (Phil Salt) ಅದ್ಯಾಕೋ ಮೊದಲ ಪಂದ್ಯದ ನಂತರ ಆರ್ಸಿಬಿ ಪಾಲಿಗೆ ಸಪ್ಪೆಯಾಗಿಬಿಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ಅರ್ಧಶತಕ
ಟೂರ್ನಿಯ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ್ದ ಸಾಲ್ಟ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ಕೇವಲ 31 ಎಸೆತಗಳನ್ನು ಎದುರಿಸಿದ್ದ ಸಾಲ್ಟ್ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 56 ರನ್ ಸಿಡಿಸಿದ್ದರು. ಆ ಬಳಿಕ ಸಿಎಸ್ಕೆ ವಿರುದ್ಧದ 2ನೇ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದ ಸಾಲ್ಟ್ ಬಿಗ್ ಇನ್ನಿಂಗ್ಸ್ ಅಲ್ಲದಿದ್ದರೂ 16 ಎಸೆತಗಳಲ್ಲಿ 32 ರನ್ಗಳ ಕಾಣಿಕೆ ನೀಡಿದ್ದರು.
ಉಳಿದೆರಡು ಪಂದ್ಯಗಳಲ್ಲಿ ವಿಫಲ
ಆದರೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದ ಸಾಲ್ಟ್ 13 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 14 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಸಾಲ್ಟ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಎಂದಿನಂತೆ ಆರಂಭಿಕನಾಗಿ ಕಣಕ್ಕಿಳಿದ ಸಾಲ್ಟ್, ಬೋಲ್ಟ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲಿ ಸುಂದರ ಕವರ್ ಡ್ರೈವ್ ಮಾಡಿ ಬೌಂಡರಿ ಕಲೆಹಾಕಿದರು. ಆದರೆ ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.
0.1 – FOUR! 🔥 0.2 – THUNDER BOULT! 💥#TrentBoult‘s love affair with wickets in the first over continue as he castles #PhilSalt! Absolute drama to start the #IPLRivalryWeek! 💪🏻
Watch the LIVE action ➡ https://t.co/H6co5trkpW#IPLonJioStar 👉 #MIvRCB | LIVE NOW on Star Sports… pic.twitter.com/4tO7M39GkS
— Star Sports (@StarSportsIndia) April 7, 2025
ಆರ್ಸಿಬಿಗೆ ತಲೆನೋವಾದ ಸಾಲ್ಟ್
ವಾಸ್ತವವಾಗಿ ಸಾಲ್ಟ್ ಪ್ರತಿ ಎಸೆತವನ್ನು ಬೌಂಡರಿಗಟ್ಟುವ ಇರಾದೆಯಲ್ಲೇ ಬ್ಯಾಟ್ ಬೀಸುತ್ತಿದ್ದಾರೆ. ಈ ಯತ್ನದಲ್ಲಿ ಸಾಲ್ಟ್ ಯಶಸ್ವಿಯಾಗಿದ್ದಕ್ಕಿಂತ ವಿಫಲವಾಗಿದ್ದೆ ಹೆಚ್ಚು. ಗುಜರಾತ್ ವಿರುದ್ಧದ ಪಂದ್ಯದಲ್ಲೂ ಸಿರಾಜ್ ವಿರುದ್ಧ ಬೌಂಡರಿ ಬಾರಿಸುವ ಯತ್ನದಲ್ಲಿ ಸಾಲ್ಟ್ ಕ್ಲೀನ್ ಬೌಲ್ಡ್ ಆಗಿದ್ದರು. ಇದೀಗ ಮುಂಬೈ ವಿರುದ್ಧದ ಪಂದ್ಯದಲ್ಲೂ ಅದೇ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ಸಾಲ್ಟ್ ಅವರ ವೈಫಲ್ಯ ಇದೀಗ ಆರ್ಸಿಬಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಯಾವುದೇ ತಂಡಕ್ಕೆ ಆರಂಭ ಉತ್ತಮವಾಗಿರಬೇಕು ಆಗ ಮಾತ್ರ ತಂಡ ಅಂದುಕೊಂಡಂತಹ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ. ಆದರೆ ಆರ್ಸಿಬಿ ಪಾಲಿಗೆ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಲ್ಟ್ ಬೇಗನೇ ಫಾರ್ಮ್ ಕಂಡುಕೊಳ್ಳುವುದು ಆರ್ಸಿಬಿಗೆ ಅತ್ಯವಶ್ಯಕವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Mon, 7 April 25