ನವದೆಹಲಿ, ಜನವರಿ 1: ಹೊಸ ವರ್ಷದ ಮೊದಲ ದಿನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. ಜನವರಿ 1ರಿಂದ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ (LPG Commercial Cylinder) ಬೆಲೆ ದೇಶದ ಕೆಲವು ನಗರಗಳಲ್ಲಿ ತುಸು ಕಡಿಮೆಯಾಗಿದೆ. ಆದರೆ, ಬೆಲೆ ಇಳಿಕೆ ಪ್ರಮಾಣದಲ್ಲಿ ಪ್ರಮುಖ ನಗರಗಳಿಗೆ ವ್ಯತ್ಯಾಸವಿದೆ. ದೇಶದ ಯಾವ ನಗರದಲ್ಲಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಲೆ ಇಳಿಕೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,755.50 ರೂ. ಆಗಿದೆ. ಈ ಮೊದಲು ಈ ದರ 1,757 ರೂ. ಇತ್ತು. ಹೀಗಾಗಿ ದೆಹಲಿಯಲ್ಲಿ ಒಂದೂವರೆ ರೂಪಾಯಿಯಷ್ಟು ಬೆಲೆ ಇಳಿಕೆಯಾದಂತಾಗಿದೆ. ಚೆನ್ನೈನಲ್ಲಿ, ಎಲ್‌ಪಿಜಿ ಬೆಲೆಯನ್ನು 4.50 ರೂ ಕಡಿತಗೊಳಿಸಲಾಗಿದೆ ಮತ್ತು 19 ಕೆಜಿ ಸಿಲಿಂಡರ್ ಬೆಲೆ ಈಗ 1,924.50 ರೂ. ಆಗಿದೆ.
ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1.50 ರೂಪಾಯಿ ಇಳಿದು 1,708.50 ರೂಪಾಯಿಗೆ ತಲುಪಿದೆ. ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಂದು 50 ಪೈಸೆ ಏರಿಕೆಯಾಗಿದ್ದು, 1,869 ರೂ.ಗೆ ಆಗಿದೆ.
ಭಾರತೀಯ ತೈಲ ಕಂಪನಿಗಳು ಈ ಹಿಂದೆ ಡಿಸೆಂಬರ್ 22 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದ್ದವು. ಅದಕ್ಕೂ ಮುನ್ನ ಡಿಸೆಂಬರ್ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಅಗ್ಗವಾಗಿದ್ದವು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ.
ಇದನ್ನೂ ಓದಿ: ಹೊಸ ವರ್ಷದಂದು ಬಿಹಾರದಲ್ಲಿ ಪೆಟ್ರೋಲ್ ದರ ಕೊಂಚ ಏರಿಕೆ, ಪಂಜಾಬ್ನಲ್ಲಿ ತುಸು ಇಳಿಕೆ
ಆದರೆ ಗೃಹ ಬಳಕೆಯ 14 ಕೆಜಿ ಗ್ಯಾಸ್ ಸಿಲಿಂಡರ್ ದರ ಸ್ಥಿರವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಮುಂಬೈನಲ್ಲಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆ 902.50 ರೂ., ದೆಹಲಿಯಲ್ಲಿ 903 ರೂ., ಚೆನ್ನೈನಲ್ಲಿ 918.50 ರೂ. ಕೋಲ್ಕತ್ತಾದಲ್ಲಿ 929 ರೂ. ಆಗಿದೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:36 am, Mon, 1 January 24