ನವದೆಹಲಿ: ಭಾರತದ ವಾಹನ ತಯಾರಕ ಸಂಸ್ಥೆ ಮಹೀಂದ್ರ ಅಂಡ್ ಮಹೀಂದ್ರ ಮೇ 24ರಂದು ತನ್ನ ಅಂಗಸಂಸ್ಥೆಯಾದ ಮಹೀಂದ್ರ ಸಿಐಇ ಆಟೊಮೋಟಿವ್ನಲ್ಲಿನ (Mahindra CIE) ತನ್ನೆಲ್ಲಾ ಪಾಲಿನ ಷೇರುಗಳನ್ನು ಮಾರಿದೆ. ಶೇ. 3.196ರಷ್ಟಿರುವ ಸುಮಾರು 1,21,22,068 (1.21 ಕೋಟಿ) ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದೆ. ಒಂದು ಷೇರಿಗೆ 447.6501 ರೂನಂತೆ ಮಹೀಂದ್ರ ಅಂಡ್ ಮಹೀಂದ್ರಗೆ ಬೆಲೆ ಸಿಕ್ಕಿದೆ. ಅಂದರೆ, ಮಹೀಂದ್ರ ಅಂಡ್ ಮಹೀಂದ್ರ ಸುಮಾರು 542 ಕೋಟಿ ರೂಗಳಿಗೆ ಈ ಎಲ್ಲಾ ಷೇರುಗಳನ್ನು ಮಾರಿದೆ. ಇದರೊಂದಿಗೆ ಮಹೀಂದ್ರ ಸಿಐಇಯಲ್ಲಿನ ಮಹೀಂದ್ರ ಅಂಡ್ ಮಹೀಂದ್ರ ಷೇರುಪಾಲು ಈಗ ಶೂನ್ಯಕ್ಕೆ ಬಂದಿದೆ. ಕುತೂಹಲವೆಂದರೆ ಈ ಬೆಳವಣಿಗೆ ಬೆನ್ನಲ್ಲೇ ಮಹೀಂದ್ರ ಸಿಇಐ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಈ ಎರಡೂ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಗಿದೆ. ಮಹೀಂದ್ರ ಸಿಐಇಯ ಷೇರುಬೆಲೆ ಕಳೆದ ಒಂದು ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಿದೆ.
ಮಹೀಂದ್ರ ಸಿಇಐ ಎಂಬುದು ಸ್ಪೇನ್ ಮೂಲದ ಸಿಐಇ ಆಟೋಮೋಟಿವ್ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಕಂಪನಿಗಳು ಜಂಟಿಯಾಗಿ ಸ್ಥಾಪಿಸಿರುವ ಸಂಸ್ಥೆ. 2013ರಲ್ಲಿ ಇದರ ಸ್ಥಾಪನೆಯಾಗಿದ್ದು. ಕ್ರಾಂಕ್ಶಾಫ್ಟ್, ಕ್ಯಾಸ್ಟಿಂಗ್ಸ್, ಗೇರ್, ಅಲೂಮಿನಿಯಂ ಕ್ಯಾಸ್ಟಿಂಗ್ಸ್ ಇತ್ಯಾದಿ ವಾಹನ ತಯಾರಿಕೆ ಉದ್ಯಮಕ್ಕೆ ಬೇಕಾದ ಸರಕುಗಳನ್ನು ತಯಾರಿಸುವ ವ್ಯವಹಾರದಲ್ಲಿ ಸಿಐಇ. ಇದರ ಉತ್ಪನ್ನಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತವೆ.
ಕೆಲ ತಿಂಗಳ ಹಿಂದಿನವರೆಗೂ ಸಿಐಇನಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಶೇ. 9.25ರಷ್ಟು ಪಾಲು ಹೊಂದಿತ್ತು. ಮಾರ್ಚ್ ತಿಂಗಳಲ್ಲಿ ಶೇ. 6ರಷ್ಟು ಪಾಲನ್ನು ಮಾರಿತ್ತು. ಈಗ ಉಳಿದಿರುವ ಎಲ್ಲಾ ಪಾಲನ್ನು ಮಾರಿದೆ ಮಹೀಂದ್ರ ಅಂಡ್ ಮಹೀಂದ್ರ.
ಮಹೀಂದ್ರ ಅಂಡ್ ಮಹೀಂದ್ರದ ಪೂರ್ಣ ಪಾಲು ಕಳಚಿಕೊಂಡ ಬಳಿಕ ಸಿಐಇ ಷೇರು ಬೆಲೆ 493 ರೂಗೆ ಏರಿ ಹೋಗಿತ್ತು. ಇದು ಕಳೆದ 52 ವಾರದಲ್ಲಿ ಗರಿಷ್ಠ ಬೆಲೆಯಾಗಿದೆ. ಇವತ್ತು ಮೇ 25ರಂದು ಬೆಳಗಿನ ವಹಿವಾಟಿನಲ್ಲಿ ಇದರ ಷೇರುಬೆಲೆ 467 ರೂಗೆ ಇಳಿದಿದೆಯಾದರೂ ಮುಂದಿನ ದಿನಗಳಲ್ಲಿ ಮಹೀಂದ್ರ ಸಿಐಇ ಷೇರು ಮುಂದಡಿ ಇಡುತ್ತಾ ಹೋಗುತ್ತದೆ ಎಂಬುದು ತಜ್ಞರ ಅಂದಾಜು.
ಇದನ್ನೂ ಓದಿ: Bernard Arnault: ವಿಶ್ವ ನಂ. 1 ಶ್ರೀಮಂತ ಆರ್ನಾಲ್ಟ್ ಒಂದೇ ದಿನದಲ್ಲಿ 11 ಬಿಲಿಯನ್ ಡಾಲರ್ ಕಳೆದುಕೊಳ್ಳಲು ಏನು ಕಾರಣ?
ಇನ್ನು, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಷೇರು ನಿನ್ನೆ ಉತ್ತಮವಾಗಿ ಏರಿಕೆ ಕಂಡಿತ್ತು. ಆದರೆ, ಸಿಐಇನಂತೆ ಮಹೀಂದ್ರ ಅಂಡ್ ಮಹೀಂದ್ರ ಷೇರುಬೆಲೆ ಇಂದು ಮೇ 25ರಂದು ಬೆಳಗಿನ ವಹಿವಾಟಿನಲ್ಲಿ 10 ಅಂಕಗಳಷ್ಟು ಕುಸಿತ ಕಂಡಿದೆ.