Rs 2000 Notes: ಬ್ಯಾಂಕ್ನಲ್ಲಿ ನೀವು 2,000 ರೂ ಮರಳಿಸಲು ಪ್ಯಾನ್ ನಂಬರ್ ಕೊಡಬೇಕಾ?
PAN rule for Rs 2,000 Note Deposit: ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆ ನೋಟುಗಳನ್ನು ಮರಳಿಸಲು ಬ್ಯಾಂಕಿಗೆ ಪ್ಯಾನ್ ನಂಬರ್ ಕೊಡಬೇಕು ಎಂಬಂತಹ ಸುದ್ದಿ ಕೆಲವೆಡೆ ಹರಿದಾಡುತ್ತಿದೆ. ಇದು ನಿಜವಾ? ಇಲ್ಲಿದೆ ಮಾಹಿತಿ.
ಬೆಂಗಳೂರು: ಆರ್ಬಿಐ ಇದೀಗ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಇದೀಗ 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಿ ಬೇರೆ ಮುಖಬೆಲೆಯ ನೋಟುಗಳೊಂದಿಗಿಗೆ ವಿನಿಮಯ (Note Exchange) ಮಾಡಿಕೊಳ್ಳಬಹುದು. ಅಥವಾ ತಮ್ಮ 2,000 ರೂ ನೋಟುಗಳನ್ನು ಬ್ಯಾಂಕಿಗೆ ಕೊಟ್ಟು ತಮ್ಮ ಖಾತೆಗೆ ಹಣವನ್ನು ಜಮೆ ಮಾಡಿಕೊಳ್ಳಬಹುದು. ಜನರಿಂದ ಸ್ವೀಕರಿಸಲ್ಪಟ್ಟ 2,000 ರೂ ನೋಟುಗಳನ್ನು ಬ್ಯಾಂಕುಗಳು ಆರ್ಬಿಐಗೆ ರವಾನಿಸುತ್ತವೆ. ಭಾರತದಲ್ಲಿ ಚಲಾವಣೆಯಲ್ಲಿರುವ ಒಟ್ಟೂ ನೋಟುಗಳಲ್ಲಿ ಶೇ. 10.8ರಷ್ಟು ಮಾತ್ರ 2,000 ರೂ ಮುಖಬೆಲೆಯ ನೋಟುಗಳಿವೆ. ಮಾರುಕಟ್ಟೆಯಲ್ಲಿ ಸದ್ಯ 3.62 ಲಕ್ಷ ಕೋಟಿ ರೂನಷ್ಟು ಮೌಲ್ಯದ 2,000 ರೂ ನೋಟುಗಳಿವೆ. ಇವುಗಳೆಲ್ಲವೂ ಮರಳುತ್ತಿರುವಂತೆಯೇ ಆರ್ಬಿಐ ಅಷ್ಟೇ ಮೌಲ್ಯದ ವಿವಿಧ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.
2,000 ರೂ ನೋಟು ಮರಳಿಸುವುದು ಹೇಗೆ?
2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸುವ ಅವಕಾಶ ಮೇ 23ರಿಂದಲೇ ಆರಂಭವಾಗಿದೆ. ಸೆಪ್ಟಂಬರ್ 30ರವರೆಗೂ ಕಾಲಾವಕಾಶ ಕೊಡಲಾಗಿದೆ. 2,000 ರೂ ನೋಟು ಹೊಂದಿರುವ ಜನರು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಬಹುದು, ಅಥವಾ ಬೇರೆ ನಗದು ಹಣದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
ಇದನ್ನೂ ಓದಿ: ITR Forms: ಐಟಿ ರಿಟರ್ನ್ ಸಲ್ಲಿಕೆಗೆ 4 ಫಾರ್ಮ್ಗಳ ಆಯ್ಕೆ; ಯಾರಿಗೆ ಇವೆ ಈ ಐಟಿಆರ್ ಫಾರ್ಮ್ಗಳು, ಇಲ್ಲಿದೆ ಡೀಟೇಲ್ಸ್
2,000 ರೂ ನೋಟು ಠೇವಣಿ ಇಡಲು ಪ್ಯಾನ್ ನಂಬರ್ ಬೇಕೆ?
2,000 ರೂ ನೋಟುಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಇಡಬೇಕೆಂದರೆ ಪ್ಯಾನ್ ನಂಬರ್ ಕೊಡಬೇಕು ಎಂಬಂತಹ ಸುದ್ದಿ ಚಾಲನೆಯಲ್ಲಿದೆ. ಆದರೆ, ಇದು ಅರ್ಧಸತ್ಯ ಮಾತ್ರ. ಆದಾಯ ತೆರಿಗೆ ನಿಯಮದ ಪ್ರಕಾರ ಬ್ಯಾಂಕ್ ಖಾತೆಗೆ 50,000 ರೂ ಜಮೆ ಮಾಡಿದಾಗ ಪ್ಯಾನ್ ನಂಬರ್ ಕೊಡಬೇಕು. ಅಥವಾ ಒಂದು ಖಾತೆಯಿಂದ ಇನ್ನೊಂದು ಖಾತೆಗೆ 50,000 ರೂಗಿಂತ ಹೆಚ್ಚು ಮೊತ್ತದ ವಹಿವಾಟು ನಡೆದಾಗಲೂ ಪ್ಯಾನ್ ನಂಬರ್ ಕೊಡಬೇಕು. ಅದೇ ನಿಯಮ 2,000 ರೂ ನೋಟು ಜಮಾವಣೆಗೂ ಅನ್ವಯ ಆಗುತ್ತದೆ. ಒಂದು ದಿನದಲ್ಲಿ 50,000 ರೂಗಿಂತ ಕಡಿಮೆ ಬೆಲೆಯ 2,000 ರೂ ನೋಟುಗಳನ್ನು ಬ್ಯಾಂಕ್ ಖಾತೆಗೆ ಡೆಪಾಸಿಟ್ ಇಡಲು ಪ್ಯಾನ್ ನಂಬರ್ ಕೊಡುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: PF Advance: ಮನೆ ನಿರ್ಮಾಣಕ್ಕೆ ಪಿಎಫ್ ಅಡ್ವಾನ್ಸ್ ಪಡೆಯುವುದು ಹೇಗೆ? ಇಲ್ಲಿದೆ ವಿಧಾನ
ಬ್ಯಾಂಕುಗಳಲ್ಲಿ 2,000 ರೂ ನೋಟು ವಿನಿಮಯ ಹೇಗೆ?
ಯಾವುದೇ ಬ್ಯಾಂಕಿನ ಯಾವುದೇ ಶಾಖೆಗೆ ಹೋಗಿಯೂ 2,000 ರೂ ನೋಟುಗಳನ್ನು ಬದಲಾಯಿಸಿಕೊಂಡು ಬರಬಹುದು ಅಥವಾ ಖಾತೆಗೆ ಜಮೆ ಮಾಡಬಹುದು. ಡೆಪಾಸಿಟ್ ಮಾಡುವುದಕ್ಕೆ ಮಾಮೂಲಿಯ ಬ್ಯಾಂಕ್ ನಿಯಮಗಳು ಪಾಲಿಸಿದರೆ ಸಾಕು. ಅಂದರೆ ಡೆಪಾಸಿಟ್ ಸ್ಲಿಪ್ ತುಂಬಿಸಿ ಸಲ್ಲಿಸಬಹುದು. ನೋಟು ಬದಲಾವಣೆ ಮಾಡಬೇಕೆಂದರೆ ಅದಕ್ಕೆಂದೇ ಪ್ರತ್ಯೇಕ ಸ್ಲಿಪ್ಗಳು ಇದ್ದು, ಅದನ್ನು ತುಂಬಿಸಿ ನೋಟು ವಿನಿಮಯ ಮಾಡಿಕೊಳ್ಳಬಹುದು. ಎಸ್ಬಿಐ ಮೊದಲಾದ ಕೆಲ ಬ್ಯಾಂಕುಗಳಲ್ಲಿ ಈ ಸ್ಲಿಪ್ಗಳ ಅಗತ್ಯವೂ ಇಲ್ಲದೇ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ.
ಆದರೆ, ಎಲ್ಲಾ ಬ್ಯಾಂಕುಗಳಲ್ಲೂ 2,000 ರೂ ನೋಟು ವಿನಿಮಯಕ್ಕೆ ಕೆಲ ಮಿತಿಗಳುಂಟು. ಒಮ್ಮೆಗೆ 10 ನೋಟುಗಳನ್ನು ಮಾತ್ರ ಎಕ್ಸ್ಚೇಂಜ್ ಮಾಡಬಹುದು. ಹೆಚ್ಚು ನೋಟು ಇದ್ದರೆ ಇನ್ನೊಮ್ಮೆ ಸರದಿಯಲ್ಲಿ ಬಂದು ನಿಂತು ವಿನಿಮಯ ಮಾಡಿಕೊಳ್ಳಬಹುದು.