ITR Forms: ಐಟಿ ರಿಟರ್ನ್ ಸಲ್ಲಿಕೆಗೆ 4 ಫಾರ್ಮ್ಗಳ ಆಯ್ಕೆ; ಯಾರಿಗೆ ಇವೆ ಈ ಐಟಿಆರ್ ಫಾರ್ಮ್ಗಳು, ಇಲ್ಲಿದೆ ಡೀಟೇಲ್ಸ್
Income Tax Returns: ಇನ್ಕಂ ಟ್ಯಾಕ್ಸ್ ವೆಬ್ಸೈಟ್ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವಾಗ ನಿಮಗೆ 4 ಫಾರ್ಮ್ಗಳು ಕಾಣಸಿಗುತ್ತವೆ. ಐಟಿಆರ್ 1, ಐಟಿಆರ್ 2, ಐಟಿಆರ್ 3, ಐಟಿಆರ್ 4, ಈ ನಾಲ್ಕು ಫಾರ್ಮ್ಗಳಲ್ಲಿ ಯಾವುದನ್ನು ಆರಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.
ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ (IT Return Filing) ಮಾಡುವ ಸಮಯ ಶುರುವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಸಂಬಳದಾರರು ಸೇರಿದಂತೆ ಸಾಮಾನ್ಯ ತೆರಿಗೆದಾರರಿಗೆ ಜುಲೈ 31ರವರೆಗೆ ಐಟಿಆರ್ ಸಲ್ಲಿಸಲು ಕಾಲಾವಕಾಶ ಇರುತ್ತದೆ. ಐಟಿ ರಿಟರ್ನ್ ಎಂಬುದು ಬಹಳ ಮುಖ್ಯ. ಒಂದು ಹಣಕಾಸು ವರ್ಷದಲ್ಲಿ ಎಲ್ಲಾ ಮೂಲಗಳಿಂದ ನಿಮ್ಮ ಆದಾಯ ಎಷ್ಟಿತ್ತು, ನೀವೆಷ್ಟು ತೆರಿಗೆ ಕಟ್ಟಿದ್ದೀರಿ, ಎಷ್ಟು ತೆರಿಗೆ ವಿನಾಯಿತಿಗೆ ಅರ್ಹರಿದ್ದೀರಿ ಎಂಬುದನ್ನೆಲ್ಲಾ ಐಟಿಆರ್ನಲ್ಲಿ ಘೋಷಿಸುವ ಅವಕಾಶ ನಿಮಗೆ ಸಿಗುತ್ತದೆ. ಇನ್ಕಂ ಟ್ಯಾಕ್ಸ್ ವೆಬ್ಸೈಟ್ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವಾಗ ನಿಮಗೆ 4 ಫಾರ್ಮ್ಗಳು ಕಾಣಸಿಗುತ್ತವೆ. ಐಟಿಆರ್ 1, ಐಟಿಆರ್ 2, ಐಟಿಆರ್ 3, ಐಟಿಆರ್ 4, ಈ ನಾಲ್ಕು ಫಾರ್ಮ್ಗಳಲ್ಲಿ ಯಾವುದನ್ನು ಆರಿಸಿ ಭರ್ತಿ ಮಾಡಿ ಕಳುಹಿಸಬೇಕು ಎಂಬ ಗೊಂದಲ ಬರುವುದು ಸಹಜ. ಈ ಹಿನ್ನೆಲೆಯಲ್ಲಿ ಈ ನಾಲ್ಕು ಫಾರ್ಮ್ಗಳು ಯಾರಿಗಾಗಿ ಇವೆ, ನಾವು ಆರಿಸಿಕೊಳ್ಳಬೇಕಾದ ಫಾರ್ಮ್ ಯಾವುದು ಎಂಬ ವಿವರ ಇಲ್ಲಿದೆ.
ಐಟಿಆರ್ 1: ತೆರಿಗೆಗೆ ಅರ್ಹವಾಗಿರುವ ಆದಾಯ 50 ಲಕ್ಷ ರೂ ಒಳಗೆ ಇರುವ ಬಹುತೇಕ ಸಂಬಳದಾರರಿಗೆ ಈ ಫಾರ್ಮ್ 1 ಅನ್ವಯ ಆಗುತ್ತದೆ. ಸಂಬಳ ಅಲ್ಲದೇ, ಡಿವಿಡೆಂಡ್, ಬ್ಯಾಂಕ್ ಬಡ್ಡಿ ಮತ್ತಿತರ ಮೂಲಗಳಿಂದ ಅವರಿಗೆ ಆದಾಯ ಬರುತ್ತಿರಬಹುದು. ಒಂದು ಮನೆಯ ಮಾಲೀಕತ್ವ ಹೊಂದಿರುವುದು, ಕೃಷಿ ಆದಾಯ ವರ್ಷಕ್ಕೆ 5,000 ರೂಗಿಂತ ಕಡಿಮೆ ಇದ್ದರೆ ಈ ಫಾರ್ಮ್ ಆರಿಸಿಕೊಳ್ಳಬೇಕು. ಎನ್ಐಆರ್ಗಳು ಹಾಗೂ ತೆರಿಗೆಗೆ ಅರ್ಹವಾಗಿರುವ ಆದಾಯ 50 ಲಕ್ಷ ರೂ ಮೇಲ್ಪಟ್ಟವರಿಗೆ ಈ ಫಾರ್ಮ್ ಅಲ್ಲ. ಐಟಿಆರ್1 ಫಾರ್ಮ್ಗೆ ಸಹಜ್ ಫಾರ್ಮ್ ಎಂದೂ ಕರೆಯಲಾಗುತ್ತದೆ.
ಐಟಿಆರ್ 2: ತೆರಿಗೆ ಅನ್ವಯ ಆಗುವಂತಹ ಆದಾಯ 50 ಲಕ್ಷ ರೂಗಿಂತ ಹೆಚ್ಚಿದ್ದರೆ ಐಟಿಆರ್2 ಫಾರ್ಮ್ ಅನ್ನು ಆರಿಸಿಕೊಳ್ಳಬಹುದು. ಎನ್ಆರ್ಐಗಳೂ ಈ ಫಾರ್ಮ್ ತುಂಬಿಸಬೇಕು. ಲಿಸ್ಟೆಡ್ ಅಲ್ಲದ ಷೇರುಗಳನ್ನು ಹೊಂದಿದವರು, ಕಂಪನಿಯ ನಿರ್ದೇಶಕರಾದವರು, ವಿದೇಶಗಳಲ್ಲಿ ಆಸ್ತಿ ಹೊಂದಿದವರು, ಜೂಜಿನಿಂದ ಆದಾಯ ಪಡೆದವರು ಇವರೆಲ್ಲರೂ 50 ಲಕ್ಷ ರೂಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿದರೂ ಕೂಡ ಐಟಿಆರ್ 1 ಬದಲು ಐಟಿಆರ್2 ಫಾರ್ಮ್ ಅನ್ನೇ ಸಲ್ಲಿಸಬೇಕು. ಆದರೆ, ಬ್ಯುಸಿನೆಸ್ ಅಥವಾ ವೃತ್ತಿಪರ ಕಾರ್ಯಗಳಿಂದ ಆದಾಯ ಪಡೆಯುತ್ತಿರುವವರು ಈ ಫಾರ್ಮ್ ಬಳಸುವಂತಿಲ್ಲ.
ಇದನ್ನೂ ಓದಿ: IT Returns: ಐಟಿ ರಿಟರ್ನ್ಸ್ ಫೈಲ್ ಮಾಡುವ ಟೈಮ್ ಬಂತು; ಐಟಿಆರ್-1, ಐಟಿಆರ್-4 ಫಾರ್ಮ್ ಸಲ್ಲಿಸುವುದು ಹೇಗೆ? ಇಲ್ಲಿದೆ ವಿಧಾನ
ಐಟಿಆರ್ 3: ಇದು ಮಾಸ್ಟರ್ ಐಟಿಆರ್ ಫಾರ್ಮ್. ಎಲ್ಲಾ ರೀತಿಯ ಆದಾಯಗಳನ್ನು ಇದರಲ್ಲಿ ತೋರಿಸಬಹುದು. ಒಬ್ಬ ವ್ಯಕ್ತಿಗೆ ಎದುರಾಗುವ ಎಲ್ಲಾ ರೀತಿಯ ತೆರಿಗೆ ನಿದರ್ಶನಗಳನ್ನು ಈ ಫಾರ್ಮ್ನಲ್ಲಿ ತೋರಿಸಬಹುದು. ಬ್ಯುಸಿನೆಸ್, ವೃತ್ತಿಯಿಂದ ಆದಾಯ ಹೊಂದಿದವರು, 50 ಲಕ್ಷ ರೂಗಿಂತ ಹೆಚ್ಚು ಆದಾಯ ಹೊಂದಿದವರು, ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿದವರು ಐಟಿಆರ್ 3 ಬಳಸಬೇಕು. ಕಂಪನಿಯ ನಿರ್ದೇಶಕರು, ಪಾರ್ಟ್ನರ್ಗಳಿಗೂ ಇದು ಅನ್ವಯ ಆಗುತ್ತದೆ. ಬೇರೆ ಯಾವುದೇ ಫಾರ್ಮ್ಗೆ ಅರ್ಹರಾಗದವರು ಐಟಿಆರ್ 3 ಅನ್ನು ಬಳಸಬಹುದು.
ಐಟಿಆರ್ 4: ಭಾರತದಲ್ಲಿರುವ ವ್ಯಕ್ತಿಗಳು, ಪಾರ್ಟ್ನರ್ಶಿಪ್ ಸಂಸ್ಥೆಗಳು ಈ ಫಾರ್ಮ್ ಬಳಸಬಹುದು. ಇವರ ಬ್ಯುಸಿನೆಸ್ ಆದಾಯ ಐಟಿ ಸೆಕ್ಷನ್ 44ಎಡಿ ಮತ್ತು 44ಎಇ ಅಡಿಯಲ್ಲಿ ನಮೂದಾಗಿರುವ ಇನ್ಕಮ್ ಸ್ಕೀಮ್ಗೆ ಅನುಗುಣವಾಗಿರಬೇಕು. ಸೆಕ್ಷನ್ 44ಎಡಿಎ ಅಡಿಯಲ್ಲಿರುವ ಇನ್ಕಮ್ ಸ್ಕೀಮ್ಗೆ ಅನುಗುಣವಾದ ವೈಯಕ್ತಿಕ ಆದಾಯ ಇರಬೇಕು.
ಸದ್ಯದ ಮಟ್ಟಿಗೆ ಐಟಿಆರ್ 1 ಮತ್ತು 4 ಫಾರ್ಮ್ಗಳನ್ನು ಮಾತ್ರ ಇನ್ಕಂ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ನಲ್ಲಿ ಎನೇಬಲ್ ಮಾಡಲಾಗಿದೆ. ಮೇಲಾಗಿ, ನಿಮ್ಮ ನಮೂದಿತ ಆದಾಯಕ್ಕೆ ಅನುಗುಣವಾಗಿ ಸೂಕ್ತವಾದ ಫಾರ್ಮ್ ಅನ್ನು ಪೋರ್ಟಲ್ನಲ್ಲಿಯೇ ಸ್ವಯಂಚಾಲಿತವಾಗಿ ಆಯ್ಕೆ ಮಾಡಲಾಗಿರುತ್ತದೆ.