FD Rates: ಬಡ್ಡಿ ಮೇಲೆ ಟಿಡಿಎಸ್; ನಿಮ್ಮ ಎಫ್ಡಿ ಹಣಕ್ಕೆ ನೀವಂದುಕೊಂಡಷ್ಟು ಸಿಗಲ್ಲ ರಿಟರ್ನ್ಸ್; ಇಲ್ಲಿದೆ ಡೀಟೇಲ್ಸ್
TDS Effect On FD Returns: ಎಫ್ಡಿಯಿಂದ ನೀವು ನಿರಿಕ್ಷಿಸಿದಷ್ಟು ರಿಟರ್ನ್ಸ್ ಸಿಗುವುದಿಲ್ಲ. ಒಂದು ವರ್ಷದ ಎಫ್ಡಿಗೆ ಶೇ. 7ರಷ್ಟು ಬಡ್ಡಿ ಇದೆ ಎಂದರೂ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿ ಹಣ ಶೇ. 6ಕ್ಕಿಂತ ಕಡಿಮೆ ಆಗಿರುತ್ತದೆ. ಹೌದು, ಇದಕ್ಕೆ ಕಾರಣ ಟಿಡಿಎಸ್.
ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (FD- Fixed Deposits) ಪ್ಲಾನ್ಗಳು ಜನರ ಅಚ್ಚುಮೆಚ್ಚಿನ ಹೂಡಿಕೆ ಯೋಜನೆಗಳಾಗಿವೆ. ಅತ್ಯಂತ ಸುಲಭ ಹಾಗು ಸರಳವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ತಮ್ಮ ಉಳಿತಾಯ ಹಣವನ್ನು ಎಫ್ಡಿ ಮೇಲೆ ಹಾಕುವುದುಂಟು. ಈಗ ಬಹುತೇಕ ಎಲ್ಲಾ ಬ್ಯಾಂಕುಗಳೂ ಎಫ್ಡಿಗೆ ಬಡ್ಡಿ ದರಗಳನ್ನು ಹೆಚ್ಚಿಸಿ ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತಿವೆ. ಕೆಲ ಸ್ಕೆಡ್ಯೂಲ್ಡ್ ಕೋ ಆಪರೇಟಿವ್ ಬ್ಯಾಂಕುಗಳು ಎಫ್ಡಿಗೆ ಶೇ. 9.5ರವರೆಗೂ ಬಡ್ಡಿ ಆಫರ್ ಮಾಡುತ್ತಿವೆ. ಜನರು ಇಷ್ಟು ಬಡ್ಡಿಗೆ ಆಕರ್ಷಿತರಾಗವುದು ಸಹಜ. ಶೇ. 8ಕ್ಕಿಂತ ಹೆಚ್ಚಿನ ಬಡ್ಡಿ ದರ ಉತ್ತಮವೇ. ಆದರೆ, ಎಫ್ಡಿಯಿಂದ ನೀವು ನಿರಿಕ್ಷಿಸಿದಷ್ಟು ರಿಟರ್ನ್ಸ್ ಸಿಗುವುದಿಲ್ಲ ಎಂಬುದೂ ನಿಜ. ಒಂದು ವರ್ಷದ ಎಫ್ಡಿಗೆ ಶೇ. 7ರಷ್ಟು ಬಡ್ಡಿ ಬರುತ್ತದೆ ಎಂದು ಹೇಳಲಾದರೂ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿ ಹಣ ಶೇ. 6ಕ್ಕಿಂತ ಕಡಿಮೆ ಆಗಿರುತ್ತದೆ. ಹೌದು, ಇದಕ್ಕೆ ಕಾರಣ ಬಡ್ಡಿ ಹಣಕ್ಕೆ ವಿಧಿಸಲಾಗುವ ಟಿಡಿಎಸ್.
ಐಟಿ ನಿಯಮ ಪ್ರಕಾರ ನಿಶ್ಚಿತ ಠೇವಣಿಯಿಂದ ಸಿಗುವ ಬಡ್ಡಿ ಹಣಕ್ಕೆ ಶೇ. 10ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಉದಾಹರಣೆಗೆ, ಎಸ್ಬಿಐ, ಎಚ್ಡಿಎಫ್ಸಿ ಇತ್ಯಾದಿ ಬ್ಯಾಂಕುಗಳಲ್ಲಿ 6 ತಿಂಗಳ ನಿಶ್ಚಿತ ಠೇವಣಿಗಳಿಗೆ ಶೇ. 5ರಷ್ಟು ಬಡ್ಡಿ ಕೊಡಲಾಗುತ್ತದೆ. 6 ತಿಂಗಳ ಬಳಿಕ ಟಿಡಿಎಸ್ ಡಿಡಕ್ಟ್ ಆಗಿ ನಿಮ್ಮ ಠೇವಣಿಗೆ ಸೇರುವ ಬಡ್ಡಿ ಹಣ ಶೇ. 3.49 ಮಾತ್ರ. ಇನ್ನು, ಶೇ. 6.75ರಷ್ಟು ಎಫ್ಡಿ ದರ ಇದ್ದರೆ ತೆರಿಗೆ ಕಡಿತವಾಗಿ ಬರುವುದು ಶೇ. 4.9 ಮಾತ್ರವೇ.
ಎಫ್ಡಿ ನಿರುಪಯುಕ್ತವೇ?
ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿ ಆದಾಯಕ್ಕೆ ಶೇ. 10ರಷ್ಟು ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಇದು ನಿಮ್ಮ ಒಟ್ಟಾರೆ ತೆರಿಗೆಗರ್ಹವಾದ ಆದಾಯಕ್ಕೆ ಸೇರ್ಪಡೆ ಆಗುತ್ತದೆ. ಟ್ಯಾಕ್ಸ್ ಎಕ್ಸೆಂಪ್ಷನ್ ಮಿತಿಯಲ್ಲಿ ನಿಮ್ಮ ಆದಾಯ ಇದ್ದರೆ ಈ ಹಣವನ್ನು ಐಟಿ ರಿಟರ್ನ್ಸ್ ಸಲ್ಲಿಕೆ ಮೂಲಕ ಮರಳಿ ಕ್ಲೈಮ್ ಮಾಡಬಹುದು. ಆದರೆ, ಟ್ಯಾಕ್ಸ್ ಎಕ್ಸೆಂಪ್ಷನ್ ಸೌಲಭ್ಯ ನಿಮ್ಮ ಆದಾಯ ವರ್ಗಕ್ಕೆ ಇಲ್ಲದೇ ಹೋದರೆ ಕ್ಲೈಮ್ ಸಾಧ್ಯವಾಗುವುದಿಲ್ಲ. ಹೀಗಾಗಿ, ಹೆಚ್ಚಿನ ಆದಾಯದ ಗುಂಪಿನ ಜನರಿಗೆ ಎಫ್ಡಿ ಮೇಲಿನ ಹೂಡಿಕೆಯಿಂದ ಅಂಥ ಹೆಚ್ಚು ಲಾಭ ಸಿಗುವುದಿಲ್ಲ ಎಂಬುದು ನಿಜ.
ಬೇರೆಲ್ಲಿ ಹಣ ಹೂಡಿಕೆ ಮಾಡಬಹುದು?
ಆಕರ್ಷಕ ರಿಟರ್ನ್ಸ್ ಕೊಡುವ ಹಲವು ಹೂಡಿಕೆ ಆಯ್ಕೆಗಳಿವೆ. ಷೇರುಪೇಟೆಗೆ ಜೋಡಿತವಾದ ಮ್ಯೂಚುವಲ್ ಫಂಡ್ ಎಸ್ಐಪಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು. ಇವು ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ತಂದುಕೊಡಬಲ್ಲುವು. ಮ್ಯೂಚುವಲ್ ಫಂಡ್ನಿಂದ ಬರುವ ಆದಾಯಕ್ಕೂ ತೆರಿಗೆ ವಿಧಿಸಲಾಗುತ್ತದಾದರೂ ಹೆಚ್ಚಿನ ರಿಟರ್ನ್ ಕಾರಣದಿಂದ ನಿಮಗೆ ಲಾಭದಲ್ಲಿ ತೀರಾ ಕಡಿಮೆ ಆಗುವುದಿಲ್ಲ.