ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದ ಜಾಗತಿಕ ಆರ್ಥಿಕತೆ (Economy) ಕಲಸುಮೇಲೋಗರವಾಗಿ, ಕೆಲವು ದೇಶಗಳು ಆಹಾರ ಮತ್ತು ಇಂಧನ ಕೊರತೆಗೆ ನಲುಗಿ ಹೋಗಿರುವ ಕಾಲಘಟ್ಟದಲ್ಲಿ ವಿವಿಧ ದೇಶಗಳ ನಾಯಕರು ಆರ್ಥಿಕತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡುವ ಸಲುವಾಗಿ ದೆಹಲಿಯಲ್ಲಿ ಸೇರಲಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಎರಡು ಥೀಮ್ಗಳ ಚರ್ಚೆ ನಡೆಯಲಿದೆ. ಅದರಲ್ಲಿ ಒಂದು, ಭವಿಷ್ಯದ ಪುನರ್ ವ್ಯಾಖ್ಯಾನ. ಮತ್ತೊಂದು ಎಲ್ಲರನ್ನೂ ಒಳಗೊಂಡಂಥ ಬೆಳವಣಿಗೆ. ಜುಲೈ 8ರಿಂದ 10ನೇ ತಾರೀಕು ಈ ಚರ್ಚೆ ನಡೆಯಲಿದ್ದು, ದೆಹಲಿಯು ಮಿನಿ ದಾವೋಸ್ (ಇಲ್ಲಿ ಜಾಗತಿಕ ಮಟ್ಟದ ಆರ್ಥಿಕ ಫೋರಂ ನಡೆಯುತ್ತದೆ) ರೀತಿಯಲ್ಲಿ ಸುದ್ದಿ ಮಾಡಲಿದೆ. ಇದರಲ್ಲಿ 20ಕ್ಕೂ ಹೆಚ್ಚು ದೇಶಗಳ 50ಕ್ಕೂ ಮಿಕ್ಕಿ ರಾಜಕೀಯ ಹಾಗೂ ಆರ್ಥಿಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ದೇಶಗಳಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಎರಡೂ ಭಾಗವಹಿಸಲಿವೆ.
ಎರಡು ವಾರ್ಷಿಕ ಕಾರ್ಯಕ್ರಮಗಳು ಒಂದೇ ಸೂರಿನಡಿ ನಡೆಯಲಿದೆ. ಸಿಂಗಾಪೂರದ ಹಿರಿಯ ಸಚಿವ ತರಮನ್ ಷಣ್ಮುಗರತ್ನಂ ಅವರ ಮುಖ್ಯ ಭಾಷಣ ಮುಗಿದ ತಕ್ಷಣ ಅರುಣ್ ಜೇಟ್ಲಿ ವಾರ್ಷಿಕ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಆ ನಂತರದಲ್ಲಿ ಸಂಜೆ ಭೇಟಿ ನೀಡಲಿರುವ ಅಂತಾರಾಷ್ಟ್ರೀಯ ನಿಯೋಗದ ಜತೆಗೆ ಪ್ರಧಾನಿ ಮೋದಿ ಅವರು ಸಂವಾದ ಕೂಡ ನಡೆಸುತ್ತಾರೆ. ಈ ಅಂತಾರಾಷ್ಟ್ರೀಯ ನಿಯೋಗವು ಕೌಟಿಲ್ಯ ಆರ್ಥಿಕ ಸಮಾವೇಶದ ಚೊಚ್ಚಲ ಮೂರು ದಿನದ ಸಮಾವೇಶದಲ್ಲಿ ಭಾಗಿ ಆಗಲಿದೆ.
ಹೀಗೆ ಎರಡು ಆರ್ಥಿಕ ಸಮಾವೇಶಗಳು ಒಂದೇ ಸಲ ನಡೆಯುತ್ತವೆ. ಅರುಣ್ ಜೇಟ್ಲಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಸಚಿವಾಲಯ ಆಯೋಜಿಸಿದೆ. ಇನ್ನು ಕೌಟಿಲ್ಯ ಎಕನಾಮಿಕ್ ಕಾನ್ಕ್ಲೇವ್ (KEC) ಅನ್ನು ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ (IEG) ಸಹಯೋಗದಲ್ಲಿ ಸಚಿವಾಲಯ ಆಯೋಜಿಸಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಆಯೋಜಕರು ಹೇಳಿರುವಂತೆ, ಈಗಿನ ಜಾಗತಿಕ ಬಿಕ್ಕಟ್ಟಿನ ವೇಳೆಯಲ್ಲಿ ವಿಶ್ವ ಸಮುದಾಯಕ್ಕೆ ಭಾರತವು ಭರವಸೆಯಂತೆ ಹೊರಹೊಮ್ಮಿದೆ. ಸದ್ಯಕ್ಕೆ ಜಾಗತಿಕ ಮಟ್ಟದ ಯಾವುದೇ ಸಪ್ಲೈ ಚೈನ್ ಸಮಸ್ಯೆ, ಅದರಲ್ಲೂ ಆಹಾರ ಹಾಗೂ ಔಷಧ ಸಮಸ್ಯೆಯನ್ನು ನಿವಾರಿಸಿಕೊಂಡು ಮುನ್ನಡೆಯಬಲ್ಲಂಥ ಸಾಮರ್ಥ್ಯ ಇರುವ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತ. ದೇಶದೊಳಗೆ ಕೊವಿಡ್-19 ಲಸಿಕೆ ಅಭಿವೃದ್ಧಿ ಮಾಡುವುದರಿಂದ ದಾಖಲೆ ನಿರ್ಮಿಸಿದ್ದು ಮಾತ್ರವಲ್ಲ, ಅದರ ಅಗತ್ಯ ಇರುವಾಗ ವಿವಿಧ ದೇಶಗಳಿಗೆ ಪೂರೈಕೆ ಸಹ ಮಾಡಿತು ಎಂದು ಹೇಳಿದ್ದಾರೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಅಮೆರಿಕ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಇಸ್ರೇಲ್, ಜರ್ಮನಿ. ದಕ್ಷಿಣ ಆಫ್ರಿಕಾ, ಜಪಾನ್, ಸಿಂಗಾಪೂರ್, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಚೀನಾದಂಥ ದೇಶಗಳು ಭಾಗವಹಿಸುವ ಸಾಧ್ಯತೆ ಇದೆ.
ಕೌಟಿಲ್ಯ ಆರ್ಥಿಕ ಸಮಾವೇಶ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಈ ಸಮಾವೇಶದ ಥೀಮ್ ಭವಿಷ್ಯದ ಪುನರ್ ವ್ಯಾಖ್ಯಾನ.
ಇದನ್ನೂ ಓದಿ: Global Recession: 2023ರ ಆರಂಭದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದ ಐಎಂಎಫ್ ಮುಖ್ಯಸ್ಥೆ