Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್

| Updated By: Srinivas Mata

Updated on: Oct 05, 2021 | 11:23 AM

ಅಕ್ಟೋಬರ್ 4ನೇ ತಾರೀಕಿನ ಸೋಮವಾರ ಸುಮಾರು ಆರು ಗಂಟೆಗಳ ಕಾಲ ಫೇಸ್​ಬುಕ್​, ವಾಟ್ಸಾಪ್, ಇನ್​ಸ್ಟಾಗ್ರಾಮ್ ಡೌನ್ ಆಗಿತ್ತು. ಬಳಕೆದಾರರಿಗೆ ಬಳಸಲು ಸಾಧ್ಯವಾಗಲೇ ಇಲ್ಲ. ಇದರಿಂದ ಫೇಸ್​ಬುಕ್​ ಸಿಇಒ ಮಾರ್ಕ್​ ಝುಕರ್​ಬರ್ಗ್​ಗೆ ಆದ ನಷ್ಟ ಎಷ್ಟು ಗೊತ್ತೆ?

Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್
ಮಾರ್ಕ್ ಝಕರ್​ಬರ್ಗ್ (ಸಂಗ್ರಹ ಚಿತ್ರ)
Follow us on

ಈ ಹಿಂದೆಂದೂ ಕಾಣದ ಜಾಗತಿಕ ವ್ಯತ್ಯಯವು ಫೇಸ್​ಬುಕ್​, ಇನ್​ಸ್ಟಾಗ್ರಾಮ್ ಮತ್ತು ವಾಟ್ಸಾಪ್​ ಅನ್ನು ಅಕ್ಟೋಬರ್​ 4ನೇ ತಾರೀಕಿನ ಸಂಜೆಯಿಂದ ಡೌನ್ ಆಗುವಂತೆ ಮಾಡಿತು. ಇದರಿಂದಾಗಿ ಫೇಸ್​ಬುಕ್​ನ ಸ್ಥಾಪಕ ಮಾರ್ಕ್​ ಝುಕರ್​ಬರ್ಗ್​ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 44,713 ಕೋಟಿ ಖಲ್ಲಾಸ್. ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್​ಬುಕ್​ನ ಸಿಇಒ ಆದ ಝಕರ್​ಬರ್ಗ್ ಆಸ್ತಿಯು 122 ಬಿಲಿಯನ್ ಅಮೆರಿಕನ್ ಡಾಲರ್​ಗೆ ಕುಸಿದಿದೆ. ಒಂದು ದಿನ- ಕೆಲವು ಗಂಟೆಗಳ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯು ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಝುಕರ್​ಬರ್ಗ್​​ರನ್ನು ಬಿಲ್​ಗೇಟ್ಸ್​ಗೂ ಕೆಳಗೆ ಐದನೇ ಸ್ಥಾನಕ್ಕೆ ತಳ್ಳಿದೆ. ಸೆಪ್ಟೆಂಬರ್ 13ರಿಂದ ಈಚೆಗೆ ಒಟ್ಟಾರೆಯಾಗಿ 1900 ಕೋಟಿ ಅಮೆರಿಕನ್ ಡಾಲರ್​ನಷ್ಟು ಆಸ್ತಿ ಕರಗಿಹೋಗಿದೆ. ಆ ದಿನಕ್ಕೆ ಝುಕರ್​ಬರ್ಗ್​ ಆಸ್ತಿ ಮೌಲ್ಯ 140 ಬಿಲಿಯನ್ ಅಮೆರಿಕನ್ ಡಾಲರ್​ ಇತ್ತು. ಅಂದರೆ ಕಳೆದುಕೊಂಡ ಆಸ್ತಿಯ ಮೊತ್ತ ಭಾರತದ ರೂಪಾಯಿ ಲೆಕ್ಕದಲ್ಲಿ 1,41,591 ಕೋಟಿ ಆಗುತ್ತದೆ. ಅಕ್ಟೋಬರ್ 4ನೇ ತಾರೀಕಿನಂದು ಫೇಸ್​ಬುಕ್​ ಸ್ಟಾಕ್​​ನಲ್ಲಿ ಭಾರೀ ಮಾರಾಟ ಒತ್ತಡ ಕಂಡುಬಂತು. ಒಂದೇ ದಿನದಲ್ಲಿ ಶೇ 5ರಷ್ಟು ಕುಸಿದಿದ್ದು, ಸೆಪ್ಟೆಂಬರ್ ಮಧ್ಯದಿಂದ ಈಚೆಗೆ ಈ ಸ್ಟಾಕ್ ಶೇ 15ರಷ್ಟು ಇಳಿಕೆ ಕಂಡಿದೆ.

ತನ್ನ ರೂಟರ್ಸ್​ನಲ್ಲಿ ತಪ್ಪಾದ ಕಾನ್ಫಿಗರೇಷನ್ ಬದಲಾವಣೆ ಮಾಡಿದ್ದರಿಂದ ಆರು ಗಂಟೆಗಳ ಕಾಲ ವ್ಯತ್ಯಯ ಎದುರಿಸಬೇಕಾಯಿತು. ಇದರಿಂದಾಗಿ ಫೇಸ್​ಬುಕ್ ಮತ್ತು ಅದರ ಮೆಸೇಜಿಂಗ್ ಸರ್ವೀಸಸ್​ಗಳಾದ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಮೆಸೆಂಜರ್ ಬಳಸುವ 350 ಕೋಟಿ ಬಳಕೆದಾರರಿಗೆ ಸಂಪರ್ಕವೇ ಸಿಗಲಿಲ್ಲ. ರೂಟರ್ಸ್​ನಲ್ಲಿ ಕಾನ್ಫಿಗರೇಷನ್​ ಬದಲಾವಣೆಯೇ ಈ ಸಮಸ್ಯೆಗೆ ಕಾರಣ ಎಂದು ನಮ್ಮ ಎಂಜಿನಿಯರಿಂಗ್ ತಂಡ ಕಂಡುಕೊಂಡಿದೆ. ಈ ರೂಟರ್ಸ್​ ನಮ್ಮ ಡೇಟಾ ಸೆಂಟರ್​ಗಳು ನೆಟ್​ವರ್ಕ್ ಟ್ರಾಫಿಕ್ ಮಧ್ಯೆ ಕೋ ಆರ್ಡಿನೇಟ್ ಮಾಡುತ್ತದೆ. ಈ ಸಂವಹನಕ್ಕೆ ತಡೆಯಾಗಿದ್ದರಿಂದ ಸಮಸ್ಯೆ ಎದುರಾಯಿತು. ನೆಟ್​ವರ್ಕ್​ನ ದಟ್ಟಣೆಯ ಈ ತಡೆಯು ಡೇಟಾ ಸೆಂಟರ್ ಸಂವಹನದ ಮೇಲೆ ಪರಿಣಾಮ ಬೀರುವಂತೆ ಮಾಡಿ, ನಮ್ಮ ಸೇವೆ ನಿಂತುಹೋಯಿತು ಎಂದು ಫೇಸ್​ಬುಕ್ ಬ್ಲಾಗ್​ಪೋಸ್ಟ್​ನಲ್ಲಿ ಹೇಳಿದೆ.

ಅಂದಹಾಗೆ ಫೇಸ್​ಬುಕ್ ಈಗ ವಿಷಲ್​ಬ್ಲೋವರ್ ಸವಾಲನ್ನು ಕೂಡ ಎದುರಿಸುತ್ತಿದೆ. ಬಹಳ ಕಾಲದಿಂದ ಫೇಸ್​ಬುಕ್​ ನಡೆಸುತ್ತಿದ್ದ ಸಂಶೋಧನೆ ವಿರುದ್ಧ ವಿಮರ್ಶೆ ಹಾಗೂ ಆತಂಕ ಕೇಳಿಬರುತ್ತಿತ್ತು. ಕಂಪೆನಿಯ ಮಾಜಿ ಸಿಬ್ಬಂದಿಯಾದ ಫ್ರಾನ್ಸಸ್ ಹಾಗನ್ ಅಧಿಕಾರಿಗಳು ಮತ್ತು ವಾಲ್​ಸ್ಟ್ರೀಟ್​ ಜರ್ನಲ್ ಬಳಿ ಈ ಕುರಿತು ದೂರು ನೀಡಿದ್ದಾರೆ. 37 ವರ್ಷದ ಹಾಗನ್ ಲೋವಾದ ಡೇಟಾ ವಿಜ್ಞಾನಿ. ಗೂಗಲ್ ಮತ್ತು ಪಿಂಟ್​ರಸ್ಟ್​ನಂಥ ಕಂಪೆನಿಗಳಿಗೆ ಕೆಲಸ ಮಾಡಿದ್ದಾರೆ. ಸಿಬಿಎಸ್​ ನ್ಯೂಸ್ ಜತೆಗೆ ಮಾತನಾಡುತ್ತಾ, ನಾನು ಇದುವರೆಗೆ ನೋಡಿದ್ದರ ಪೈಕಿ ಫೇಸ್​ಬುಕ್ ಎಲ್ಲದ್ದಕ್ಕಿಂತ ಬಹಳ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಫೇಸ್​ಬುಕ್ ಉದ್ದೇಶಪೂರ್ವಕವಾಗಿ ಆಲ್ಗರಿದಂ ಬದಲಿಸಿ, ದ್ವೇಷ ಭಾಷಣಗಳನ್ನು ಉತ್ತೇಜಿಸುತ್ತದೆ. ನಮ್ಮ ಸುರಕ್ಷತೆ ಅಡ ಇಟ್ಟು ಅದು ಲಾಭವನ್ನು ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್, ಇನ್​ಸ್ಟಾಗ್ರಾಂ, ಫೇಸ್​ಬುಕ್ ಡೌನ್; ಸೋಷಿಯಲ್ ಮೀಡಿಯಾ ಬಳಕೆದಾರರ ಪರದಾಟ

WhatsApp, Facebook, Instagram Down: ವಿಶ್ವದ ಹಲವು ಭಾಗಗಳಲ್ಲಿ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಕೆಲಸ ಮಾಡ್ತಿಲ್ಲ!

Published On - 11:17 am, Tue, 5 October 21