ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್

ಅಕ್ಟೋಬರ್ 15ರಿಂದ ಯುಪಿಐ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ನಿಯಮಗಳು ಜಾರಿಗೆ ಬರುತ್ತವೆ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಯುಪಿಐ ಪೇಮೆಂಟ್​ಗಳು, ಹಾಗು ಗ್ರಾಹಕರಿಂದ ವರ್ತಕರಿಗೆ ಮಾಡಲಾಗುವ ₹2,000 ವರೆಗಿನ ಪೇಮೆಂಟ್​ಗಳಿಗೆ ಎಂಡಿಆರ್ ಶುಲ್ಕ ಇರುವುದಿಲ್ಲ. ₹2,000 ಮೇಲ್ಪಟ್ಟ ಪೇಮೆಂಟ್​ಗಳನ್ನು ಪಡೆಯುವ ವ್ಯಾಪಾರಿಗಳಿಗೆ ಎಂಡಿಆರ್ ಶುಲ್ಕ ಅನ್ವಯ ಆಗುತ್ತದೆ.

ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್
ಯುಪಿಐ
Image Credit source: Getty Images

Updated on: Sep 16, 2026 | 12:44 PM

ನವದೆಹಲಿ, ಸೆಪ್ಟೆಂಬರ್ 16: ನೂತನ ಯುಪಿಐ ಎಂಡಿಆರ್ (MDR) ಮಾರ್ಗದರ್ಶಿ ಸೂತ್ರಗಳು ಹೊರಬಿದ್ದ ನಂತರ ಸಾರ್ವಜನಿಕರಲ್ಲಿ ಶುಲ್ಕಗಳ ಕುರಿತು ಹಲವು ಗೊಂದಲಗಳು ಮೂಡಿವೆ. ಆದರೆ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಎನ್‌ಪಿಸಿಐ (NPCI) ಸ್ಪಷ್ಟಪಡಿಸಿರುವಂತೆ, ಸಾಮಾನ್ಯ ಗ್ರಾಹಕರು ಬಳಸುವ ಬಹುತೇಕ ದೈನಂದಿನ ಯುಪಿಐ ಸೇವೆಗಳು ಇಂದಿಗೂ ಸಂಪೂರ್ಣ ಉಚಿತವಾಗಿಯೇ ಉಳಿಯಲಿವೆ. ಅಕ್ಟೋಬರ್ 15ರಿಂದ ಎಂಡಿಆರ್ ಶುಲ್ಕಗಳು ಜಾರಿಗೆ ಬರಲಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಯುಪಿಐ ಪಾವತಿ ಸೇರಿದಂತೆ ವಿವಿಧ ಯುಪಿಐ ಪಾವತಿಗಳಿಗೆ ಎಂಡಿಆರ್ ಅನ್ವಯ ಆಗುವುದಿಲ್ಲ. ದತ್ತಾಂಶಗಳ ಪ್ರಕಾರ ಹೆಚ್ಚಿನ ಯುಪಿಐ ವಹಿವಾಟುಗಳು ಶುಲ್ಕರಹಿತವಾಗಿಯೇ ಮುಂದುವರಿಯುತ್ತವೆ.

ಸಾರ್ವಜನಿಕರಿಗೆ ಸದಾ ಉಚಿತವಾಗಿರುವ 7 ಪ್ರಮುಖ ಯುಪಿಐ ಸೇವೆಗಳು ಈ ಕೆಳಕಾಣಿಸಿದಂತಿವೆ:

  1. ವ್ಯಕ್ತಿಯಿಂದ ವ್ಯಕ್ತಿಗೆ ಉಚಿತ ಪಾವತಿ (P2P): ನಿಮ್ಮ ಸ್ನೇಹಿತರು, ಕುಟುಂಬಸ್ಥರು ಅಥವಾ ಇನ್ಯಾರೇ ವ್ಯಕ್ತಿಯ ಬ್ಯಾಂಕ್ ಖಾತೆಗೆ ಯುಪಿಐ ಮೂಲಕ ಎಷ್ಟು ಮೊತ್ತದ ಹಣ ಕಳುಹಿಸಿದರೂ (P2P) ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಈಗಿರುವ ಯುಪಿಐ ದೈನಂದಿನ ವಹಿವಾಟು ಮಿತಿ ನಿಯಮ ಮಾತ್ರ ಇರುತ್ತದೆ.
  2. ₹2,000 ವರೆಗಿನ ಯಾವುದೇ ಮರ್ಚೆಂಟ್ ಪಾವತಿ (P2M): ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ಅಥವಾ ಯಾವುದೇ ವ್ಯಾಪಾರಿಗಳಿಗೆ (P2M) ಮಾಡುವ ₹2,000 ವರೆಗಿನ ಯುಪಿಐ ಪಾವತಿಗಳ ಮೇಲೆ ಶೂನ್ಯ ಎಂಡಿಆರ್ (Zero MDR) ನಿಯಮ ಅನ್ವಯಿಸಲಿದ್ದು, ಸಂಪೂರ್ಣ ಉಚಿತವಾಗಿರುತ್ತದೆ.
  3. ಸಣ್ಣ ವ್ಯಾಪಾರಿಗಳು/ಬೀದಿಬದಿ ಬಂಡಿ ಪಾವತಿ (P2PM QR): ತಿಂಗಳಿಗೆ ₹1 ಲಕ್ಷದವರೆಗೆ ವಹಿವಾಟು ನಡೆಸುವ ಬೀದಿಬದಿ ವ್ಯಾಪಾರಿಗಳು ಹಾಗೂ ಸಣ್ಣ ಅಂಗಡಿಕಾರರ ಯುಪಿಐ ಕ್ಯೂಆರ್ (QR) ಕೋಡ್‌ಗಳಿಗೆ ಮಾಡುವ ಎಲ್ಲಾ ಪಾವತಿಗಳು ಎಂಡಿಆರ್ ಮಿತಿಯಿಂದ ಹೊರಗಿದ್ದು, ಉಚಿತವಾಗಿರುತ್ತವೆ.
  4. ಅನಿಯಮಿತ ಉಚಿತ ಬಳಕೆ: ಸಾಮಾನ್ಯ ಗ್ರಾಹಕರಿಗೆ ತಿಂಗಳಿಗೆ ಇಷ್ಟೇ ಉಚಿತ ವಹಿವಾಟುಗಳು ಎಂಬ ಯಾವುದೇ ಮಾಸಿಕ ಮಿತಿ (No Monthly Caps) ಅಥವಾ ನಿಯಮಗಳಿರುವುದಿಲ್ಲ. ನೀವು ಎಷ್ಟು ಬಾರಿ ಬೇಕಾದರೂ ಉಚಿತವಾಗಿ ಹಣ ವರ್ಗಾಯಿಸಬಹುದು ಮತ್ತು ಪೇಮೆಂಟ್ ಮಾಡಬಹುದು.
  5. ಪ್ಲಾಟ್‌ಫಾರ್ಮ್ ಫೀ ನಿಷೇಧ: ಗೂಗಲ್ ಪೇ, ಫೋನ್ ಪೇ, ಪೇಟಿಎಮ್‌ನಂತಹ ಯುಪಿಐ ಆಪ್‌ಗಳು ಗ್ರಾಹಕರಿಂದ ಯಾವುದೇ ಹೆಚ್ಚುವರಿ ‘ಪ್ಲಾಟ್‌ಫಾರ್ಮ್ ಶುಲ್ಕ’ (Platform Fee) ಅಥವಾ ಸೇವಾವೆಚ್ಚವನ್ನು (No Hidden Fees) ಪಡೆಯುವಂತಿಲ್ಲ.
  6. ವ್ಯಾಪಾರಿಗಳಿಂದ ಗ್ರಾಹಕರಿಗೆ ಶುಲ್ಕ ವರ್ಗಾವಣೆ ಇಲ್ಲ: ದೊಡ್ಡ ವ್ಯಾಪಾರಿಗಳಿಗೆ ಅನ್ವಯಿಸುವ ಶೇ. 0.4 ರಷ್ಟು ಎಂಡಿಆರ್ ಶುಲ್ಕವನ್ನು ಅವರು ಗ್ರಾಹಕರಿಂದ ಪ್ರತ್ಯೇಕವಾಗಿ (Surcharge) ವಸೂಲಿ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
  7. ಬ್ಯಾಂಕ್ ಆಟೋ-ಪೇ ಮತ್ತು ಬಿಲ್ ಪಾವತಿಗಳು: ನಿಮ್ಮ ಎಸ್‌ಐಪಿ (SIP), ಒಟಿಟಿ ಚಂದಾದಾರಿಕೆಗಳು, ಕರೆಂಟ್ ಬಿಲ್, ಮೊಬೈಲ್ ರೀಚಾರ್ಜ್ ಮುಂತಾದ ಆಟೋ-ಡೆಬಿಟ್ ಪಾವತಿಗಳಿಗೆ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಾಗಿಲ್ಲ.

ಇದನ್ನೂ ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್, ಮತ್ತಷ್ಟು ಸ್ಪಷ್ಟತೆ; 2,000 ರೂ ಮೇಲ್ಪಟ್ಟ ಪಾವತಿಗೆ ಎಷ್ಟಿರುತ್ತೆ ಶುಲ್ಕ? ಇಲ್ಲಿದೆ ಪೂರ್ಣ ವಿವರ

ಎಂಡಿಆರ್ ಶುಲ್ಕಗಳು ಈ ಕೆಳಕಂಡ ಯುಪಿಐ ವಹಿವಾಟುಗಳಿಗೆ ಇರುತ್ತವೆ

ಗ್ರಾಹಕರಿಂದ ವರ್ತಕರಿಗೆ ಪೇಮೆಂಟ್ (P2M): ಅಂಗಡಿಗೆ ಹೋಗಿ ₹2,000 ಗಿಂತ ಹೆಚ್ಚಿನ ಮೊತ್ತ ಪೇಮೆಂಟ್ ಮಾಡಿದರೆ ಶೇ 0.4 ಅಥವಾ ₹300 ಎಂಡಿಆರ್ ಅನ್ವಯ ಆಗುತ್ತದೆ. ಉದಾಹರಣೆಗೆ, ₹10,000 ಪೇಮೆಂಟ್​ಗೆ ₹40 ಎಂಡಿಆರ್ ಇರುತ್ತದೆ, ₹75,000 ಪೇಮೆಂಟ್​ಗೆ ₹300 ಎಂಡಿಆರ್ ಆಗುತ್ತದೆ. ಅದಕ್ಕೂ ಮೇಲ್ಪಟ್ಟಿರುವ ಪೇಮೆಂಟ್​ಗೆ ₹300 ಮಾತ್ರವೇ ಇರುತ್ತದೆ. ಶೇ. 0.4 ಎಂಡಿಆರ್ ಲೆಕ್ಕದಲ್ಲಿ ₹1,00,000ಕ್ಕೆ ₹400 ಆಗುತ್ತದೆ. ಆದರೆ, ಸರ್ಕಾರ ₹300 ಕ್ಕೆ ಶುಲ್ಕ ಮಿತಿಗೊಳಿಸಿದೆ.

ಅವಶ್ಯಕ ವಲಯಗಳಿಗೆ ₹5 ಎಂಡಿಆರ್: ರೈಲ್ವೇಸ್, ಟೆಲಿಕಾಂ, ಇನ್ಷೂರೆನ್ಸ್, ಇಂಧನ ಇತ್ಯಾದಿ ಅವಶ್ಯಕ ಸೆಕ್ಟರ್​ಗಳಲ್ಲಿ ಎಂಡಿಆರ್ ಶುಲ್ಕವನ್ನು ₹5 ಕ್ಕೆ ಮಿತಿಗೊಳಿಸಲಾಗಿದೆ. ₹2,000 ಕ್ಕಿಂತ ಹೆಚ್ಚಿನ ಎಷ್ಟೇ ಮೊತ್ತವಾದರೂ ಎಂಡಿಆರ್ ಶುಲ್ಕ ₹5 ಮಾತ್ರವೇ ಇರುತ್ತದೆ. ಶೇ. 0.4 ಎಂಡಿಆರ್ ನಿಯಮ ಆನ್ವಯ ಆಗಲ್ಲ. ಉದಾಹರಣೆಗೆ, ₹50,000 ಇನ್ಷೂರೆನ್ಸ್ ಪೇಮೆಂಟ್​ಗೆ ಎಂಡಿಆರ್ ಶುಲ್ಕ ₹5 ಮಾತ್ರವೇ ಇರುತ್ತದೆ. ವಿದ್ಯುತ್ ಬಿಲ್, ಗ್ಯಾಸ್ ಬಿಲ್, ನೀರಿನ ಬಿಲ್, ಪೆಟ್ರೋಲ್ ಪೇಮೆಂಟ್​ಗಳಿಗೆ ₹5 ಎಂಡಿಆರ್ ಇರುತ್ತದೆ.

ಷೇರು ಮಾರುಕಟ್ಟೆಗೆ ಎಂಡಿಆರ್ ಶೇ. 0.02 ಅಥವಾ ₹300: ಷೇರುಗಳು, ಇಟಿಎಫ್, ಮ್ಯೂಚುವಲ್ ಫಂಡ್​ಗಳಿಗೆ ಮಾಡುವ ಪೇಮೆಂಟ್​ಗೆ ಶೇ. 0.02 ಅಥವಾ ಗರಿಷ್ಠ ₹300 ಎಂಡಿಆರ್ ಶುಲ್ಕ ಇರುತ್ತದೆ. ಇಲ್ಲಿಯೂ ಕೂಡ ಗ್ರಾಹಕರಿಗೆ ಈ ಹೊರೆ ಇರುವುದಿಲ್ಲ. ಮ್ಯೂಚುವಲ್ ಫಂಡ್ ಸಂಸ್ಥೆಗಳು, ಬ್ರೋಕರೇಜ್ ಸಂಸ್ಥೆಗಳಿಗೆ ಎಂಡಿಆರ್ ಹೊರೆ ಇರುತ್ತದೆ.

ಇದನ್ನೂ ಓದಿ: ವಾಟ್ಸಾಪ್‌ ಮೂಲಕ ಹಣ ಪಾವತಿಸುವುದು ಹೇಗೆ? ಈ ರೀತಿ ಪೇಮೆಂಟ್‌ ಸುರಕ್ಷಿತವೇ?

ಯುಪಿಐಗೆ ಬ್ಯಾಂಕ್ ಅಕೌಂಟ್ ಬದಲು ಕ್ರೆಡಿಟ್ ಕಾರ್ಡ್ ಲಿಂಕ್ ಆಗಿದ್ದರೆ?

ಯುಪಿಐಗೆ ಕ್ರೆಡಿಟ್ ಕಾರ್ಡ್​ಗಳನ್ನು ಲಿಂಕ್ ಮಾಡಿ ಅದರಿಂದ ಪೇಮೆಂಟ್ ಮಾಡುವ ಅವಕಾಶ ಇರುತ್ತದೆ. ಪ್ರೀ ಸ್ಯಾಂಕ್ಷನ್ಡ್ ಕ್ರೆಡಿಟ್ ಲೈನ್ ಬಳಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಎಂಡಿಆರ್ ನಿಯಮ ಅನ್ವಯಿಸುವುದಿಲ್ಲ. ಕ್ರೆಡಿಟ್ ಕಾರ್ಡ್ ನಿಯಮಗಳು ಅನ್ವಯ ಆಗುತ್ತವೆ.

ಕಾರ್ಡ್ ಪೇಮೆಂಟ್​ಗಳಿಗೆ ಹೇಗಿದೆ ನಿಯಮ?

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್​ಗಳಿಂದ ಮಾಡಲಾಗುವ ಪೇಮೆಂಟ್​ಗೆ ಮೊದಲಿಂದಲೂ ಎಂಡಿಆರ್ ನಿಯಮಗಳು ಜಾರಿಯಲ್ಲಿವೆ. ಕ್ರೆಡಿಟ್ ಕಾರ್ಡ್​ಗಳಿಗೆ ಶೇ. 1.5-2.5 ಶುಲ್ಕ ಇರುತ್ತದೆ. ಡೆಬಿಟ್ ಕಾರ್ಡ್​ಗೆ ಶೇ. 0.90 ಶುಲ್ಕ ಇರುತ್ತದೆ. ಅದಕ್ಕೆ ಹೋಲಿಸಿದರೆ ಯುಪಿಐನಲ್ಲಿ ಎಂಡಿಆರ್ ಶುಲ್ಕ ಬಹಳ ಕಡಿಮೆ.

ಸಣ್ಣ ವರ್ತಕರಿಗೆ ಹೇಗಿರುತ್ತದೆ ಶುಲ್ಕ?

ಹೊಸ ನಿಯಮಗಳ ಪ್ರಕಾರ ತಿಂಗಳಿಗೆ ₹1,00,000 ವರೆಗಿನ ವಹಿವಾಟು ನಡೆಸುವ ವ್ಯಾಪಾರಿಗಳನ್ನು ಸಣ್ಣ ವರ್ತಕರೆಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ ಅಕೌಂಟ್ ನೀಡುವಾಗಲೇ ಆ P2PM ವರ್ಗೀಕರಣ ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Wed, 16 September 26

Loading...
Unable to load recommendations.
Follow Us