
ನವದೆಹಲಿ, ಮಾರ್ಚ್ 2: ಭಾರತದಲ್ಲಿ ಡ್ರೋನ್ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಸರ್ಕಾರ ರೂಪಿಸಿದ ಹಲವು ಯೋಜನೆಗಳಲ್ಲಿ ನಮೋ ಡ್ರೋನ್ ದೀದಿ ಸ್ಕೀಮ್ ಒಂದು. ಕೃಷಿ ಕ್ಷೇತ್ರಕ್ಕೆ ಡ್ರೋನ್ ಸೇವೆ ನೀಡುವುದು ಮಾತ್ರವಲ್ಲದೇ, ಮಹಿಳಾ ಸಬಲೀಕರಣದ ಪ್ರಯತ್ನಕ್ಕೂ ಈ ಯೋಜನೆ ಪೂರಕವಾಗಿದೆ. ಈ ನಮೋ ಡ್ರೋನ್ ದೀದಿ ಯೋಜನೆಯನ್ನು ಅಮೆರಿಕದ ಪ್ರತಿಷ್ಠಿತ ಎಂಐಟಿ (ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಶಿಕ್ಷಣ ಸಂಸ್ಥೆಯ ಪ್ರೊಫೆಸರ್ ಜೋನೇತನ್ ಫ್ಲೆಮಿಂಗ್ ಪ್ರಶಂಸೆ ವ್ಯಕ್ತಪಡಿಸಿದರು. ದೆಹಲಿಯ ಐಸಿಎಆರ್ ಪುಸಾ ಕ್ಯಾಂಪಸ್ನಲ್ಲಿ ನಮೋ ಡ್ರೋನ್ ದೀದಿಯವರೊಂದಿಗೆ ನಿನ್ನೆ (ಶನಿವಾರ) ಸಂವಾದದಲ್ಲಿ ತೊಡಗಿದ್ದ ಫ್ಲೆಮಿಂಗ್, ಭಾರತದಲ್ಲಿ ಮಹಿಳಾ ಸಬಲೀಕರಣ ಸಾಧಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಮೆಚ್ಚಿಕೊಂಡರು.
ಹೊಸ ತಂತ್ರಜ್ಞಾನ ಬಳಕೆಗೆ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿರುವ ಪ್ರಕ್ರಿಯೆ ಬಗ್ಗೆ ಜೋನೇತನ್ ಫ್ಲೆಮಿಂಗ್ ಸಕಾರಾತ್ಮಕ ಅನಿಸಿಕೆ ವ್ಯಕ್ತಪಡಿಸಿದರು. ಭಾರತದ ಗ್ರಾಮೀಣ ಪ್ರದೇಶದ ಅಭಿವೃದ್ಧಿಪಡಿಸಲು ಸಹಕಾರಿಯಾಗಿರುವ ಹಾಗು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಈ ಉಪಕ್ರಮವು ಇತರ ದೇಶಗಳಿಗೂ ಉತ್ತಮ ಮಾದರಿಯಾಗಿದೆ ಎಂಬುದು ಎಂಐಟಿ ಪ್ರೊಫೆಸರ್ ಅಭಿಪ್ರಾಯ.
ಕೃಷಿ ಕಾರ್ಯಗಳಿಗೆ ಡ್ರೋನ್ ಬಳಕೆ ಹೇಗೆ ಮಾಡಲಾಗುತ್ತದೆ ಎಂಬುದನ್ನು ಡ್ರೋನ್ ದೀದಿಯರು ಜೋನೇತನ್ ಫ್ಲೆಮಿಂಗ್ ಅವರಿಗೆ ಈ ವೇಳೆ ವಿವರಿಸಿದರು. ಕೃಷಿ ಜಮೀನಿನಲ್ಲಿ ಬೆಳೆಗಳಿಗೆ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದು ತುಸು ಕಷ್ಟದ ಕೆಲಸ. ಡ್ರೋನ್ ಮೂಲಕ ಇವುಗಳನ್ನು ಬೆಳೆಗಳಿಗೆ ಹೇಗೆ ಸಿಂಪಡಿಸಲಾಗುತ್ತದೆ. ಇದರಿಂದ ರೈತರಿಗೆ ಕೂಲಿಗೆ ವೆಚ್ಚ ಮಾಡುವುದು ಹೇಗೆ ತಪ್ಪುತ್ತದೆ ಎಂಬುದನ್ನು ಡ್ರೋನ್ ದೀದಿಯರು ಎಂಐಟಿ ಪ್ರೊಫೆಸರ್ಗೆ ತಿಳಿಸಿದರು. ಗೀತಾ, ಸೀತಾ, ಪ್ರಿಯಾಂಕಾ ಮತ್ತು ಹೇಮಲತಾ ಎನ್ನುವ ಡ್ರೋನ್ ದೀದಿಯರು ಡ್ರೋನ್ ಬಳಕೆ ಹೇಗೆಂದು ಸ್ವತಃ ಪ್ರಯೋಗ ಮಾಡಿ ತೋರ್ಪಡಿಸಿದರು.
ಇದನ್ನೂ ಓದಿ: ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಿಕ್ಕಿದ ಒಟ್ಟು ಜಿಎಸ್ಟಿ 1.84 ಲಕ್ಷ ಕೋಟಿ ರೂ; ಶೇ 9.1 ಹೆಚ್ಚು ಸಂಗ್ರಹ
ಡ್ರೋನ್ ದೀದಿಯರೊಂದಿಗೆ ಸಂವಾದದ ಬಳಿಕ ಜೋನೇತನ್ ಫ್ಲೆಮಿಂಗ್ ಅವರು ದೆಹಲಿಯ ಐಆರ್ಎಐನಲ್ಲೇ ಇರುವ ಡ್ರೋನ್ ರೋಬೋಟಿಕ್ ಮತ್ತು ಮೆಷಿನ್ ಲರ್ನಿಂಗ್ ಕೇಂದ್ರಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿ ಸಾಂಪ್ರದಾಯಿಕ ಕೃಷಿಗಾರಿಕೆಗೂ, ತಂತ್ರಜ್ಞಾನ ಬಳಕೆಯಾಧಾರಿತ ಕೃಷಿಗಾರಿಕೆಗೂ ಇರುವ ವ್ಯತ್ಯಾಸವನ್ನು ತೋರಿಸಲಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ