AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಿಕ್ಕಿದ ಒಟ್ಟು ಜಿಎಸ್​ಟಿ 1.84 ಲಕ್ಷ ಕೋಟಿ ರೂ; ಶೇ 9.1 ಹೆಚ್ಚು ಸಂಗ್ರಹ

February gross GST collections Rs 1.84 lakh crore: ಸರಕು ಮತ್ತು ಸೇವೆಗಳ ತೆರಿಗೆಯಾದ ಜಿಎಸ್​ಟಿ ಸಂಗ್ರಹ ಫೆಬ್ರುವರಿಯಲ್ಲಿ ಶೇ. 9.1ರಷ್ಟು ಹೆಚ್ಚಳ ಆಗಿದೆ. ಒಟ್ಟು 1.84 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಸಿಕ್ಕಿದೆ. ಇದರಲ್ಲಿ ರೀಫಂಡ್ ಕಳೆದರೆ ಉಳಿಯುವ ನಿವ್ವಳ ಜಿಎಸ್​ಟಿ 1.63 ಲಕ್ಷ ಕೋಟಿ ರೂನಷ್ಟು ಆದಾಯ ಸರ್ಕಾರಕ್ಕೆ ಬಂದಿದೆ.

ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಿಕ್ಕಿದ ಒಟ್ಟು ಜಿಎಸ್​ಟಿ 1.84 ಲಕ್ಷ ಕೋಟಿ ರೂ; ಶೇ 9.1 ಹೆಚ್ಚು ಸಂಗ್ರಹ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 02, 2025 | 11:00 AM

Share

ನವದೆಹಲಿ, ಮಾರ್ಚ್ 2: ಸರ್ಕಾರಕ್ಕೆ ತೆರಿಗೆ ಆದಾಯದಲ್ಲಿ ಗಣನೀಯ ಏರಿಕೆ ಮುಂದುವರಿದಿದೆ. ಫೆಬ್ರುವರಿ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ (GST collections) ಶೇ. 9.1ರಷ್ಟು ಏರಿಕೆ ಆಗಿದೆ. ಸರ್ಕಾರ ನಿನ್ನೆ ಶನಿವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫೆಬ್ರುವರಿಯಲ್ಲಿ 1.84 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಪ್ರಾಪ್ತವಾಗಿದೆ. ದೇಶದ ಆಂತರಿಕ ಬಿಸಿನೆಸ್ ಚಟುವಟಿಕೆಗಳಿಂದ ಸಿಕ್ಕಿರುವ ಜಿಎಸ್​ಟಿಯಲ್ಲಿ ಶೇ. 10.2ರಷ್ಟು ಏರಿಕೆ ಆಗಿದೆ. ಇವುಗಳಿಂದಲೇ 1.42 ಲಕ್ಷ ಕೋಟಿ ರೂ. ಜಿಎಸ್​ಟಿ ಸಿಕ್ಕಿದೆ. ಆಮದು ಸರಕುಗಳಿಂದ ಸಿಕ್ಕ ಜಿಎಸ್​ಟಿಯಲ್ಲಿ ಶೇ. 5.4ರಷ್ಟು ಏರಿಕೆ ಆಗಿ, 41,702 ಕೋಟಿ ರೂ ಸಿಕ್ಕಿದೆ.

ಫೆಬ್ರುವರಿಯಲ್ಲಿ ಸಿಕ್ಕಿರುವ ಒಟ್ಟು ಜಿಎಸ್​ಟಿಯಾದ 1.84 ಲಕ್ಷ ಕೋಟಿ ರೂನಲ್ಲಿ ಕೇಂದ್ರದ ಜಿಎಸ್​ಟಿ 35,204 ಕೋಟಿ ರು ಇದೆ. ಹಾಗೆಯೇ, ರಾಜ್ಯದ ಜಿಎಸ್​ಟಿ 43,704 ಕೋಟಿ ರೂ ಸೇರಿದೆ. ಐಜಿಎಸ್​ಟಿ 90,870 ಕೋಟಿ ರೂನಷ್ಟು ಇದ್ದರೆ, ಕಾಂಪೆನ್ಸೇಶನ್ ಸೆಸ್ 13,868 ಕೋಟಿ ರೂನಷ್ಟಿದೆ.

ಇದನ್ನೂ ಓದಿ: GDP: ಮೂರನೇ ಕ್ವಾರ್ಟರ್​ನಲ್ಲಿ ಜಿಡಿಪಿ ದರ ಶೇ. 6.2; ಪೂರ್ಣವರ್ಷದಲ್ಲಿ ಶೇ. 6.5ರಷ್ಟು ಬೆಳೆಯುವ ಸಂಭವ

ಈ ಬಾರಿ ರೀಫಂಡ್​ಗಳ ಪ್ರಮಾಣದಲ್ಲಿ ಏರಿಕೆ ಆಗಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಶೇ. 17.3ರಷ್ಟು ಹೆಚ್ಚು ರೀಫಂಡ್​ಗಳಾಗಿರುವುದು ದತ್ತಾಂಶದಿಂದ ತಿಳಿದುಬರುತ್ತದೆ. 20,889 ಕೋಟಿ ರೂನಷ್ಟು ರೀಫಂಡ್​ಗಳನ್ನು ನೀಡಲಾಗಿದೆ. ಇದರೊಂದಿಗೆ ಒಟ್ಟು ಜಿಎಸ್​ಟಿಯಲ್ಲಿ ಈ ರೀಫಂಡ್​ಗಳನ್ನು ಕಳೆದರೆ ಉಳಿಯುವ ನಿವ್ವಳ ಜಿಎಸ್​ಟಿ ಸಂಗ್ರಹ 1.63 ಲಕ್ಷ ಕೋಟಿ ರೂ. ಕಳೆದ ವರ್ಷದ ಫೆಬ್ರುವರಿ ತಿಂಗಳಿಗೆ ಹೋಲಿಸಿದರೆ ನಿವ್ವಳ ಜಿಎಸ್​ಟಿಯಲ್ಲಿ ಶೇ. 8.1ರಷ್ಟು ಹೆಚ್ಚಳ ಆಗಿದೆ. 2024ರ ಫೆಬ್ರುವರಿಯಲ್ಲಿ ಒಟ್ಟು ಜಿಎಸ್​ಟಿ 1.68 ಲಕ್ಷ ಕೋಟಿ ರೂ ಇದ್ದರೆ, ನಿವ್ವಳ ಜಿಎಸ್​ಟಿ 1.50 ಲಕ್ಷ ಕೋಟಿ ರೂ ಬಂದಿತ್ತು.

2025ರ ಫೆಬ್ರುವರಿಯಲ್ಲಿ ಜಿಎಸ್​ಟಿ ಸಂಗ್ರಹದ ವಿವರ

ಒಟ್ಟು ಜಿಎಸ್​ಟಿ ಸಂಗ್ರಹ: 1.84 ಲಕ್ಷ ಕೋಟಿ ರೂ

  • ಸಿಜಿಎಸ್​ಟಿ: 35,204 ಕೋಟಿ ರೂ
  • ಎಸ್​ಜಿಎಸ್​ಟಿ: 43,704 ಕೋಟಿ ರೂ
  • ಐಜಿಎಸ್​ಟಿ: 90,870 ಕೋಟಿ ರೂ
  • ಕಾಂಪೆನ್ಸೇಶನ್ ಸೆಸ್: 13,868 ಕೋಟಿ ರೂ

ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್​ಟಿ: 1.63 ಲಕ್ಷ ಕೋಟಿ ರೂ

ಕಾಂಪೆನ್ಸೇಶನ್ ಸೆಸ್ ಎಂದರೆ ಯಾವುದು?

ಯಾವುದಾದರೂ ಸರಕು ಅಥವಾ ಸೇವೆಗಳಿಗೆ ಜಿಎಸ್​ಟಿಯಿಂದಾಗಿ ಯಾವುದಾದರೂ ರಾಜ್ಯದ ಆದಾಯಕ್ಕೆ ಕುಂಠಿತವಾಗುತ್ತಿದೆ ಎನಿಸಿದಲ್ಲಿ ಅದಕ್ಕೆ ಪರಿಹಾರವಾಗಿ ಹೆಚ್ಚುವರಿ ಸೆಸ್ ವಿಧಿಸುವ ಅವಕಾಶ ಇರುತ್ತದೆ. ಇದನ್ನೇ ಕಾಂಪೆನ್ಸೇಶನ್ ಸೆಸ್.

ಇದನ್ನೂ ಓದಿ: 2024-25ಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿ: ಸಿಬಿಟಿ ನಿರ್ಧಾರ; 1952ರಿಂದೀಚೆಗಿನ ಇಪಿಎಫ್ ಬಡ್ಡಿದರಗಳ ಪಟ್ಟಿ

ಐಜಿಎಸ್​ಟಿ ಎಂದರೆ ಯಾವುದು?

ಒಂದು ರಾಜ್ಯದಲ್ಲಿರುವ ಬಿಸಿನೆಸ್ ಸಂಸ್ಥೆ ಮತ್ತು ಬೇರೊಂದು ರಾಜ್ಯದಲ್ಲಿರುವ ಬಿಸಿನೆಸ್ ಸಂಸ್ಥೆ ಮಧ್ಯೆ ನಡೆಯುವ ವ್ಯಾಪಾರ ವಹಿವಾಟುಗಳಲ್ಲಿ ಐಜಿಎಸ್​ಟಿ ಅನ್ವಯ ಆಗುತ್ತದೆ. ಈ ತೆರಿಗೆಯನ್ನು ಕೇಂದ್ರ ಸರ್ಕಾರವು ಆಯಾ ರಾಜ್ಯಗಳಿಗೆ ನಿರ್ದಿಷ್ಟ ಸೂತ್ರದ ಪ್ರಕಾರ ಹಂಚಿಕೆ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ