ಇತ್ತೀಚಿನ ವಿದ್ಯಾಮಾನಗಳಲ್ಲಿ ಉದ್ಯೋಗವೇ ಮೇಲು ಎಂದು ತಮ್ಮ ಮಕ್ಕಳ(Children) ಲಾಲನೆ ಪಾಲನೆಯನ್ನೂ ಸರಿಯಾಗಿ ಮಾಡದೆ ಆಫೀಸಿಗೆ ಹೊರಟುಬಿಡುತ್ತಾರೆ. ಹೌದು ಉದ್ಯೋಗ(Job)ವೂ ಮುಖ್ಯನೇ. ಆದರೆ, ಮಕ್ಕಳ ಲಾಲನೆ ಪಾಲನೆ ಸರಿಯಾಗಿ ಆಗದಿದ್ದರೆ, ಅವರೊಂದಿಗೆ ಸರಿಯಾಗಿ ಸಮಯ ಕಳೆಯದಿದ್ದರೆ, ಮಕ್ಕಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದೆ ಪರಿತಪಿಸಬೇಕಾಗಿ ಬರಬಹುದು. ಹೀಗಾಗಿ ಮಕ್ಕಳ ವಿಚಾರದಲ್ಲಿ ಈ ಸುದ್ದಿಯಲ್ಲಿ ತಿಳಿಸಿರುವ ಕೆಲವೊಂದು ಸಲಹೆಗಳನ್ನು ಕಡೆಗಣಿಸದಿರಿ ಮತ್ತು ನಿಮ್ಮ ವೈಯಕ್ತಿಕ ಜೀವನಕ್ಕೂ ಅನುಕೂಲವಾಗುವ ಮಾಹಿತಿಯೂ ಈ ಸುದ್ದಿಯಲ್ಲಿ ಇದೆ.
ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ
ಈಗ ಏನು ಆಗಿಬಿಟ್ಟಿದೆ ಎಂದರೆ, ‘‘ಓಹ್! ಅವರ ಮಕ್ಕಳು ದೊಡ್ಡ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ನಮ್ಮ ಮಕ್ಕಳೂ ಅಂತಹದ್ದೇ ಶಾಲಾ ಕಾಲೇಜುಗಳಲ್ಲಿ ಓದಬೇಕು” ಅಂತ ಯೋಚಿಸುವವರೇ ಜಾಸ್ತಿ. ಇದು ನಿಮಗೆ ಆರ್ಥಿಕ ಹೊಡೆತ ನೀಡುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ತಕ್ಕಂತೆ, ನಿಮ್ಮ ಮಕ್ಕಳ ಬೆಳವಣಿಗೆಗೆ ಪೂರಕವಾಗುವಂತಹ ಶಾಲಾ ಕಾಲೇಜುಗಳಿಗೆ ಸೇರಿಸಿ. ಮಿತಿಮೀರಿದ ಶೈಕ್ಷಣಿಕ ವೆಚ್ಚವು ಕುಟುಂಬದ ಆರ್ಥಿಕ ಸ್ಥಿತಿಗತಿಗೆ ಹೊರೆಯಾಗಬಹುದು.
ಮಕ್ಕಳಿಗಾಗಿ ಶೈಕ್ಷಣಿಕ ವೆಚ್ಚಕ್ಕಾಗಿ ಉಳಿತಾಯ
ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಶಿಕ್ಷಣಗಳು ತುಂಬಾ ದುಬಾರಿಯಾಗಿಬಿಟ್ಟಿವೆ. ಹೀಗಾಗಿ ನಿಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸಬೇಕು ಅಂತ ಅಂದೊಕೊಂಡಿದ್ದರೆ ಅಂಥವರು ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ಈಗಲೇ ಹಣಕಾಸಿನ ಯೋಜನೆಯನ್ನು ರೂಪಿಸಿ. ನೀವು ಕಚೇರಿ ಕೆಲಸದಲ್ಲಿ ಇದ್ದೀರಿ ಎಂದಾದರೆ ನಿಮ್ಮ ವೇತನದ ಒಂದಷ್ಟು ಹಣವನ್ನು ಉಳಿತಾಯ ಖಾತೆಗೆ ಸೇರುವಂತೆ ಮಾಡಿ. ಯಾವುದೇ ಕಾರಣಕ್ಕೂ ಈ ಹಣವನ್ನು ಬೇರೆ ವಿಚಾರಗಳಿಗೆ ಬಳಸಿಕೊಳ್ಳಬೇಡಿ.
ಮಕ್ಕಳ ಶೈಕ್ಷಣಿಕ ಬದುಕಿಗೆ ಮಾತ್ರ ಹಣ ಕ್ರೂಡೀಕರಿಸಿದರೆ ಸಾಕೇ? ಮಕ್ಕಳ ವಿವಾಹಕ್ಕೇನು? ಎಂಬ ವಿಚಾರವೂ ತಲೆಯಲ್ಲಿರಬೇಕು. ಅಯ್ಯೋ ಶಿಕ್ಷಣ ನೀಡಿದರೆ ಸಾಕು, ಮುಂದೆ ಉದ್ಯೋಗ ಪಡೆದು ಅವರೇ ಹಣ ಮಾಡಿ ವಿವಾಹದ ಖರ್ಚು ಭರಿಸಲಿ ಎಂದು ಬಿಟ್ಟರೆ ಮನೆಯ ಹಾಗೂ ವೈಯಕ್ತಿಕ ಖರ್ಚು ವೆಚ್ಚದೊಂದಿಗೆ ವಿವಾಹದ ವೆಚ್ಚ ಹೊರೆಯಾಗಿಬಿಡಬಹುದು. ಹೀಗಾಗಿ ನೀವು ಮೊದಲಿನಿಂದಲೇ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ತಪ್ಪಿಸಬಹುದು.
ಮಕ್ಕಳ ಖರ್ಚುವೆಚ್ಚದಲ್ಲಿ ಆರ್ಥಿಕ ಶಿಸ್ತು
ಮಗುವಿನ ವಿಚಾರ ಹೇಗೆ ಎಂದರೆ, ನೋಡಿದ್ದೆಲ್ಲಾ ಬೇಕು. ಅದಕ್ಕೆ ತಿಳುವಳಿಕೆ ಇರುವುದಿಲ್ಲ, ದುಬಾರಿ ಬೆಲೆಯದ್ದೂ ಕೇಳಬಹುದು. ಉದಾಹರಣೆಗೆ ಮೊಬೈಲ್. ಇಂಥ ಸಂದರ್ಭದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕು. ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ನೂರು ಬಾರಿ ಯೋಚಿಸಿ, ಆನ್ಲೈನ್ ಶಿಕ್ಷಣಕ್ಕೆಂದು ತೆಗೆದಿದ್ದರೆ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಒಂದು ಕಣ್ಣಿಡಿ. ಆಟಿಕೆಗಳಿಗಾಗಿ, ಅನಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವುದು ಸರಿಯಲ್ಲ. ಮಕ್ಕಳಿಗಾಗಿ ಮಾಡುವ ಪ್ರತಿಯೊಂದು ಖರ್ಚಿನಲ್ಲಿ ಆರ್ಥಿಕ ಶಿಸ್ತನ್ನು ಪಾಲಿಸಿ.
ಮಹಿಳೆಯರ ಕಥೆ ಏನು ಈಗ?
ಹೆಚ್ಚಿನ ಮಹಿಳೆಯರು ಬೇರೊಬ್ಬ ಮಹಿಳೆಯನ್ನು ಅನುಸರಿಸುವುದು ಹೆಚ್ಚು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿಯೂ ಇರುತ್ತಾರೆ. ಸಾಮಾಜಿಕ ಜಾಲತಾಣದ ಬಳಕೆ ತಪ್ಪಲ್ಲ. ಆದರೆ, ಆ ವೇದಿಕೆಯಲ್ಲಿ ಕಾಣಸಿಗುವ ಹೈಫೈ ಫೋಟೋ, ವಿಚಾರಗಳನ್ನು ನೋಡಿ ಪ್ರಭಾವಿತಕ್ಕೊಳಗಾಗಿ ನಮಗೂ ಬೇಕು ಎಂದು ಅದೇ ದಾರಿ ಹಿಡಿಯುವುದು ಸರಿಯಲ್ಲ.
ಸ್ನೇಹಿತೆಯೊಬ್ಬಳು ತನ್ನ ಮಗುವಿನ ಬರ್ತ್ ಡೆ ದಿನದಂದು ಹೊಟೇಲ್ ಒಂದರಲ್ಲಿ ಕಾರ್ಯಕ್ರಮ ಆಯೋಜಿಸಿ ದೊಡ್ಡ ಕೇಕ್ ಕಟ್ ಮಾಡಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾಳೆ. ಇದನ್ನು ನೀವು ನೋಡಿ ನಾವು ಕೂಡ ಹೀಗೆ ಸೆಲೆಬ್ರೇಷನ್ ಮಾಡಬೇಕು ಎಂದು ಅಂದುಕೊಳ್ಳುವ ಮುನ್ನ ಅವರ ಆರ್ಥಿಕ ಸ್ಥಿತಿಗತಿ ಮತ್ತು ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ವಿಮರ್ಶೆ ಮಾಡಬೇಕಾಗುತ್ತದೆ.
ಏನೇ ಇರಲಿ, ಯಾರು ಹೇಗೇ ಇರಲಿ. ನಾವು ಮಾತ್ರ ನಮ್ಮ ಸ್ಥಿತಿಗತಿಗಳನ್ನು ಅರಿತುಕೊಂಡು ಮುಂದೆ ಸಾಗಬೇಕು. ಹಣವನ್ನು ದುಂದುವೆಚ್ಚ ಮಾಡುವವರನ್ನು ಫಾಲೋ ಮಾಡುವ ಬದಲು ನಿಮಗೆ ಸ್ಫೂರ್ತಿ ನೀಡುವಂಥವರನ್ನು ಅನುಸರಿಸಿಕೊಳ್ಳಿ. ಇದರಲ್ಲಿದೆ ನೆಮ್ಮದಿ.
Published On - 10:22 am, Mon, 16 May 22