
ಪಾಸ್ವರ್ಡ್ ನಿರ್ವಹಣಾ ಕಂಪನಿ ನಾರ್ಡ್ಪಾಸ್ (NordPass) ನಡೆಸಿದ ಹೊಸ ಅಧ್ಯಯನದ ಪ್ರಕಾರ, ಭಾರತದಲ್ಲಿ ಜನರು ಈಗಲೂ 123456 ನಂತಹ ಸುಲಭವಾದ ಸಂಖ್ಯೆಗಳ ಸಂಯೋಜನೆಯನ್ನೇ ಅತಿ ಹೆಚ್ಚು ಪಾಸ್ವರ್ಡ್ ಆಗಿ ಬಳಸುತ್ತಿದ್ದಾರೆ. ವಿವಿಧ ತಲೆಮಾರುಗಳ ಜನರು ತಮಗೆ ಇಷ್ಟವಾದ ಸಂಗೀತ, ಸಿನಿಮಾಗಳು, ವಿಡಿಯೊ ಗೇಮ್ಗಳು ಮತ್ತು ಇಂಟರ್ನೆಟ್ ಟ್ರೆಂಡ್ಗಳನ್ನು ಆಧರಿಸಿ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಪಾಸ್ವರ್ಡ್ಗಳನ್ನು ರಚಿಸಿಕೊಳ್ಳುತ್ತಾರೆ ಎಂಬುದೂ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಮೆಟಾಲಿಕಾ ಅಂತಹ ಹಳೆಯ ಜನಪ್ರಿಯ ಸಂಗೀತ ಗುಂಪಿನಿಂದ ಹಿಡಿದು ಸ್ಕಿಬಿಡಿ ಟಾಯ್ಲೆಟ್ನಂತಹ ಹೊಸ ಇಂಟರ್ನೆಟ್ ಟ್ರೆಂಡ್ಗಳವರೆಗೆ, ಜನರ ಆಸಕ್ತಿಗಳು ಮತ್ತು ಜನಪ್ರಿಯ ಸಂಸ್ಕೃತಿಯು ಪಾಸ್ವರ್ಡ್ ಆಯ್ಕೆಯ ಮೇಲೂ ಪ್ರಭಾವ ಬೀರುತ್ತಿವೆ ಎಂಬುದನ್ನು ಈ ಫಲಿತಾಂಶಗಳು ತೋರಿಸಿವೆ. ಇದರಿಂದ ಇಂತಹ ಪಾಸ್ವರ್ಡ್ಗಳನ್ನು ಊಹಿಸುವುದು ಇನ್ನಷ್ಟು ಸುಲಭವಾಗುತ್ತದೆ.
ಭಾರತ ಸೇರಿದಂತೆ 45 ದೇಶಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್ವರ್ಡ್ಗಳನ್ನು ಈ ಅಧ್ಯಯನ ವಿಶ್ಲೇಷಿಸಿದೆ. ಜನರು ಯಾವ ರೀತಿಯ ಪಾಸ್ವರ್ಡ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ವಿವಿಧ ಖಾತೆಗಳಲ್ಲಿ ಮತ್ತೆ ಮತ್ತೆ ಬಳಸುತ್ತಾರೆಯೇ ಎಂಬುದನ್ನು ತಿಳಿಯುವುದು ಇದರ ಉದ್ದೇಶವಾಗಿದೆ.
ನಾರ್ಡ್ಪಾಸ್ ಸಂಸ್ಥೆಯು ನಾರ್ಡ್ಲೇಯರ್ ಇಂಟೆಲಿಜೆನ್ಸ್ ಮತ್ತು ಸೈಬರ್ ಭದ್ರತಾ ತಜ್ಞರ ಸಹಯೋಗದಲ್ಲಿ ಈ ಅಧ್ಯಯನ ನಡೆಸಿದೆ. 2025ರ ಸೆಪ್ಟೆಂಬರ್ನಿಂದ 2026ರ ಸೆಪ್ಟೆಂಬರ್ವರೆಗೆ ನಡೆದ ಡೇಟಾ ಸೋರಿಕೆಗಳು ಮತ್ತು ಡಾರ್ಕ್ ವೆಬ್ನಲ್ಲಿ ಬಹಿರಂಗವಾದ ಪಾಸ್ವರ್ಡ್ಗಳನ್ನು ಪರಿಶೀಲಿಸಲಾಗಿದೆ.
ಅಧ್ಯಯನದ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್ವರ್ಡ್ ಈಗಲೂ 123456 ಆಗಿದೆ. ನಂತರದ ಸ್ಥಾನಗಳಲ್ಲಿ 12345678 ಮತ್ತು admin ಇವೆ. ದೇಶದ ಅತಿ ಹೆಚ್ಚು ಬಳಕೆಯಾಗುವ 20 ಪಾಸ್ವರ್ಡ್ಗಳ ಪಟ್ಟಿಯಲ್ಲಿ ಸರಳ ಸಂಖ್ಯೆಗಳು ಮತ್ತು ದೈನಂದಿನ ಬಳಕೆಯ ಸಾಮಾನ್ಯ ಪದಗಳಿಂದ ರಚಿಸಲಾದ ಪಾಸ್ವರ್ಡ್ಗಳೇ ಹೆಚ್ಚಿವೆ.
ಈ ಪಟ್ಟಿಯಲ್ಲಿ 1234, 12345, 123456789, password ಮತ್ತು 1234567890 ಕೂಡ ಸೇರಿವೆ. ಇದರ ಜತೆಗೆ Admin@123, Welcome@123, admin@123 ಮತ್ತು India@123 ನಂತಹ ಪಾಸ್ವರ್ಡ್ಗಳನ್ನೂ ಜನರು ಬಳಸುತ್ತಿದ್ದಾರೆ.
ಒಂದೇ ಪದದ ಜತೆಗೆ ಕೆಲವು ಸಂಖ್ಯೆಗಳು ಅಥವಾ ವಿಶೇಷ ಚಿಹ್ನೆಗಳನ್ನು ಸೇರಿಸಿದರೆ ಪಾಸ್ವರ್ಡ್ ಊಹಿಸುವುದು ಕಷ್ಟವಾಗುತ್ತದೆ ಎಂಬುದು ಸುಳ್ಳು ಎನ್ನುವುದನ್ನು ಈ ಪಾಸ್ವರ್ಡ್ಗಳ ಮರುಬಳಕೆ ತೋರಿಸುತ್ತದೆ.
ಜಾಗತಿಕ ಮಟ್ಟದಲ್ಲಿಯೂ 123456 ಅತಿ ಹೆಚ್ಚು ಬಳಕೆಯಾಗುವ ಪಾಸ್ವರ್ಡ್ ಆಗಿ ಮೊದಲ ಸ್ಥಾನದಲ್ಲಿದೆ. Admin ಎರಡನೇ ಸ್ಥಾನದಲ್ಲಿದ್ದರೆ, 12345678 ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷದ ಪಟ್ಟಿಗೆ ಹೋಲಿಸಿದರೆ ಅಗ್ರ ನಾಲ್ಕು ಪಾಸ್ವರ್ಡ್ಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ನಾರ್ಡ್ಪಾಸ್ ತಿಳಿಸಿದೆ.
ಪಾಸ್ವರ್ಡ್ಗಳಲ್ಲಿ ವಿಶೇಷ ಚಿಹ್ನೆಗಳ ಬಳಕೆ ಹೆಚ್ಚಾಗಿರುವುದನ್ನೂ ಅಧ್ಯಯನ ಗುರುತಿಸಿದೆ. ಈ ವರ್ಷದ ಜಾಗತಿಕ ಪಟ್ಟಿಯಲ್ಲಿ 39 ಪಾಸ್ವರ್ಡ್ಗಳು ವಿಶೇಷ ಚಿಹ್ನೆಗಳನ್ನು ಒಳಗೊಂಡಿವೆ. ಕಳೆದ ವರ್ಷ ಇಂತಹ ಪಾಸ್ವರ್ಡ್ಗಳ ಸಂಖ್ಯೆ 32 ಇತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ