ನವದೆಹಲಿ, ಜನವರಿ 9: ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್ ಸಂಸ್ಥೆ ಸಿಬಿಆರ್ಇ ಸೌತ್ ಏಷ್ಯಾ ಭಾರತದ ಎಂಎಸ್ಎಂಇ ವಲಯದ (MSME sector) ಬಗ್ಗೆ ಕುತೂಹಲಕಾರಿ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳು (ಎಂಎಸ್ಎಂಇ) ಭಾರತದ ಆರ್ಥಿಕತೆಗೆ ಹೇಗೆ ಪುಷ್ಟಿ ಕೊಡುತ್ತಿವೆ ಎಂಬುದನ್ನು ಅವಲೋಕಿಸುವ ವರದಿ ಇದು. ‘ಎಂಎಸ್ಎಂಇ: ಆರ್ಥಿಕ ಪ್ರಗತಿಯ ಯಂತ್ರಗಳ ಅನಾವರಣ’ (MSMEs: Unleashing the Engines of Economic Prosperity) ಎಂಬ ಈ ವರದಿಯಲ್ಲಿ ಭಾರತದ ವಿವಿಧ ರಾಜ್ಯಗಳು ಎಂಎಸ್ಎಂಇ ವಲಯಕ್ಕೆ ಎಷ್ಟು ಕೊಡುಗೆ ನೀಡುತ್ತಿವೆ ಎಂಬುದನ್ನೂ ಅವಲೋಕಿಸಿದೆ.
ಸಿಬಿಆರ್ಇ ಪ್ರಕಟಿಸಿದ ಈ ವರದಿಯ ಪ್ರಕಾರ ದೇಶದ ಎಂಎಸ್ಎಂಇ ವಲಯಕ್ಕೆ ಮಹಾರಾಷ್ಟ್ರದ ಕೊಡುಗೆ ಶೇ. 17ರಷ್ಟಿದೆ. ತಮಿಳುನಾಡು ಮತ್ತು ಉತ್ತರಪ್ರದೇಶ ಟಾಪ್-3 ರಾಜ್ಯಗಳ ಪಟ್ಟಿಯಲ್ಲಿವೆ. ಬಿಮಾರು ರಾಜ್ಯಗಳ ಪೈಕಿ ಒಂದು ಎಂದು ಸದಾ ಹೀಯಾಳಿಸಲ್ಪಡುವ ಉತ್ತರಪ್ರದೇಶ ರಾಜ್ಯ ಎಂಎಸ್ಎಂಇ ವಲಯಕ್ಕೆ ಶೇ. 9ರಷ್ಟು ಕೊಡುಗೆ ನೀಡುತ್ತದೆ ಎನ್ನುವುದು ಗಮನಾರ್ಹ. ಇದು ಉದ್ಯಮ್ ಪೋರ್ಟಲ್ ಮೂಲಕ ನೊಂದಣಿಯಾದ ಎಂಎಸ್ಎಂಇಗಳ ದತ್ತಾಂಶದ ಮೇಲೆ ಆಧಾರಿತವಾಗಿರುವ ವರದಿ.
ಇದನ್ನೂ ಓದಿ: Maldives: ಭಾರತದಲ್ಲಿ ಟ್ರೆಂಡ್ ಆಗುತ್ತಿದೆ #UninstallMakeMyTrip; ಯಾಕೆ ಮೇಕ್ ಮೈ ಟ್ರಿಪ್ ಮೇಲೆ ಆಕ್ರೋಶ?
ಭಾರತದ ಐಟಿ ಬಿಟಿ ಸೆಂಟರ್ ಎನಿಸಿರುವ ಮತ್ತು ಸ್ಟಾರ್ಟಪ್ಗಳ ಅಡ್ಡೆಯಾಗಿರುವ ಕರ್ನಾಟಕ ಎಂಎಸ್ಎಂಇ ವಿಚಾರದಲ್ಲಿ ಮುಂಚೂಣಿಯಲ್ಲಿ ಇಲ್ಲ ಎನ್ನುವುದು ಆಶ್ಚರ್ಯ. ಸಣ್ಣ ಉದ್ದಿಮೆಗಳ ವಲಯದಲ್ಲಿ ಕರ್ನಾಟಕದ ಪಾಲು ಶೇ. 6 ಮಾತ್ರ ಇದ್ದು, ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬಳ್ಳಿಯಲ್ಲಿ ಹೆಚ್ಚಿನ ಸ್ಟಾರ್ಟಪ್ಗಳು ನೆಲಸಿವೆ.
ಸಿಬಿಆರ್ಇ ವರದಿ ಪ್ರಕಾರ ಭಾರತ ಸರ್ಕಾರದ ಉದ್ಯಮ್ ಪೋರ್ಟಲ್ನಲ್ಲಿ ನೊಂದಣಿಯಾದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಂಖ್ಯೆ 2.1 ಕೋಟಿಯಷ್ಟಿದೆ. ಈ ಎಂಎಸ್ಎಂಇಗಳು ದೇಶದ ಜಿಡಿಪಿಗೆ ನೀಡುತ್ತಿರುವ ಕೊಡುಗೆ ಶೇ. 30ರಷ್ಟಿದೆ. ಬರೋಬ್ಬರಿ 14 ಕೋಟಿ ಜನರಿಗೆ ಈ ವಲಯದಲ್ಲಿ ಉದ್ಯೋಗ ಸಿಕ್ಕಿದೆ. ಅಷ್ಟೇ ಅಲ್ಲ, ಭಾರತದ ಒಟ್ಟು ರಫ್ತಿನಲ್ಲಿ ಎಂಎಸ್ಎಂಇಗಳ ಕೊಡುಗೆ ಶೇ. 44ರಷ್ಟಿದೆ ಎನ್ನುವುದು ಗಮನಾರ್ಹ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮುಂದುವರಿದ ದೇಶಗಳಲ್ಲಿ ಅಲ್ಲಿನ ಆರ್ಥಿಕತೆಗೆ ಎಂಎಸ್ಎಂಇಗಳ ಕೊಡುಗೆ ಹೆಚ್ಚಿನ ಮಟ್ಟದಲ್ಲಿ ಇದೆ. ಹಾಗೆಯೇ, ಭಾರತದಲ್ಲಿ ಎಂಎಸ್ಎಂಇ ವಲಯಕ್ಕೆ ಇರುವ ತೊಡರುಗಳ ಬಗ್ಗೆಯೂ ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.
ಇದನ್ನೂ ಓದಿ: Farmers: ಪಿಎಂ ಕಿಸಾನ್ ಯೋಜನೆ; ರೈತರಿಗೆ ಸಿಗಲಿದೆ 8,000 ರೂ ಹಣ; ಕಂತುಗಳ ಸಂಖ್ಯೆ 4ಕ್ಕೆ ಏರಿಕೆ ಸಾಧ್ಯತೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ