ನವದೆಹಲಿ: ಶುದ್ಧ ಇಂಧನ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಹಬ್ ಆಗಿ ಮಾಡುವ ಗುರಿಯೊಂದಿಗೆ ‘ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್ (National Green Hydrogen Mission)’ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್’ಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. 19,744 ಕೋಟಿ ರೂ. ಆರಂಭಿಕ ವೆಚ್ಚದಲ್ಲಿ ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ. ಎಸ್ಐಜಿಎಚ್ಟಿ ಯೋಜನೆಗೆ 17,490 ಕೋಟಿ ರೂ, ಪ್ರಾಯೋಗಿಕ ಯೋಜನೆಗೆ 1,466 ಕೋಟಿ ರೂ, ಆರ್&ಡಿಗೆ 400 ಕೋಟಿ ರೂ, ಹಾಗೂ ಮಿಷನ್ ಕಾಂಪೊನೆಂಟ್ಸ್ಗೆ 388 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿ ಸಿದ್ಧಪಡಿಸುವುದು ಮತ್ತು ಯೋಜನಾನುಷ್ಠಾನವನ್ನು ನವೀಕರಿಸಬಹುದಾದ ಇಂಧನಗಳ ಸಚಿವಾಲಯ ಮಾಡಲಿದೆ.
ಇದನ್ನೂ ಓದಿ: Aadhaar Update: ಹೊಸ ವಿಳಾಸದ ದಾಖಲೆ ಇಲ್ಲದೆಯೇ ಆಧಾರ್ನಲ್ಲಿ ವಿಳಾಸ ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ವಾರ್ಷಿಕವಾಗಿ ಕನಿಷ್ಠ 50 ಲಕ್ಷ ಮೆಟ್ರಿಕ್ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ. 2030ರ ವೇಳೆಗೆ ದೇಶದಲ್ಲಿ ಹೆಚ್ಚುವರಿಯಾಗಿ 125 GW ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ. 2030ರ ವೇಳೆಗೆ 8 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ 6 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನೂ ಹೊಂದಲಾಗಿದೆ.
ಗ್ರೀನ್ ಹೈಡ್ರೋಜನ್ ಉತ್ಪಾದನೆ ಹೆಚ್ಚಿಸುವ ಮೂಲಕ 1 ಲಕ್ಷ ಕೋಟಿ ರೂ. ಮೊತ್ತದ ಪಳೆಯುಳಿಕೆ ಇಂಧನ ಆಮದು ಕಡಿಮೆಯಾಗಲಿದೆ. 2030ರ ವೇಳೆಗೆ ಹಸಿರು ಮನೆ ಅನಿಲ ಸೂಸುವಿಕೆ ವಾರ್ಷಿಕ 50 ಎಂಎಂಟಿಗೆ ಕಡಿಮೆಯಾಗಲಿದೆ ಎನ್ನಲಾಗಿದೆ. ‘ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್’ನಿಂದ ಗ್ರೀನ್ ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ರಫ್ತು ಅವಕಾಶಗಳು, ಕೈಗಾರಿಕಾ ಚಲನಶೀಲತೆ ಸೇರಿದಂತೆ ಅನೇಕ ಪ್ರಯೋಜನಗಳಿವೆ. ಪಳೆಯುಳಿಕೆ ಇಂಧನದ ಆಮದಿನ ಅವಲಂಬನೆ ಕಡಿಮೆಯಾಗಲಿದೆ. ದೇಶೀಯ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
Published On - 5:13 pm, Wed, 4 January 23