Argentina Crisis: ಅರ್ಧದಷ್ಟು ಕರೆನ್ಸಿ ಮೌಲ್ಯ ಇಳಿಸಿದ ಅರ್ಜೆಂಟೀನಾ; ಈಗ ಒಂದು ಡಾಲರ್​ಗೆ 800 ಪೆಸೋ

|

Updated on: Dec 13, 2023 | 11:16 AM

1 Dollar = 800 Argentine Peso: ಅರ್ಜೆಂಟೀನಾ ಸರ್ಕಾರ ತನ್ನ ದೇಶದ ಪೆಸೋ ಕರೆನ್ಸಿ ಮೌಲ್ಯವನ್ನು ಶೇ. 50ರಷ್ಟು ಅಪಮೌಲ್ಯಗೊಳಿಸಿದೆ. ಇದರೊಂದಿಗೆ ಡಾಲರ್​ಗೆ 400 ಇದ್ದ ಪೆಸೋ ಮೌಲ್ಯ 800 ಆಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದ್ದು, ದೊಡ್ಡ ಅನಾಹುತಕ್ಕೆ ಸಿಲುಕದಂತೆ ತಡೆಯಲು ತರ್ತು ಕ್ರಮವಾಗಿ ಕರೆನ್ಸಿ ಮೌಲ್ಯ ತಗ್ಗಿಸಲಾಗಿದೆ. ಅರ್ಜೆಂಟೀನಾದಲ್ಲಿ ಇತ್ತೀಚೆಗಷ್ಟೇ ಸರ್ಕಾರ ಬದಲಾಗಿದ್ದು, ಜೇವಿಯರ್ ಮಿಲೇಯ್ ನೂತನ ಅಧ್ಯಕ್ಷರಾಗಿದ್ದಾರೆ. ಕರೆನ್ಸಿ ಅಪಮೌಲ್ಯ ಸೇರಿದಂತೆ ವಿವಿಧ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.

Argentina Crisis: ಅರ್ಧದಷ್ಟು ಕರೆನ್ಸಿ ಮೌಲ್ಯ ಇಳಿಸಿದ ಅರ್ಜೆಂಟೀನಾ; ಈಗ ಒಂದು ಡಾಲರ್​ಗೆ 800 ಪೆಸೋ
ಅರ್ಜೆಂಟೀನಾ ಪೆಸೋ ಕರೆನ್ಸಿ
Follow us on

ನವದೆಹಲಿ, ಡಿಸೆಂಬರ್ 13: ಅರ್ಜೆಂಟೀನಾದ ದೇಶದ ನೂತನ ಅಧ್ಯಕ್ಷ ಜೇವಿಯರ್ ಮಿಲೇಯ್ (Javier Milei) ತಮ್ಮ ಮೊದಲ ಮಹತ್ವದ ಹೆಜ್ಜೆಯಲ್ಲಿ ದೇಶದ ಕರೆನ್ಸಿಯ ಅಪಮೌಲ್ಯೀಕರಣ (Argentina Currency Peso Devaluation) ಮಾಡಿದ್ದಾರೆ. ಪೆಸೋ ಕರೆನ್ಸಿಯ ಮೌಲ್ಯವನ್ನು ಅರ್ಧದಷ್ಟು ಕಡಿಮೆ ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ (economic crisis) ಬಿಗಡಾಯಿಸಿದ್ದು, ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸದ್ಯಕ್ಕೆ ಬೇರೆ ಪರ್ಯಾಯ ಮಾರ್ಗ ಅವಲೋಕಿಸುವಷ್ಟು ಸಮಯ ಇರಲಿಲ್ಲ ಎಂದು ನೂತನ ಅಧ್ಯಕ್ಷರು ಹೇಳಿದ್ದಾರೆ.

ಅರ್ಜೆಂಟೀನಾ ಪೆಸೋ ಕರೆನ್ಸಿಯ ಮೌಲ್ಯವನ್ನು ಶೇ. 50ರಷ್ಟು ಕಡಿಮೆ ಮಾಡಲಾಗಿದೆ ಎಂದು ಅರ್ಜೆಂಟೀನಾ ಆರ್ಥಿಕ ಸಚಿವ ಲೂಯಿಸ್ ಕಪುಟೋ ತಿಳಿಸಿದ್ದಾರೆ. ಒಂದು ಡಾಲರ್​ಗೆ 400 ಇದ್ದ ಪೆಸೋ ಬೆಲೆ ಈಗ 800 ಆಗಿದೆ.

ಇದನ್ನೂ ಓದಿ: Garlic Price: ದುಬಾರಿ ದುನಿಯಾ…! ಟೊಮೆಟೋ, ಈರುಳ್ಳಿ ಆಯ್ತು ಈಗ ಜನರ ಕಣ್ಣೀರು ಸುರಿಸುವ ಸರದಿ ಬೆಳ್ಳುಳ್ಳಿಯದ್ದು

‘ಕೆಲ ತಿಂಗಳವರೆಗೆ ನಾವು ಮುಂಚಿಗಿಂತಲೂ ಕೆಟ್ಟ ಪರಿಸ್ಥಿತಿಗೆ ಹೋಗಲಿದ್ದೇವೆ. ಆದರೆ, ದೊಡ್ಡ ಅನಾಹುತಕ್ಕೆ ಸಿಲುಕುವುದನ್ನು ತಪ್ಪಿಸಿ, ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಕರೆನ್ಸಿ ಅಪಮೌಲ್ಯಗೊಳಿಸುವುದು ಗುರಿಯಾಗಿದೆ,’ ಎಂದು ಆರ್ಥಿಕ ಸಚಿವರು ಈ ಕ್ರಮವನ್ನು ಸಮರ್ಥಿಸಿದ್ದಾರೆ.

ಅರ್ಜೆಂಟೀನಾದ ನೂತನ ಸರ್ಕಾರ ಕರೆನ್ಸಿ ಅಪಮೌಲ್ಯ ಮಾತ್ರವಲ್ಲ ಇನ್ನೂ ಕೆಲ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕ ಕಾಮಗಾರಿ ಯೋಜನೆಗಳ ಗುತ್ತಿಗೆ ರದ್ದು, ಸರ್ಕಾರಿ ನೌಕರಿಗಳ ನೇಮಕಾತಿ ರದ್ದು, ಸಾರಿಗೆ ಸಬ್ಸಿಡಿ ರದ್ದು, ಇಂಧನ ಸಬ್ಸಿಡಿ ರದ್ದು ಇತ್ಯಾದಿ ಕ್ರಮಗಳನ್ನು ಅರ್ಜೆಂಟೀನಾ ಸರ್ಕಾರ ತುರ್ತಾಗಿ ಕೈಗೊಂಡಿದೆ.

ಇದನ್ನೂ ಓದಿ: ಭಾರತದ ಹಣದುಬ್ಬರ ನವೆಂಬರ್​ನಲ್ಲಿ ಶೇ. 5.55ಕ್ಕೆ ಏರಿಕೆ; ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟ

ದಕ್ಷಿಣ ಅಮೆರಿಕ ಖಂಡದ ಅರ್ಜೆಂಟೀನಾ ದೇಶದಲ್ಲಿ ಹಣದುಬ್ಬರ ಸಮಸ್ಯೆ ವಿಪರೀತವಾಗಿ ಹೋಗಿದೆ. ಇಲ್ಲಿ ಶೇ. 143ರಷ್ಟು ಹಣದುಬ್ಬರ ಇದೆ. ಶೇ. 40ರಷ್ಟು ಜನರು ಬಡತನಕ್ಕೆ ಸಿಲುಕಿದ್ದಾರೆ. ಸಾಲದ ಸಮಸ್ಯೆ, ವಿತ್ತೀಯ ಕೊರತೆ ಇತ್ಯಾದಿ ಹಣಕಾಸು ಸಮಸ್ಯೆಗಳು ಅರ್ಜೆಂಟೀನಾವನ್ನು ಜರ್ಝರಿತಗೊಳಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ