E Commerce rule: ಥರಗುಟ್ಟಿದ ಇ- ಕಾಮರ್ಸ್ ಕಂಪೆನಿಗಳು; ಕೇಂದ್ರ ಸರ್ಕಾರದಿಂದ ಹೊಸ ನಿಯಮಾವಳಿಯ ಕಡಿವಾಣ

| Updated By: Srinivas Mata

Updated on: Jun 23, 2021 | 1:42 PM

ಇ ಕಾಮರ್ಸ್​​ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ಸರ್ಕಾರದಿಂದ ಜಾರಿಗೆ ತರಲು ಹೊರಟಿದ್ದು, ಇದರಿಂದ ಫ್ಲಿಪ್​ಕಾರ್ಟ್​, ಅಮೆಜಾನ್ ಸೇರಿದಂತೆ ಇತರ ಕಂಪೆನಿಗಳು ಕಾರ್ಯ ನಿರ್ವಹಣೆ ವಿಧಾನವನ್ನೇ ಬದಲಿಸಿಕೊಳ್ಳಬೇಕಾಗುತ್ತದೆ.

E Commerce rule: ಥರಗುಟ್ಟಿದ ಇ- ಕಾಮರ್ಸ್ ಕಂಪೆನಿಗಳು; ಕೇಂದ್ರ ಸರ್ಕಾರದಿಂದ ಹೊಸ ನಿಯಮಾವಳಿಯ ಕಡಿವಾಣ
ಸಾಂದರ್ಭಿಕ ಚಿತ್ರ
Follow us on

ಹೊಸದಾಗಿ ಬಂದಿರುವ ಭಾರತೀಯ ಇ- ಕಾಮರ್ಸ್ ನಿಯಮಗಳಿಂದಾಗಿ ಆನ್​ಲೈನ್​ ರೀಟೇಲರ್​ಗಳಿಗೆ, ಅದರಲ್ಲೂ ಅಮೆಜಾನ್ ಮತ್ತು ವಾಲ್​ಮಾರ್ಟ್​ ಒಡೆತನದ ಫ್ಲಿಪ್​ಕಾರ್ಟ್​ಗೆ ದುಬಾರಿ ಆಗಲಿದೆ. ತಮ್ಮ ಉದ್ಯಮದ ರಚನೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಬಹುದು ಎಂದು ಹಿರಿಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಗ್ರಾಹಕ ವ್ಯವಹಾರಗಳ ಸಚಿವಾಯಲಯವು ಸೋಮವಾರದಂದು ಕೆಲವು ಯೋಜನೆಗಳನ್ನು ರೂಪಿಸಿದೆ. ಅದರ ಪ್ರಕಾರ, ಆನ್​ಲೈನ್​ ರೀಟೇಲರ್​ಗಳಿಗೆ “ಫ್ಲ್ಯಾಷ್​ ಸೇಲ್ಸ್​”ಗಳಿಗೆ ಮಿತಿ, ಕಡ್ಡಾಯವಾಗಿ ನಿಯಮಾವಳಿಗಳ ಪಾಲನೆಗೆ ಅಧಿಕಾರಿಗಳ ನೇಮಕ, ಒಂದು ವೇಳೆ ಮಾರಾಟಗಾರರು ನಿರ್ಲಕ್ಷ್ಯ ತೋರಿದಲ್ಲಿ ಅದರ ಜವಾಬ್ದಾರಿ ಹೊರಬೇಕು, ಖಾಸಗಿ ಲೇಬಲ್​ಗಳ ಅಡಿಯಲ್ಲಿ ಮಾರಾಟಕ್ಕೆ ಉತ್ತೇಜನದ ಪ್ರಸ್ತಾವ ಮಾಡಲಾಗಿದೆ. ಈ ಹೊಸ ಕಾನೂನು ಎಲ್ಲದರ ಮೇಲೂ ಪರಿಣಾಮ ಬೀರುವ ನಿರೀಕ್ಷೆ ಇದೆ. ಅಂದಹಾಗೆ 2026ರ ಹೊತ್ತಿಗೆ ಭಾರತದಲ್ಲಿ ಇ-ರಿಟೇಲ್ ಮಾರ್ಕೆಟ್ ಅಂದಾಜು 20,000 ಕೋಟಿ ಅಮೆರಿಕನ್ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಟಾಟಾದ ಬಿಗ್​ಬ್ಯಾಸ್ಕೆಟ್, ರಿಲಯನ್ಸ್ ಜಿಯೋಮಾರ್ಟ್, ಸಾಫ್ಟ್​ಬ್ಯಾಂಕ್ ಬೆಂಬಲ ಇರುವ ಸ್ನ್ಯಾಪ್​ಡೀಲ್, ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್ ಇವೆಲ್ಲವೂ ಒಳಗೊಂಡಿವೆ.

ಈಗಾಗಲೇ ನೀತಿ ನಿರೂಪಣೆ ವಿಚಾರದಲ್ಲೇ ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಕಂಪೆನಿಗಳು ಹಾಗೂ ಭಾರತ ಸರ್ಕಾರದ ಮಧ್ಯ ತಿಕ್ಕಾಟ ನಡೆಯುತ್ತಿದೆ. “ಈ ಕಾನೂನುಗಳಿಂದ ಎಲ್ಲ ಬಗೆಯ ಇ-ಕಾಮರ್ಸ್ ಮೇಲೆ ಪರಿಣಾಮ ಆಗಲಿದ್ದು, ಉದ್ಯಮದ ವೆಚ್ಚ ಹೆಚ್ಚಾಗಲಿದೆ. ದೊಡ್ಡ ದೊಡ್ಡ ಕಂಪೆನಿಗಳ ಆಚೆಗೂ ಈ ನಿಯಮಾವಳಿಯ ಪ್ರಭಾವ ಹೇಗಿರಲಿದೆ ಎಂಬ ವಿಶ್ಲೇಷಣೆಗಳಾಗುತ್ತಿವೆ. ಆ ಬಗೆಗಿನ ತಮ್ಮ ಆತಂಕಗಳನ್ನು ಸರ್ಕಾರದ ಜತೆಗೆ ಹಂಚಿಕೊಳ್ಳಲಿವೆ,” ಎಂದು ಕಾನೂನು ಸಲಹೆ ಸಂಸ್ಥೆಯೊಂದರ ಪ್ರತಿನಿಧಿ ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ. ಸರ್ಕಾರದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಲು ಜುಲೈ 6ರ ತನಕ ಅವಕಾಶ ಇದೆ. ಆ ನಂತರ ಯಾವುದೇ ಸಮಯದಲ್ಲಿ ನಿಯಮಾವಳಿಗಳನ್ನು ಇನ್ನಷ್ಟು ಪರಿಶೀಲನೆ ಮಾಡಬಹುದು ಅಥವಾ ಜಾರಿಗೆ ತರಬಹುದು. ಸ್ನ್ಯಾಪ್​ಡೀಲ್​ ಹೇಳಿರುವ ಪ್ರಕಾರ, ನಿಯಮಾವಳಿಗಳನ್ನು ಪರಿಶೀಲನೆ ಮಾಡುತ್ತಿದೆ. ಬಿಗ್​ಬ್ಯಾಸ್ಕೆಟ್ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ತಿಳಿಸಿದೆ. ಇನ್ನು ರಿಲಯನ್ಸ್ ಪ್ರತಿಕ್ರಿಯಿಸಿಲ್ಲ.

ಮೇಡ್-ಇನ್-ಇಂಡಿಯಾ ಉತ್ಪನ್ನಗಳಿಗೆ ಉತ್ತಮ
ಈಗ ಪ್ರಸ್ತಾವ ಆಗಿರುವ ನಿಯಮಾವಳಿಗಳಲ್ಲಿ ನಿರ್ದಿಷ್ಟವಾಗಿ ಆಗುವ ಪರಿಣಾಮ ಅಂದರೆ, ರೀಟೇಲರ್ ಆಮದಾದ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಪರ್ಯಾಯವಾಗಿ ದೊರೆಯುವ ದೇಶೀಯ ಉತ್ಪನ್ನಗಳನ್ನೂ ತೋರಿಸಿ, ನ್ಯಾಯಸಮ್ಮತ ಅವಕಾಶ ದೊರೆಯುವಂತೆ ನಡೆದುಕೊಳ್ಳಬೇಕು. ​ಈ ಆಲೋಚನೆಯು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದಾಗಿ. ಇದು ಮೇಡ್-ಇನ್-ಇಂಡಿಯಾ ಉತ್ಪನ್ನಗಳಿಗೆ ಉತ್ತಮ. ಆದರೆ ಪ್ಲಾಟ್​ಫಾರ್ಮ್​ಗಳಿಗೆ ಅಲ್ಲ ಎನ್ನುತ್ತಾರೆ ವಿಶ್ಲೇಷಕರು. ಈಗ ರೂಪಿಸಿರುವ ನಿಯಮಾವಳಿಗಳು ಜಾರಿಗೆ ಬಂದಲ್ಲಿ, ಒಂದು ವೇಳೆ ಅವುಗಳನ್ನು ಅನುಸರಿಸದಿದ್ದ್ಲಲ್ಲಿ ಜೈಲು ವಾಸದ ಶಿಕ್ಷೆ, ಕನಿಷ್ಠ ದಂಡದ ಮೊತ್ತವಾದ 25 ಸಾವಿರ ರೂಪಾಯಿ ವಿಧಿಸಬಹುದು.

ಇ-ಕಾಮರ್ಸ್​​ಗಳಿಂದ ನ್ಯಾಯಸಮ್ಮತ ಅಲ್ಲದ ಮತ್ತು ವಂಚನೆಯ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂದು ಸಾಕಷ್ಟು ದೂರುಗಳು ಬರುವುದಕ್ಕೆ ಆರಂಭಿಸಿದ ಮೇಲೆ ಈ ನಿಯಮಾವಳಿ ರೂಪಿಸುವ ತೀರ್ಮಾನಕ್ಕೆ ಬರಲಾಯಿತು ಎನ್ನಲಾಗಿದೆ. ಆದರೆ ಯಾವುದೇ ನಿರ್ದಿಷ್ಟ ಕಂಪೆನಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ಮುಖ್ಯವಾಗಿ ಫ್ಲಿಪ್​ಕಾರ್ಟ್​, ಅಮೆಜಾನ್​ ಮೇಲೆ ಹೇಗೆ ಈ ನಿಯಮಾವಳಿ ಪರಿಣಾಮ ಬೀರುತ್ತದೆ ಅಂತ ನೋಡುವುದಾದರೆ, ಆ ಕಂಪೆನಿಗಳಿಗೆ ಸಂಬಂಧಿಸಿದ ಮಾರಾಟಗಾರರನ್ನು ಶಾಪಿಂಗ್ ವೆಬ್​ಸೈಟ್​ನ ಲಿಸ್ಟ್ ಮಾಡುವಂತಿಲ್ಲ. ಇನ್ನು ಅಂಗಸಂಸ್ಥೆಗಳು ಪ್ಲಾಟ್​ಫಾರ್ಮ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವಂಥ ಆನ್​ಲೈನ್​ ಮಾರಾಟಗಾರರಿಗೆ ಮಾರಾಟ ಮಾಡುವಂತಿಲ್ಲ. ಅಂದಹಾಗೆ ತನ್ನ ಟಾಪ್ ಎರಡು ಮಾರಾಟಗಾರ ಸಂಸ್ಥೆಯಲ್ಲಿ ಅಮೆಜಾನ್​ಗೆ ಪರೋಕ್ಷವಾಗಿ ಪಾಲಿದೆ.

ವಿದೇಶೀ ಹೂಡಿಕೆ ನಿರ್ಬಂಧಗಳ ಉಲ್ಲಂಘನೆ
ಭಾರತೀಯ ರೀಟೇಲರ್​ಗಳು ಆರೋಪಿಸುವಂತೆ, ನೇರ ಮಾರಾಟಕ್ಕೆ ಸಂಬಂಧಿಸಿದಂತೆ ಇರುವ ವಿದೇಶೀ ಹೂಡಿಕೆ ನಿರ್ಬಂಧಗಳನ್ನು ಮೀರಿ, ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ತಮ್ಮ ಹೋಲ್​ಸೇಲ್ ಘಟಕದಿಂದ ಪರೋಕ್ಷವಾಗಿ ಉತ್ಪನ್ನಗಳನ್ನು ವೆಬ್​ಸೈಟ್​ನಲ್ಲಿ ಪಟ್ಟಿ ಮಾಡುತ್ತಿವೆ. ಆದರೆ ಈ ಆರೋಪವನ್ನು ಎರಡೂ ಕಂಪೆನಿಗಳು ನಿರಾಕರಿಸಿವೆ. ಈಗಿನ ಪ್ರಸ್ತಾವಿತ ನಿಯಮದ ವಿರುದ್ಧ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ಧ್ವನಿ ಎತ್ತಲಿವೆ ಎಂದು ಮೂಲಗಳು ತಿಳಿಸಿವೆ. “ಈಗಿನ ಹೊಸ ನಿಯಮದ ಅಡಿಯಲ್ಲಿ ತಂದಿರುವ ವಿಚಾರದಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಡುವುದು ಏನೂ ಇಲ್ಲ,” ಎಂದು ಇ-ಕಾಮರ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಹೊಸ ನಿಯಮಾವಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅಮೆಜಾನ್, ಫ್ಲಿಪ್​ಕಾರ್ಟ್ ನಿರಾಕರಿಸಿವೆ.

ಅಮೆಜಾನ್​​ನಿಂದ ಕೆಲವೇ ಕಂಪೆನಿಗಳ ಮಾರಾಟಗಾರರಿಗೆ ಆದ್ಯತೆ ನೀಡುವ ಮೂಲಕ ಸರ್ಕಾರದ ಕಾನೂನು ಉಲ್ಲಂಘನೆ ಮಾಡಿರುವುದು ದಾಖಲಾತಿಗಳಲ್ಲಿ ಕಂಡುಬಂದಿದ್ದಾಗಿ 2021ರ ಫೆಬ್ರವರಿಯಲ್ಲಿ ರಾಯಿಟರ್ಸ್ ವರ್ಇ ಮಾಡಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಅಮೆಜಾನ್ ನಿರ್ಬಂಧಕ್ಕೆ ಆಗ್ರಹ ಕೇಳಿಬಂದಿತ್ತು. ಆದರೆ ತಾನು ಯಾರಿಗೂ ಆದ್ಯತೆ ನೀಡಿಲ್ಲ ಎಂದು ಅಮೆಜಾನ್​ ಕಂಪೆನಿ ಹೇಳಿಕೊಂಡಿದೆ.

ಇದನ್ನೂ ಓದಿ: ಅಮೆಜಾನ್, ಫ್ಲಿಪ್​ಕಾರ್ಟ್ ವಿರುದ್ಧದ ತನಿಖೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್

(New set of rules framed by central government become challenge for e commerce companies. Here is an explainer)