ಜಾಗತಿಕ ಮಟ್ಟದಲ್ಲಿ ಕಳೆದ ನೂರು ವರ್ಷಗಳಲ್ಲಿ ಅತಿ ಹೆಚ್ಚು ದಾನ ಮಾಡಿದ ವ್ಯಕ್ತಿಯ ಪಟ್ಟಿಯಲ್ಲಿ ಯಾರಿದ್ದಾರೆ ಗೊತ್ತಾ? ಭಾರತೀಯರಾದ ಜಮ್ಷೆಡ್ಜೀ ಟಾಟಾ. ಇವತ್ತಿಗೆ ಉಪ್ಪಿನಿಂದ ಸಾಫ್ಟ್ವೇರ್ ತನಕ ದೊಡ್ಡದಾಗಿ ಬೆಳೆದುನಿಂತಿರುವ ಟಾಟಾ ಸಾಮ್ರಾಜ್ಯದ ಮೂಲಪುರುಷ ಅವರು. ಜಮ್ಷೆಡ್ಜೀ ಅವರು ನೀಡಿದ ದಾನದ ಪ್ರಮಾಣ 10,200 ಕೋಟಿ ಅಮೆರಿಕನ್ ಡಾಲರ್. ನಿಮಗೆ ಗೊತ್ತಿರಲಿ, ಜಮ್ಷೆಡ್ಜೀ ನೌಸ್ಸೆರ್ವಾನ್ಜೀ ಟಾಟಾ ಕಾಲಾವಧಿ 1839ರಿಂದ 1904. ಅವರು ಕಾಲವಾದ 117 ವರ್ಷಗಳ ನಂತರವೂ ನಂಬರ್ 1 ಸ್ಥಾನದಲ್ಲಿ ಇರುವವರು ಜಮ್ಷೆಡ್ಜೀ ಅಂದರೆ ಇದರಲ್ಲೇ ಗೊತ್ತಾಗುತ್ತದೆ ಅವರು ದಾನ ಮಾಡಿದ ಪ್ರಮಾಣ. ಹ್ಯುರನ್ ರಿಪೋರ್ಟ್ ಅಂಡ್ ಎಡೆಲ್ಗೀವ್ ಫೌಂಡೇಷನ್ ಸೇರಿ ಟಾಪ್- 50 ದಾನ ಮಾಡಿದವರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಟಾಟಾ ನಂತರದ ಸ್ಥಾನದಲ್ಲಿ ಬಿಲ್ ಗೇಟ್ಸ್ ಮತ್ತು ಅವರಿಂದ ವಿಚ್ಛೇದಿತರಾದ ಮೆಲಿಂಡಾ ಗೇಟ್ಸ್ 7460 ಕೋಟಿ ಅಮೆರಿಕನ್ ಡಾಲರ್ ದೇಣಿಗೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವಾರೆನ್ ಬಫೆಟ್ 3740 ಕೋಟಿ ಅಮೆರಿಕನ್ ಡಾಲರ್, ಜಾರ್ಜ್ ಸೊರೊಸ್ 3480 ಕೋಟಿ ಯುಎಸ್ಡಿ, ಜಾನ್ ಡಿ. ರಾಕೆಫೆಲ್ಲರ್ 2680 ಕೋಟಿ ಡಾಲರ್ ದೇಣಿಗೆ ನೀಡುವುದರೊಂದಿಗೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. “ದಾನ- ದೇಣಿಗೆ ವಿಚಾರದಲ್ಲಿ ಕಳೆದ ಶತಮಾನದಲ್ಲಿ ಅಮೆರಿಕನ್ನರು ಮತ್ತು ಯುರೋಪಿಯನ್ನರು ಪಾರಮ್ಯ ಸಾಧಿಸಿರುವುದು ಕಂಡುಬರಬಹುದು. ಆದರೆ ಭಾರತದ ಟಾಟಾ ಸಮೂಹದ ಸ್ಥಾಪಕ ಜಮ್ಷೆಡ್ ಜೀ ಟಾಟಾ ವಿಶ್ವದ ಅತಿ ದೊಡ್ಡ ದಾನಿ ಎನಿಸಿದ್ದಾರೆ,” ಎಂದು ಹ್ಯುರನ್ ಮುಖ್ಯ ಸಂಶೋಧಕ ಹಾಗೂ ಅಧ್ಯಕ್ಷ ರುಪರ್ಟ್ ಹೂಗೆವರ್ಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತಮ ಕಾರ್ಯಗಳಿಗಾಗಿ ಮೂರನೇ ಎರಡು ಭಾಗದಷ್ಟು ಮಾಲೀಕತ್ವವನ್ನು ಟ್ಟಸ್ಟ್ಗಳಿಗಾಗಿ ಎತ್ತಿಟ್ಟಂಥ ಜಮ್ಷೆಡ್ಜೀ ಟಾಟಾ ಶಿಕ್ಷಣ, ಹೆಲ್ತ್ಕೇರ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಹಾಯ ಮಾಡಿ, ನೀಡುವುದರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ ಎಂದಿದ್ದಾರೆ. ಅಂದ ಹಾಗೆ 1892ರಿಂದಲೇ ಜಮ್ಷೆಡ್ ಜೀ ದಾನ ಕಾರ್ಯಗಳನ್ನು ಆರಂಭಿಸಿದ್ದಾರೆ. ಈ ಪಟ್ಟಿಯಲ್ಲಿ ಮತ್ತೊಬ್ಬರು ಮತ್ತು ಒಬ್ಬೇ ಒಬ್ಬರು ಭಾರತೀಯ ಅಂದರೆ ಅದು ವಿಪ್ರೋ ಕಂಪೆನಿಯ ಅಜೀಂ ಪ್ರೇಮ್ಜೀ. ವರ್ಚುವಲಿ ತಮ್ಮ ಎಲ್ಲ ಆಸ್ತಿ, 2200 ಕೋಟಿ ಅಮೆರಿಕನ್ ಡಾಲರ್ ಅನ್ನು ದಾನ ಕಾರ್ಯಗಳಿಗೆ ನೀಡಿದ್ದಾರೆ.
ಆಲ್ಫ್ರೆಡ್ ನೊಬೆಲ್ ಹೆಸರು ಕಳೆದ ಶತಮಾನದಲ್ಲಿನ ಈ ಟಾಪ್- 50 ಪಟ್ಟಿಯಲ್ಲಿ ಕೂಡ ಇಲ್ಲ. ಇನ್ನೂ ಕೆಲವು ಅಚ್ಚರಿಯ ಹೆಸರುಗಳೂ ಇವೆ. 50 ಜನರ ಪಟ್ಟಿಯ ಪೈಕಿ ಅಮೆರಿಕದ 39 ಮಂದಿ, ಆ ನಂತರ ಯುನೈಟೆಡ್ ಕಿಂಗ್ಡಮ್ನ 5, ಚೀನಾ 3 ಮಂದಿ ಇದ್ದಾರೆ. ಇನ್ನು ಒಟ್ಟು 50 ಮಂದಿಯ ಪೈಕಿ ಜೀವಂತ ಇರುವವರು 13 ಮಂದಿ ಮಾತ್ರ. ಮೂವರು ವೈಯಕ್ತಿಕವಾಗಿ ಒಂದೇ ವರ್ಷದಲ್ಲಿ 5000 ಕೋಟಿ ಅಮೆರಿಕನ್ ಡಾಲರ್ ಒಂದೇ ವರ್ಷದಲ್ಲಿ ಸೇರ್ಪಡೆ ಮಾಡಿದ್ದಾರೆ. ಅದರಲ್ಲಿ ಎಲಾನ್ ಮಸ್ಕ್ 15,100 ಕೋಟಿ ಯುಎಸ್ಡಿಯೊಂದಿಗೆ ಮುಂಚೂಣಿಯಲ್ಲಿದ್ದಾರೆ. ಜೆಫ್ ಬೆಜೋಸ್, ಕಾಲಿನ್ ಹ್ಯುಯಾಂಗ್ ತಲಾ 5000 ಕೋಟಿ ಸೇರ್ಪಡೆ ಮಾಡಿದ್ದಾರೆ.
“ಈ ದರದಲ್ಲಿ, ಐವತ್ತು ಅಥವಾ ಅದಕ್ಕಿಂತ ಹೆಚ್ಚು ಮಂದಿ ಮುಂದಿನ 5 ವರ್ಷಗಳಲ್ಲಿ 10,000 ಕೋಟಿ ದಾಟಬಹುದು,” ಎಂದು ಹೂಗೆವರ್ಫ್ ತಿಳಿಸಿದ್ದಾರೆ. ಕಳೆದ 100 ವರ್ಷಗಳಲ್ಲಿ 83,200 ಕೋಟಿ ಅಮೆರಿಕನ್ ಡಾಲರ್ ಅನ್ನು ಈ ಐವತ್ತು ಮಂದಿ ನೀಡಿದ್ದಾರೆ. ಆ ಪೈಕಿ 50,300 ಕೋಟಿ ಅಮೆರಿಕನ್ ಡಾಲರ್ ಫೌಂಡೇಷನ್ ಎಂಡೋಮೆಂಟ್ ಹಾಗೂ 32,900 ಕೋಟಿ ಯುಎಸ್ಡಿ ದೇಣಿಗೆ ಇಲ್ಲಿ ತನಕ ನೀಡಲಾಗಿದೆ.
ವಾರ್ಷಿಕ ಅನುದಾನವು ಗರಿಷ್ಠ 3000 ಕೋಟಿ ಅಮೆರಿಕನ್ ಡಾಲರ್ ಬಂದಿದೆ ಎಂದು ಹ್ಯುರನ್ ಹೇಳಿದೆ. 850 ಕೋಟಿ ಅಮೆರಿಕನ್ ಡಾಲರ್ನೊಂದಿಗೆ ಮೆಕ್ಕೆಂಜಿ ಸ್ಕಾಟ್ ಅತಿದೊಡ್ಡ ವಾರ್ಷಿಕ ಅನುದಾನ ಮಾಡಿರುವವರು ಆಗಿದ್ದಾರೆ. ಹೂಗೆವರ್ಪ್ ಹೇಳುವಂತೆ, ಈಗಿನ ಶತಕೋಟ್ಯಧಿಪತಿಗಳು ದಾನ ನೀಡುವುದಕ್ಕಿಂತ ಹೆಚ್ಚು ವೇಗವಾಗಿ ಗಳಿಕೆ ಮಾಡುತ್ತಾರೆ.
ಇದನ್ನೂ ಓದಿ: ಭಾರತಕ್ಕೆ 7,350 ಕೋಟಿ ರೂ. ದೇಣಿಗೆ, ಯಾರಿಂದ?
(Jamsetji Tata top philanthropist of the world of last century, according to Hurun Research and EdelGive Foundation top 50 givers)
Published On - 6:28 pm, Wed, 23 June 21