Oil import: ಮಧ್ಯ ಪ್ರಾಚ್ಯದಿಂದ ಭಾರತಕ್ಕೆ ಆಮದು ಕಚ್ಚಾ ತೈಲ ಪ್ರಮಾಣ 25 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ
ಮಧ್ಯಪ್ರಾಚ್ಯದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣ 25 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸರ್ಕಾರದ ಸೂಚನೆ ಮೇರೆಗೆ ರಿಫೈನರಿಗಳು ಕೈಗೊಂಡ ತೀರ್ಮಾನದಿಂದ ಈ ಬೆಳವಣಿಗೆ ಆಗಿದೆ.
ಮಧ್ಯ ಪ್ರಾಚ್ಯದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣ 2021ರ ಮೇ ತಿಂಗಳಲ್ಲಿ 25 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕೇಂದ್ರ ಸರ್ಕಾರದ ಸೂಚನೆ ಮೇಲೆ ವಿವಿಧೆಡೆಗಳಿಂದ ಆಮದು ಮಾಡಿಕೊಳ್ಳುವುದಕ್ಕೆ ರಿಫೈನರಿಗಳು ತೀರ್ಮಾನ ಮಾಡಿದ ಮೇಲೆ ಈ ಬೆಳವಣಿಗೆ ಆಗಿದೆ. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶ. ತೈಲ ಪೂರೈಕೆ ಮೇಲೆ ಇರುವ ನಿರ್ಬಂಧ ತೆರವುಗೊಳಿಸಿ, ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಮಾರಾಟ ಮಾಡುವಂತೆ ಕಳೆದ ಮಾರ್ಚ್ನಲ್ಲಿ ಸೌದಿ ಅರೇಬಿಯಾ ನೇತೃತ್ವದ ಒಪೆಕ್ ಮತ್ತು ಸಹವರ್ತಿಗಳಿಗೆ ಭಾರತ ಮನವಿ ಮಾಡಿತ್ತು. ಆದರೆ ಇದಕ್ಕೆ ಒಪ್ಪಿರಲಿಲ್ಲ. ಆ ಕಾರಣಕ್ಕೆ ಬೇರೆ ಮೂಲಗಳಿಂದ ತೈಲ ಆಮದು ಮಾಡಿಕೊಳ್ಳುವಂತೆ ಸರ್ಕಾರವು ರಿಫೈನರಿಗಳಿಗೆ ಸೂಚನೆ ನೀಡಿತ್ತು. ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆ ಎನಿಸಿಕೊಂಡಿರುವ ಭಾರತವು ಮೇ ತಿಂಗಳಲ್ಲಿ ಪ್ರತಿ ದಿನ 4.2 ಮಿಲಿಯನ್ ಬ್ಯಾರೆಲ್ (ಬಿಪಿಡಿ) ಆಮದು ಮಾಡಿಕೊಂಡಿದೆ. ಇದು ತಿಂಗಳ ಹಿಂದಿನ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಆಗಿದೆ.
ಆದರೆ, ಕಳೆದ ವರ್ಷದ ಇದೇ ಅವಧಿಗಿಂತ ಶೇ 31.5ರಷ್ಟು ಹೆಚ್ಚು ಎಂಬುದನ್ನು ದತ್ತಾಂಶಗಳು ಸೂಚಿಸಿವೆ. ಮಧ್ಯಪ್ರಾಚ್ಯದ ಪಾಲು ಶೇ 52.7ರಷ್ಟು ಇಳಿಕೆ ಆಗಿದೆ. 2019ರಿಂದ ಈಚೆಗೆ ಇದು ಕನಿಷ್ಠ ಪ್ರಮಾಣದ್ದಾಗಿದೆ. ಇನ್ನು 2021ರ ಏಪ್ರಿಲ್ನಲ್ಲಿ ಈ ಪ್ರಮಾಣ ಶೇ 67.9ರಷ್ಟಿತ್ತು. ಇರಾಕ್ ನಂತರ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶ ಸೌದಿ ಅರೇಬಿಯಾ. ವರ್ಷದ ಹಿಂದಿನ ಪ್ರಮಾಣ ಗಮನಿಸಿದರೆ ಕಾಲು ಭಾಗದಷ್ಟು ಕಡಿಮೆ ಆಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಿಂ ಆಮದು ಸ್ಥಾನವು ಏಪ್ರಿಲ್ನಲ್ಲಿ 3ರಲ್ಲಿ ಇದ್ದದ್ದು ಮೇ ತಿಂಗಳಲ್ಲಿ 7ಕ್ಕೆ ಕುಸಿದಿದೆ. ಮೇ ತಿಂಗಳ ಆಮದು ಪ್ರಮಾಣ ಶೇ 39ರಷ್ಟು ಕುಸಿತವಾಗಿದೆ. ಭಾರತ ಸರ್ಕಾರಿ ಸ್ವಾಮ್ಯದ ರಿಫೈನರಿಗಳು ಸೌದಿ ಅರೇಬಿಯಾದಿಂದ ಕಡಿಮೆ ತೈಲವನ್ನು ಆಮದು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ ಮೇಲೆ ಮೇ ತಿಂಗಳಲ್ಲಿ ಈ ಬೆಳವಣಿಗೆ ಆಗಿದೆ. ಹೀಗೆ ಮಧ್ಯಪ್ರಾಚ್ಯದಿಂದ ಕಡಿಮೆ ತೈಲವನ್ನು ಖರೀದಿ ಮಾಡಿದ್ದರಿಂದ ಭಾರತಕ್ಕೆ ಒಪೆಕ್ನಿಂದ ಆಮದು ಮಾಡಿಕೊಳ್ಳುವ ತೈಲ ಪ್ರಮಾಣ ದಾಖಲೆ ಮಟ್ಟಕ್ಕೆ ಕುಸಿದಿದೆ.
ಮಧ್ಯಪ್ರಾಚ್ಯಕ್ಕೆ ಬದಲಿಯಾಗಿ ಲ್ಯಾಟಿನ್ ಅಮೆರಿಕ, ಯುನೈಟೆಡ್ ಸ್ಟೇಟ್ಸ್ ಹಾಗೂ ಮೆಡಿಟರೇನಿಯನ್ನಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಅಮೆರಿಕದಿಂದ ಭಾರತವು ಪೆಟ್ರೋಲ್ ಆಮದು ಮಾಡಿಕೊಂಡು ಮುಂಬರುವ ತಿಂಗಳ ಬೇಡಿಕೆಯನ್ನು ಪೂರೈಸಿಕೊಂಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮೇ ತಿಂಗಳಲ್ಲಿ ಕಚ್ಚಾ ತೈಲ ಪೂರೈಕೆ ಮಾಡಿರುವ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ ನೈಜೀರಿಯಾ. ಭಾರತದ ಖಾಸಗಿ ರಿಫೈನರ್ಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರ ಎನರ್ಜಿ ಕೆನಡಿಯನ್ ಹೆವಿ ಆಯಿಲ್ ಖರೀದಿಸಿವೆ. ದಾಖಲೆಯ 2,44,000 ಬಿಪಿಡಿ, ಅಂದರೆ ಭಾರತದ ಒಟ್ಟಾರೆ ಆಮದಿನ ಶೇ 6ರಷ್ಟನ್ನು ಕೊಂಡಿದೆ. ಬ್ರೆಂಟ್ ಮತ್ತು ಡಬ್ಲ್ಯುಟಿಐಗೆ ಹೋಲಿಸಿದರೆ ಕಜಕಸ್ತಾನದ ಸಿಪಿಸಿ ಬ್ಲೆಂಡ್ ಮತ್ತು ಕೆನಡಿಯನ್ ಆಯಿಲ್ ಮೂಲಕ ಆಕರ್ಷಕ ರಿಯಾಯಿತಿ ದೊರೆಯುತ್ತದೆ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ: ಸೌದಿ ಅರೇಬಿಯಾಕ್ಕೆ ಸಡ್ಡು ಹೊಡೆದ ಭಾರತ, ಮೇ ತಿಂಗಳಿಂದ ತೈಲ ಆಮದು ಶೇ 25ರಷ್ಟು ಕಡಿತಕ್ಕೆ ಯೋಜನೆ
(Oil imports from middle east to India at 25 month low in May 2021. Here is the reason behind this reduction)
Published On - 9:30 pm, Wed, 23 June 21