ಭಾರತದ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ನಿಫ್ಟಿ 50 ಏಪ್ರಿಲ್ 22ನೇ ತಾರೀಕಿಗೆ 25 ವರ್ಷಗಳ ಪಯಣವನ್ನು ಮುಗಿಸಿದೆ. ಈ ಈಕ್ವಿಟಿ ಅಳತೆಗೋಲು ಏಪ್ರಿಲ್ 22, 1996ರಲ್ಲಿ ಅಸ್ತಿತ್ವಕ್ಕೆ ಬಂತು. ಆ ನಂತರದಲ್ಲಿ ದೇಶದ ವ್ಯವಹಾರ- ಆರ್ಥಿಕತೆ ಬದಲಾದಂತೆ ನಿಫ್ಟಿಯಲ್ಲೂ ಬದಲಾವಣೆಗಳಾಗಿವೆ. 1996ರ ಏಪ್ರಿಲ್ನಲ್ಲಿ ನಿಫ್ಟಿ ಆರಂಭವಾದ ಮೇಲೆ, 1,107ರಲ್ಲಿ ವಹಿವಾಟು ನಡೆಸಿತು. 1995ರ ನವೆಂಬರ್ ಅನ್ನು ಬೇಸ್ ವರ್ಷ 1000 ಎಂದು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಫೆಬ್ರವರಿ 8, 2021ರಂದು ನಿಫ್ಟಿ 15,000 ಪಾಯಿಂಟ್ ಗಡಿ ದಾಟಿ, ದಿನಾಂತ್ಯದ ವಹಿವಾಟು ಮುಗಿಸಿತು. ನಿಫ್ಟಿ 50 ಎಂಬುದು ಬೆಂಚ್ಮಾರ್ಕ್ (ಅಳತೆಗೋಲು). ಅದನ್ನು ತೂಗಲು ಭಾರತದ ಟಾಪ್ 50 ಕಂಪೆನಿಗಳ ವೇಯ್ಟೆಡ್ ಸರಾಸರಿ ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಎನ್ಎಸ್ಇಯಲ್ಲಿ ಲಿಸ್ಟೆಡ್ ಆಗಿರುವಂಥ ವಿವಿಧ ವಲಯದ 50 ಕಂಪೆನಿಗಳು ಅದರಲ್ಲಿ ಒಳಗೊಂಡಿವೆ.
ಸಮಯ ಬದಲಾದಂತೆ ಅದರೊಳಗಿನ ಹಲವು ಕಂಪೆನಿಗಳು ಸೂಚ್ಯಂಕದಿಂದ ಹೊರಹೋಗಿವೆ ಹಾಗೂ ಹೊಸದಾಗಿ ಒಳಬಂದಿವೆ. ಇನ್ನು ವರ್ಷದಿಂದ ವರ್ಷಕ್ಕೆ ವಲಯಯವಾರು ಪ್ರಾತಿನಿಧ್ಯ ಕೂಡ ಬದಲಾಗಿವೆ. ಆರ್ಥಿಕತೆಯ ಜತೆಜತೆಗೆ ಬದಲಾವಣೆಗಳು ಸಹ ಆಗಿವೆ. ಕಳೆದ ಮೂರು ದಶಕದಲ್ಲಿ ಉತ್ಪಾದನೆಯಿಂದ ಸೇವಾ ವಲಯದ ತನಕ ಆರ್ಥಿಕತೆಯಲ್ಲಿ ಅಭೂತಪೂರ್ವ ಬದಲಾವಣೆಗಳಾಗಿವೆ. ಖಾಸಗಿ ವಯದಲ್ಲಿ ಬೆಳವಣಿಗೆ ಆಗಿದೆ. 1996ನೇ ಇಸವಿಯಲ್ಲಿ ಇದ್ದ ವಲಯವಾರು ಪ್ರಾತಿನಿಧ್ಯಕ್ಕೂ 2021ರ ವಲಯವಾರು ಪ್ರಾತಿನಿಧ್ಯಕ್ಕೂ ಬಹಳ ವ್ಯತ್ಯಾಸ ಇದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹೇಳಿದೆ.
ಇನ್ನು ಈಗಿರುವ ನಿಫ್ಟಿ 50ಯ ಕಂಪೆನಿಗಳ ಪೈಕಿ 13 ಕಂಪೆನಿ ಅದರ ಶುರುವಿನಿಂದಲೂ ಸ್ಥಾನ ಉಳಿಸಿಕೊಂಡು ಬಂದಿವೆ. ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್, ಎಚ್ಡಿಎಫ್ಸಿ, ಐಟಿಸಿ, ಎಚ್ಯುಎಲ್, ಲಾರ್ಸನ್ ಅಂಡ್ ಟೂಬ್ರೋ, ಎಸ್ಬಿಐ, ಟಾಟಾ ಮೋಟಾರ್ಸ್, ಡಾ ರೆಡ್ಡೀಸ್ ಲ್ಯಾಬ್ಸ್, ಟಾಟಾ ಸ್ಟೀಲ್, ಗ್ರಾಸಿಮ್, ಹೀರೋ ಹಾಗೂ ಹಿಂಡಾಲ್ಕೋ ನಿಫ್ಟಿಯ ಆರಂಭದಿಂದಲೂ ಇವೆ. ಇನ್ನು ಈ 13 ಕಂಪೆನಿಗಳು ಏಪ್ರಿಲ್ 1996ರಿಂದ ಫೆಬ್ರವರಿ 2021ರ ಮಧ್ಯೆ ಸಿಎಜಿಆರ್ ಶೇ 18 ಬೆಳವಣಿಗೆ ಸಾಧಿಸಿವೆ. ಇನ್ನು ಇದೇ ಅವಧಿಯಲ್ಲಿ ಸರಾಸರಿ ಪಿ/ಇ 15.7 ಪಟ್ಟು ಆಗಿದ್ದರೆ, ಕಳೆದ 10 ವರ್ಷದಲ್ಲಿ 18.8 ಪಟ್ಟು ಆಗಿದೆ ಎಂದು ಬ್ರೋಕರೇಜ್ ಸಂಸ್ಥೆ ತಿಳಿಸಿದೆ. ನಿಫ್ಟಿಯು 1107 ಪಾಯಿಂಟ್ನಿಂದ 15,000 ಪಾಯಿಂಟ್ ಪಯಣದಲ್ಲಿ 25 ವರ್ಷದ ಸಮಯಕ್ಕೆ ಶೇ 11.1 ಸಿಎಜಿಆರ್ (ಕಾಂಪೌಂಡ್ ಆ್ಯನುಯೆಲ್ ಗ್ರೋಥ್ ರೇಟ್) ರಿಟರ್ನ್ಸ್ ನೀಡಿದೆ. ದೇಶದ ಉಳಿದ ಎಲ್ಲ ಆಸ್ತಿಗೆ ಹೋಲಿಸಿದಲ್ಲಿ ಇದು ಉತ್ತಮ ಸಿಎಜಿಆರ್ ರಿಟರ್ನ್ಸ್ ಎನ್ನುತ್ತಾರೆ ತಜ್ಞರು.
ಭಾರತದ ಆರ್ಥಿಕತೆಯು ಈ 25 ವರ್ಷದ ಅವಧಿಯಲ್ಲಿ ಹಲು ಪಟ್ಟು ಬೆಳೆದಿದೆ. ರಿಯಲ್ ಜಿಡಿಪಿ ಶೇ 8 ಸಿಎಜಿಆರ್ ದಾಖಲಿಸಿದೆ. ಇನ್ನು ನಿಫ್ಟಿಯೊಳಗಿರುವ ಕಂಪೆನಿಗಳಾದ ರಿಲಯನ್ಸ್, ಟಿಸಿಎಸ್, ಇನ್ಫೋಸಿಸ್, ಎಚ್ಡಿಎಫ್ ಬ್ಯಾಂಕ್ ಷೇರುದಾರರಿಗೆ ಅಮೋಘವಾದ ರಿಟರ್ನ್ಸ್ ನೀಡಿವೆ. ಭಾರತೀಯರಿಗೆ ಸಾಂಪ್ರದಾಯಿಕವಾಗಿ ಚಿನ್ನವೇ ಆದ್ಯತೆಯ ಹೂಡಿಕೆ. ಆದರೆ ಈ 25 ವರ್ಷದ ಅವಧಿಯಲ್ಲಿ ಚಿನ್ನ ಶೇ 9ರ ಸಿಎಜಿಆರ್ ನೀಡಿದ್ದರೆ, ನಿಫ್ಟಿ 11 ಪರ್ಸೆಂಟ್ ನೀಡಿದೆ ಎನ್ನುತ್ತಾರೆ ವಿಶ್ಲೇಷಕರು.
ಭಾರತದ ಒಟ್ಟಾರೆ ಮಾರುಕಟ್ಟೆಯ ಬಂಡವಾಳ ಮೌಲ್ಯದಲ್ಲಿ ನಿಫ್ಟಿ50ಯಲ್ಲಿ ಇರುವ ಕಂಪೆನಿಗಳದು ಶೇ 58ರಷ್ಟು ಪಾಲಿದೆ. ಭಾರತದ ಮಟ್ಟಿಗೆ ಹೇಳುವುದಾದರೆ, ನಿಫ್ಟಿಗೆ ಫೆಬ್ರವರಿಯಲ್ಲಿ ಮಂಡನೆಯಾದ ಕೇಂದ್ರ ಬಜೆಟ್ ಅತಿ ದೊಡ್ಡ ಬೆಳವಣಿಗೆಯಾಗಿದೆ. ಏಪ್ರಿಲ್ 22, 2021ರ ದಿನಾಂತ್ಯದ ವಹಿವಾಟು ಮುಕ್ತಾಯ ಆದಾಗ ನಿಫ್ಟಿ- 50 ಸೂಚ್ಯಂಕವು 110 ಪಾಯಿಂಟ್ಗಳ ಏರಿಕೆ ದಾಖಲಿಸಿ, 14,406.15ರಲ್ಲಿದೆ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
(Indian stock market major index Nifty 50 completes 25 years on April 22, 2021)