1. ಷೇರು ಮಾರ್ಕೆಟ್ ಅಂದರೇನು, ಅದು ಹೇಗೆ ಕೆಲಸ ಮಾಡುತ್ತದೆ, ಅದರಲ್ಲಿ ಹಣ ಹೂಡುವುದು ಹೇಗೆ ಮತ್ತು ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು ಅನ್ನೋದು ತಿಳಿದುಕೊಳ್ಳಿ.
2. ಡಿಮ್ಯಾಟ್ ಅಕೌಂಟ್, ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್, ಚೆಕ್ ಬುಕ್ ಇವಿಷ್ಟು ಕಡ್ಡಾಯವಾಗಿ ಇರಬೇಕು. ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ಟ್ರೇಡಿಂಗ್ ನಡೆಸುವುದಕ್ಕೆ ಅವಕಾಶ ಇರುವುದರಿಂದ ಲ್ಯಾಪ್ಟಾಪ್, ಡೆಸ್ಕ್ಟಾಪ್ ಅಥವಾ ಸ್ಮಾರ್ಟ್ಫೋನ್ ಆದರೂ ಇದ್ದರೆ ಉತ್ತಮ.
3. ನೀವು ಟ್ರೇಡಿಂಗ್ ಮಾಡುತ್ತೀರೋ ಅಥವಾ ಹೂಡಿಕೆಯನ್ನೋ ಎಂಬ ಸ್ಪಷ್ಟತೆ ಇರಲಿ. ಟ್ರೇಡಿಂಗ್ನಲ್ಲಿ ಹೂಡಿಕೆಗಿಂತ ಅಪಾಯದ ಪ್ರಮಾಣ ಹೆಚ್ಚಿರುತ್ತದೆ. ಜತೆಗೆ ಟ್ರೇಡಿಂಗ್ಗೆ ಅನುಭವ, ವೇಗ ಎರಡೂ ಮುಖ್ಯ. ಟ್ರೇಡಿಂಗ್ ಅಂದರೆ, ಷೇರಿನ ವಹಿವಾಟನ್ನು ಅತ್ಯಲ್ಪ ಅವಧಿಗೆ ಮಾಡೋದು. ಹೂಡಿಕೆ ಎಂದಾದರೆ ಬಹುತೇಕ ಸಂದರ್ಭದಲ್ಲಿ ದೀರ್ಘಾವಧಿಗೆ ಮಾಡೋದು.
4. ಮೇಲ್, ಮೆಸೇಜ್ಗಳು, ಸ್ನೇಹಿತರು- ಸಂಬಂಧಿಕರ ಸಲಹೆ ಮೇಲೆ ಷೇರಿನ ಮೇಲೆ ಹೂಡಿಕೆ ಮಾಡುವ ವರ್ಗ ಇದೆ. ಇದು ಕೂಡ ಅಪಾಯಕಾರಿ. ಇನ್ನೂ ಕೆಲವು ಮಂದಿ ಕೆಲವು ಹೂಡಿಕೆದಾರರನ್ನು ಅನುಸರಿಸುತ್ತಾರೆ. ಅವರು ಎಲ್ಲಿ ಹಣ ಹಾಕುತ್ತಾರೋ ಅಲ್ಲೇ ಇವರೂ ಹಣ ಹೂಡುತ್ತಾರೆ. ಇಂಥ ಧೋರಣೆ ಅಪಾಯಕ್ಕೆ ಸಿಲುಕಿಸುತ್ತದೆ. ಏಕೆಂದರೆ, ಒಬ್ಬೊಬ್ಬ ವ್ಯಕ್ತಿಯ ಮನಸ್ಥಿತಿ ಹಾಗೂ ರಿಸ್ಕ್ ತೆಗೆದುಕೊಳ್ಳುವ ಸ್ವಭಾವ ಒಂದೊಂದು ರೀತಿ ಇರುತ್ತದೆ.
5. ಸದಾ ಟ್ರೆಂಡ್ ಅನುಸರಿಸಬೇಕು. ಷೇರು ಮಾರ್ಕೆಟ್ ಯಾವ ಟ್ರೆಂಡ್ನಲ್ಲಿ ಇರುತ್ತದೋ ಅದನ್ನು ಅನುಸರಿಸಬೇಕು. ಮೇಲೆ ಏರುತ್ತಿರುವಾಗ ಅದಕ್ಕೆ ತಕ್ಕಂತೆ, ಕೆಳಕ್ಕೆ ಬೀಳುವಾಗ ಅದರಂತೆ ಹಣ ಹಾಕಬೇಕೇ ವಿನಾ ಅದರ ಉಲ್ಟಾ ಯೋಚನೆ ಮಾಡಬಾರದು. ಆದರೆ ವಾರೆನ್ ಬಫೆಟ್ ಎಂಬ ಹೆಸರಾಂತ ಹೂಡಿಕೆದಾರ, ಅನುಭವಿಯ ಮಾತು ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬೇಕು: “ಷೇರು ಮಾರ್ಕೆಟ್ನಲ್ಲಿ ಎಲ್ಲರೂ ಹೆದರುವಾಗ ನಾನು ಆಸೆಬುರುಕನಾಗುತ್ತೇನೆ. ಇತರರು ಆಸೆಬುರುಕರಾಗಿದ್ದಾಗ ನಾನು ಹೆದರುತ್ತೇನೆ,” ಎಂದಿದ್ದಾರೆ.
6. ಐಪಿಒಗಳಿಗೆ (ಇನಿಷಿಯಲ್ ಪಬ್ಲಿಕ್ ಆಫರ್) ಹಣ ಹಾಕಿದರೆ ಲಾಭ ಬಂದೇ ಬರುತ್ತದೆ ಎಂಬ ಭಾವನೆ ಇದೆ. ಇತ್ತೀಚಿನ ಹಲವು ಐಪಿಒಗಳು ಆ ಮಾತನ್ನು ನಿಜವೂ ಮಾಡಿವೆ. ಆದರೆ ಅದು ಸತ್ಯ ಅಲ್ಲ. ಎಸ್ಬಿಐ ಕಾರ್ಡ್ಸ್ ಇದಕ್ಕೆ ಉತ್ತಮ ಉದಾಹರಣೆ. ಐಪಿಒಗಳಿಗೆ ಅಪ್ಲೈ ಮಾಡುವ ಮುಂಚೆ ಕಂಪೆನಿಯ ಮೂಲಭೂತ ಅಂಶಗಳು, ಅದು ನಡೆಸುವ ಉದ್ಯಮ ಯಾವುದು, ಮ್ಯಾನೇಜ್ಮೆಂಟ್ ಇತ್ಯಾದಿ ವಿಚಾರಗಳನ್ನು ಗಮನಿಸಬೇಕು.
7. ಲಾಭವೇ ಆಗಿರಲಿ, ನಷ್ಟವೇ ಇರಲಿ ಆ ಬಗ್ಗೆ ಒಂದು ಗೆರೆ ಎಳೆದುಕೊಳ್ಳಿ. ಇಷ್ಟು ಲಾಭ ಬಂದ ಮೇಲೆ ಅದನ್ನು ನಗದು ಮಾಡಿಕೊಳ್ಳುತ್ತೇನೆ (ಪ್ರಾಫಿಟ್ ಬುಕ್ಕಿಂಗ್) ಹಾಗೂ ಇಷ್ಟು ನಷ್ಟವಾದಲ್ಲಿ ಷೇರನ್ನು ಮಾರುತ್ತೇನೆ (ಸ್ಟಾಪ್ ಲಾಸ್) ಎಂಬ ಸಂಯಮ ಮತ್ತು ನಿರ್ಧಾರ ಮುಖ್ಯ.
8. ಈಚಿನ ವರ್ಷಗಳಲ್ಲಿ ಬ್ರೋಕರೇಜ್ ಸಂಸ್ಥೆಗಳು ನಿಮ್ಮ ಬಳಿ ಇರುವ ಹಣಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತವೆ. ಐದು ಪಟ್ಟು, ಹೆಚ್ಚು ಪಟ್ಟು ಹೆಚ್ಚು ವಹಿವಾಟು ನಡೆಸುವುದಕ್ಕೆ ಅವಕಾಶ ಇರುತ್ತದೆ. ಉದಾಹರಣೆಗೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ 50,000 ರೂಪಾಯಿ ಇದ್ದಲ್ಲಿ 2,50,000 ಅಥವಾ 5,00,000 ರೂಪಾಯಿ ವಹಿವಾಟು ನಡೆಸಲು ಅವಕಾಶ ನೀಡುತ್ತವೆ. ಆದರೆ ದಿನದ ಕೊನೆಗೆ ಆ ವಹಿವಾಟಿನಲ್ಲಿ ಲಾಭವೋ ಅಥವಾ ನಷ್ಟವೋ ಷೇರುಗಳನ್ನು ಮಾರಲೇಬೇಕಾಗುತ್ತದೆ. ಇದರಿಂದ ಒತ್ತಡವೂ ಹೆಚ್ಚು, ಬಂಡವಾಳಕ್ಕೂ (ಕ್ಯಾಪಿಟಲ್) ಹೊಡೆತ ಬೀಳುತ್ತದೆ.
9. ಷೇರು ಮಾರುಕಟ್ಟೆ ವಹಿವಾಟು ಆರಂಭಿಸುವ ಮೊದಲ ಹದಿನೈದು ನಿಮಿಷ ಯಾವುದೇ ವ್ಯವಹಾರ ಮಾಡಬಾರದು ಎನ್ನುತ್ತಾರೆ ವಿಶ್ಲೇಷಕರು. ಆ ವೇಳೆ ಬಹಳ ಏರಿಳಿತ ಇರುತ್ತದೆ. ಆದ್ದರಿಂದ ವಹಿವಾಟು ಮಾಡಬಾರದು. ಅದೆಂಥ ಒಳ್ಳೆ ಮಾರ್ಕೆಟ್ ಸನ್ನಿವೇಶದಲ್ಲೂ ಕೈಯಲ್ಲಿ ಇರುವ ಎಲ್ಲ ಹಣವನ್ನೂ ಅದರಲ್ಲಿ ಹಾಕಬಾರದು. ನಗದು ಕೈಲಿ ಇಟ್ಟುಕೊಂಡಿರಲೇಬೇಕು.
10. ಯಾವ ಕಂಪೆನಿಯಲ್ಲಿ ಡಿಮ್ಯಾಟ್ ಖಾತೆ ತೆರೆಯುತ್ತಿದ್ದೀರಿ, ಆ ಕಂಪೆನಿ ಅಥವಾ ಸಂಸ್ಥೆಯ ಇತಿಹಾಸ ಎಲ್ಲವನ್ನೂ ಸಾದ್ಯಂತವಾಗಿ ತಿಳಿದುಕೊಳ್ಳಿ. ಇನ್ನು ಬ್ರೋಕರೇಜ್ ಎಷ್ಟು ಎಂಬ ಬಗ್ಗೆಯೂ ನಿಗಾ ಇರಲಿ. ನಿಮ್ಮಿಂದ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲದಿದ್ದಲ್ಲಿ ಹಣ ಹಾಕದಿದ್ದರೂ ಪರವಾಗಿಲ್ಲ. ನಿಮ್ಮ ಹಣದಲ್ಲಿ ಬೇರೆಯವರು ವ್ಯವಹಾರ ನಡೆಸಲು ಅವಕಾಶ ನೀಡದಿರಿ.
ಇದನ್ನೂ ಓದಿ: Bloodbath in stock market: ಷೇರುಪೇಟೆಯಲ್ಲಿ ರಕ್ತದೋಕುಳಿ; 1700 ಪಾಯಿಂಟ್ಗೂ ಹೆಚ್ಚು ಕುಸಿದ ಸೆನ್ಸೆಕ್ಸ್