ನವದೆಹಲಿ, ಡಿಸೆಂಬರ್ 6: ಯೂರೋಪಿಯನ್ ಕಮಿಷನ್ನ ಅಧ್ಯಕ್ಷೆಯಾಗಿರುವ ಜರ್ಮನ್ ಮೂಲದ ಉರ್ಸುಲಾ ವೋನ್ ಡೆರ್ ಲೆಯೆನ್ (Ursula Von Der Leyen) ಅವರು 2023ರ ವರ್ಷದಲ್ಲಿ ವಿಶ್ವದ ಅತ್ಯಂತ ಪ್ರಬಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ 2023 ಪಟ್ಟಿಯಲ್ಲಿ (Forbes Most Powerful Women 2023) 100 ಮಂದಿ ಅತಿ ಪ್ರಬಲ ಮಹಿಳೆಯರನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ನಾಲ್ವರು ಭಾರತೀಯ ಮಹಿಳೆಯರಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ ಎನಿಸಿದ್ದಾರೆ. ಈ ಪಟ್ಟಿಯಲ್ಲಿ ಅವರು 32ನೇ ಸ್ಥಾನ ಪಡೆದಿದ್ದಾರೆ. ಎಚ್ಸಿಎಲ್ ಕಾರ್ಪೊರೇಷನ್ನ ಸಿಇಒ ರೋಷನಿ ನಾದರ್ ಮಲ್ಹೋತ್ರಾ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ಸೋಮಾ ಮೊಂಡಲ್ (soma mondal) ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರು ಈ ಪಟ್ಟಿಯಲ್ಲಿ ಇರುವ ಇತರ ಭಾರತೀಯ ಮಹಿಳೆ ಎನಿಸಿದ್ದಾರೆ.
ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ
ಫೋರ್ಬ್ಸ್ ಮ್ಯಾಗಝೀನ್ ಪ್ರತೀ ವರ್ಷ ಇಂಥ ವಿವಿಧ ಪಟ್ಟಿಗಳನ್ನು ಪ್ರಕಟಿಸುತ್ತಿರುತ್ತದೆ. ಪ್ರಬಲ ಮಹಿಳೆಯರ ಪಟ್ಟಿಗೆ ಅದು ನಾಲ್ಕು ಮಾನದಂಡಗಳನ್ನು ಇಟ್ಟಿದೆ. ಹಣ, ಮಾಧ್ಯಮ, ಪ್ರಭಾವ ಮತ್ತು ವ್ಯಾಪ್ತಿ, ಈ ಅಂಶಗಳ ಮೂಲಕ ಒಬ್ಬ ಮಹಿಳೆಯ ಸಾಧನೆ ಮತ್ತು ಪ್ರಭಾವಳಿಯನ್ನು ಗುರುತಿಸಲಾಗುತ್ತದೆ.
ಈ ಪಟ್ಟಿಯಲ್ಲಿರುವ ನಾಲ್ವರು ಭಾರತೀಯರು ಸ್ವಂತವಾಗಿ ಬೆಳೆದು ತಮ್ಮದೇ ಛಾಪು ಮೂಡಿಸಿದ ಮಹಿಳೆಯರಾಗಿದ್ದಾರೆ.
ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಸೆಬಿ 25 ಕೋಟಿ ರೂ ದಂಡ ವಿಧಿಸಿದ್ದು ಯಾಕೆ? ಕೋರ್ಟ್ ಇದನ್ನು ರದ್ದು ಮಾಡಿದ್ದು ಯಾಕೆ?
ಕುತೂಹಲವೆಂದರೆ ಈ ಪಟ್ಟಿಯಲ್ಲಿ 100ನೇ ಸ್ಥಾನವನ್ನು ಬಾರ್ಬೀಗೆ ಕೊಡಲಾಗಿದೆ. ಬಾರ್ಬಿ ಎಂಬುದು ಬಹಳ ಜನಪ್ರಿಯವಾಗಿರುವ ವಿಶೇಷ ಶೈಲಿಯ ಗೊಂಬೆ. ಇದು ವಿಶ್ವಾದ್ಯಂತ ಸಾಕಷ್ಟು ಮಂದಿಯ ಮೇಲೆ ಪ್ರಭಾವ ಬೀರಿದೆ. ಅಂತೆಯೇ, ಬಾರ್ಬಿ ಗೊಂಬೆಗೂ ಈ ಪಟ್ಟಿಯಲ್ಲಿ ಸ್ಥಾನ ಕೊಡಲಾಗಿದೆ. ಹಾಗೆಯೇ, ಚೀನಾದ ನಾಲ್ಕೈದು ಮಂದಿ ಮಹಿಳೆಯರೂ ಫೋರ್ಬ್ಸ್ ಪಟ್ಟಿಯಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಅಮೆರಿಕ ಹಾಗೂ ಯೂರೋಪ್ನವರಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Wed, 6 December 23