ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಪ್ರಸಕ್ತ ಹಣಕಾಸು ವರ್ಷದ (2022-23) ಆರ್ಥಿಕ ಸಮೀಕ್ಷೆಯನ್ನು (Economic Survey) ಸಂಸತ್ನಲ್ಲಿ ಮಂಡನೆ ಮಾಡಿದರು. 2023-24ನೇ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ (GDP growth) ಶೇ 6ರಿಂದ 6.8ರಷ್ಟಿರಲಿದೆ ಎಂದು ಸಮೀಕ್ಷೆ ಮುನ್ಸೂಚನೆ ನೀಡಿದೆ. ಇದು ಕಳೆದ ಮೂರು ವರ್ಷಗಳಲ್ಲೇ ನಿಧಾನಗತಿಯ ಜಿಡಿಪಿ ಬೆಳವಣಿಗೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ 2023-24ನೇ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ 7 ಇರಬಹುದು ಎಂದು ಅಂದಾಜಿಸಲಾಗಿತ್ತು. ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರದ ಮುನ್ಸೂಚನೆ ತುಸು ಕಡಿಮೆ ಇದ್ದರೂ ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ ಭಾರತವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
‘ಈ ಮುನ್ಸೂಚನೆಯನ್ನು ವಿಶ್ವಬ್ಯಾಂಕ್, ಐಎಂಎಫ್, ಎಡಿಬಿ ಹಾಗೂ ದೇಶೀಯವಾಗಿ ಆರ್ಬಿಐನಂಥ ಸಂಸ್ಥೆಗಳು ನೀಡಿರುವ ಮುನ್ಸೂಚನೆ ಜತೆಗೆ ಸ್ಥೂಲವಾಗಿ ಹೋಲಿಕೆ ಮಾಡಬಹುದಾಗಿದೆ. ಒಟ್ಟಾರೆ ಜಿಡಿಪಿ ಬೆಳವಣಿಗೆ ಶೇ 6ರಿಂದ 6.8ರಷ್ಟಿರಲಿದೆ. ಇದು ಜಾಗತಿಕ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಅವಲಂಬಿಸಿರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟು ಅಂದಾಜಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಶೇ 8ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಮುಂದಿನ ವರ್ಷದ ಬೆಳವಣಿಗೆ ದರ ಕಡಿಮೆ ಇರಲಿರುವುದು ನಿಜ’ ಎಂದು ಸಮೀಕ್ಷೆ ಉಲ್ಲೇಖಿಸಿದೆ.
ಇದನ್ನೂ ಓದಿ: Economic Survey 2023 Highlights: ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರ ಹೇಳಿದ್ದೇನು? ಇಲ್ಲಿವೆ ಮುಖ್ಯಾಂಶಗಳು
ಕೋವಿಡ್ ಸಾಂಕ್ರಾಮಿಕ ಮತ್ತು ಇತರ ಜಾಗತಿಕ ಪರಿಸ್ಥಿತಿಗಳ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ವಿದೇಶಿ ಹೂಡಿಕೆ ದೇಶದತ್ತ ಹರಿದುಬರಲಿದೆ ಎಂದು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ. ಅಭಿವೃದ್ಧಿಹೊಂದಿದ ದೇಶಗಳಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಹಿಂಜರಿತದಂಥ ಪರಿಸ್ಥಿತಿ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಟೆಕ್ ಕಂಪನಿಗಳಲ್ಲಿನ ಉದ್ಯೋಗ ಕಡಿತವು ಭಾರತದ ಕಂಪನಿಗಳ ಮೇಲೆ ಹೂಡಿಕೆ ಹೆಚ್ಚಾಗಲು ಕಾರಣವಾಗಲಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಕೋವಿಡ್ ಸಾಂಕ್ರಾಮಿಕದಿಂದ ಭಾರತವು ಕ್ಷಿಪ್ರವಾಗಿ ಚೇತರಿಸಿಕೊಂಡಿದೆ. ದೇಶೀಯ ಬೇಡಿಕೆ ಮತ್ತು ಬಂಡವಾಳ ಹೂಡಿಕೆಯ ಪುನಶ್ಚೇತನಗೊಂಡಿವೆ. ಪರಿಣಾಮವಾಗಿ ಆರ್ಥಿಕ ಬೆಳವಣಿಗೆಯಾಗುತ್ತಿದೆ. ಆದಾಗ್ಯೂ, ಅಪಾಯ ಹೆಚ್ಚಿನ ಮಟ್ಟದಲ್ಲಿದೆ. ದೀರ್ಘಾವಧಿಯ ಹಣದುಬ್ಬರವು ಅನೇಕ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಿಸಲು ಕಾರಣವಾಗಿದೆ. ಪರಿಣಾಮವಾಗಿ ಆಧುನಿಕ ಆರ್ಥಿಕತೆಗಳಲ್ಲಿ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಇದನ್ನೂ ಓದಿ: IMF on India Growth: ಭಾರತದ ಆರ್ಥಿಕತೆ ಉಜ್ವಲವಾಗಿದೆ; ಭಾರತದ ಪ್ರಗತಿ ಬಗ್ಗೆ ಭರವಸೆ ಹೆಚ್ಚಿಸಿದ ಐಎಂಎಫ್ ವರದಿ
ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಪ್ರಗತಿ ದರ ತುಸು ಕುಂಠಿತವಾಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಹೇಳಿದ ಬೆನ್ನಲ್ಲೇ ಆರ್ಥಿಕ ಸಮೀಕ್ಷಾ ವರದಿ ಭರವಸೆಯ ಮುನ್ಸೂಚನೆ ನೀಡಿದೆ. ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ 6.8 ಇರಲಿದೆ ಎಂದಿದ್ದ ಐಎಂಎಫ್ ವರದಿ, ಮುಂದಿನ ಹಣಕಾಸು ವರ್ಷದಲ್ಲಿ (2023-24) ಪ್ರಗತಿ ದರವು ಶೇ 6.1ಕ್ಕೆ ಇಳಿಯಬಹುದು ಎಂದು ಅಂದಾಜಿಸಿತ್ತು. ಆದರೆ, ದೇಶದ ಆರ್ಥಿಕ ಸಮೀಕ್ಷೆ ಹೆಚ್ಚಿನ ಭರವಸೆ ವ್ಯಕ್ತಪಡಿಸಿದೆ.
Published On - 1:27 pm, Tue, 31 January 23