Economic Survey 2023 Highlights: ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರ ಹೇಳಿದ್ದೇನು? ಇಲ್ಲಿವೆ ಮುಖ್ಯಾಂಶಗಳು
ಪ್ರಸಕ್ತ ಹಣಕಾಸು ವರ್ಷದ (2022-23) ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಮಂಡಿಸಿದ್ದಾರೆ. ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿರುವ ಮುಖ್ಯಾಂಶಗಳು ಇಲ್ಲಿವೆ.
ಪ್ರಸಕ್ತ ಹಣಕಾಸು ವರ್ಷದ (2022-23) ಆರ್ಥಿಕ ಸಮೀಕ್ಷೆಯನ್ನು (Economic Survey) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಂಸತ್ನಲ್ಲಿ ಮಂಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹೊಡೆತದಿಂದ ದೇಶವು ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದು ಆರ್ಥಿಕ ಸಮೀಕ್ಷಾ ವರದಿ ಹೇಳಿದ್ದು, 2023-24ನೇ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ (GDP growth) ಶೇ 6ರಿಂದ 6.8ರಷ್ಟಿರಲಿದೆ ಎಂದು ಮುನ್ಸೂಚನೆ ನೀಡಿದೆ. ಇದು ಇದು ಕಳೆದ ಮೂರು ವರ್ಷಗಳಲ್ಲೇ ನಿಧಾನಗತಿಯ ಬೆಳವಣಿಗೆ ಎನ್ನಲಾಗಿದ್ದರೂ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ ಪ್ರಮಾಣ, ಸಾಲದ ಪ್ರಮಾಣ, ಎರವಲು ವೆಚ್ಚ ಸೇರಿದಂತೆ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿರುವ ಮತ್ತಷ್ಟು ಅಂಶಗಳನ್ನು ಇಲ್ಲಿ ನೀಡಲಾಗಿದೆ.
- ಭಾರತವು ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದೆ. ಕೋವಿಡ್ ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧ ಇತ್ಯಾದಿ ಪ್ರತಿಕೂಲ ಸನ್ನಿವೇಶಗಳ ಹೊರತಾಗಿಯೂ 23ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯೂ ಕೋವಿಡ್ ಪೂರ್ವ ಸ್ಥಿತಿಗೆ ಬಂದಿದೆ.
- ರಿಯಲ್ಟೈಮ್ ಆಧಾರದಲ್ಲಿ 24ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟಿರಲಿದೆ. ಇದು ಈ ಹಿಂದಿನ ಹಣಕಾಸು ವರ್ಷದಲ್ಲಿ ಶೇ 8.7ರಷ್ಟಿತ್ತು.
- 24ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 6ರಿಂದ 6.8 ಇರಲಿದೆ. ಇದು ಜಾಗತಿಕ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಅವಲಂಬಿಸಿದೆ.
- ಪರ್ಚೇಸಿಂಗ್ ಪವರ್ ಪ್ಯಾರಿಟಿ ಆಧಾರದಲ್ಲಿ ಭಾರತದ ಆರ್ಥಿಕತೆಯು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ.
- 23ನೇ ಹಣಕಾಸು ವರ್ಷದ ಜಿಡಿಪಿಯಲ್ಲಿ ಖಾಸಗಿ ಕ್ಷೇತ್ರದ ಪಾಲು ಶೇ 58.5ರಷ್ಟಿದೆ. ಇದು 15ನೇ ಹಣಕಾಸು ವರ್ಷದ ನಂತರದ ಗರಿಷ್ಠ ಮಟ್ಟವಾಗಿದೆ.
- 2022ರ ಏಪ್ರಿಲ್ನಲ್ಲಿ ಭಾರತದ ಹಣದುಬ್ಬರ ಪ್ರಮಾಣ ಶೇ 7.8ರಷ್ಟು ಇತ್ತು. ಆರ್ಬಿಐ ಸಹನೆಯ ಮಟ್ಟಕ್ಕಿಂತ ಹೆಚ್ಚಾಗಿತ್ತು. ಆದಾಗ್ಯೂ ಈಗ ನಿಯಂತ್ರಣಕ್ಕೆ ಬರುತ್ತಿದೆ. ವಿಶ್ವದ ಇತರ ಆರ್ಥಿಕತೆಗಳ ಹಣದುಬ್ಬರಕ್ಕೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಇದೆ.
ಇದನ್ನೂ ಓದಿ: Economic Survey: ಶೇ 6ರಿಂದ 6.8ರ ಜಿಡಿಪಿ ಬೆಳವಣಿಗೆ ಮುನ್ಸೂಚನೆ ನೀಡಿದ ಆರ್ಥಿಕ ಸಮೀಕ್ಷೆ; ಮೂರು ವರ್ಷಗಳಲ್ಲೇ ನಿಧಾನ
- ಎರವಲು ವೆಚ್ಚ (Borrowing cost) ದೀರ್ಘಾವಧಿಗೆ ಹೆಚ್ಚಿನ ಮಟ್ಟದಲ್ಲಿ ಇರಲಿದೆ. ಇದರ ಮೇಲೆ ಹಣದುಬ್ಬರ ಪ್ರಮಾಣ ಪರಿಣಾಮ ಬೀರಲಿದೆ.
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಾಲದ ಬೆಳವಣಿಗೆ (Credit growth) 2022ರ ಜನವರಿ – ನವೆಂಬರ್ ಅವಧಿಯಲ್ಲಿ ಶೇ 30.5ರಷ್ಟಿತ್ತು.
- 23ನೇ ಹಣಕಾಸು ವರ್ಷದ ಮೊದಲ 8 ತಿಂಗಳುಗಳಲ್ಲಿ ಸರ್ಕಾರದ ಬಂಡವಾಳ ವೆಚ್ಚ (Capital expenditure) ಶೇ 63.4ಕ್ಕೆ ಹೆಚ್ಚಳಗೊಂಡಿದೆ.
- 23ನೇ ಹಣಕಾಸು ವರ್ಷದಲ್ಲಿ ಭಾರತದ ಬಳಿ ಸಾಕಷ್ಟು ವಿದೇಶಿ ವಿನಿಮಯ ಮೀಸಲು ಇದ್ದು, ರೂಪಾಯಿ ಮೌಲ್ಯದಲ್ಲಿನ ಏರಿಳಿತವನ್ನು ನಿರ್ವಹಿಸಲು ಬಳಸಲಾಗಿದೆ.
- 22ನೇ ಹಣಕಾಸು ವರ್ಷ ಮತ್ತು 23ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ದೇಶದ ರಫ್ತು ಪ್ರಮಾಣದಲ್ಲಿ ಸುಮಾರು 3 ಪಟ್ಟು ಹೆಚ್ಚಳವಾಗಿದೆ.
- 19ನೇ ಹಣಕಾಸು ವರ್ಷದಲ್ಲಿ 4.4 ಶತಕೋಟಿ ಡಾಲರ್ ಇದ್ದ ರಫ್ತು ಪ್ರಮಾಣ 22ನೇ ಹಣಕಾಸು ವರ್ಷಕ್ಕಾಗುವಾಗ 11.6 ಶತಕೋಟಿ ಡಾಲರ್ ತಲುಪಿದೆ.
- 2022ರ ಏಪ್ರಿಲ್, ನವೆಂಬರ್ ಅವಧಿಯಲ್ಲಿ ಒಟ್ಟು ತೆರಿಗೆ ಆದಾಯದಲ್ಲಿ ಶೇ 15.5ರ ಬೆಳವಣಿಗೆ ಸಾಧಿಸಲಾಗಿದೆ.
- ನೇರ ತೆರಿಗೆ ಸಂಗ್ರಹದಲ್ಲಿ ದೀರ್ಘಾವಧಿಗೆ ಹೆಚ್ಚಿನ ಬೆಳವಣಿಗೆ ಸಾಧಿಸಲಾಗಿದೆ.
- ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನೀಡುವ ಸಾಲದ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ.
- ಬ್ಯಾಂಕ್ಗಳ ಅನುತ್ಪಾದಕ ಆಸ್ತಿಯ ಪ್ರಮಾಣ 5 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.