AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Economic Survey; ಏನಿದು ಆರ್ಥಿಕ ಸಮೀಕ್ಷೆ, ಇದರ ಮಂಡನೆ ಹಿಂದಿನ ಮರ್ಮವೇನು? ಇಲ್ಲಿದೆ ವಿವರ

Budget 2023; ಆರ್ಥಿಕ ಸಮೀಕ್ಷೆ ಎಂದರೇನು? ಇದು ಯಾವಾಗ ಆರಂಭವಾಯಿತು? ಯಾರು ಸಿದ್ಧಪಡಿಸುತ್ತಾರೆ? ಮಂಡನೆ ಮಾಡುವುದು ಯಾರು? ಇತ್ಯಾದಿ ವಿವರಗಳು ಇಲ್ಲಿವೆ.

Economic Survey; ಏನಿದು ಆರ್ಥಿಕ ಸಮೀಕ್ಷೆ, ಇದರ ಮಂಡನೆ ಹಿಂದಿನ ಮರ್ಮವೇನು? ಇಲ್ಲಿದೆ ವಿವರ
ಆರ್ಥಿಕ ಸಮೀಕ್ಷೆ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on:Jan 23, 2023 | 12:32 PM

ಕೇಂದ್ರ ಬಜೆಟ್​ (Budget 2023) ಮಂಡನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಎನ್​ಡಿಎ ಸರ್ಕಾರ ಮಂಡಿಸುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿರುವುದರಿಂದ ಜನರ ನಿರೀಕ್ಷೆಗಳೂ ಹೆಚ್ಚಾಗಿವೆ. ಬಜೆಟ್​ಗೂ ಮುನ್ನ ದೇಶದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದ ಆರ್ಥಿಕ ಸಮೀಕ್ಷೆಯನ್ನು (Economic Survey) ಸರ್ಕಾರ ಸಂಸತ್​ನಲ್ಲಿ ಮಂಡಿಸುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಬಜೆಟ್ ಮಂಡನೆಯ ಮುನ್ನಾ ದಿನ ಆರ್ಥಿಕ ಸಮೀಕ್ಷೆ ಮಂಡನೆ ಮಾಡಲಾಗುತ್ತದೆ. ಕೊನೆಗೊಳ್ಳುತ್ತಿರುವ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ ಹೇಗಿತ್ತು, ದೇಶದ ಆರ್ಥಿಕತೆ ಯಾವ ರೀತಿಯಲ್ಲಿ ಬೆಳವಣಿಗೆ ಸಾಧಿಸಿತ್ತು ಎಂಬುದೂ ಸೇರಿದಂತೆ ದೇಶದ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಸ್ತೃತ ಮಾಹಿತಿಯನ್ನು ಆರ್ಥಿಕ ಸಮೀಕ್ಷೆ ಒಳಗೊಂಡಿರುತ್ತದೆ. ಜತೆಗೆ, ಮುಂಬರುವ ಹಣಕಾಸು ವರ್ಷಕ್ಕೆ ಯಾವ ರೀತಿಯ ಆರ್ಥಿಕ ಗುರಿಗಳನ್ನು ಹಾಕಿಕೊಳ್ಳಬೇಕು ಎಂಬ ಅಂದಾಜನ್ನೂ ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಆರ್ಥಿಕ ಸಮೀಕ್ಷೆ ಎಂದರೇನು? ಇದು ಯಾವಾಗ ಆರಂಭವಾಯಿತು? ಯಾರು ಸಿದ್ಧಪಡಿಸುತ್ತಾರೆ? ಮಂಡನೆ ಮಾಡುವುದು ಯಾರು? ಇತ್ಯಾದಿ ವಿವರಗಳು ಇಲ್ಲಿವೆ.

ಆರ್ಥಿಕ ಸಮೀಕ್ಷೆ ಎಂದರೇನು?

ಕೇಂದ್ರ ಬಜೆಟ್​ನಂತೆ ಆರ್ಥಿಕ ಸಮೀಕ್ಷೆ ಕೂಡ ವಾರ್ಷಿಕ ಆರ್ಥಿಕತೆಗೆ ಸಂಬಂಧಿಸಿದ ವಿವರಗಳ ದಾಖಲೆ. ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆ ಇದನ್ನು ಸಿದ್ಧಪಡಿಸುತ್ತದೆ. ದೇಶದ ಮುಖ್ಯ ಆರ್ಥಿಕ ಸಲಹೆಗಾರರು ಆರ್ಥಿಕ ಸಮೀಕ್ಷೆ ತಯಾರಿಯ ಪ್ರಮುಖ ಜವಾಬ್ದಾರಿ ವಹಿಸಿರುತ್ತಾರೆ. ಸಾಮಾನ್ಯವಾಗಿ ಬಜೆಟ್​ ಮಂಡನೆಗೂ ಮುನ್ನಾ ದಿನ ಇದನ್ನು ಸಂಸತ್​ನ ಉಭಯ ಸದನಗಳಲ್ಲಿ ಮಂಡನೆ ಮಾಡಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಆರ್ಥಿಕ ಸಮೀಕ್ಷೆ ಒಳಗೊಂಡಿರುತ್ತದೆ. ಈ ವರ್ಷ ಜನವರಿ 31ರಿಂದ ಏಪ್ರಿಲ್ 6ರ ವರೆಗೆ ಸಂಸತ್​ನ ಬಜೆಟ್ ಅಧಿವೇಶನ ನಡೆಯಲಿದ್ದು ಜನವರಿ 31ರಂದೇ ಆರ್ಥಿಕ ಸಮೀಕ್ಷೆ ಮಂಡನೆಯಾಗುವ ನಿರೀಕ್ಷೆ ಇದೆ.

ಆರ್ಥಿಕ ಸಮೀಕ್ಷೆಯ ಉದ್ದೇಶವೇನು?

ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ವಿಸ್ತೃತ ಅಂಶಗಳನ್ನು ಒಳಗೊಂಡಿರುತ್ತದೆ. ದೇಶದ ಆರ್ಥಿಕ ಸ್ಥಿತಿಗತಿ, ಹಣಕಾಸು ಅಭಿವೃದ್ಧಿ, ಹಣಕಾಸು ನಿರ್ವಹಣೆ ಹಾಗೂ ಇತರ ಅನೇಕ ಕ್ಷೇತ್ರಗಳ ವಿವರಗಳನ್ನು ಒಳಗೊಂಡಿರುತ್ತದೆ. ಸಮೀಕ್ಷೆಯು ಹಿಂದಿನ ಹಣಕಾಸು ವರ್ಷದ ಆರ್ಥಿಕ ಸ್ಥಿತಿಯ ಪರಿಶೀಲನೆಯ ಜತೆಗೆ ಮುಂದೇನಾಗಬೇಕು ಎಂಬುದರ ಸಲಹೆ ಸೂಚನೆಯನ್ನೂ ಒಳಗೊಂಡಿರುತ್ತದೆ. ಇದು ಪ್ರಮುಖ ನೀತಿ-ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸರ್ಕಾರಕ್ಕೆ ನೆರವಾಗುತ್ತದೆ.

ಆರ್ಥಿಕ ಸಮೀಕ್ಷೆ ಮಂಡನೆ ಮಾಡುವುದು ಯಾರು?

ಹಣಕಾಸು ಸಚಿವರೇ ಆರ್ಥಿಕ ಸಮೀಕ್ಷೆಯನ್ನೂ ಮಂಡನೆ ಮಾಡುತ್ತಾರೆ. ಹೀಗಾಗಿ ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡನೆ ಮಾಡಲಿದ್ದಾರೆ. ಬಳಿಕ ಅದರ ಪ್ರತಿಯನ್ನು ಸಚಿವಾಲಯವು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುತ್ತದೆ. ಸಚಿವಾಲಯದ ವೆಬ್​ಸೈಟ್​ನಲ್ಲಿಯೂ ಸಮೀಕ್ಷಾ ವರದಿಯ ಪ್ರತಿ ದೊರೆಯುತ್ತದೆ.

ದೇಶದ ಮೊದಲ ಆರ್ಥಿಕ ಸಮೀಕ್ಷೆ 1950-51ರಲ್ಲಿ ನಡೆದಿತ್ತು. 1964ರ ವರೆಗೂ ಆರ್ಥಿಕ ಸಮೀಕ್ಷೆಯನ್ನು ಬಜೆಟ್​ ಜತೆಗೇ ಮಂಡನೆ ಮಾಡಲಾಗುತ್ತಿತ್ತು. ನಂತರ ಆರ್ಥಿಕ ಸಮೀಕ್ಷೆಯನ್ನು ಪ್ರತ್ಯೇಕವಾಗಿ ಮಂಡನೆ ಮಾಡುವ ಸಂಪ್ರದಾಯ ಚಾಲ್ತಿಗೆ ಬಂದಿತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Mon, 23 January 23