
ಬ್ರಿಟಿಷ್ ಮೋಟಾರ್‌ಸೈಕಲ್ ಬ್ರ್ಯಾಂಡ್ ನಾರ್ಟನ್ (Norton) ಭಾರತ ಪ್ರವೇಶಿಸುವ ಕುರಿತು ಚರ್ಚೆಗಳು ಮತ್ತೆ ಚುರುಕುಗೊಂಡಿವೆ. ಟಿವಿಎಸ್ ಒಡೆತನದ ಈ ಕಂಪನಿಯು ತನ್ನ ಎರಡು ಆಕರ್ಷಕ ಬೈಕ್‌ಗಳಾದ Atlas GT ಟೂರರ್ ಮತ್ತು Manx R ಸೂಪರ್‌ಸ್ಪೋರ್ಟ್ ಮಾದರಿಗಳ ವಿನ್ಯಾಸಕ್ಕೆ ಭಾರತದಲ್ಲಿ ಪೇಟೆಂಟ್ ನೋಂದಾಯಿಸಿದೆ. ಇದರಿಂದ ಮುಂದಿನ ವರ್ಷದ ವೇಳೆಗೆ ಈ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ ಎಂಬ ಸೂಚನೆ ದೊರೆತಿದೆ.
2020ರಲ್ಲಿ ನಾರ್ಟನ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಟಿವಿಎಸ್ ಈ ಬ್ರ್ಯಾಂಡ್‌ಗೆ ಮರುಜೀವ ನೀಡಲು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದೆ. ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಈ ಬೈಕ್‌ಗಳ ಜತೆಗೆ ಕಂಪನಿಯು 450 ಸಿಸಿ ರೋಡ್‌ಸ್ಟರ್ ಮಾದರಿಯನ್ನೂ ಹೊಂದಿದೆ. ಇವು ಭಾರತದಲ್ಲಿ ಪ್ರೀಮಿಯಂ ಬೈಕ್‌ಗಳನ್ನು ಬಯಸುವ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.
ಅಟ್ಲಾಸ್ ಜಿಟಿ ಕಂಪನಿಯ 585 ಸಿಸಿ ಅಡ್ವೆಂಚರ್ ಪ್ಲಾಟ್‌ಫಾರ್ಮ್ ಆಧಾರಿತ ಮಾದರಿಯಾಗಿದೆ. ವಿಶೇಷವಾಗಿ ಸುಸಜ್ಜಿತ ರಸ್ತೆಗಳಲ್ಲಿ ದೂರದ ಪ್ರಯಾಣ ಮಾಡುವವರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಮಾದರಿಯಲ್ಲಿರುವ ಸ್ಪೋಕ್ ವೀಲ್‌ಗಳ ಬದಲಿಗೆ ಈ ಬೈಕ್‌ನಲ್ಲಿ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ 19 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಚಕ್ರಗಳಿವೆ.
ಇದರಲ್ಲಿ 585 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 69 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 57.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆರು ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಈ ಬೈಕ್‌ನಲ್ಲಿ ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, 15.4 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್, 220 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಮತ್ತು ಹೊಂದಾಣಿಕೆ ಮಾಡಬಹುದಾದ KYB ಸಸ್ಪೆನ್ಷನ್ ನೀಡಲಾಗಿದೆ.
ಇದರ ಉನ್ನತ ಶ್ರೇಣಿಯ Apex ವೇರಿಯಂಟ್‌ನಲ್ಲಿ ಹೀಟೆಡ್ ಗ್ರಿಪ್‌ಗಳು, ಕಾರ್ನರಿಂಗ್ ಲೈಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ನ್ಯಾವಿಗೇಷನ್ ಹಾಗೂ ಗೋಪ್ರೊ ನಿಯಂತ್ರಣ ಸೌಲಭ್ಯ ಹೊಂದಿರುವ 8 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌ನಂತಹ ಆಧುನಿಕ ಫೀಚರ್ಸ್‌ಗಳಿವೆ.
Tech Tips: ಗೂಗಲ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್ ತೆಗೆದುಹಾಕುವುದು ಹೇಗೆ?
ಇನ್ನೊಂದೆಡೆ, ಮ್ಯಾಂಕ್ಸ್ ಆರ್ ಶಕ್ತಿಶಾಲಿ 1,200 ಸಿಸಿ ವಿ4 ಸೂಪರ್‌ಸ್ಪೋರ್ಟ್ ಬೈಕ್ ಆಗಿದೆ. ಇದು 200 ಬಿಎಚ್‌ಪಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಸೂಪರ್‌ಬೈಕ್‌ಗಳಿಗೆ ನೇರ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಎಂಜಿನ್ 206 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 130 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ರೇಸ್ ಟ್ರ್ಯಾಕ್‌ನಲ್ಲಿ ಉತ್ತಮ ನಿಯಂತ್ರಣ ಮತ್ತು ಸ್ಥಿರತೆ ಒದಗಿಸಲು ಈ ಬೈಕ್‌ನಲ್ಲಿ ಸಿಕ್ಸ್ ಆಕ್ಸಿಸ್ ಐಎಂಯು, ಟ್ರ್ಯಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್, ಬ್ರೆಂಬೊ ಬ್ರೇಕ್‌ಗಳು ಮತ್ತು ಪಿರೆಲ್ಲಿ ಟೈರ್‌ಗಳನ್ನು ಅಳವಡಿಸಲಾಗಿದೆ. ಕಂಪನಿಯು ಈ ಬೈಕ್ ಅನ್ನು ಸ್ಟ್ಯಾಂಡರ್ಡ್, ಅಪೆಕ್ಸ್, ಸಿಗ್ನೇಚರ್ ಮತ್ತು ಫಸ್ಟ್ ಎಡಿಷನ್ ಎಂಬ ನಾಲ್ಕು ವೇರಿಯಂಟ್‌ಗಳಲ್ಲಿ ಮಾರಾಟ ಮಾಡುತ್ತದೆ.
ಇದರ ಟಾಪ್ ಮಾದರಿಗಳಲ್ಲಿ ಕಾರ್ಬನ್ ಫೈಬರ್ ಬಾಡಿ ಮತ್ತು ಹಗುರವಾದ ಟೈಟಾನಿಯಂ ಬಿಡಿಭಾಗಗಳನ್ನು ಬಳಸಲಾಗಿದೆ. ಇದರಿಂದ ಬೈಕ್‌ನ ತೂಕವನ್ನು 201 ಕೆ.ಜಿ.ಗೆ ಇಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ