ತೈಲ, ಅನಿಲ ಅನ್ವೇಷಣಾ ವಲಯಕ್ಕೆ ಪುಷ್ಟಿ ನೀಡಲು ಸರ್ಕಾರದಿಂದ ತಿದ್ದುಪಡಿ ಕಾಯ್ದೆ

|

Updated on: Dec 04, 2024 | 5:54 PM

Oil and Gas exploration sector: ತೈಲ ಮತ್ತು ಅನಿಲ ಅನ್ವೇಷಣಾ ಕ್ಷೇತ್ರಕ್ಕೆ ಪುಷ್ಟಿ ನೀಡುವ ನಿಯಮಗಳನ್ನು ಒಳಗೊಂಡಿರುವ ಆಯಿಲ್​ಫೀಲ್ಡ್ಸ್ ಅಮೆಂಡ್ಮೆಂಟ್ ಬಿಲ್​ಗೆ ರಾಜ್ಯಸಭೆ ಅನುಮೋದನೆ ನೀಡಿದೆ. ಒಎನ್​ಜಿಸಿಯಂತಹ ದೊಡ್ಡ ಸಂಸ್ಥೆಗಳಿಗೆ ಮಾತ್ರವೇ ದಕ್ಕುವ ಈ ಕ್ಷೇತ್ರದಲ್ಲಿ ಸಣ್ಣ ಕಂಪನಿಗಳನ್ನು ಬೆಳೆಸಲು ಮತ್ತು ಹೊಸ ಕಂಪನಿಗಳ ಆಗಮನಕ್ಕೆ ಉತ್ತೇಜಿಸಲು ಈ ಕಾಯ್ದೆ ಸಹಾಯಕವಾಗಲಿದೆ.

ತೈಲ, ಅನಿಲ ಅನ್ವೇಷಣಾ ವಲಯಕ್ಕೆ ಪುಷ್ಟಿ ನೀಡಲು ಸರ್ಕಾರದಿಂದ ತಿದ್ದುಪಡಿ ಕಾಯ್ದೆ
ತೈಲ, ಅನಿಲ ಅನ್ವೇಷಣಾ
Follow us on

ನವದೆಹಲಿ, ಡಿಸೆಂಬರ್ 4: ತೈಲ ಮತ್ತು ಅನಿಲ ಅನ್ವೇಷಣೆ ಮತ್ತು ಉತ್ಪಾದನಾ ವಲಯಕ್ಕೆ ಅನುಕೂಲವಾಗುವಂತಹ ನಿಯಮಗಳಿರುವ ಕಾಯ್ದೆಯೊಂದು ಶೀಘ್ರದಲ್ಲೇ ಜಾರಿಗೆ ಬರಲಿದೆ. ಆಯಿಲ್​ಫೀಲ್ಡ್ ತಿದ್ದುಪಡಿ ಮಸೂದೆಗೆ ನಿನ್ನೆ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮೈನಿಂಗ್ ಚಟುವಟಿಕೆಗಳಿಂದ ಪೆಟ್ರೋಲಿಯಂ ಅನ್ನು ಪ್ರತ್ಯೇಕಗೊಳಿಸುವ ಈ ಕಾಯ್ದೆಯಿಂದಾಗಿ ಇ ಅಂಡ್ ಪಿ ಸೆಕ್ಟರ್​ಗೆ ಹೆಚ್ಚಿನ ಹೂಡಿಕೆಗಳು ಬರುವ ನಿರೀಕ್ಷೆ ಇದೆ.

‘20ಕ್ಕೂ ಹೆಚ್ಚು ವರ್ಷ ನಮಗೆ ತೈಲ ಮತ್ತು ಅನಿಲ ವಲಯದ ಅವಶ್ಯಕತೆ ಇದೆ. ಹೀಗಾಗಿ, ಉದ್ಯಮ ಭಾಗಿದಾರರಿಗೆ ವಿಶ್ವಾಸ ಮೂಡಿಸಲು ಈ ಕಾಯ್ದೆಯ ಅಗತ್ಯತೆ ಇದೆ. ನಮ್ಮವರಿಗೆ ಮಾತ್ರವಲ್ಲ ವಿದೇಶೀ ಹೂಡಿಕೆದಾರರೂ ಇಲ್ಲಿಗೆ ಬಂದು ವ್ಯವಹಾರ ನಡೆಸಲು ಅನುಕೂಲವಾಗುವಂತೆ ವಾತಾವರಣ ನಿರ್ಮಿಸಲು ಇದು ಬೇಕಾಗಿದೆ’ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಆಯಿಲ್​ಫೀಲ್ಡ್ಸ್ ತಿದ್ದುಪಡಿ ಕಾಯ್ದೆಯಿಂದ ಏನು ಅನುಕೂಲ?

ತೈಲ ಮತ್ತು ಅನಿಲ ಅನ್ವೇಷಣಾ ಕ್ಷೇತ್ರದಲ್ಲಿ ಇನ್​ಫ್ರಾಸ್ಟ್ರಕ್ಚರ್ ಮತ್ತಿತರ ಸೌಲಭ್ಯಗಳ ನಿರ್ಮಾಣಕ್ಕೆ ಬಹಳ ವೆಚ್ಚವಾಗುತ್ತದೆ. ಒಎನ್​ಜಿಸಿ, ಇಂಡಿಯನ್ ಆಯಿಲ್, ಹೆಚ್​​ಪಿ, ಬಿಪಿ, ನಯಾರ ಎನರ್ಜಿ, ಕೇರ್ನ್ ಆಯಿಲ್, ಜಿಎಐಎಲ್ ಇತ್ಯಾದಿ ದೈತ್ಯ ಕಂಪನಿಗಳು ಇಲ್ಲಿ ಅಸ್ತಿತ್ವ ಹೊಂದಿವೆ. ಸಣ್ಣ ಕಂಪನಿಗಳಿಗೆ ಇಲ್ಲಿ ನೆಲೆಯೂರಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮೂಲಸೌಕರ್ಯಗಳನ್ನು ವಿವಿಧ ಕಂಪನಿಗಳು ಹಂಚಿಕೊಂಡು ಬಳಸಿಕೊಳ್ಳಲು ಸಾಧ್ಯವಾಗುವಂತೆ ನಿಯಮ ರೂಪಿಸಲು ಈ ಕಾಯ್ದೆ ಅನುವು ಮಾಡಿಕೊಡುತ್ತದೆ. ಇದರಿಂದ ಸಣ್ಣ ಕಂಪನಿಗಳು ಮತ್ತು ಹೊಸ ಕಂಪನಿಗಳು ಈ ಕ್ಷೇತ್ರದಲ್ಲಿ ನೆಲೆಯೂರಲು ಸಾಧ್ಯವಾಗಬಲ್ಲುದು.

ಇದನ್ನೂ ಓದಿ: ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ, ಬ್ಯಾಂಕಿಂಗ್ ವಲಯ ಇನ್ನಷ್ಟು ಪ್ರಬಲ: ನಿರ್ಮಲಾ ಸೀತಾರಾಮನ್

ಹೂಡಿಕೆದಾರರಿಗೆ ಅನನುಕೂಲವಾಗುವ ರೀತಿಯಲ್ಲಿ ಲೀಸ್​ನ ಅವಧಿಯಲ್ಲಿ ಬದಲಾವಣೆ ಮಾಡಲಾಗುವುದಿಲ್ಲ. ಯಾವುದಾದರೂ ವ್ಯಾಜ್ಯ ಎದುರಾದಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ಮಾರ್ಗಗಳಿಗೆ ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ