ನವದೆಹಲಿ: ಭಾರತದಲ್ಲಿ ಸರ್ಕಾರದ ನಿರೀಕ್ಷೆಯಂತೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ (EV Market) ದಿನೇ ದಿನೇ ಪ್ರಬಲಗೊಳ್ಳುತ್ತಿದೆ. ಹೆಚ್ಚೆಚ್ಚು ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಮಾರಾಟ ಆಗುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ಗಳಂತೂ (Electric 2-Wheelers) ಮಾರಾಟದಲ್ಲಿ ಟ್ರೆಂಡಿಂಗ್ನಲ್ಲಿವೆ. 2022-23ರ ಹಣಕಾಸು ವರ್ಷದಲ್ಲಿ 7.2 ಲಕ್ಷಕ್ಕಿಂತ ಹೆಚ್ಚು ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳು ಭಾರತದಲ್ಲಿ ಮಾರಾಟ ಆಗಿವೆ. ಹಿಂದಿನ ಹಣಕಾಸು ವರ್ಷಕ್ಕಿಂತ ಈ ಬಾರಿ ಇವಿ ಸ್ಕೂಟರ್ಗಳು 3 ಪಟ್ಟು ಹೆಚ್ಚು ಸೇಲ್ ಆಗಿವೆ. ರೆಡ್ಸೀರ್ ಎಂಬ ಸ್ಟ್ರಾಟಿಜಿಕ್ ಕನ್ಸಲ್ಟನ್ಸಿ ಸಂಸ್ಥೆ ಬಿಡುಗಡೆ ಮಾಡಿದ ಇತ್ತೀಚಿನ ವರದಿಯೊಂದರಲ್ಲಿ ಈ ಮಾಹಿತಿ ಇದೆ. ಈ ವರದಿ ಪ್ರಕಾರ ಒಲಾ ಎಲೆಕ್ಟ್ರಿಕ್ ಸಂಸ್ಥೆ ಇವಿ ಸ್ಕೂಟರ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಅದರಲ್ಲೂ ಜನವರಿಯಿಂದೀಚೆ ಒಲಾ ಎಲೆಕ್ಟ್ರಿಕ್ ಸ್ಕೂಟರ್ಗಳು ಅತಿಹೆಚ್ಚು ಮಾರಾಟ ಕಂಡಿವೆ. 2022-23 ರ ಹಣಕಾಸು ವರ್ಷದಲ್ಲಿ ಮಾರಾಟವಾದ 7.3 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಓಲಾ ಎಲೆಕ್ಟ್ರಿಕ್ ಪಾಲು ಶೇ. 22ರಷ್ಟು ಇದೆ. ಜನವರಿಯಿಂದ ಮಾರ್ಚ್ವರೆಗಿನ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಒಲಾದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿನ ಪಾರಮ್ಯ ಶೇ. 30ಕ್ಕೆ ಹೆಚ್ಚಾಗಿದೆ.
ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆ ಆದ ಭಾರತದಲ್ಲಿ 2022-23ರ ಹಣಕಾಸು ವರ್ಷದಲ್ಲಿ ಸುಮಾರು 1.6 ಕೋಟಿ ವಾಹನಗಳು ಮಾರಾಟ ಕಂಡಿವೆ. ಇದರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಸಂಖ್ಯೆ 7.3 ಲಕ್ಷ. ಅಂದರೆ ಎವಿ ಪಾಲು ಶೇ. 5 ಕೂಡ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಬಹಳ ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ. ಕಳೆದ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳು 3 ಪಟ್ಟು ಹೆಚ್ಚು ಮಾರಾಟವಾಗಿದೆ. ಪ್ರತೀ ತಿಂಗಳೂ ಸುಮಾರು 60 ಸಾವಿರ ಎಲೆಕ್ಟ್ರಿಕ್ ಸ್ಕೂಟರ್ಗಳು ಸೇಲ್ ಆಗಿವೆ. ಇದೇ ಟ್ರೆಂಡ್ ಮುಂಬರುವ ವರ್ಷಗಳಲ್ಲಿ ಮುಂದುವರಿಯಲಿದ್ದು, ಮುಂದಿನ 3 ವರ್ಷದಲ್ಲಿ ಒಟ್ಟು ವಾಹನಗಳ ಮಾರಾಟದಲ್ಲಿ ಎಲೆಕ್ಟ್ರಿಕ್ ಗಾಡಿ ಪಾಲು ಶೇ. 30 ಇರಲಿದೆ. 2030ರಷ್ಟರಲ್ಲಿ ಇದು ಶೇ. 75ಕ್ಕೆ ಏರಲಿದೆ ಎಂಬುದು ರೆಡ್ಸೀರ್ ಸಂಸ್ಥೆಯ ಅಂದಾಜು.
ಇದನ್ನೂ ಓದಿ: Tata Motors: ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹೊಸ ದಾಖಲೆ
ಪೆಟ್ರೋಲ್ ಬೆಲೆ ಹೆಚ್ಚಿನ ಮಟ್ಟದಲ್ಲಿರುವುದು, ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ಕೊಡುತ್ತಿರುವುದು, ಎಲೆಕ್ಟ್ರಿಕ್ ವಾಹನಗಳು ಪರಿಸರಸ್ನೇಹಿ ಎಂಬ ಭಾವನೆ ಹರಡಿರುವುದು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ಗಳ ವಿನ್ಯಾಸ ಆಕರ್ಷಕವಾಗಿರುವುದು ಇವೆಲ್ಲವೂ ಎಲೆಕ್ಟ್ರಿಕ್ ವಾಹನಗಳತ್ತ ಜನರು ಆಕರ್ಷಿತವಾಗುವಂತೆ ಮಾಡಿವೆ ಎಂದು ರೆಡ್ಸೀರ್ ಸಂಸ್ಥೆ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಮೂಲ ಉಪಕರಣ ತಯಾರಕರು (ಒಇಎಂ), ಅಂದರೆ ವಾಹನ ತಯಾರಕರು ತಮ್ಮ ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಜೊತೆಗೆ ಜನರಿಗೆ ಕಡಿಮೆ ಬಜೆಟ್ನಲ್ಲಿ ವಾಹನ ಕೊಡುವತ್ತ ಗಮನ ಹರಿಸುತ್ತಿದ್ದಾರೆ. ಇದರಿಂದ ಎಲೆಕ್ಟ್ರಿಕ್ ಸ್ಕೂಟರ್ಗಳು ಕಡಿಮೆ ಬೆಲೆಗೆ ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಗುಣಮಟ್ಟದಲ್ಲಿ ಜನರಿಗೆ ಲಭ್ಯ ಇವೆ. ಇದು ಜನರನ್ನು ಸೆಳೆಯುವ ಅಂಶವಾಗಿದೆ.